ನಿರಾಸಕ್ತಿ ಯೋಗದಿಂದ ಒದಗಿ ಬಂದ ಗದ್ದುಗೆ

ನಿರಾಸಕ್ತಿ ಯೋಗದಿಂದ ಒದಗಿ ಬಂದ ಗದ್ದುಗೆ

ಬರಹ

'ನಿರಾಸಕ್ತಿ ಯೋಗ'ದಿಂದ ಒದಗಿ ಬಂದ 'ಗದ್ದುಗೆ' :

ಮನಮೋಹನ ಸಿಂಗ್ ಹಾಗು ಸೋನಿಯಾ ಗಾಂಧಿ ಒಟ್ಟಿಗೆ ಜನರತ್ತ ಕೈಬೀಸುವ ಚಿತ್ರ ಅವರ ಚುನಾವಣಾ ಜಾಹಿರಾತಿನದಾಗಿದ್ದರೂ ಇದು ಒಳ್ಳೆಯ ಚಿತ್ರ. ಮನಸ್ಸಿನಲ್ಲಿ ಮಾತಾಡತ್ತೆ. ಸದ್ಭಾವನೆ-ಭರವಸೆ ಮೂಡಿಸತ್ತೆ. ಅವರು ಒಟ್ಟಾಗಿ ನಿಂತು ನಮ್ಮನ್ನು ಹುರುದುಂಬಿಸುವಂತೆ, ಧೈರ್ಯ ಹೇಳುವಂತೆ ಕಾಣ್ತಾರೆ.

ಸೋನಿಯಾ ತನ್ನೊಂದಿಗೆ ಕೆಲಸಮಾಡಲು ಕಂಡುಕೊಂಡ ಈ ಸಿಂಗ್ ಆಸೆಪಟ್ಟು ಆ ಸಿಂಹಾಸನದಮೇಲೆ ಕುಳಿತವರಲ್ಲ. ಸಿಂಗ್ ಆ ಕುರ್ಚಿಯ ಮೇಲೆ ಕುಳಿತರೆ ಯಾರಿಗೂ ಅಸೂಯೆಯೇ ಬರಲಾರದು. ಬಹುಶ: ವಿರೋಧ ಪಕ್ಷಗಳಿಗೂ ಕೂಡ. ಪಾಪ; ವಿರೋಧಿಸಲೇಬೇಕೆಂದು ಆಧ್ವಾನಿಯವರು ಇವರನ್ನು 'ದುರ್ಬಲ ಪ್ರಧಾನಿ' ಅಂತ ಹೇಳಿದ್ರು. ಹಾಗಂತ ನಿಜಕ್ಕೂ ಅವರಿಗೆ ಅನ್ನಿಸದೇ ಇದ್ರೂ ಇರಬಹುದು. ಟೀಕಸಲೆಂದೇ ಹಾಗಂದ್ರು ಅನ್ನಿಸತ್ತೆ. ಕೇಳಿದ್ರೆ ಇದು ತಪ್ಪೆಂದು ಒಳಗಡೆ ಅನ್ನಿಸಿಬಿಡತ್ತೆ. ಇದು ಆಧ್ವಾನಿಯವರ 'ಸಣ್ಣ' ಮಾತಿನಂತೆ ಅನ್ನಿಸಿಬಿಡತ್ತೆ. ಒಬ್ಬ ನಿಷ್ಟಾವಂತ ಅಧಿಕಾರಿಯಂತೆ ಕಾಣುವ ನಮ್ಮ ಪ್ರಧಾನಿ ರಾಜಕಾರಣಿ ಅಲ್ಲದಿರುವುದು ಆ ಸ್ಥಾನದ ಕಳೆ ಕಡಿಮೆಯಾದಂತೆ ಅನ್ನಿಸಬಹುದು. ಆದರೆ ನಮ್ಮ ದೇಶದ ಇಂದಿನ ಅನೇಕ ಅಗತ್ಯ ನಿರ್ಧಾರಗಳಿಗೆ ಇವರು ಸರಿಹೊಂದುತ್ತಾರೆ.

