೧೯೪೨ ರ ಆಗಸ್ಟ್ ೮ ರಂದೇ 'ಕ್ವಿಟ್ ಇಂಡಿಯ ಆಂದೋಳನ' ಬೊಂಬಾಯಿನ ಗೊವಾಲಿಯ ಟ್ಯಾಂಕ್ ಬಳಿ ಶುರುವಾಗಿದ್ದು !

೧೯೪೨ ರ ಆಗಸ್ಟ್ ೮ ರಂದೇ 'ಕ್ವಿಟ್ ಇಂಡಿಯ ಆಂದೋಳನ' ಬೊಂಬಾಯಿನ ಗೊವಾಲಿಯ ಟ್ಯಾಂಕ್ ಬಳಿ ಶುರುವಾಗಿದ್ದು !

ಬರಹ

ಈ ದಿನ ಅಂದರೆ ೧೯೪೨ ರ ಆಗಸ್ಟ್ ೮ ನೆಯ ತಾರಿಖು, ಮಧ್ಯ ಬೊಂಬಾಯಿನ 'ಗೋವಾಲಿಯ ಕೆರೆಯ ಅಂಗಳ'ದಲ್ಲಿ (ಈಗ ಅದನ್ನು ಆಗಸ್ಟ್ ಕ್ರಾಂತಿ ಮೈದಾನವೆನ್ನುತ್ತಾರೆ.)ಮಹಾತ್ಮ ಗಾಂಧಿ ಯವರೂ ಸೇರಿದಂತೆ ಕಾಂಗ್ರೆಸ್ಸಿನ (ಎ.ಐ.ಸಿ.ಸಿ) ನಾಯಕರುಗಳೆಲ್ಲಾ ಸಮಾಲೋಚಿಸಿ 'ಕ್ವಿಟ್ ಯಿಂಡಿಯ' ಆಂದೋಳನವನ್ನು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಘೋಷಿಸಿದರು. ಎರಡನೆ ವಿಶ್ವ ಯುದ್ಧ ಸಮೀಪಿಸುತ್ತಿತ್ತು. ಇಂಗ್ಲೆಂಡ್, ಭಾರತೀಯರ ಸಮ್ಮತಿ ಇಲ್ಲದೆ ನಮ್ಮ ಸೈನ್ಯವನ್ನು ಅವರ ಪರವಾಗಿ ಜರ್ಮನಿಯ ವಿರುದ್ಧ ಹೋರಾಡಲು ಆಜ್ಞಾಪಿಸಿತ್ತು. ಇದು ಗಾಂಧಿಜಿಯವರನ್ನು ಒಳಗೊಂಡಂತೆ ದೇಶದ ನಾಯಕರುಗಳಿಗೆ 'ಆಘಾತ' ತಂದಿತ್ತು. ಕಾಂಗ್ರೆಸ್ ಪ್ರತಿಭಟನೆ ಘೋಶಿಸುತ್ತಿದ್ದಂತೆ ಬ್ರಿಟನ್ ಎಲ್ಲಾ ನೇಕಾರರನ್ನೂ ಜೈಲಿನಲ್ಲಿ ಬಂಧಿಸಿದರು.ಆದರೆ ಇದರ ವಿರುದ್ಧ ಪ್ರಜೆಗಳು ದಂಗೆ ಎದ್ದರು. ದೇಶದಾದ್ಯಂತ ಪ್ರತಿಭಟನೆ ನಡೆಯಿತು. ಕೊನೆಗೆ ಭಾರತಕ್ಕೆ ವಿಜಯ ಸಿಕ್ಕು ದೇಶಕ್ಕೆ 'ಸ್ವಾತಂತ್ರ್ಯ' ಸಿಕ್ಕಿತು. ಇನ್ನೊಂದು ಘಟನೆಯೆಂದರೆ, ಆಗಸ್ಟ್ ೧೫ ರ ಮಧ್ಯರಾತ್ರಿ ನಮಗೆ ಸಿಕ್ಕ ಸ್ವಾತಂತ್ರ್ಯ ! ಅದೊಂದು ಸುದಿನ. ಮಹಾದಿನ ! ಭಾರತಿಯರೆಲ್ಲ ತಮ್ಮ ಪ್ರಾಣವನ್ನೂ ಲೆಕ್ಕಿಸದೆ, ಸಂಘರ್ಷ ಮಾಡಿ ಬಲಾಢ್ಯ ಇಂಗ್ಲೀಶ್ ಆಡಳಿತವನ್ನು ಪರಿಸಮಾಪ್ತಿ ಗೊಳಿಸಿದ 