ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ...

ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ...

ಏನು ನಿನಗೆ ಮಾತು ಬರಲ್ವಾ?... ಹುಡುಗಿಯೊಬ್ಬಳು ತುಂಬಿದ ಕ್ಲಾಸಲ್ಲಿ ಹೀಗೆ ಅವಾಜ್ ಹಾಕಿದರೆ ಹೇಗಿರಬಹುದು. ನನ್ನ ಎಂ ಎ ಮೊದಲ ತರಗತಿಯಲ್ಲಿ ಆದದ್ದು ಇದೇ. ನನಗೆ ಮಂಗಳೂರೇ ಹೊಸತು. ಇಲ್ಲಿಯ ಎಲ್ಲವೂ ಯಾವುದೋ ಬೇರೆ ಲೋಕದ ವ್ಯವಹಾರಗಳಂತೆ ಭಾಸವಾಗುತ್ತಿದ್ದವು. ಈ ಗಾಬರಿಯಲ್ಲಿ ನನಗೆ ಮಾತೆ ಹೊರಡುತ್ತಿರಲಿಲ್ಲ. ನಮ್ಮ ತರಗತಿಯಲ್ಲಿ ೨೧ ಹುಡುಗಿಯರು ೬ ಹುಡುಗರು!!! ನಮ್ಮೂರಲ್ಲಿ ಹುಡುಗಿಯರನ್ನು ಮಾತಾಡಿಸಲು ೭ ಜೊತೆ ಚಪ್ಪಲಿ ಸವೆಸಿ ಹಿಂದೆ ತಿರುಗಿದರೆ ಇಲ್ಲಿ ಎಲ್ಲವೂ ಉಲ್ಟಾ.. ನಾನು ಪೆಕರನ ಹಾಗೆ ಹಲ್ಲು ಕಿಸಿದದ್ದು ಬಿಟ್ಟರೆ ಒಂದೂ ಮಾತಾಡಲಿಲ್ಲ. ಇಡೀ ತರಗತಿಯೇ ನನ್ನನ್ನು ವಿಚಿತ್ರ ಪ್ರಾಣಿಯಂತೆ ನೋಡತೊಡಗಿತ್ತು.

ನನ್ನ ಅಡಾವುಡಿತನ ನೋಡಿದ ಡಿಗ್ರಿ ಮೇಸ್ಟ್ರು ಹೇಳಿದ್ದರು_ ಲೇ ಸಾತ್ವಿಕ, ನಿನ್ನ ಮಾತುಗಳು ನಿನ್ನ ಅಂಕೆಯಲ್ಲಿರಲಿ. ನಮ್ಮ ಕಾಲೇಜಿನಲ್ಲಿ ಮಾತಾಡಿದ ಹಾಗೆ ವಿಶ್ವವಿದ್ಯಾನಿಲಯದಲ್ಲಿ ಮಾತಾಡಿದ್ರೆ ಬಾಲ ಕತ್ತರಿಸಿ ಬಿಡುತ್ತಾರೆ ಅಂತ ತಮ್ಮ ಹಳೆಯ ಸಿಟ್ಟನ್ನು ತೀರಿಸಿಕೊಂಡಿದ್ದರು. ಹೇಳಿ ಕೇಳಿ ಕರಾವಳಿ ಜನ ಬುದ್ಧಿವಂತರು. ಬಾಯಿಗೆ ಬಂದದ್ದು ಮಾತಾಡಿ ಬುದ್ದು ಅನಿಸಿಕೊಳ್ಳಬೇಡ. ಇದು ನಮ್ಮ ಕಾಲೇಜಿನ ಪ್ರತಿಷ್ಠೆ ಅಂತ ಏನೋನೊ ಡೈಲಾಗ್ ಹೊಡೆದಿದ್ದರು. ಇನ್ನೊಂದು ವಿಷಯ, ಮಂಗಳೂರು ಹುಡುಗಿಯರು ಬಹಳ ಜೋರು.. ಇಲ್ಲಿಯ ಹಾಗೆ ಮಾಡಿದ್ರೆ ಮೀನಿನ ಮಾರ್ಕೆಟ್ ಲ್ಲಿ ಮಾರಿಬಿಡ್ತಾರೆ ಅಂತ ಹೇಳಿದ್ರು. ಹ್ಹೆ ಹ್ಹೆ ಬಿಡಿ ಸರ್.. ನೀವೇ ಅಲ್ಲಿಂದ ಕ್ಶೇಮವಾಗಿ ಬಚಾವಾಗಿ ಬಂದಿದ್ದೀರಿ ಅಂದ್ರೆ ನನಗೇನು ಭಯವಿಲ್ಲ ಅಂತ ಪೌರುಷದ ಮಾತಾಡಿದ್ದೆ.(ಅವರು ಕೂಡ ಮಂಗಳೂರು ವಿ ವಿ ಯ ಹಳೆ ವಿದ್ಯಾರ್ಥಿ) ಅದಕ್ಕೆ ನಿನ್ನ ಹಳೆ ಬುದ್ಧಿ ಎಲ್ಲಿ ಬಿಡ್ತೀಯಾ ಅಂತ ಗೊಣಗುತ್ತ ಹೋಗಿದ್ರು. ಇಲ್ಲಿ ನೋಡಿದ್ರೆ ಪರಿಸ್ಥಿತಿ ಹಾಗೆಯೇ ಇದೆ.. ಒಟ್ಟು ಈ ಹೆದರಿಕೆಯಲ್ಲಿ ಬರುವ ಪದಗಳೂ ಬಾಯಿಂದ ಹೊರಡಲಿಲ್ಲ.

ಇನ್ನೊಂದು ಸಮಸ್ಯೆ ಆಚೆ ಕಡೆ ಕುಂದಗನ್ನಡದಲ್ಲಿ ಮಾತಾಡ್ತಾರೆ. ಈಚೆ ಕಡೆ ತುಳು ಮಾತಾಡ್ತಾರೆ. ಯಾವುದು ನನಗೆ ಅರ್ಥ ಆಗೊಲ್ಲ. ಬೊಬ್ಬೆ ಹಾಕಿ ಮಾತಾಡಿ ಗೊತ್ತಿದ್ದ ನನಗೆ ಮೆಲುದನಿಯ ಮಾತುಗಳು ನನ್ನ ಕಿವಿಗೆ ಕೇಳಿಸುತ್ತಲೇ ಇರಲಿಲ್ಲ. ಬಾಯಿ ಬಿಟ್ಟು ಭಂಡ/ದಡ್ಡ ವಿದ್ಯಾರ್ಥಿ ಅನ್ನಿಸಿಕೊಳ್ಳುವುದಕ್ಕಿಂತ ಬಾಯಿ ಬಿಡದೇ ಇರುವುದೇ ಲೇಸು ಎಂಬುದು ನನ್ನ ಅಂದಿನ ತೀರ್ಮಾನವಾಗಿತ್ತು. ಮತ್ತೆ ಇಡೀ ಕ್ಯಾಂಪಸ್ ಅಲ್ಲೇ ಪರಿಚಿತ ವ್ಯಕ್ತಿಯಾದದ್ದು ನಂತರದ ವಿಚಾರ. ಆದರೆ ಮೊದಲ ದಿನ ಅದು ಹೇಗೆ ಬಾಯಿ ಮುಚ್ಚಿ ಕೂತಿದ್ದೆನೋ ನನಗೆ ತಿಳಿಯದು...

Rating
No votes yet

Comments