ಕರ್ನಾಟಕದ ಗದ್ದರ್ ಪಿಚ್ಚಳ್ಳಿ ಶ್ರೀನಿವಾಸ್

ಕರ್ನಾಟಕದ ಗದ್ದರ್ ಪಿಚ್ಚಳ್ಳಿ ಶ್ರೀನಿವಾಸ್

ಬರಹ

ಭಾನುವಾರ ನೀರನಿಶ್ಚಿಂತೆ ಕಾರ್ಯಕ್ರಮಕ್ಕೆ ಕೋಲಾರಕ್ಕೆ ಹೋದಾಗ ಸುಂದರವಾದ ಅಂತರಗಂಗೆಯ ಬೆಟ್ಟದ ತಪ್ಪಲಿನಲ್ಲಿರುವ ಶಿವಗಂಗೆಗೆ ಬೇಟಿ ನೀಡಿದ್ದೆವು. ಶಿವಗಂಗೆಯಲ್ಲಿ "ಆದಿಮ" ಸಂಸ್ಥೆ ನೆಲೆಯೂರಿದೆ. 

ಆದಿಮವನ್ನು ಮತ್ತು ಅಲ್ಲಿನ ಸೊಬಗನ್ನು ನೋಡಿದ ಕೋಲಾರಕ್ಕೆ ಬೇಟಿ ನೀಡಿದ ನಮ್ಮಸಂಪದ ಬಳಗ ಪೋಟೋಗಳನ್ನು ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ಜೊತೆಗೆ ಗೋಡಂಬಿ, ದ್ರಾಕ್ಷಿ ಮಿಶ್ರಿತ ಪಾಯಸ ಕುಡಿಯುತ್ತಾ ಸ್ವಲ್ಪ ಸ್ವಲ್ಪವೇ ಹೊಟ್ಟೆಯೊಳಗೆ ಇಳಿಸುತ್ತಾ ಫೋಟೋ ಕ್ಲಿಕ್ಕಿಸುತ್ತಿರಬೇಕಾದ್ರೆ ಅಲ್ಲಿಗೆ ಆದಿಮ ಸಂಸ್ಥೆಯ ಸಂಸ್ಥಾಪಕ 'ಕೋಟಗಾನಹಳ್ಳಿ ರಾಮಯ್ಯ' ಮತ್ತು 'ಪಿಚ್ಚಳ್ಳಿ ಶ್ರೀನಿವಾಸ್' ಬಂದರು. ಅವರನ್ನೂ ಸಹ ಕ್ಯಾಮರಾಗಳು ಸೆರೆ ಹಿಡಿದವು. ಇದಾದ ನಂತರ ಸ್ವಲ್ಪ ಮಾತುಕಥೆ, ಕಪ್ಪು ಟೀ - ಹೀಗೆ ನಡೆಯಿತು. ನಂತರ ಬೆಟ್ಟಿಂದ ಕೆಳಗೆ ಇಳಿಯಬೇಕಾದ್ರೆ ನಾನಿದ್ದ ಕಾರಿನೊಳೆಗೆ ಪಿಚ್ಚಳ್ಳಿ ಶ್ರೀನಿವಾಸ್ ಬೆಟ್ಟದಿಂದ ಕೆಳಗಿನವರೆಗೆ ಡ್ರಾಪ್ಗೆ ಅಂತ ಬಂದ್ರು, ಪಕ್ಕದಲ್ಲಿದ್ದ ಶ್ರೀನಿವಾಸ್ ರವರೊಟ್ಟಿಗೆ ನಾನು ಮಾತಿಗಿಳಿದೆ. ಇದ್ಯಾಕೆ ಇದೆಲ್ಲಾ ಅಂತೀರಾ ಸುಮ್ಮನೇ ಬರೆದೆ ಅಷ್ಟೆ.