'ಚಾರಿತ್ರ್ಯಿಕ ದಿನ'. ತಮ್ಮ ತನು, ಮನ, ಧನ ಗಳನ್ನು ಬಲಿಕೊಟ್ಟ ನೂರಾರು, ಸಾವಿರಾರು ಜನರಿಗೆ ನಾವು ಇಂದು, "ಗೌರವ ಶ್ರದ್ಧಾಂಜಲಿ" ಸಲ್ಲಿಸಬೇಕಲ್ಲವೆ ! ಇನ್ನು ಸ್ವಾತಂತ್ರ್ಯಾನಂತರ ಬಳಲಿ ಸೊರಗಿದ್ದ ಭಾರತವನ್ನು, ಮೇಲೆತ್ತಿ ನಿಲ್ಲಿಸಿ ಕಟ್ಟುವಕಾರ್ಯವನ್ನು 'ನೆಹ್ರೂ' ರವರು ಪ್ರಧಾನಿಯಾದಮೇಲೆ ಯಶಸ್ವಿಯಾಗಿ ನೆರವೇರಿಸಿದರು. ಸಾವಿರಾರು ಜನ, 'ಬಾಪು'ರವರ ತ್ಯಾಗ,ಬಲಿದಾನ,ಸ್ನೇಹ ಪ್ರೇಮ, ಸೇವೆಯನ್ನು ತಮ್ಮ ಆದರ್ಶವನ್ನಾಗಿಟ್ಟುಕೊಂಡು ರಾಷ್ಟ್ರ ನಿರ್ಮಾಣಕಾರ್ಯದಲ್ಲಿ ತಮ್ಮ ಇಡೀ ಜೀವನವನ್ನು ತೊಡಗಿಸಿಕೊಂಡರು.ಅವರಲ್ಲಿ ಆಡಳಿತಗಾರರು,ಉದ್ಯಮಿಗಳು, ಶಿಕ್ಷಕರು, ಇಂಜಿನಿಯರ್ ಗಳು, ಸಾರ್ವಜನಿಕ ಸಂಸ್ಥೆಗಳ ಧುರೀಣರು, ಪತ್ರಿಕೋದ್ಯಮಿಗಳು, ಮಠಾಧಿಪತಿಗಳು ಇದ್ದರು. ಇಂತಹವರ ಮಧ್ಯೆ ಒಬ್ಬ ಕಣ್ಣಿನ ರೊಗದ ವೈದ್ಯ, ಮಹಾಸಾಧಕ, "ಡಾ.ಎಮ್.ಸಿ,ಮೊದಿ" ಯವರನ್ನು ಹೆಸರಿಸುವುದು 'ಸಾಂದರ್ಭಿಕ'ವೆಂದು ನನ್ನ ಅಭಿಪ್ರಾಯ ! ಡಾ.ಮುರಿಗೆಪ್ಪ ಚೆನ್ನವೀರಪ್ಪ ಮೋದಿ ಒಬ್ಬ ಮಹಾಮಾನವ; ಆದರ್ಶ ವಾದಿ. ಗಾಂಧಿ ಭಕ್ತರು. ಪ್ರಾತಃ ಸ್ಮರಣೀಯರು ! ಮೂಲತಃ ಅವರು ಬಾಗಿಲುಕೋಟೆಯ ಲೋಕಾಪುರದವರು.೧೯೧೫ ರಲ್ಲಿ ಒಂದು ಬಡ ಕುಟುಂಬದಲ್ಲಿ ಜನಿಸಿದರು.ಬಾಲ್ಯದಲ್ಲಿ ಅವರು ಕೆಲವು 'ನೇತ್ರ ಹೀನ'ರನ್ನು ಕಂಡಾಗ, ಅವರ ಬಗ್ಗೆ ಕನಿಕರ ಮುಡಿತು. ಮುಂದೆ ದೊಡ್ಡವನಾದ ಮೇಲೆ ಹೇಗಾದರು ಮಾಡಿ ಅವರ 'ಅಂಧತ್ವ' ವನ್ನು ನಿರ್ಮೂಲ ಮಾಡಬೇಕೆಂದು ಪಣ ತೊಟ್ಟರು. ಎಸ್.ಎಸ್.ಎಲ್.ಸಿ ಯ ನಂತರ ಬಿ.ಎಮ್.