ಜೋಗ ನೋಡಿರಿ ಈಗ

ಜೋಗ ನೋಡಿರಿ ಈಗ

ಮೊನ್ನೆ ಶನಿವಾರ ವಿಪರೀತ ಕೆಲಸವಿದ್ದುದರಿಂದ ರಾತ್ರಿ ಮನೆಗೆ ಬಂದಾಗ ಮಧ್ಯರಾತ್ರಿ ದಾಟಿತ್ತು. ನಿನ್ನೆ ಬೆಳಗ್ಗೆ ತಡವಾಗಿ ಎದ್ದು ಸುಮಾರು ೯.೩೦ಕ್ಕೆ ಉದಯವಾಣಿ ಓದಲು ಕುಳಿತರೆ, ಮೊದಲ ಪುಟದಲ್ಲೇ ಜೋಗ ಜಲಪಾತದ ರಮಣೀಯವಾಗಿ ಮೈತುಂಬಿಕೊಂಡು ಧುಮುಕುತ್ತಿರುವ ಅದ್ಭುತ ಚಿತ್ರ. ಆರು ಸಲ ಜೋಗಕ್ಕೆ ಹೋದರೂ, ಸಮಾಧಾನವಿರಲಿಲ್ಲ. ಚಿತ್ರ ನೋಡಿದ ಕೂಡಲೇ, ಉದಯವಾಣಿಯನ್ನು ಅಲ್ಲೇ ಬಿಟ್ಟು, ಗಡಿಬಿಡಿಯಲ್ಲಿ ಸ್ನಾನ, ಉಪಹಾರ ಮುಗಿಸಿ ಸರಿಯಾಗಿ ೧೦ಕ್ಕೆ ನನ್ನ ಹೀರೋ ಹೊಂಡ ಪ್ಯಾಶನ್ ಏರಿ ಜೋಗಕ್ಕೆ ಹೊರಟೇಬಿಟ್ಟೆ. ದಾರಿಯುದ್ದಕ್ಕೂ ಮಳೆ ಮಳೆ ಮಳೆ. ಕೊಲ್ಲೂರು ತನಕ ಅಗಾಗ ಮಳೆ ಸುರಿಯುತ್ತಾ ಇತ್ತು. ಕೊಲ್ಲೂರು ದಾಟಿ ಕಾರ್ಗಲ್ ಮುಟ್ಟುವ ತನಕ ಎಡೆಬಿಡದೆ ಸುರಿದ ಮಳೆ, ನಾನು ಜೋಗ ಸಮೀಪಿಸಿದಂತೆ ನಿಂತಿತು. ಸಮಯ ಮಧ್ಯಾಹ್ನ ೨.೩೦ ಹಾಗೂ ಕ್ರಮಿಸಿದ ದೂರ ೧೬೩ ಕಿ.ಮಿ.Jog falls

೫೦೦೦೦ಕ್ಕೂ ಅಧಿಕ ಕ್ಯುಸೆಕ್ಸ್ ನೀರನ್ನು ಲಿಂಗನಮಕ್ಕಿ ಜಲಾಶಯದಿಂದ ಹೊರಬಿಡುತ್ತಿರುವ ಕಾರಣ ಜೋಗ ಜಲಪಾತ ೧೦ ಮಳೆಗಾಲಗಳ ಬಳಿಕ ಮತ್ತೊಮ್ಮೆ ರಮಣೀಯವಾಗಿ ಧುಮುಕುವ ದೃಶ್ಯ ನೋಡಲು ಜನಜಾತ್ರೆಯೇ ಅಲ್ಲಿ ಸೇರಿತ್ತು. ಕರ್ನಾಟಕ - ಗೋವಾ ಗಡಿಯಲ್ಲಿರುವ ದೂದಸಾಗರ್ ಜಲಪಾತವನ್ನು ಯಾಕೆ ಆ ಹೆಸರಿನಿಂದ ಕರೆಯುತ್ತಾರೆ ಎಂಬುದು, ಜಲಪಾತ ನೋಡಿದ ಬಳಿಕ ನನಗೆ ತಿಳಿದಿತ್ತು. ಆಕಾಶದಿಂದ ಹಾಲಿನ ರಾಶಿಯೇ ಧರೆಗೆ ಬೀಳುತ್ತಿರುವಂತೆ ಕಾಣುವ ದೂದಸಾಗರ್ ಜಲಪಾತದ ದೃಶ್ಯ ಅದ್ಭುತ. ಇದರ ಮುಂದೆ ನನಗೆ ಇದುವರೆಗೆ ನಮ್ಮ ಜೋಗ ನೀರಸ ಎಂದೆನಿಸುತ್ತಿತ್ತು. ಆದರೆ ದೂದಸಾಗರ್ ಮೇಲ್ಭಾಗದಲ್ಲಿ, ಜೋಗ ಜಲಪಾತಕ್ಕಿರುವಂತೆ ಯಾವುದೇ ಆಣೆಕಟ್ಟು ಇಲ್ಲ. ಲಿಂಗನಮಕ್ಕಿ ಆಣೆಕಟ್ಟು ಇರದಿದ್ದರೆ ಜೋಗ ಜಲಪಾತ ಹೇಗಿರಬಹುದು ಎಂಬುದು ಊಹಿಸುವುದು ಕಷ್ಟ. ಆದರೆ ನಿನ್ನೆ ಜೋಗ 'ಎಟ್ ಇಟ್ಸ್ ಬೆಸ್ಟ್' ನೋಡಿದ ಬಳಿಕ, ಜೋಗವನ್ನು 'ನೀರಸ' ಎಂದು ಕಲ್ಪನೆ ಮಾಡಿಕೊಳ್ಳುವ ಅಪರಾಧ ಮಾಡಲಾರೆ.

೫೦೦೦೦ಕ್ಕೂ ಅಧಿಕ ಕ್ಯುಸೆಕ್ಸ್-ನಷ್ಟು ಹಾಲಿನಂತೆ ಕಾಣುವ ಜಲರಾಶಿ ಒಂದೇ ನೆಗೆತಕ್ಕೆ ೯೩೦ ಅಡಿ ಆಳಕ್ಕೆ ಧುಮುಕುವ ದೃಶ್ಯ ನೋಡಿ ಬೆರಗಾದೆ. ಅಲ್ಲೇ ನಿಂತಿದ್ದು 'ಪೈನಾಪಲ್' ಮಾರುತ್ತಿದ್ದ ಸ್ಥಳೀಯ ಯುವಕನೊಬ್ಬ 'ಅಪರೂಪ ಸಾರ್, ಹೀಗೆ ನೀರು ಬೀಳೋದು ಅಪರೂಪ. ನಾನಂತೂ ನೋಡೇ ಇಲ್ಲ. ಇದು ಹಾಲಲ್ಲದೇ ಮತ್ತೇನು'? ಆಗಾಗ ಮಳೆ ಬೀಳುತ್ತಾ ಇತ್ತು. 'ಹಾಲು' ಧುಮುಕುತ್ತಾ ಇತ್ತು. ನೋಡುವವರು ನೋಡುತ್ತಲೇ ಇದ್ದರು. ಮತ್ತಷ್ಟು ಜನರು ಬರುತ್ತಾ ಇದ್ದರು. ಆದರೆ ಯಾರೂ ಕದಲುತ್ತಿರಲಿಲ್ಲ. ಹಾವೇರಿ, ಶಿಕಾರಿಪುರ, ಗದಗ, ಚಿತ್ರದುರ್ಗ, ಮಂಗಳೂರು, ಸಿರ್ಸಿ, ಕಾರವಾರ, ಹುಬ್ಬಳ್ಳಿ ಹೀಗೆ ಎಲ್ಲಾ ಕಡೆಯಿಂದ ಜೋಗ ತುಂಬಿ ಧುಮುಕುತ್ತಿರುವ ಸುದ್ದಿ ಕೇಳಿ ನೋಡಲು ಬಂದಿದ್ದರು. ಜಲಪಾತದ ಮುಂದಿರುವ ಶರಾವತಿಯ ಕಣಿವೆಯಲ್ಲಿ ಮಂಜು ತುಂಬಿ ಏನೇನೂ ಕಾಣದಿದ್ದರೂ, ಜಲಪಾತದ ಸುತ್ತ ಮಂಜು ಇರದೇ 'ಕ್ಲಿಯರ್ ವ್ಯೂ' ಲಭ್ಯವಿತ್ತು.

ನಿಮ್ಮಲ್ಲಿ ಯಾರಾದರೂ ಜೋಗದ ಈ ಅವತಾರವನ್ನು ನೋಡದಿದ್ದಲ್ಲಿ, ನೋಡಿ ಈ ವಾರದಂದೇ. ಮತ್ತೆ ಮತ್ತೆ ನೋಡಲು ಸಿಗಲಾರದ ಅದ್ಭುತ ದೃಶ್ಯ. ಶರಾವತಿಯ ಜಲಾನಯನ ಪ್ರದೇಶಗಳಾದ ನಗರ, ಹೊಸನಗರ, ಕೋಗಾರ್, ತುಮರಿ, ಬ್ಯಾಕೋಡು, ನಿಟ್ಟೂರು, ಸಾಗರ ಮುಂತಾದ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಇನ್ನೂ ೨-೩ ದಿನಗಳ ಕಾಲ ಜೋಗ ಜಲಪಾತ ಹೀಗೆ ವಿಜೃಂಭಿಸಲಿದೆ. ಏನೇ ಕೆಲಸ ಇರಲಿ, ಬಿಟ್ಟು ಧಾವಿಸಿ ಜೋಗದೆಡೆ.

ಕೆಲವು ಚಿತ್ರಗಳು

Rating
No votes yet