ಮಾವ ಸತ್ತಾಗ ಬಿಕ್ಕಿ ಬಿಕ್ಕಿ ಅಳುವ ಸೊಸೆಯರು!

ಮಾವ ಸತ್ತಾಗ ಬಿಕ್ಕಿ ಬಿಕ್ಕಿ ಅಳುವ ಸೊಸೆಯರು!

ಮೊನ್ನೆ ನನ್ನ ಸ್ನೇಹಿತ ಕಿಟ್ಟಿಯ ತಂದೆ ವಿಧಿವಶವಾದರು. ಆ ತಂದೆಗೆ ಮೂರು  ಜನ ಗಂಡುಮಕ್ಕಳು. ಒಬ್ಬಳು ಹೆಣ್ಣುಮಗಳು. ಕಿಟ್ಟಿಯ ಅಣ್ಣಂದಿರು ತುಂಬಾ ಚೆನ್ನಾಗಿ ಬದುಕಿದ್ದಾರೆ. ಒಬ್ಬ ದಾವಣಗೆರೆಯಲ್ಲಿ ಡಾಕ್ಟರ್. ಮತ್ತೊಬ್ಬ ಬೆಂಗಳೂರಿನಲ್ಲಿ ಒಂದು ಕಂಪನಿಯಲ್ಲಿ ಮ್ಯಾನೇಜರ್.ವಯಸ್ಸಾದ ಕಾಲದಲ್ಲಿ ಪಾಪ ಆ ವೃದ್ಧರು ತಮ್ಮ ಮೂರನೆಯ ಮಗ ಕಿಟ್ಟಿಯ
ಮನೆಯಲ್ಲಿದ್ದರು.ಕಿಟ್ಟಿಗೋ ಒಂದು ಒಳ್ಳೆಯ ನೌಕರಿಯೂ ಇಲ್ಲ. ನಾಲ್ಕಾರು ಅಂಗಡಿಗಳಲ್ಲಿ
ಲೆಕ್ಖ ಬರೆದುಕೊಂಡಿದ್ದಾನೆ. ಹತ್ತಿರದಲ್ಲಿ ಕಿಟ್ಟಿಯ ತಂಗಿಯೂ  ಇದ್ದಾರೆ. ಕಿಟ್ಟಿಯ ತಂದೆ ಆರು ತಿಂಗಳ ಹಿಂದೆ ಸೀರಿಯಸ್ಸಾಗಿ ಇನ್ನೇನು ಇಂದು ನಾಳೆಯಲ್ಲಿ ಪ್ರಾಣ ಹೋಗಬಹುದೆಂದು ತಿಳಿದಾಗ ಅವನ ಅಣ್ಣ ಡಾಕ್ಟರ್ ಬಂದು ನರ್ಸಿಂಗ್ ಹೋಂ ಗೆ ಸೇರಿಸಿದವರು ಮತ್ತೆ ಆ ಕಡೆ ತಲೆ ಹಾಕಿರಲಿಲ್ಲವಂತೆ.ಪಾಪ ನರ್ಸಿಂಗ್ ಹೋಮಿನ ಚಾರ್ಜ್ ಕಟ್ಟಲು ಊರತುಂಬಾ ಸಾಲ ಮಾಡಿ ಕಿಟ್ಟಿ ಸಾಕಾಗಿ ಹೋಗಿದ್ದ. ಪಾಪ, ಕಿಟ್ಟಿ ಅಪ್ಪನ ಶಿಶ್ರೂಶೆಯಲ್ಲಿ ಬಳಲಿ ಬೆಂಡಾಗಿ ಹೋಗಿದ್ದ. ಜೊತೆಗೆ ಹೆಂಡತಿ, ಆಗಿಂದಾಗ್ಗೆ ಬರುತ್ತಿದ್ದ ತಂಗಿ ಇದ್ದಿದ್ದರಿಂದ ಇವನಿಗೆ ಸ್ವಲ್ಪ ನಿದ್ರಿಸಲು ಅವಕಾಶವಿತ್ತು.

ಇಷ್ಟೆಲ್ಲಾ ಕಿಟ್ಟಿಪುರಾಣ ಏಕೆ ಹೇಳ್ದೇ ಅಂದ್ರೆ ಕಿಟ್ಟಿತಂದೆ ಸತ್ತ ದಿನ ಒಂದು ನಾಟಕ ನಡೆಯಿತು. ನೋಡಿದವರೆಲ್ಲಾ ದು:ಖಿಸುತ್ತಿದ್ದರೆ ನನಗೆ ನಾಟಕ ಮಾಡುವವರ ಮೇಲೆ ಸಿಕ್ಕಾಪಟ್ಟೆ ಸಿಟ್ಟುಬಂದಿತ್ತು.