ಸಿಂಗರ ಆರ್ಥಿಕ ನೀತಿ ಎಷ್ಟರಮಟ್ಟಿಗೆ ಈ ದೇಶಕ್ಕೆ ಸಲ್ಲುತ್ತದೆ ಎಂದು ತಿಳಿಯುವುದು ಕಷ್ಟ. ಆದ್ರೆ ಇವರ ವಿದರ್ಭ ಪ್ಯಾಕೇಜ್ ಅನೇಕ ರೈತರಿಗೆ ಜೀವದಾನ ಮಾಡಿದ್ದಂತೂ ಸತ್ಯ. ಹಿಂದೂ ಪತ್ರಿಕೆಯ ಸಾಯಿನಾಥ್(ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರು)ಬರೆದ ರೈತರ ಸಂಕಷ್ಟಗಳ ಕುರಿತಾಗಿನ ಅಧ್ಯಯನ ವರದಿಗೆ ಕೂಡಲೆ ಸ್ಪಂದಿಸಿದರು. ಕೂಲಿಗಾಗಿ ಕಾಳು ಯೋಜನೆಯಿಂದ ಕೃಷಿ ಕೂಲಿಕಾರ್ಮಿಕರಿಗೆ ಸಿಕ್ಕ ಆಸರೆಯನ್ನು ನಮ್ಮ ಸುತ್ತಲಿನ ಜನರೇ ಹೇಳುತ್ತಾರೆ. ನಮ್ಮ ತೋಟದಲ್ಲಿ ಕೆಲಸಕ್ಕೆ ಬರುವವರು ಈ ಕಾರಣಕ್ಕೇ ಕಾಂಗ್ರೆಸ್ಸಿಗೆ ಓಟ್ ಮಾಡಿದ್ವಿ ಅಂತಾರೆ. ಇವತ್ತಿನ ಜಾಗತಿಕ ವಿದ್ಯಮಾನದಲ್ಲಿ ನಮ್ಮ ಆರ್ಥಿಕ ವ್ಯವಸ್ಥೆಯನ್ನು ಕಟ್ಟಬೇಕಾಗಿರುವಾಗ ಅತೀ ಉದಾರ ನೀತಿಯನ್ನು ನಮ್ಮ ಪ್ರಧಾನಿ ಅನುಸರಿಸುತ್ತಾರೆಂದು ಅನೇಕರ ಭಯ. ಏಕೆಂದರೆ ಇದರ ಪರಿಣಾಮ ಇನ್ನಷ್ಟು ಕಾರ್ಪೋರೇಟ್ ವ್ಯವಸ್ಥೆಗೆ ಹೋಗುವುದು. ಹಣವಂತರ ಕೈಗೆ ಬಲ ನೀಡುವುದು. ಪಬ್ಲಿಕ್ ಸೆಕ್ಟರ್ ನಿರ್ವಹಣೆಯನ್ನು ಕಳಚುತ್ತಾ ಹೋಗುವುದು. ಈ ಅಪಾಯವನ್ನು ಎಡಪಕ್ಷಗಳು ಮನಗಂಡು ತಡೆ ಒಡ್ಡುತ್ತಿದ್ದವು. ಈಗ ಸಂಪೂರ್ಣ ಅವಕಾಶ ಸಿಂಗರಿಗೆ ಇದೆ. ನೋಡಬೇಕು ಏನುಮಾಡುತ್ತಾರೆಂದು. ಈ ಒಳ್ಳೆಯ ಮನುಷ್ಯನ ಅಪಾಯಕಾರೀ ಸಾಹಸಗಳನ್ನು ನಮ್ಮ ವಿರೋಧ ಪಕ್ಷಗಳು ಸೂಕ್ಷ್ಮವಾಗಿ ಗಮನಿಸಬೇಕು.

