ಬೂದಿಯಾಗುವವರು!!!

ಬೂದಿಯಾಗುವವರು!!!

ಸಖೀ,
ಕಂಡಿರಬಹುದು
ನೂರಾರು ಬಗೆಯ
ನಗುವ ಹೂಗಳನು ನೀನು;
ಆದರೆ,
ಆ ನಗೆಯ ಹಿಂದಡಗಿರುವ
ನೋವ ನೀ ಅರಿತಿರುವೆಯೇನು?

ಅವುಗಳೊಳಗೂ ಇವೆ ಬಯಕೆಗಳು,
ಅಸಹಾಯಕತೆಯಿಂದಾಗಿ
ಸುಡುತ್ತಿರುವ ಬೇಗೆಗಳು;

ದೇಗುಲದಿ ಹರಿಯ ಪಾದ
ಸೇರಿ ಮುಕ್ತರೆನಿಸಿಕೊಂಬ
ಬಯಕೆಗಳಿರುವಂತೆಯೇ,
ಮುತ್ತೈದೆಯರ ಮುಡಿಯೇರಿ
ಹೆಮ್ಮೆ ಪಡಬೇಕೆಂಬ
ಬಯಕೆಗಳೂ ಇವೆ.

ಆದರೆ,
ದೇಗುಲವ ಸೇರಿದವುಗಳೆಷ್ಟೋ?
ಶವಗಳ ಜೊತೆ ಸೇರಿ
ಚಿತೆಯೇರಿದವುಗಳೆಷ್ಟೋ?
ರಾಜಕೀಯ ಪುಡಾರಿಗಳ
ಕೊರಳ ಬಳಸಿ,
ಉಸಿರುಗಟ್ಟಿಸಿಕೊಂಡು
ಸತ್ತವುಗಳೆಷ್ಟೋ?
ಮದುವೆ - ಸಮ್ಮಾನ
ಸಮಾರಂಭಗಳಲಿ,
ಜನರ ಕಾಲಡಿಯಲಿ ಬಿದ್ದು
ನರಳಾಡಿದವುಗಳೆಷ್ಟೋ?
ಇನ್ನು, ಇದ್ದಲ್ಲೇ ಇದ್ದು,
ಬಿಸಿಲ ಬೇಗೆಯಲಿ ಉರಿದು
ಬೂದಿಯಾದವುಗಳೆಷ್ಟೋ?

ಅಂತೆಯೇ ನಾವೂ ಕೂಡ,
ನಮ್ಮೆಲ್ಲಾ ಬಯಕೆಗಳ
ಬಚ್ಚಿಟ್ಟುಕೊಂಡು
ನಮ್ಮ ಅಸಹಾಯಕತೆಯಿಂದಾಗಿ
ಒಳಗೊಳಗೆ ನೊಂದು,
ಬಡತನದ ಬೇಗೆಯಲಿ ಬೆಂದು,
ಬೂದಿಯಾಗುವವರೇ
ಮುಂದೊಂದು ದಿನ.

ಆದರೂ, ನೋವ ಮರೆತು
ನಗುತಿರುವ ಆ ಹೂಗಳಂತೆ,
ನಗುತಿರಬಾರದೇ
ನಾವೂ, ದಿನ - ಪ್ರತಿದಿನ?
*-*-*-*-*-*-*-*

Rating
No votes yet

Comments