ಚಾರ್ ಧಾಮ್ ಪ್ರವಾಸ- ಯಮುನೋತ್ರಿ ೨

ಚಾರ್ ಧಾಮ್ ಪ್ರವಾಸ- ಯಮುನೋತ್ರಿ ೨

http://www.sampada.net/blog/shamala/02/06/2009/21007

ನಾವು ಜಾನಕಿ ಚೆಟ್ಟಿ ತಲುಪಿದಾಗ ಅಲ್ಲಿ ದೊಡ್ಡದೊಂದು ಸರತಿ ಸಾಲು ನಿಂತಿತ್ತು ’ಡೋಲಿ’ಗಾಗಿ. ಸರಿ ನನ್ನ ಪತಿಯವರೂ ಹೋಗಿ ಸೇರಿಕೊಂಡರು. ನಾವು ಅಲ್ಲೇ ಚಾರಣಕ್ಕೆ ಬೇಕಾದ ಆಧಾರದ ಕೋಲುಗಳನ್ನು ಕೊಂಡು, ಚಿತ್ರಗಳನ್ನು ತೆಗೆಯುತ್ತಾ ಕಾಯುತ್ತಾ ಕುಳಿತಿದ್ದೆವು. ಇವರು ಎಷ್ಟು ಹೊತ್ತಾದರೂ ಬರಲಿಲ್ಲವೆಂದು ನೋಡಲು ಹೋದಾಗ ತಿಳಿಯಿತು, ಅಲ್ಲಿ ಬಂದಿದ್ದ ಇತರ ಯಾತ್ರಿಗಳು ಒಬ್ಬೊಬ್ಬರು ೮ - ೧೦ ಚೀಟಿಗಳನ್ನು ಕೊಳ್ಳುತ್ತಿದ್ದರು. ಚಿಕ್ಕ ವಯಸ್ಸಿನ ಹುಡುಗರಿಂದ ಹಿಡಿದು, ಒಂದು ಟನ್ ಭಾರ ತೂಗುವ ದೊಡ್ಡವರವರೆಗೂ ಎಲ್ಲರೂ ಡೋಲಿಯೇ ಬೇಕೆಂದು ಚೀಟಿ ಕೊಂಡಾಗ, ನನ್ನತ್ತೆಯವರಂತಹ ವಯಸ್ಸಾದವರಿಗೆ, ಅವಕಾಶಗಳು ಕಮ್ಮಿಯಾಗುತ್ತಿದ್ದವು. ಕೊನೆಗೆ ನನ್ನವರು ಸಿಟ್ಟಿನಿಂದ ಕೂಗಾಡಿ, ಒಂದೇ ಚೀಟಿ ಪಡೆಯುವವರನ್ನು ಮೊದಲು ಬಿಡಬೇಕೆಂದು ಗಲಾಟೆ ಮಾಡಿದಾಗ ಮಾತ್ರವೇ ನನ್ನತ್ತೆಯವರಿಗೆ ಒಂದು ಚೀಟಿ ಸಿಕ್ಕಿತ್ತು. ಅವರನ್ನು ಡೋಲಿಯಲ್ಲಿ ಕೂಡಿಸಿ ಕಳುಹಿಸಿ, ನಾವು ನಡೆಯುವುದಾಗಿ ಹೊರಟೆವು. ಆದರೆ ಸ್ವಲ್ಪ ದೂರ ನಡೆಯುತ್ತಿದ್ದಂತೆಯೇ, ನಮಗೆ ಇದು ಆಗದ ಕೆಲಸವೆಂದು ಅರ್ಥ ಆಗಿತ್ತು. ಸರಿ ನಿಂತು ಮೂರು ಕುದುರೆಯನ್ನು ಒಂದೊಂದಕ್ಕೆ ರೂ.