ನಮ್ಮ ರಾಜ್ಯದ ಶಿಕ್ಷಣ ಇಲಾಖೆಗೆ ಶಿಕ್ಷಣ ಕೊಡಿಸುವ ಸ್ಥಿತಿ ಬಂತೆ..?!

ನಮ್ಮ ರಾಜ್ಯದ ಶಿಕ್ಷಣ ಇಲಾಖೆಗೆ ಶಿಕ್ಷಣ ಕೊಡಿಸುವ ಸ್ಥಿತಿ ಬಂತೆ..?!

ಬರಹ

ಮೇ ೨೯, ರಾಜ್ಯದ ಎಲ್ಲ ಶಾಲೆಗಳು ಪ್ರಸಕ್ತ ಶೈಕ್ಷಣಿಕ ವರ್ಷದ ಕಾರ್ಯ ಆರಂಭ ಮಾಡಲಿವೆ. ಈಗಾಗಲೇ ನೀವೆಲ್ಲ ಬಹುತೇಕ ದಿನ ಪತ್ರಿಕೆಗಳ ಮುಖಪುಟದಲ್ಲಿ ಈ ಕುರಿತ ಜಾಹಿರಾತು ನೋಡಿರುತ್ತೀರಿ. ಕಳೆದ ಒಂದು ವಾರದಿಂದ ಹೆಚ್ಚು ಕಡಿಮೆ ನಿತ್ಯವೂ ಬೇರೆ, ಬೇರೆ ವಿಷಯ ಕೇಂದ್ರಿಕರಿಸಿ ರಾಜ್ಯ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಮಾಧ್ಯಮಗಳಿಗೆ ಈ ಜಾಹಿರಾತು ನೀಡುತ್ತಿದೆ.‘ಬರಲಿ ಮಕ್ಕಳು ಶಾಲೆಗೆ ಮೊದಲ ದಿನದಿಂದಲೇ’ ಘೋಷಣೆ ಹೊತ್ತ, ‘ನಾವು ಸಿದ್ಧರಾಗಿದ್ದೇವೆ ಇನ್ನು ನೀವು?’ ತಲೆಬರಹ ಹೊಂದಿದ ಈ ಜಾಹಿರಾತನ್ನು ಯಾರೂ ಓದಿರಲಿಕ್ಕಿಲ್ಲ. ಕೇವಲ ಕಣ್ಣಾಡಿಸಿದ್ದಾರೆ.

ಲಕ್ಷಾಂತರ ರುಪಾಯಿ ವ್ಯಯಿಸಿ ನೀಡಲಾದ ಈ ಜಾಹಿರಾತುಗಳಲ್ಲಿ ಸಾಕಷ್ಟು ತಪ್ಪುಗಳಿವೆ. ನಿನ್ನೆ ಮಂಗಳವಾರ ಮೇ, ೨೬, ೨೦೦೯ ರಂದು ಬಹುತೇಕ ಪತ್ರಿಕೆಗಳು ತಮ್ಮ ಮುಖಪುಟದಲ್ಲಿ ಪ್ರಕಟಿಸಿದ ಜಾಹಿರಾತು ಅತ್ಯಂತ ಆಭಾಸಕಾರಿಯಾಗಿತ್ತು. ಕನ್ನಡ ಕಸ್ತೂರಿಯ ಕಂಪನ್ನು ಸೂಸಿ, ಪಸರಿಸಿ ಹರಡಬೇಕಾದ, ಅದೂ ಶಿಕ್ಷಣ ಇಲಾಖೆ ಸಿದ್ಧ ಪಡಿಸಿ ಮಾಧ್ಯಮಗಳಿಗೆ ಬಿಡುಗಡೆ ಜಾಹಿರಾತಿನಲ್ಲಿ ಈ ತಪ್ಪುಗಳು ಕಂಡಿರುವುದನ್ನು ಸರಕಾರ ಹೇಗೆ ಸಮರ್ಥಿಸಿಕೊಳ್ಳುವುದೋ?