ಪಿಚ್ಚಳ್ಳಿ ಶ್ರೀನಿವಾಸ್ ಮೂಲತಃ ಕೋಲಾರ ಜಿಲ್ಲೆಯ, ಬಂಗಾರಪೇಟೆ ತಾಲ್ಲೂಕಿನ ಪಿಚ್ಚಳ್ಳಿಯಲ್ಲಿ ಬಡಕುಟುಂಬದಲ್ಲಿ
ಜನಿಸಿದವರು. ಇವರು ಹಾಡಲು ನಿಂತರೇ, ಜಾನಪದ ಹಾಗೂ ಕ್ರಾಂತಿಗೀತೆಗಳು ಕಾವೇರಿಯ ನೀರಿನಂತೆ ಹರಿದುಬರುತ್ತದೆ. ಕರ್ನಾಟಕದ ಗದ್ದರ್ ಎಂದೆ ಖ್ಯಾತರು ಅವರು.

ದೇವನೂರು ಮಹದೇವರವರ "ಅಮಾಸ" ಚಲನ ಚಿತ್ರಕ್ಕೆ ಇವರು ಹಾಡಿದ ಹಾಡಿಗೆ ರಾಜ್ಯ ಸರ್ಕಾರ ಉತ್ತಮ ಗಾಯಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅಷ್ಟೆ ಅಲ್ಲದೇ ನಾಟಕ ಮತ್ತು ಟೆಲಿಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸುಮಾರು 50 ಕ್ಕೂ ಹೆಚ್ಚು ಧ್ವನಿಸುರಳಿಗಳಿಗೆ ಸಂಗೀತ ಸಂಯೋಜನೆಮಾಡಿದ್ದಾರೆ.16 ಕ್ಕೂ ಹೆಚ್ಚು ಜಾನಪದ ಧ್ವನಿ ಸುರಳಿಗಳನ್ನು ಹೊರತಂದಿದ್ದಾರೆ. ಕಾಲಿಗೆ ಗೆಜ್ಜೆ ಇಲ್ಲದೆ,ತಮಟೆ, ಡೋಲು ಬೇಕಿಲ್ಲದೇ, ಯಾವುದೇ ತಾಳ ಮೇಳಗಳಿಲ್ಲದೇ ಬರೀ ಧ್ವನಿಯ ಮೂಲಕವೇ ಕೇಳುಗರನ್ನು ಬರೀ ಕಂಠಸಿರಿಯಿಂದಲೇ ಸೆಳೆಯುವ ಶಕ್ತಿ ಅವರದು. ಮಹಿಳೆಯರ  ಹಕ್ಕುಗಳ ಕುರಿತ ಸುಮಾರು 9  ಸಾಕ್ಷ್ಯ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಸಾಕ್ಷರತಾ ಆಂದೋಲನಕ್ಕೆ ಹಲವಾರು ಬೀದಿನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ. ಸಾಕ್ಷರತೆ, ಆದಿವಾಸಿ, ಬುಡಕಟ್ಟು, ಗ್ರಾಮಪಂಚಾಯತಿಯಲ್ಲಿ ಚುನಾಯಿತರಾದ ಮಹಿಳೆಯರಿಗೆ ಜಾಗೃತಿ ಮೂಡಿಸುವಲ್ಲಿ ಹಲವಾರು ಬೀದಿ ನಾಟಕಗಳನ್ನು ಬರೆದಿದ್ದಾರೆ. ಜೊತೆಗೆ ಹಲವಾರು ಸಾಂಸ್ಕೃತಿಕ ಶಿಬಿರಗಳನ್ನು ನಡೆಸಿದ್ದಾರೆ.

ಪಿಚ್ಚಳ್ಳಿ ಶ್ರೀನಿವಾಸ್ ರವರಿಗೆ 1999 ರಲ್ಲಿ ರಾಜ್ಯ ಸರ್ಕಾರ ಡಾ.ಬಿ.ಆರ್ಅಂಬೇಡ್ಕರ್ ಪ್ರಶಸ್ತಿಯನ್ನು, 2000ದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಮತ್ತು ಅದೇ ವರ್ಷದಲ್ಲಿ ಕೋಲಾರ ಜಿಲ್ಲಾಡಳಿತವು ನಂದಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಜೊತೆಗೆ 2005ರಲ್ಲಿ ರಾಜ್ಯ ಪ್ರಶಸ್ತಿಯು ಸಹ ಪಿಚ್ಚಳ್ಳಿ ಶ್ರೀನಿವಾಸ್ ರವರ ಮಡಲಿಗೆ ಬಂದಿದೆ.

 

 

ಚಿತ್ರ: ಹರಿಪ್ರಸಾದ್ ನಾಡಿಗ್