೫೭೦ ಕೊಟ್ಟು ಗೊತ್ತು ಮಾಡಿಕೊಂಡೆವು. ನಾನೂ ನನ್ನ ಅತ್ತಿಗೆ ಮತ್ತು ನನ್ನ ಪತಿ ಕುದುರೆ ಏರಿ ನಮ್ಮ ಗುರಿಯತ್ತ ಹೊರಟೆವು. ಮೇಲೆ ಏರುತ್ತಾ ಏರುತ್ತಾ ನಮಗೆ ಪ್ರಾಣ ಹೋಗುವಷ್ಟು ಭಯವಾಗುತ್ತಾ ಇತ್ತು. ಕಡಿದಾದ ದಾರಿ ಮಧ್ಯೆ ಮಧ್ಯೆ ಮೆಟ್ಟಿಲುಗಳನ್ನು ಹತ್ತಬೇಕು. ಅದೂ ದೊಡ್ಡ ದೊಡ್ಡ ಮೆಟ್ಟಿಲುಗಳು ಕುದುರೆ ಏರುವಾಗ ಒಮ್ಮೊಮ್ಮೆ ಕಾಲು ಊರುವಿಕೆ ಸರಿಯಾಗಿ ಆಗದೆ, ಕುದುರೆಯ ಕಾಲು ಉಳುಕಿದಂತಾಗುತ್ತಿತ್ತು. ಆಗಂತೂ ಎಲ್ಲಿ ಎಗರಿ ಬಿದ್ದು ಬಿಡುತ್ತೇವೋ ಎಂಬ ಭಯ ಆಗತ್ತೆ. ಕುದುರೆಯ ಮೇಲೆ ಕೂರಲು, ಎಲ್ಲಾ ಕುದುರೆಯ ಬೆನ್ನ ಮೇಲೂ ಏನನ್ನೂ ಹಾಸಿರುವುದಿಲ್ಲ. ಅದೂ ಕೂಡ ಒಂಥರದ ನೋವೇ ! :-) ಜೊತೆಗೆ ತೀರಾ ಕಡಿದಾದ ಬೆಟ್ಟ ೫ ಕಿ. ಮೀ ಏರುವುದರಲ್ಲಿ, ಸಾಕು ಸಾಕಾಗಿರತ್ತೆ. ಹೆಚ್ಚೆಂದರೆ ಎರಡೇ ಎರಡು ಕುದುರೆಗಳು ಪಕ್ಕ ಪಕ್ಕದಲ್ಲಿ ನಡೆಯಬಹುದಾದಂತಹ ಚಿಕ್ಕ ರಸ್ತೆ. ಕೆಲವು ಕಡೆ ಕಾಂಕ್ರೀಟ್ ಮಾಡಿದ್ದಾರೆ ಆದರೆ ಕೆಲವು ಕಡೆ ಬರೀ ಮಣ್ಣು. ಎಡಪಕ್ಕದಲ್ಲಿ ಕಡಿದಾದ ಬೆಟ್ಟ, ಬಲಗಡೆಗೆ ಆಳವಾದ ಪ್ರಪಾತ. ಬೆಟ್ಟ ಕಡಿದು ರಸ್ತೆಯನ್ನು ಮಾಡಿರುವುದರಿಂದ ಕಲ್ಲುಗಳು ಒಮ್ಮೊಮ್ಮೆ ಮುಂದಕ್ಕೆ ಚಾಚಿಕೊಂಡು, ಚೂಪಾಗಿರುತ್ತವೆ. ಸ್ವಲ್ಪ ಮೈ ಮರೆತರೂ ತಲೆಗೆ ಹೊಡೆಯುತ್ತೆ. ಜನರನ್ನು ಎಚ್ಚರಿಸಲು ಅಲ್ಲಲ್ಲೇ ಹಿಂದಿಯಲ್ಲಿ ಫಲಕಗಳನ್ನೂ ಹಾಕಿದ್ದಾರೆ. ಈ ಕಡೆ ಪ್ರಪಾತದಲ್ಲಿ ಯಮುನೆ ಏನೂ ತುಂಬಿ ಹರಿಯದಿದ್ದರೂ, ಆಳ ನೋಡಿದರೆ ಬೆಚ್ಚುವಂತಿದೆ. ಅಂತೂ ಇಂತೂ ಇಷ್ಟೆಲ್ಲಾ ಸಾಹಸದ ನಡುವಿನಲ್ಲಿ, ಮಧ್ಯೆ ಎರಡು