ಶಿಕ್ಷಣ ಇಲಾಖೆಗೆ ಶಿಕ್ಷಣ ಕೊಡಿಸಬೇಕು..ಎಂಬ ಸ್ಥಿತಿ ಬಂದೊದಗಿದರೆ? ‘ಮಕ್ಕಳೆ ಶಾಲೆಗೆ ಬನ್ನಿ’..‘ಪಾಲಕರೆ ಮಕ್ಕಳನ್ನು ಶಾಲೆಗೆ ಕಳುಹಿಸಿ’ ಎಂದು ಹೇಳಲು ಸರಕಾರ ಜಾಹಿರಾತಿಗಾಗಿ ಎಷ್ಟು ಹಣ ಖರ್ಚು ಮಾಡಿತು ಎಂಬುದರ ಮೇಲೆ ಯೋಜನೆಯ ಯಶಸ್ಸನ್ನು ಅಳೆಯಲು ಸಾಧ್ಯವೇ? ಹೀಗೆ ಜಾಹಿರಾತು ನೀಡಿದರೆ ಮಕಳು ಶಾಲೆಗೆ ಬರುತ್ತಾರೆಯೆ? ಸರಕಾರ ಜಾಹಿರಾತು ನೀಡಿ ಹಣ ಖರ್ಚಿಸದೇ ಸುದ್ದಿ ರೂಪದಲ್ಲಿಯೂ ಇದನ್ನು ಪಸರಿಸಬಹುದಿತ್ತು. ಜನರಿಗೆ ಮಾಹಿತಿ ದೊರಕಬಹುದಾಗಿತ್ತು. ಸರಕಾರಿ ಶಾಲೆಗೆ ಮಕ್ಕಳು ಹೋಗುವುದಾದರೆ ಬಹುತೇಕ ಹಳ್ಳಿಗಾಡಿನಲ್ಲಿ ಅವರ ಸಂಖ್ಯೆ ಹೆಚ್ಚು. ಹಾಗಾಗಿ ಆಕಾಶವಾಣಿಯಲ್ಲಿ ‘ರೇಡಿಯೋ ಜಿಂಗಲ್’ ನೀಡಿ ಅವರ ಗಮನ ಸೆಳೆಯಬಹುದಾಗಿತ್ತು. ಒಟ್ಟಾರೆ ಎಷ್ಟು ಹಣ ಖರ್ಚಾಗಿದೆ ಎಂಬುದರ ಮೇಲೆ ಯೋಜನೆಯ ಯಶಸ್ಸು ಅಳೆಯುವ ಹೊಸ ಮಾನದಂಡಗಳೇನಾದರೂ ಕರ್ನಾಟಕದಲ್ಲಿ ಜಾರಿಯಾದವೇ?

ಶಾಲೆ ನಡೆಸಬೇಕಾದ ಶಿಕ್ಷಕರನ್ನು ಮರೆತು..ಒಂದರ್ಥದಲ್ಲಿ ಗಾಲಿಗಳನ್ನೇ ಬಿಟ್ಟು ರಥ ಇಲ್ಲಿ ಓಡುತ್ತಿದೆ. ಜಾಹಿರಾತಿನಲ್ಲಿ ಎಲ್ಲಿಯೂ ಶಿಕ್ಷಕರ ಕುರಿತು ನಾಲ್ಕು ಮಾತುಗಳಿಲ್ಲ. ಇನ್ನು ಜಾಹಿರಾತು ತಯಾರಿಸಿದವರಿಗಂತೂ ‘ಪೌರ ಸನ್ಮಾನ’ ನೀಡಬೇಕು! ಅಂತ ನನ್ನ ಅರಿಕೆ. ಕೆಲ ತಪ್ಪುಗಳ ಸ್ಯಾಂಪಲ್ ಇಲ್ಲಿವೆ.

*‘ಎಸ್. ಡಿ.ಎಂ.ಸಿ. ಸದಸ್ಯರ ನೇತೃತ್ವದಲ್ಲಿ’ ಎಂದಿರಬೇಕಾಗಿದ್ದು ‘ಎಸ್.ಡಿ.ಎಂ.ಸಿ ನೇತೃತ್ವದಲ್ಲಿ’ ಎಂದಿದೆ.