ಇವತ್ತಿನ ಆ- 'ಮೇಲಿನ' ಕಾಂಗ್ರೆಸ್ ನಮಗೆ ಆಪ್ತವಾಗಿ ಕಾಣ್ತಿದೆ. ಯಾವತ್ತು ಸೋನಿಯಾ ಗಾಂಧಿ ತಾನು ಒಪ್ಪಬಹುದಿದ್ದ ಆ ಗದ್ದುಗೆಯನ್ನು ನಿರಾಕರಿಸಿದ್ರೋ ಅವತ್ತೇ ನಮ್ಮ ದೇಶ ಇವರನ್ನು ತಮ್ಮ ಹೃದಯದಲ್ಲಿ ಕೂರಿಸಿಕೊಂಡುಬಿಡ್ತು ಅನ್ಸತ್ತೆ. ಅದರ ಫಲ ಈ ಸಾರಿಯ ಚುನಾವಣಾ ಫಲಿತಾಂಶ. ಸೋನಿಯಾರಿಗೆ ಆ ಖುರ್ಚಿಯ ವ್ಯಾಮೋಹ ಇಲ್ಲ. ರಾಹುಲ್ ಗಾಂಧಿಗೂ ಇಲ್ಲ ಅನ್ನುವಹಾಗೆ ನಡ್ಕೋತಿದ್ದಾರೆ. ರಾಹುಲ್ನ ಮುಂದಿನ ದಿನಗಳಿಗೆ ಈ ತಯಾರಿಯಂತ ಕೆಲವರು ಹೇಳ್ತಾರೆ. ನನಗಂತೂ ಈ ಸ್ಥಾನಮಾನಕ್ಕಿಂತ ಹೆಚ್ಚಿನ ಕಾಳಜಿ ಈ ಯುವನಾಯಕನಲ್ಲಿ ನನಗೆ ಕಾಣುತ್ತದೆ. ನಮ್ಮ ದೇಶದ ಸ್ಥಿತಿ ಗತಿಗಳನ್ನು ತಳಮಟ್ಟದಿಂದ ಅರಿಯುವ ಕಾಳಜಿ, ಪೂರ್ವಗ್ರಹವಲ್ಲದ ಆಲೋಚನೆ, ಸ್ಪಷ್ಟವಾಗಿ ಅರಿಯುವ ಮನಸ್ಸಿನ ಸಿದ್ದತೆ ಮತ್ತು ಸಿಂಗ್ ಅಂಥವರ ಬಗೆಗೆ ಇಟ್ಟುಕೊಂಡಿರುವ ಗೌರವ ಇವೆಲ್ಲ ಗುಣಗಳು ಈತನಲ್ಲಿ ಕಾಣುತ್ತಿವೆ. ಯಾವುದೋ ದೊಡ್ಡದನ್ನು ಸಾಧಿಸುವ ಛಲವನ್ನು ತನ್ನೊಳಗೆ ಇಟ್ಟುಕೊಂಡು ಓದುವ ವಿಧ್ಯಾರ್ಥಿಯಂತೆ ಗಾಢವಾಗಿಯೂ, ಸ್ನೇಹಿತನಂತೆಯೂ ಜಾಣನಂತೆಯೂ ಕಾಣುತ್ತಾನೆ ರಾಹುಲ್.

ನಮ್ಮ ಜನತಂತ್ರದ ಈ ದೇಶದಲ್ಲಿ ಕುಟುಂಬರಾಜಕಾರಣದ ಕುಡಿಗಳಾದ ಇವರ ಬಗೆಗೆ ಟೀಕಿಸಬಹುದು. ಆದರೆ ಈ ಕುಟುಂಬ ದೇಶಕ್ಕಾಗಿ ಬಹಳ ಕಳಕೊಂಡಿದೆ ಕೂಡ. ಅಧಿಕಾರದ ಆಸೆ ಈ ಕುಟುಂಬದವರಿಗೆ ಹಿಂದೆ ಇತ್ತಾದರೂ ಕ್ರಮೇಣ ಇವತ್ತಿನ ಇವರೆಲ್ಲ ತೀರಾ ಭಿನ್ನವಾದ ಬದುಕಿನ ಉದ್ದೇಶದಲ್ಲಿರುವಂತೆ ಕಾಣುತ್ತಿದ್ದಾರೆ. ನಮ್ಮ ದೇಶದ ಹಳ್ಳಿಗಳ ಜನರ ಕಡು ಕಷ್ಟಗಳ ಬಗೆಗೆ ಈ ಯುವ ನಾಯಕನ ಮನಸ್ಸು ತಟ್ಟಿದೆ ಎಂದೇ ಅನ್ನಿಸುತ್ತಿದೆ. ನಮ್ಮ ದೇಶದ ರಾಜಕಾರಣದ ದಿಕ್ಕನ್ನು ಬದಲಿಸುತ್ತೇನೆಂದು ಹೇಳುವ ರಾಹುಲ್ ಗೆ ನಾವು ಹಾರೈಸಲೇಬೇಕು.
ಇವೆಲ್ಲ ನಿಜವೋ ಭ್ರಮೆಯೋ, ಸುಳ್ಳೋ ಎಂದು ಕಾಲ ನಿರ್ಧರಿಸುತ್ತದೆಯಾದರೂ ನಾವೇ ರೂಪಿಸುವ ನಾಯಕರನ್ನು ಹೀಗೂ ಸಂಕಲ್ಪಿಸಬಹುದಲ್ಲ?