ಎಸ್. ವೈದ್ಯ ಕೊರ್ಸ್ ಮಾಡಿ ಬೊಂಬಾಯಿನ ಆಸ್ಪತ್ರೆಯೊಂದರಲ್ಲಿ ಪ್ರಾಕ್ಟೀಸ್ ಮಾಡಿದರು. ಅವರು ಬೊಂಬಾಯಿಯಲ್ಲಿ ಇದ್ದ ಸಮಯದಲ್ಲಿ ಗಾಂಧೀಜಿಯವರ ಸತ್ಯಾಗ್ರಹದಲ್ಲೂ ಭಾಗವಹಿಸುತ್ತಿದ್ದರು. ಒಮ್ಮೆ 'ಬಾಪು'ರವರನ್ನು ಭೇಟಿಮಾಡಿದಾಗ ಗಾಂಧಿಯವರು ಮೋದಿಯವರ ಸೂಕ್ಷ್ಮಗ್ರಾಹಿತ್ವ, ಕೈಚಳಕದಬಗ್ಗೆ ತಿಳಿದುಕೊಂಡು ಸಂತೋಷಪಟ್ಟರು. 'ಇದನ್ನೆ ಮುಂದುವರೆಸಿಕೊಂಡು ಹೋಗು. ನಮ್ಮದೇಶದ ಸಾವಿರಾರು ಅದೃಷ್ಟಹೀನ ಬಡ ಅಂಧರಿಗೆ ನಿನ್ನ ಕೈಲಾದ ಸೇವೆ ಮಾಡಿ ಅವರ ಜೀವನದಲ್ಲಿ ಬೆಳಕು ಚೆಲ್ಲು' ಎಂದು ನುಡಿದರು. ಅವರ ಮಾತುಗಳು ಯುವ ಮೊದಿಯವರ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿದವು.ಅಲ್ಲಿಂದ ಮುಂದೆ ಅವರು ತಮ್ಮ ಜೀವನವನ್ನು 'ನೇತ್ರಹೀನ'ರ ಸೇವೆಗಾಗಿಯೆ ಮುಡುಪಾಗಿಟ್ಟರು.ಸಾಮೂಹಿಕವಾಗಿ ಹತ್ತಾರು, ನೂರಾರು ಜನರನ್ನು ಒಟ್ಟಿಗೆ ತಪಾಸುಮಾಡುವುದು ಅವರ 'ಕಾರ್ಯವೈಖರಿ'ಯಾಗಿತ್ತು. ಅವರು ನಡೆಸಿದ ಮೊಟ್ಟಮೊದಲನೆಯ 'ಕಣ್ಣು ಚಿಕಿತ್ಸಾ ಶಿಬಿರ'ಗುಜರಾತಿನ 'ಪಟ್ಟನ್ ಎಂಬ ಊರಿನಲ್ಲಿ. ಇದು 'ಬಾಪು' ರವರ ಹುಟ್ಟಿದೂರಿನ ಬಳಿ ಇತ್ತು.ಇದರಲ್ಲಿ ಕಂಡ ಯಶಸ್ಸಿನಿಂದ ಅವರ 'ಆತ್ಮ ಸ್ಥೈರ್ಯ' ಹೆಚ್ಚಿತು. ಅಲ್ಲಿಂದ ಮುಂದೆ ಇಂತಹ ಶಿಬಿರ ಗಳು ಬಹಳಷ್ಟು ನಡೆದವು. ಬೊಂಬಾಯಿನಿಂದ ಅವರು ಬೆಳಗಾಂ ನಲ್ಲಿ ಕೆಲಸ ಮಾಡಿ, ಕೊನೆಗೆ ದಾವಣಗೆರೆಯಲ್ಲಿ ನೆಲೆಸಿದರು.ಅಲ್ಲಿ ಲಯನ್ಸ್ ಕ್ಲಬ್,ಹಾಗು ಹನುಮಂತಪ್ಪನವರ ಸಹಾಯದಿಂದ ಅವರು 'ಕಣ್ಣಿನ ದವಾಖಾನೆ'ಯನ್ನು ಸ್ಥಾಪಿಸಿದರು. ೧೯೫೦ ರಲ್ಲಿ ತಿತುಪತಿಯಲ್ಲಿ ಒಂದು 'ಕಣ್ಣಿನ ಶಿಬಿರ'ದ ಏರ್ಪಾಟಾಯಿತು. ಅಲ್ಲಿ ಅವರು ಒಂದೇ ದಿನದಲ್ಲಿ ೬೭೫ ಆಪರೇಷನ್ ಮಾಡಿದ್ದರಂತೆ. ಅದೂ ಅವರಿಗೆ ಸಮಾಧಾನ ಕೊಡಲಿಲ್ಲ. ಮಾರನೆಯ ವರ್ಷ ನಡೆಸಿದ ತಿರುಪತಿಯ ಶಿಬಿರದಲ್ಲಿ ಈ ಸಲ ೮೩೩ ಕಣ್ಣಿನ ಶಸ್ತ್ರ ಚಿಕೆತ್ಸೆ ಮಾಡಿ ಒಂದು ವಿಕ್ರಮ ವನ್ನೇ ಸ್ಥಾಪಿಸಿದರು.