ಸಾರಿ ಕುದುರೆಯಿಂದ ಇಳಿದು ವಿಶ್ರಾಂತಿ ತೆಗೆದುಕೊಂಡು, ೨ ೧/೨ ಘಂಟೆಗಳ ನಂತರ ಮೇಲೆ ತಲುಪಿದೆವು. ಯಮುನಾದೇವಿಯ ದೇವಸ್ಥಾನ ಇನ್ನೂ ಮೇಲೆ ೧೦,೪೪೭ ಅಡಿ ಎತ್ತರದಲ್ಲಿ ಇದೆ. ಕುದುರೆ, ಡೋಲಿ ಮತ್ತು ಬುಟ್ಟಿ (ಇಲ್ಲಿ ಟೀ ಎಲೆ ಕೀಳಲು ಉಪಯೋಗಿಸುವಂಥಹ ಬೆತ್ತದ ಬುಟ್ಟಿಗಳಲ್ಲಿ ನೇಪಾಳಿಗಳು ಯಾತ್ರಿಗಳನ್ನು ಕೂಡಿಸಿ, ಬೆನ್ನ ಮೇಲೆ ಮೂಟೆ ಹೊರುವಂತೆ ಹೊತ್ತು ಇಡೀ ದೂರವನ್ನು ಕ್ರಮಿಸುತ್ತಾರೆ. ಅದಕ್ಕೆ ಅವರು ರೂ.೧೨೪೦ ತೆಗೆದುಕೊಳ್ಳುತ್ತಾರೆ). ಆದರೆ ಈ ಬುಟ್ಟಿ ಹೊರುವವ ಬೆನ್ನು ಪೂರ್ತಿ ಬಾಗಿಸುವುದರಿಂದ ಬುಟ್ಟಿಯಲ್ಲಿ ಕುಳಿತವರು ಒಂಥರಾ ಆಕಾಶದಲ್ಲಿ ಜೋತಾಡುವಂತೆ ಅನುಭವ ಪಡೆಯುತ್ತಾರೆ. ಬರೀ ಗಗನದ ದರ್ಶನ ಆಗುತ್ತದೆಯೇ ಹೊರತು, ಬೇರೇನೂ ನೋಡಲಾಗುವುದಿಲ್ಲ.

ನಾವು ಕುದುರೆಯಿಂದ ಇಳಿದು ಮತ್ತೆ ೧ ೧/೨ ಕಿ.ಮೀ ಅಷ್ಟು ತುಂಬಾ ಕಡಿದಾದ ರಸ್ತೆ ಏರಿ, ಅಂಗಡಿಗಳ ಮಧ್ಯದಿಂದ ದೇವಸ್ಥಾನದ ಹತ್ತಿರಕ್ಕೆ ಬಂದೆವು. ಯಮುನೋತ್ರಿ ಚಾರ್ ಧಾಮ್ ಯಾತ್ರೆಯನ್ನು ಎಡದಿಂದ ಬಲಕ್ಕೆ ಶುರು ಮಾಡಿದರೆ ಮೊದಲನೆಯ ಧಾಮ. ಯಮುನಾ ನದಿ ಸಪ್ತ ಋಷಿ ಕುಂಡದಿಂದ ಉಗಮವಾಗುತ್ತದೆ. ಇಲ್ಲಿಯ ಯಮುನಾದೇವಿ ದೇವಸ್ಥಾನ ಯಮುನಾ ನದಿಯ ಎಡ ತೀರದಲ್ಲಿ ಕಲಿಂದ ಪರ್ವತದ ಕೆಳಗೆ ಇದೆ. ಇದರ ಹಿಂದುಗಡೆಗೆ ಬಂಡೇರಪಂಚ್ ಎಂಬ ಹಿಮ ಶಿಖರ ಇದೆ. ಇಲ್ಲಿ ಹಲವಾರು ಬಿಸಿ ನೀರಿನ ಬುಗ್ಗೆಗಳಿವೆ, ಅವುಗಳಲ್ಲಿ ’ಸೂರ್ಯ ಕುಂಡ’ ಎಂಬುದು ದೇವಸ್ಥಾನದ ಪಕ್ಕದಲ್ಲೇ ಇದೆ. ದೇವಸ್ಥಾನ ತಲುಪಲು ನಾವು ಮಧ್ಯೆ ಯಮುನೆಯನ್ನು ದಾಟಬೇಕು. ಬಂಡೆಗಳ ಸಂದಿಯಿಂದ ಜೋರಾಗಿ ಶಬ್ದ ಮಾಡುತ್ತಾ ಯಮುನೆ ಹರಿಯುತ್ತಿರುತ್ತಾಳೆ. ಆದರೆ ಇಲ್ಲೂ ಶಬ್ದದ ಆರ್ಭಟವೇ ಹೊರತು ನೀರಿನ ರಭಸ ಇಲ್ಲ. ದಾಟಲು ಮರದ ಹಲಗೆಗಳನ್ನು ಜೋಡಿಸಿ ಚಿಕ್ಕ ಕಾಲು ಸೇತುವೆ ಮಾಡಿದ್ದಾರೆ. ಇದಕ್ಕೆ ದೊಡ್ಡ ದೊಡ್ಡ ಬಿಳಿಯ ಕಲ್ಲುಗಳೇ ಆಧಾರ. ಚಿಕ್ಕದಾದ, ಕಿಷ್ಕಿಂದವಾದ ದಾರಿಯಲ್ಲಿ, ಒಬ್ಬರ ಹಿಂದೆ ಒಬ್ಬರು, ಅಂಗಡಿಯವರ ವ್ಯಾಪಾರದ ದಾಳಿಯಿಂದ ತಪ್ಪಿಸಿಕೊಳ್ಳುತ್ತಾ, ಯಮುನೆಯನ್ನು ದಾಟಬೇಕು. ಮಣ್ಣು ಕೂಡ ಕೆಂಪು ಮಿಶ್ರಿತ ಕಪ್ಪು ಬಣ್ಣದ ನಯವಾದ ಜಾರುವ ಮಣ್ಣು. ಕಾಲಿನಲ್ಲಿ ಸರಿಯಾದ ಶೂ ಇಲ್ಲದಿದ್ದರೆ, ಖಂಡಿತಾ ಕಷ್ಟ. ಮತ್ತೆ ಮುಂದೆ ಹೋದರೆ ಮೊದಲು ಬಿಸಿ ನೀರಿನ ಯಮುನಾ ಬಾಯಿ ಕುಂಡ, ಪುರುಷರಿಗಾಗಿ. ಅದರ ಹಿಂದುಗಡೆಗೆ ಮೇಲೆ ಒಂದು ಚಿಕ್ಕ ಬಿಸಿನೀರಿನ ೨ ಅಡಿ ಅಗಲದ ಹೊಂಡದ ತರಹ ಇದೆ - ಸೂರ್ಯ ಕುಂಡ. ಅದರ ಮೇಲೆ ಕಬ್ಬಿಣದ ಜಾಲರಿಗಳನ್ನು ಹಾಕಿದ್ದಾರೆ. ಅಲ್ಲಿ ನಾವು ತೆಗೆದುಕೊಂಡು ಹೋದ ಪುಟ್ಟ ಪುಟ್ಟಾ ಅಕ್ಕಿ ಹಾಗೂ ಆಲೂಗಡ್ಡೆಯ ಗಂಟನ್ನು ಅದ್ದಿಡುತ್ತಾರೆ. ಅದು ಬೆಂದು ಅನ್ನವಾಗತ್ತೆ ಮತ್ತು ಅದೇ ನಮಗೆ ಪ್ರಸಾದ. ಅಲ್ಲಿ ಗೋಡೆಯಲ್ಲಿ ಒಂಥರಾ ಆಲದ ಮರದ ಬಿಳಿಲುಗಳಂತಿರುವ (ಸಿಮೆಂಟಿನ) ಚಿಕ್ಕ ಗೂಡಿದೆ. ಅದನ್ನೇ ನಾವು ಯಮುನಾದೇವಿ (ಮೂಲ) ಎಂದು ಪೂಜಿಸಬೇಕು. ಎಲ್ಲಾ ಕಡೆ ಇರುವಂತೆ ಇಲ್ಲಿಯೂ ತುಂಬಾ ಜನ ಯುವಕರು ನಮ್ಮ ಬೆನ್ನು ಹತ್ತುತ್ತಾರೆ. ೧೦ ರೂ ಕೊಟ್ಟರೆ ಟೀಕಾ ಹಚ್ಚುತ್ತಾರೆ. ಅಲ್ಲಿಂದ ಪಕ್ಕದಲ್ಲೇ ಯಮುನಾದೇವಿಯ ದೇವಸ್ಥಾನ ಇದೆ. ಒಳಗೆ ಸುಮಾರು ದೊಡ್ಡದಾದ ಯಮುನಾದೇವಿಯ ಕರಿ ಶಿಲೆಯ ವಿಗ್ರಹ ಇದೆ. ಪಕ್ಕದಲ್ಲೇ ಬಿಳಿಯ ಅಮೃತಶಿಲೆಯ ಗಂಗಾದೇವಿ ಮತ್ತು ಮಧ್ಯದಲ್ಲಿ ಲಕ್ಷ್ಮೀ ದೇವಿಯ ವಿಗ್ರಹಗಳು. ಇಲ್ಲೂ ಅಷ್ಟೆ ತುಂಬಾ ಜನ ಮತ್ತು ದುಡ್ಡು ಕೊಟ್ಟವರಿಗೆ ಟೀಕಾ ಹಚ್ಚಿ ಕಳಿಸುತ್ತಾರೆ. ತಳ್ಳಾಡಿಕೊಂಡು, ತಳ್ಳಿಸಿಕೊಂಡು ಒಂದು ಪ್ರದಕ್ಷಿಣೆ ಬಂದರೆ, ಎದುರಿಗೆ ಮಹಿಳೆಯರಿಗಾಗಿ ಬಿಸಿ ನೀರಿನ ಸ್ನಾನದ ಕೊಳ.

ಭಗೀರಥನಿಗೆ ಇಬ್ಬರು ಅತಿ ಸುಂದರ ಯುವತಿಯರು, ಚಿನ್ನಾಭರಣಗಳಿಂದ ಅಲಂಕರಿಸಿಕೊಳ್ಳಲ್ಪಟ್ಟವರು ಸಿಗುತ್ತಾರೆ. ಅವರು ಯಾರೆಂದು ವಿಚಾರಿಸಲಾಗಿ, ಒಬ್ಬ ಕನ್ಯೆ ಹೇಳುತ್ತಾಳೆ, ಭಗೀರಥ ನಾನು ಗಂಗೆ ಮತ್ತು ನನ್ನ ಜೊತೆಯಲ್ಲಿರುವ ಇವಳು ಸೂರ್ಯನ ಪುತ್ರಿಯಾದ ಯಮುನೆ. ಇವಳು ಸಮಸ್ತ ಪಾಪಗಳನ್ನೂ ತೊಳೆಯುವವಳೆಂದು - ಇದು ಇಲ್ಲಿಯ ಕಥೆಯಂತೆ. ಆದರೆ ಅಲ್ಲಿ ನಮ್ಮ ಜನರು ಹೊಲಸೆಬ್ಬಿಸಿರುವುದು ನೋಡಿದರೆ, ಸ್ನಾನ ಮಾಡಲಿರಲಿ, ಪ್ರೋಕ್ಷಿಸಿಕೊಳ್ಳಲೂ, ಮುಜುಗರವಾಗತ್ತೆ. ಯಮುನಾದೇವಿಯ ದೇವಸ್ಥಾನ ದೀಪಾವಳಿಯ ನಂತರ ಬರುವ ’ಭೈಯಾ ದೂಜ್’ ದಿನ ಮುಚ್ಚಲ್ಪಡುತ್ತದೆ. ೬ ಕಿ.ಮೀ ದೂರದಲ್ಲಿರುವ ’ಖರ್ಸಾಲಿ’ ಎಂಬ ಗ್ರಾಮಕ್ಕೆ, ತನ್ನ ತಾಯಿಯ ಮನೆಗೆ, ಯಮುನೆಯ ಅಣ್ಣ ಶನೇಶ್ವರನು ಬಂದು ಕರೆದೊಯ್ಯುತ್ತಾನೆಂಬ ಪ್ರತೀತಿ. ಇಲ್ಲಿ ಚಳಿಗಾಲ ಮುಗಿಯುವವರೆಗೂ ದೇವಿಯ ಪೂಜೆ ನಡೆಯುತ್ತದೆ.

