ಸಂಪದಿಗರಲ್ಲಿ ಮನವಿ

ಸಂಪದಿಗರಲ್ಲಿ ಮನವಿ

ಬರಹ


ಸಂಪದಿಗರೆ,

೧) ದಯವಿಟ್ಟು ಪ್ರಶ್ನೆ ಕೇಳುವುದನ್ನು ನಿಲ್ಲಿಸಬೇಡಿ. ಏಕೆಂದರೆ ಪ್ರಶ್ನೆಯ ಮೂಲ ಇರುವುದು ತಿಳಕೊಳ್ಳುವ ಹಂಬಲದಲ್ಲಿ, ಆರೋಗ್ಯಪೂರ್ಣ ಅನುಮಾನದಲ್ಲಿ ಹಾಗು ಚರ್ಚೆಯಿಂದ ಸಂಗತಿಯನ್ನು ವಿಸ್ತರಿಸಿ ಅದರ ಮೂಲಕ ನಮ್ಮ ತಿಳಿವನ್ನು ವಿಸ್ತರಿಸಿಕೊಳ್ಳುವುದರಲ್ಲಿ. ಇದಕ್ಕೆ ಯಾವುದೇ ಭಾವನೆಗಳ ಒತ್ತಡ ಹೇರುವವರನ್ನು ದಯವಿಟ್ಟು ನಿರ್ಲಕ್ಷಿಸಿ.

೨) ಅನುಮಾನ, ನಗು ಹಾಗು ತಮಾಷೆಯಷ್ಟೇ ಸಹಜವಾದ ಪ್ರತಿಕ್ರಿಯೆ - ಸಿಟ್ಟು ಹಾಗು ಅಸಹನೆ ಕೂಡ. ಅಸಹನೆ ಅಥವಾ ಸಿಟ್ಟಿನಲ್ಲಿ ಹುಟ್ಟಿದ ನಿಮ್ಮ ಅನಿಸಿಕೆಯನ್ನು ಸಂಯಮದಿಂದ ನಿರೂಪಿಸುವುದು ಸುಲಭವಲ್ಲ. ಆದರೂ ಮಾಡಲೇಬೇಕಾದ ಕೆಲಸ. ಹೇಳಿದ್ದನ್ನೇ ಹೇಳುತ್ತಾ, ಕಕ್ಕಿದ್ದನ್ನೇ ಕಕ್ಕುವವರ ಬರವಣಿಗೆಯ ಬಗ್ಗೆ ಅಸಹನೆ ಇರುವುದು ಒಳ್ಳೆಯದೇ. ಆ ಅಸಹನೆ ಅವರು ಬರೆದ ಸಂಗತಿಯ ಬಗ್ಗೆ ಇರುವುದರಿಂದ ಅದಕ್ಕೆ ಹಾಗೇ ಪ್ರತಿಕ್ರಿಯಿಸುವುದೂ ಒಳ್ಳೆಯದೇ.

೩) ನಿಮಗೆ ಅನ್ನಿಸಿದ್ದನ್ನು ಪ್ರಾಮಾಣಿಕವಾಗಿ ಹೇಳುವುದಕ್ಕೆ ಯಾರ ಅಪ್ಪಣೆಯ ಅಗತ್ಯವೂ ಇಲ್ಲ. ಅವರ ಮನಸ್ಸಿಗೆ ನೋವಾಗಬಹುದು, ಇವರು ಏನು ಅಂದುಕೊಳ್ಳುತ್ತಾರೋ ಎಂದುಕೊಂಡು ಹಿಂಜರಿಯುವುದರಿಂದ ಯಾರಿಗೂ ಲಾಭವಿಲ್ಲ. ಯಾಕೆಂದರೆ ನಿಷ್ಠರುವಾಗಿದ್ದಾಗಲೇ ಒಟ್ಟಾಗಿ ಚರ್ಚಿಸಿ ಅರಿಯಲು ಸಾಧ್ಯ.