ಇದನ್ನು "ಗಿನ್ನಿಸ್ ಧಾಖಲೆಯ ಪುಸ್ತಕ" ದಲ್ಲಿ ದಾಖಲಿಸಲಾಯಿತು ! ವಿಶ್ವದ ವೈದ್ಯರೆಲ್ಲಾ ಇದನ್ನು ತಿಳಿದು ಅವರನ್ನು ಭೇಟಿಮಾಡಲು ಬರುತ್ತಿದ್ದರು. ಅವರು ವಿಶ್ವಮಾನ್ಯತೆ ಗಳಿಸಿದರು. ಇದಾದ ಮೇಲೆ ಅವರಿಗೆ ಪ್ರಶಸ್ತಿಗಳ ಸುರಿಮಳೆಯೇ ಆಯಿತು.ಗೌರವ ಡಾಕ್ಟರೇಟ್ ಗಳು ಬಹಳಷ್ಟು ಬರತೊಡಗಿದವು. ಖಾಸಗೀ ಸಂಸ್ಥೆಗಳು, ಸಾರ್ವಜನಿಕ ಸಂಸ್ಥೆಗಳು ವಿಶೇಷವಾಗಿ ಧನ ಸಹಾಯಮಾಡಲು ಮುಂದೆ ಬಂದವು. ಚಿಕಾಗೊದ, ಇಲಿನಾಯ್ ನ 'ಅಂತರರಾಷ್ಟ್ರೀಯ ಪ್ರಶಸ್ತಿ','ಹ್ಯುಮಾನಿಟಿ ಪ್ರಶಸ್ತಿ', 'ನೈಟ್ ಆಫ್ ಬ್ಲೈಂಡ್', 'ಅಂಬ್ಯಾಸಿಡರ್ ಆಫ್ ಗುಡ್ ವಿಲ್', 'ಎ.ಜಿ.ಎಫ್' ಇತ್ಯಾದಿ. ಬೇಕದಷ್ಟು ಹಣವೂ ಬಂತು. ಅವೆಲ್ಲಾ ಬಡವರ ಕಲ್ಯಾಣಕ್ಕೆ ಮೀಸಲಾಗಿಟ್ಟರು. ಆಪರೇಶನ್ ನಂತರ ಒಂದು ಜೊತೆ ಕನ್ನಡಕವನ್ನು ಮುಫತ್ ಆಗಿ ಕೊಡುತ್ತಿದ್ದರಂತೆ. 'ಪೊಸ್ಟ್ ಆಪರೇಶನ್' ವಿಧಿಗಳನ್ನು ಚಾಚು ತಪ್ಪದೆ, ರೋಗಿಗಳು ಕೇಳುವ ಮೊದಲೇ ಒದಗಿಸುತ್ತಿದ್ದರಂತೆ. "ಹೀಗಾಗಿ ಮೊದಿಯವರೆಂದರೆ ಜನರಿಗೆ ದೇವರ ಸಮಾನ" ! ಅವರು ಮಾಡಿದ ಒಟ್ಟು ಕಣ್ಣಿನ ಆಪರೇಶನ್ ಗಳು : ೬,೧೦,೫೬೪. ತಪಾಸುಮಾಡಿದ ರೋಗಿಗಳಸಂಖ್ಯೆ : ೧೨,೧೧೮,೬೩೦. ಒಟ್ಟು ೪೬,೧೨೦ ಹಳ್ಳಿಗಳಲ್ಲಿ ತಮ್ಮ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದರು. ಕರ್ಣಾಟಕಸರ್ಕಾರ ಅವರ ಈ ಅದ್ಭುತ ಕಾರ್ಯವನ್ನು ತೊರಿಸಲು ' One Man's Army' ಎಂಬ ಒಂದು 'ಸಾಕ್ಷಿ ಚಿತ್ರ'ವನ್ನು ತಯಾರಿಸಿತು. ಇದನ್ನು ಖ್ಯಾತ ನಿರ್ದೇಶಕ, ಎಮ್.ಎಸ್.