ಇಲ್ಲಿಗೆ ನಮ್ಮ ಯಮುನೋತ್ರಿಯ ದರ್ಶನ ಮುಗಿಯುತ್ತದೆ. ಸೊಗಸಾದ ನೋಟ, ಪ್ರಕೃತಿ, ಹಿಮಾಲಯ ಶ್ರೇಣಿಯ ಇಣುಕು ದರ್ಶನ ಎಲ್ಲಾ ತುಂಬಾನೇ ಚೆನ್ನಾಗಿದೆ. ನಾವು ಮತ್ತೆ ವಾಪಸ್ಸು ನಡೆದು ಬಂದು ನಮ್ಮ ನಮ್ಮ ಕುದುರೆಗಳನ್ನು ಹುಡುಕಿ ಹತ್ತಿದೆವು. ಇಳಿಯುವಾಗ ಹತ್ತುವುದಕ್ಕಿಂತ ಹೆಚ್ಚು ಭಯವಾಗತ್ತೆ. ಹತ್ತುವಾಗ ನಮಗೆ ಹಿಂದಿನ ಪ್ರಪಾತ ಕಾಣಲ್ಲ ಆದರೆ ಇಳಿಯುವಾಗ ಬೇಡವೆಂದರೂ ನಮ್ಮ ಕಣ್ಣಿಗೆ ಅದೇ ಕಾಣುತ್ತಿರುತ್ತದೆ ಮತ್ತು ತೀರಾ ಕಡಿದಾದ ಬೆಟ್ಟವಾದ್ದರಿಂದ ಕುದುರೆಯ ಮೇಲೆ ಕುಳಿತು ನಮ್ಮ ದೇಹವನ್ನು ಓಲಾಡದಂತೆ, ಮುಂದೆ ಬೀಳದಂತೆ ಸಮತೋಲನ ಕಾಯ್ದುಕೊಳ್ಳುವುದರಲ್ಲೇ ಸುಸ್ತಾಗಿರತ್ತೆ. ನಡುವೆ ಇಳಿದು ಸ್ವಲ್ಪ ದೂರ ನಡೆದು ಅಂತೂ ನಾವು ನಮ್ಮ ಗಾಡಿಯ ಹತ್ತಿರ ಕೆಳಗೆ ಬಂದು ಸೇರಿದೆವು. ಮಧ್ಯಾಹ್ನ ಮೇಲೆ ಇದ್ದಕ್ಕಿದ್ದಂತೆ ಶುರುವಾದ ಮಳೆ ನಾವು ಮತ್ತೆ ಸ್ಯಾನ್ ಚೆಟ್ಟಿ ತಲುಪುವವರೆಗೂ ನಿಲ್ಲಲಿಲ್ಲ. ಪೂರಾ ನೆನೆದು ತೊಪ್ಪೆಯಾಗಿ ಚಳಿಯಲ್ಲಿ ನಡುಗುತ್ತಾ, ಹಲ್ಲುಗಳು ಕಟಕಟವಾಡಿದಾಗ, ತುಂಬಾ ಕಷ್ಟವಾಗಿತ್ತು. ಮಳೆಯಿಂದಾಗಿ ಕುದುರೆಯ ಲದ್ದಿಗಳು ಕರಗಿ, ಪೂರಾ ರಸ್ತೆ ಹಾಗೂ ಮೆಟ್ಟಿಲುಗಳು ಭಯಂಕರವಾಗಿ ಜಾರುತ್ತಿತ್ತು. ಕುದುರೆ ಹತ್ತಿದಾಗಿಂದ ಶುರುಮಾಡಿದ್ದ ದೇವರ ಧ್ಯಾನ ಸುಖವಾಗಿ ಕ್ಷೇಮವಾಗಿ ಇಳಿದ ನಂತರವೇ ನಿಂತಿದ್ದು. ಸಿಕ್ಕಾಪಟ್ಟೆ ಭಯವಾಗಿಬಿಟ್ಟಿತ್ತು (ಜೀವನದಲ್ಲೇ ಇದು ಬರೀ ಎರಡನೇ ಸಲ ಕುದುರೆ ಹತ್ತಿದ್ದು). ಮಳೆಯಿಂದಾಗಿ ಸೂರ್ಯ ಕೂಡ, ತನ್ನ ಅಂಗಡಿ ಮುಚ್ಚಿ ಮನೆಗೆ ನಡೆದಾಗಿತ್ತು. ಮಧ್ಯಾನ್ಹ ೪ ಘಂಟೆಗೆಲ್ಲಾ ಅರ್ಧ ಕತ್ತಲಾಗಿ, ಆ ಜಾಗ ಬಿಟ್ಟು ಹೊರಟರೆ ಸಾಕೆನ್ನುವಂತಿತ್ತು.