ಕಿಟ್ಟಿತಂದೆ ರಾತ್ರಿ ೧೦ ಗಂಟೆಗೆ ಸತ್ತರು. ಪಾಪ ಆಬಡಪಾಯಿ ನನಗೂ ತಿಳಿಸಿ ಎಲ್ಲಾ ಅಣ್ಣಂದಿರಿಗೂ ಫೋನಾಯಿಸಿದ. ಐದು ನಿಮಿಷದಲ್ಲಿ ಎಲ್ಲರಿಗೂ ವಿಷಯ ಮುಟ್ಟಿತು. ನಾನೂ ಕೂಡ ಕಿಟ್ಟಿ ಸಂಸಾರದ ಜೊತೆಗೆ ನರ್ಸಿಂಗ್ ಹೋಮಿನಲ್ಲೇ ಜಾಗರಣೆ ಮಾಡಿದೆ.ಬೆಳಗಾಯ್ತು.ಕಿಟ್ಟಿಯ ಅಣ್ಣಂದಿರ ನಿರೀಕ್ಷೆಯಲ್ಲಿದ್ದೀವಿ. ಬೆಳಿಗ್ಗೆ ಹತ್ತಾದರೂ ಯಾರ ಸುಳಿವೂ ಇಲ್ಲ.ನರ್ಸಿಂಗ್ ಹೋಮಿನವರೋ ಬಿಲ್ ಸೆಟ್ಲ್ ಮಾಡಿ ಬಾಡಿ ಬೇಗ ತೆಗೆದುಕೊಂಡು ಹೋಗಿ ಅಂತಾ ಒತ್ತಡ ತರ್ತಾ ಇದ್ದಾರೆ.ಕಿಟ್ಟಿ ಕುಸಿದು ಹೋಗಿದ್ದ. ನನ್ನ ಸ್ನೇಹಿತನಿಗೆ ಫೋನ್ ಮಾಡಿ ಹಣತರಿಸಿ ಬಿಲ್ ಪಾವತಿಸಿ ಮೃತ ದೇಹವನ್ನು ಕಿಟ್ಟಿಮನೆ ಹತ್ತಿರ ತೆಗೆದುಕೊಂಡು ಹೋಗುತ್ತೇವೆ. ಮದ್ಯಾಹ್ನ ಒಂದು ಗಂಟೆಗೆ ಬೆಂಗಳೂರಿನಿಂದ, ಮೂರು ಗಂಟೆಗೆ ದಾವಣಗೆರೆಯಿಂದ ಅಣ್ಣಂದಿರು ಬಂದರು.ಬೆಂಗಳೂರಿನಿಂದ ಬಂದ ಕಿಟ್ಟಿಯ ಅತ್ತಿಗೆ ಮೃತ ದೇಹದ ಮೇಲೆ ತಲೆ ಇಟ್ಟು ಗೊಳೋ ಅಂತಾ ಅಳಲು ಶುರು ಮಾಡಿ ಬಿಡುವುದೇ!! " ದೇವ್ರ ತರಾ ಇದ್ರಿ, ನಮ್ಮನ್ನು ಬಿಟ್ಟು ಹೋಗ್ಬಿಟ್ರಲ್ಲಾ!..........ಇನ್ನೂ ಏನೇನೋ ಹೇಳಿಕೊಂಡು ಅತ್ತಿದ್ದೇನೂ , ಕರೆದಿದ್ದೇನೂ, ನೋಡುವವರಿಗೆ ಅವರ ಮೇಲೆ ಅದೇನೋ ಮರುಕ. ಪಾಪ! ನಿಜವಾಗಿ ತಮ್ಮ ಸೇವೆ ಮಾಡಿದ್ದವರು ಸೊರಗಿ ಸೊಪ್ಪಾಗಿ, ನಿತ್ರಾಣರಾಗಿ ಕುಳಿತಿದ್ದರೆ, ಆಯಮ್ಮನ ಆರ್ಬಟ ಕೇಳಿ ನನಗೆ ನಿಜವಾಗಿ ಸಿಟ್ಟೇ ಬಂತು.

" ಸಮಾಧಾನ ಪಟ್ಟುಕೊಳ್ಳಿ , ಮುಂದಿನ ಕೆಲಸಕ್ಕೆ ತಡವಾಗುತ್ತೆ" ಎಂದು ಏಳಿಸಿದ್ದಾಯ್ತು.

ಅಪ್ಪ ಅಮ್ಮ  ಇದ್ದಾಗ ಹತ್ತಿರ ಸುಳಿಯದವರು ಅವರು ಸತ್ತಾಗ ಬಿಕ್ಕಿ ಬಿಕ್ಕಿ ಅಳುತ್ತಾ, ಶ್ರಾದ್ಧದ ಕೆಲಸ ಮಾಡುವ ದಿನಗಳಲ್ಲಿ ಬಿಡುವಾದಾಗಲೆಲ್ಲಾ ಮಾವನ ಗುಣಗಾನ ಮಾಡುವ ಸೊಸೆಯರು! ಇವರ ಬರಾಟೆಯಲ್ಲಿ ನಿದ್ದೆ ಗೆಟ್ಟು ಅಪ್ಪನ ಸೇವೆ ಮಾಡಿದ ಮಗ ಸೊಸೆ ತೆಪ್ಪನೆ ಕುಳಿತಿದ್ದನ್ನು ಕಂಡು ಅಯ್ಯೋ ಎನಿಸಿತು.

 

 

 

Rating
No votes yet

Comments