ಸತ್ಯು ರವರು ನಿರ್ದೇಶಿಸಿದರು. ಭಾರತ ಸರ್ಕಾರ ೧೯೫೬ ರಲ್ಲಿ 'ಪದ್ಮಶ್ರಿ', ಮತ್ತು ೧೯೬೮ ರಲ್ಲಿ 'ಪದ್ಮ ವಿಭೂಷಣ' ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಿತು. ೧೯೯೩ ರಲ್ಲಿ ಮೊದಿಯವರಿಗೆ ೭೮ ವರ್ಷ ತುಂಬಿತ್ತು. ಆಗ ಅವರು ತಮ್ಮ ಕಾರ್ಯಚಟುವಟಿಕೆಯಲ್ಲಿ ಸ್ವಲ್ಪ ಮಾರ್ಪಾಡನ್ನು ಮಾಡಿಕೊಂಡರು.ಬೆಂಗಳೂರಿನ ರಾಜಾಜಿನಗರದಲ್ಲಿ 'Dr.Modi Charitable Eye Hospital'ನ್ನು ಸ್ಥಾಪಿಸಿದರು.ವ್ಯಾನಿನಲ್ಲಿ ಕಣ್ಣಿನರೋಗಿಗಳನ್ನು ತಂದು ಅವರ ಆಸ್ಪತ್ರೆಯಲ್ಲಿ ಭರ್ತಿಮಾಡಿ ಅವರಿಗೆ ಉಪಚಾರ ಮಾಡಿ ಕಳಿಸಿಕೊಡುತ್ತಿದ್ದರು. ಬಹಳ ನಾಚಿಗೆ ಸ್ವಭಾವದ 'ಮೊದಿ'ಯವರು ಪೂರ್ತಿ ಸಸ್ಯಾಹಾರಿಗಳಾಗಿದ್ದರು. ಹಾಲು ಹಾಕದೆ 'ಚಹ' ಸೇವನೆ ಅವರಿಗೆ ಪ್ರಿಯ. ಎಳನೀರು, ಪಪ್ಪಾಯಿ ಹಣ್ಣುಗಳ ಸೇವನೆ ಅವರಿಗೆ ಬಹಳ ಸಹಾಯವಾಯಿತು. ಹಳ್ಳಿಗಳಲ್ಲಿ ಇವೆ ತಾನೆ ಅವರಿಗೆ ಸಿಗುತ್ತಿದ್ದ, ತಿಂಡಿ ತಿನಸುಗಳು ! ಸಾರ್ವಜನಿಕ ಸೇವೆಯ ಸಾಕಾರ ಮೂರ್ತಿಯಂತಿದ್ದ ಡಾ. ಮೋದಿಯವರು ತಮ್ಮ 'ವಿಲ್' ನಲ್ಲಿ ಮರಣೋತ್ತರದಲ್ಲಿ ತಮ್ಮ 'ಕಣ್ಣು'ಗಳನ್ನು ದಾನವಾಗಿಕೊಡುವುದಾಗಿ ತಮ್ಮ 'ಅಂತಿಮ ಇಚ್ಛೆ'ಯಲ್ಲಿ ಬಯಸಿದ್ದರು ! ಹೀಗೆ ನಮ್ಮ ಕನ್ನಡದ ಮತ್ತೊಬ್ಬ ಕಣ್ಮಣಿ, 'ತಮ್ಮ ಸಾರ್ಥಕ ಜೀವನ'ಕ್ಕೆ ಮಂಗಳಹಾಡಿ ಕೃತಾರ್ಥರಾದರು. ನಮ್ಮ ಕನ್ನಡಿಗರ ಹೃದಯದಲ್ಲಿ ಎಂದೆಂದಿಗೂ 'ಅಮರ'ರಾಗಿ ಉಳಿದಿದ್ದಾರೆ. ೨೦೦೫ ರ ನವೆಂಬರ್ ೧೧ ರಂದು ತಮ್ಮ ೯೦ ನೆಯ ವಯಸ್ಸಿನಲ್ಲಿ, ಬೆಂಗಳೂರಿನ ಒಂದು ಖಾಸಗಿ 'ನರ್ಸಿಂಗ್ ಹೋಮಿ'ನಲ್ಲಿ ಬೆಳಗಿನ ಸಮಯದಲ್ಲಿ ಕಣ್ಣುಮುಚ್ಚಿದ ಅವರಿಗೆ ಒಬ್ಬ ಮಗ, ಹೆಂಡತಿ ಇದ್ದಾರೆ.