ಒಟ್ಟಾರೆ ಸೋನಿಯಾ ಕುಟುಂಬ ಮತ್ತು ಸಿಂಗ್ ತಮ್ಮ ನಡವಳಿಕೆಗಳಿಂದ ನಮ್ಮ ದೇಶದ ರಾಜಕಾರಣಿಗಳಿಗೆ ಬೇರೊಂದು ಸಂದೇಶವನ್ನು ರವಾನಿಸುತ್ತಿದ್ದಾರೆ. ಅವರ ಮೇಲೆಯೇ ನೆಡೆಸಿಕೊಳ್ಳುವ ಅಧಿಕಾರ ನಿರಾಸಕ್ತಿಯ ಪ್ರಯೋಗಗಳು ಖಂಡಿತಾ ಅಧಿಕಾರ ಲಾಲಸೆಯ ರಾಜಕಾರಣಿಗಳನ್ನು ನಾಚಿಕೆ ಪಡುವಂತೆ ಮಾಡುವುದಂತೂ ಹೌದು. ಅನೇಕರು ಸ್ಪೂರ್ತಿಯನ್ನು ಪಡೆಯುವುದೂ ನಿಜವೇ. ರಾಜಕಾರಣದ ಅಂತಿಮ ಗುರಿ ಎಲ್ಲರ ಗೌರವಯುತ ಬದುಕನ್ನ ಕಟ್ಟುವುದೇ ಅಲ್ಲದೆ ಇನ್ನೇನು? ಹೀಗೆ ನಮ್ಮ ದೇಶದಲ್ಲಿ ಒಂದು ಆರೋಗ್ಯಪೂರ್ಣ ರಾಜಕಾರಣಕ್ಕೆ ಭೂಮಿಕೆ ಸಿದ್ದವಾಗುತ್ತಿರುವಂತೆ ಭಾಸವಾಗುತ್ತಿದೆ. ಬೇಸರವೆಂದರೆ ಇವರ ಹಾದಿ ತಪ್ಪದಂತೆ , ಒತ್ತಡಗಳಿಗೆ ಈಡಾಗದಂತೆ ಕಾಯುತ್ತಿದ್ದ ಕಾಮ್ರ್‍ಏಡ್ ಕಾರಟ್ ಪಡೆ ಇವರಿಂದ ದೂರವಾಗಿರುವುದು. ಪುನಹ ಇಂಥವರನ್ನೆಲ್ಲ ಒಳಗೂಡಿಸಿಕೊಂಡು ಅಥವ ಹತ್ತಿರವಿಟ್ಟುಕೊಂಡು ನಮ್ಮ ಪ್ರಧಾನಿ ಸರ್ಕಾರ ರಚಿಸಿದರೆ ಬಹಳ ದೊಡ್ಡವರಾಗ್ತಾರೆ.

ಕೆ.ಜಿ.ಶ್ರೀಧರ್
ತೀರ್ಥಹಳ್ಳಿ
೧೯/೦೫/೨೦೦೮