*‘ಅಡುಗೆ ಕೋಣೆ’..‘ಅಡುಗೆ ಸಾಮಗ್ರಿ’ ಎಂದಿರಬೇಕಾದಲ್ಲಿ ಸಾಕಷ್ಟು ಕೆಟ್ಟ ಹಾಗು ಅಪಾರ್ಥಕ್ಕೀಡು ಮಾಡಬಲ್ಲ ‘ಅಡಿಗೆ ಕೋಣೆ’..‘ಅಡಿಗೆ ಸಾಮಗ್ರಿ’ ಎಂದು ಅಚ್ಚು ಹಾಕಿಸಲಾಗಿದೆ.

*‘ಸುಣ್ಣ-ಬಣ್ಣ ಬಳಿದಿರಬೇಕು’ ಅಥವಾ ‘ಸುಣ್ಣ-ಬಣ್ಣ ಹಚ್ಚಿಸಿರಬೇಕು’ ಎಂದು ಸರಳವಾಗಿ ಹೇಳಬಹುದಿತ್ತಾದರೂ ‘ಸುಣ್ಣ -ಬಣ್ಣ ನಡೆಯಬೇಕು’ ಎಂದು ಮುದ್ರಿಸಿ..‘ಚಲ್ತಾ ಹೈ’ ಧೋರಣೆ ತೋರಲಾಗಿದೆ.

*ಎಲ್ಲ ಪತ್ರಿಕೆಗಳು ತಮ್ಮ ಮುಖಪುಟದಲ್ಲಿ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜ್ಯೋತಿಷಿಗಳ ಸಲಹೆಯ ಮೇರೆಗೆ ಇನ್ನು ಮುಂದೆ ‘ಯಡ್ಯೂರಪ್ಪ’ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿರುವುದಾಗಿ ಘೋಷಿಸಿ ಬರೆದವು. ಈಗ ಮತ್ತೆ ಅದೇ ಹಳೆಯ ಹೆಸರು ಮುದ್ರಿತವಾಗಿದೆ. ಹಾಗೆಯೆ ‘ಮಾನ್ಯ .... ಮುಖ್ಯಮಂತ್ರಿ’ ಸಾಕಿತ್ತು ‘ಮಾನ್ಯ ಶ್ರೀ ......ಮುಖ್ಯಮಂತ್ರಿಗಳು’ ಎಂದು ಅನವಶ್ಯಕವಾಗಿ ನಪುಂಸಕ ಲಿಂಗಕ್ಕೆ (ಪದವಿಗಳನ್ನು ಹಾಗೆ ಉಲ್ಲೇಖಿಸಬಹುದು) ತಳ್ಳಲಾಗಿದೆ.

*‘ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣದ ಮಾನ್ಯ ಸಚಿವ’ ಸಾಕಾಗಿತ್ತು..ಆದರೆ ‘ಮಾನ್ಯ ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವರು’ ಎಂದು ಸದಾ ಬಹುವಚನ ಸೂಚಿಸುವ ಅನವಶ್ಯಕ ಕಸರತ್ತು ಮಾಡಲಾಗಿದೆ.

*‘ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣ’ ಎಂದು ಮುದ್ರಿತವಾಗಿದೆ..ಆದರೆ ಅದು ‘ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಕಾರ್ಯದರ್ಶಿ’ ಎಂದಿದ್ದರೆ ಗೊಂದಲಗಳಿಲ್ಲದೆ ಓದಿಸಿಕೊಂಡು ಹೋಗಬಲ್ಲುದು. ಜೊತೆಗೆ ‘ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು’ ಸಹ.

ಶಿಷ್ಠಾಚಾರ ನಮಗೆಲ್ಲ ಅರ್ಥವಾಗುತ್ತದೆ. ಆದರೆ ಯೋಜನೆಗಳ ಹೆಸರಿನಲ್ಲಿ ‘ಈ ಪರಿಯ’ ಪ್ರಚಾರ ಯಾವ ಪುರುಷಾರ್ಥಕ್ಕೆ? ಸರಕಾರದ ಯಾವ ಉದ್ದೇಶವನ್ನು ಇಂತಹ ಜಾಹಿರಾತುಗಳು ಸಫಲಗೊಳಿಸಬಲ್ಲುವು. ಇದಕ್ಕೆಲ್ಲ ಕಡಿವಾಣ ಹಾಕುವ ಅವಶ್ಯಕತೆ ಇಲ್ಲವೆ?