೪) ತಪ್ಪು/ಸುಳ್ಳು ಹೇಳಿ ತೋರಿಸಿಕೊಟ್ಟಾಗ ಒಪ್ಪಲು ಮನಸ್ಸಿಲ್ಲದವರು ಮೇಲೆ ಹೇಳಿರುವುದಕ್ಕೆ ಉತ್ತರವಾಗಿ ಎರಡು ಬಗೆಯಲ್ಲಿ ಹೆದರಿಸುತ್ತಾರೆ.
ಮೊದಲನೆಯದಾಗಿ - "ಮೇಲೆ ಹೇಳಿದ ಹಾಗೆ ನಡೆದುಕೊಂಡರೆ ಸಂಪದ ರಣರಂಗವಾಗಿಬಿಡುತ್ತದೆ" ಎಂದು. ಈ ಮಾತನ್ನು ದಯವಿಟ್ಟು ನಂಬಬೇಡಿ. ಚರ್ಚೆ ವಸ್ತುನಿಷ್ಠವಾಗಿದ್ದರೆ ಯಾವತ್ತೂ ರಣರಂಗವಾಗಬೇಕಾಗಿಲ್ಲ, ರಣರಂಗವಾಗುವುದಿಲ್ಲ. ಎರಡನೆಯದಾಗಿ - ಜನ ಬೇಸರಗೊಂಡು ಸಂಪದ ಬಿಟ್ಟು ಹೊರಟು ಹೋಗುತ್ತಾರೆ ಎಂದು. ಈ ಮಾತು ನಿಜವಾದರೂ ಇದಕ್ಕೆ ಹೆದರುವ ಅವಶ್ಯಕತೆ ಇಲ್ಲ. ಯಾರೊಬ್ಬರು ಬಿಟ್ಟು ಹೋದರೂ ಸಂಪದ ಬಡವಾಗುತ್ತದೆ ಎಂಬುದು ನಿಜ. ಆದರೆ ಅದು ನೀಗಿಕೊಳ್ಳಲಾರದಂತಹ ಬಡತನವೇನಲ್ಲ. ಯಾರೇ ಬರೆಯದಿದ್ದರೂ ಕೂಡ ಉಳಿದವರಿಂದ ಸಂಪದ ಮುಂದುವರೆಯಬಲ್ಲುದು. ಅಷ್ಟು ಗಟ್ಟಿತನ ಸಂಪದಿಗರಲ್ಲಿದೆ.

೫) ಪ್ರಾಮಾಣಿಕವಾಗಿ ನಿಮ್ಮ ಅಸಹನೆಯನ್ನು ಹೇಳಿದಾಗ, ಅನುಮಾನ ಪಟ್ಟು ಪ್ರಶ್ನಿಸಿದಾಗ ನಿಮ್ಮಲ್ಲೇ  ವಯ್ಯಕ್ತಿಕವಾಗಿ ಹುಳುಕು ಹುಡುಕುತ್ತಾರೆ. ಚಂದ್ರಮೋಹನ ಜೈನನ ಬಗೆಗಿನ ಬರಹದಲ್ಲಿ - "ಎಲ್ಲರೂ ಓದಿ ಸುಮ್ಮನಿದ್ದಾರೆ, ನೀವು ಮಾತ್ರ ಯಾಕೆ ಹೀಗೆ ಪ್ರತಿಕ್ರಿಯಿಸುತ್ತಿದ್ದೀರ?" ಎಂದು ವಯ್ಯಕ್ತಿಕವಾದ ಪ್ರಶ್ನೆ ನನ್ನನ್ನು ಕೇಳಲಾಯಿತು. ಇದು ಧೃತಿಗೆಡಿಸಲೆಂದೇ ಕೇಳುವಂತಹ ಪ್ರಶ್ನೆ. ನಿಮ್ಮಲ್ಲೇ ಏನೋ ನ್ಯೂನತೆ ಇದೆ ಎಂದು ಹಿಮ್ಮೆಟ್ಟಿಸುವುದಕ್ಕಾಗಿಯೇ ಕೇಳುವುದು. ಇದು ತುಂಬಾ ಹಳೆಯ ಟ್ರಿಕ್ಕು. ಇಲ್ಲಿ ಯಾರೂ ಯಾಕೆ ಪ್ರತಿಕ್ರಯಿಸುತ್ತಿದ್ದೀರ ಎಂದು ಜಸ್ಟಿಫೈ ಮಾಡಿಕೊಳ್ಳಬೇಕಾಗಿಲ್ಲ. ನಿಮ್ಮ ಪ್ರತಿಕ್ರಿಯೆ ಏನು ಎಂಬುದಷ್ಟೇ ಮುಖ್ಯ. ಆ ಪ್ರತಿಕ್ರಿಯೆ ನನ್ನ ಬಗ್ಗೆ ಹೇಳಿದ್ದಾದರೂ, ಸಂಪದದ ಬಗ್ಗೆ ಏನೋ ಹೇಳುತ್ತದಲ್ಲ ಅನಿಸಿತು.

೬) ಇತ್ತೀಚೆಗೆ ಸಂಪದದಲ್ಲಿ ಪ್ರಕಟವಾದ ಈ ಬರಹವನ್ನು ಗಮನಿಸಿ. ಅದರಲ್ಲಿ ಯಾಣದ ಬಗ್ಗೆ ವಿವರಿಸುತ್ತಾ ಲೇಖಕರು ಹೇಳಿರುವ ಸುಳ್ಳು/ತಪ್ಪು ಹಾಗೇ ಇದೆ. ಸುಮಾರು ೫೧೦ ಸಲ ಓದಲ್ಪಟ್ಟಿದೆ. ಹುಡುಕಿದರೆ ಆ ಉತ್ಪ್ರೇಕ್ಷೆಯ ಮಾತುಗಳು ಎಷ್ಟು ತಪ್ಪು ಎಂದು ಎರಡು ನಿಮಿಷದಲ್ಲಿ ತಿಳಿಯುತ್ತದೆ.  ವೆನುಜುವೆಲಾದ ಏಂಜಲ್ ಫಾಲ್ಸ್ ಜಲಪಾತಕ್ಕೆ ಕೆರೆಪ್ ಎಂಬ ನದಿಯ ನೀರಿನ ಸೆಲೆ ಇದೆ. ಲೇಖಕರು ಇಲ್ಲ ಎನ್ನುತ್ತಾರೆ. ಹಾಗೆಯೇ ಟ್ರಾಪಿಕಲ್ ಅರಣ್ಯದಲ್ಲಿ ವರ್ಷಕ್ಕೆ ಸಾವಿರಾರು ಲೀಟರ್‍ ನೀರು ಆವಿಯಾಗಬಹುದು ಅಷ್ಟೆ. ಆದರೆ "ಲಕ್ಷಾಂತರ ಟನ್" ಎಂದು ಲೇಖಕರು ಫ್ಯಾಕ್ಟು-ಪ್ರಿನ್ಸಿಪಲ್ಲು ಎಂದು ಹೇಳಿರುವುದನ್ನು ಯಾರೂ ಅನುಮಾನಿಸಿಲ್ಲ, ಪ್ರಶ್ನಿಸಿಲ್ಲ. ನಾನು ಓದಿದಾಗ ಒಂದು ಬಗೆಯ ಸೋಷಿಯಲಾಜಿಕಲ್ ಎಕ್ಸ್‌ಪೆರಿಮೆಂಟ್ ಎಂದು ಸುಮ್ಮನಿದ್ದೆ. ಸಂಪದಿಗರು ಅದರತ್ತ ಗಮನವೇ ಹರಿಸಿಲ್ಲ. ಇಗ್ನೋರ್‍ ಮಾಡಿರಬಹುದು. ಆದರೆ, ಹೀಗೆ ಇಗ್ನೋರ್‍ ಮಾಡುತ್ತಲೇ ಇದ್ದರೆ, ಇಗ್ನೊರೆನ್ಸ್ ಪ್ರದರ್ಶನಕ್ಕೆ ಇಟ್ಟಂತೆ ಆದೀತು ಅಲ್ಲವೆ? ಟೈಮು ಮಾಡಿಕೊಂಡು ಬರೆಯುವವರು, ಟೈಮು ಮಾಡಿಕೊಂಡು ಓದುವವರಿಗೆ ಸುಳ್ಳು/ತಪ್ಪು ಮಾಹಿತಿ ಕೊಡುವುದೂ ದೊಡ್ಡ ತಪ್ಪೇ.

ಯಾಕೆ ಹೇಳಿದೆನೆಂದರೆ ಸಂಪದದಲ್ಲಿ ಪ್ರಕಟವಾಗುವ ಬರಹಗಳ ಮಟ್ಟದ ಬಗ್ಗೆ ಸಂಪದಿಗರು ಯೋಚಿಸಬೇಕು. ಬರೆಯುವವರಲ್ಲದೆ ಓದುವವರೂ ಅದನ್ನು ತಮ್ಮ ಜವಾಬ್ದಾರಿ ಅಂದುಕೊಳ್ಳಬೇಕು. ಬರೆಯುವವರಿಗೆ ಚೆಕ್ ಮಾಡುವ ಸೌಜನ್ಯ ಇಲ್ಲದಿದ್ದರೆ ಅದನ್ನು ಓದುಗರು ನೆನಪಿಸಬೇಕು. ಅದೇ ಸಂಪದದಂತಹ ಜೀವಂತ ವೇದಿಕೆಯ ಲಕ್ಷಣ.

ವಯ್ಯಕ್ತಿಕ ಟೀಕೆ ಸರಿಯಲ್ಲ ಎಂದು ಬೇರೆ ಹೇಳಬೇಕಿಲ್ಲ. ಅಂದರೆ ನೈತಿಕವಾಗಿ ಅದು ತಪ್ಪು ಅನ್ನುತ್ತಿಲ್ಲ (ಹಾಗೆ ಹೇಳಲು ನಾನ್ಯಾರು). ವಿಷಯದ ಚರ್ಚೆಗೆ ಅದು ನೆರವಾಗುವುದಿಲ್ಲ ಎಂಬುದಷ್ಟೇ ನನ್ನ ಅನಿಸಿಕೆ. ಹಾಗಾಗಿ ವಯ್ಯಕ್ತಿಕ ಟೀಕೆಯಿಂದ ಪ್ರಯೋಜನವಿಲ್ಲ ಎಂದು ಬಗೆಯುತ್ತೇನೆ.

ಹಾಗೆಯೇ ಸ್ನೇಹ, ಶಾಂತಿ, ಸಹನೆ ಇವೆಲ್ಲವೂ ಇರಬೇಕು. ಆದರೆ ಇವೆಲ್ಲಾ ವಸ್ತುನಿಷ್ಠತೆಯನ್ನು ಬಲಿಕೊಡುವ ಗೊಡ್ಡು ಮೌಲ್ಯವಾಗಕೂಡದು, ಅಷ್ಟೆ.