ನಮ್ಮ ನಂತರ ಬಂದ ನನ್ನವರು ಮತ್ತು ಅವರ ಸ್ನೇಹಿತರು, ಕುದುರೆಯಿಂದ ಬಿದ್ದ ಮಹಿಳೆಯ ಕಥೆ ಹೇಳಿದಾಗ ಬೆನ್ನ ಮೂಳೆ ತುಸು ನಡುಗಿತ್ತು. ಅದೇನಾಯ್ತೋ ಗೊತಾಗದೆ, ಆ ಕುದುರೆ ಒಮ್ಮೆಲೇ ಕೆನೆದು ಕಾಲುಗಳನ್ನು ಝ್ಹಾಡಿಸಿದಾಗ, ಮೇಲೆ ಕುಳಿತಿದ್ದ ಮಹಿಳೆ ಮೂರು ಪಲ್ಟಿ ಹೊಡೆದು ಬಿದ್ದಳಂತೆ, ಸ್ವಲ್ಪ ದಪ್ಪಗಿದ್ದಿದ್ದರಿಂದ ಮೂಳೆ ಮುರಿಯಲಿಲ್ಲವೆಂಬುದೂ ಸತ್ಯ !

ಇಷ್ಟೆಲ್ಲಾ ಅವಾಂತರದಲ್ಲಿ ಡೋಲಿಯಲ್ಲಿ ಕುಳಿತು ಮೇಲೆ ಬಂದ ನನ್ನತ್ತೆಯವರಿಗೆ ಡೋಲಿ ಇಳಿದು ಆ ಸ್ವಲ್ಪ ದೂರವನ್ನೂ ಹತ್ತಲು ಸಾಧ್ಯವೇ ಆಗದೆ, ಮತ್ತೆ ಅದೇ ಡೋಲಿಯಲ್ಲಿ ಕುಳಿತು ವಾಪಸ್ಸು ಬಂದರು. ಸ್ವಲ್ಪವಾದರೂ ನಡೆಯುವ ಶಕ್ತಿಯಿಲ್ಲದ, ವಯಸ್ಸಾದ ಹಿರಿಯರಿಗೆ ಈ ಯಮುನೋತ್ರಿಯ ದರ್ಶನ ನಿಜವಾಗಲೂ ದು:ಸ್ವಪ್ನವೇ ಸರಿ. ಕೆಳಗೆ ಬಂದ ನಾವುಗಳು ಒಬ್ಬರನ್ನೊಬ್ಬರು ಹುಡುಕುವುದರಲ್ಲೇ ಸುಮಾರು ೧ ಘಂಟೆ ಕಳೆದಿತ್ತು. ಇಲ್ಲಿ ಮಾತ್ರ ಮೇಲೆ ಹತ್ತುವಾಗ ಒಟ್ಟಾಗಿ ಹೋದ ಎಲ್ಲರೂ ಜೊತೆಯಾಗೇ ನಡೆದೇ ಹತ್ತಿದರೆ ಮಾತ್ರ, ಜೊತೆಯಾಗಿರಬಹುದು. ಇಲ್ಲದಿದ್ದರೆ ಡೋಲಿಯಲ್ಲಿ ಹೋಗುವವರನ್ನು ತುಂಬಾ ಜೋರಾಗಿ ಓಡುತ್ತಾ ಎತ್ತಿಕೊಂಡು ಹೋಗಿ ಬಿಡುತ್ತಾರೆ. ನಾನೂ ನನ್ನತ್ತಿಗೆ ಇಬ್ಬರೂ ಕುದುರೆ ಏರಿ ಒಬ್ಬರನ್ನೊಬ್ಬರು ಬಿಡದೇ ಹಿಂಬಾಲಿಸಿದ್ದಕ್ಕೆ, ಜೊತೆಯಾಗೇ ಉಳಿದೆವು. ಇಲ್ಲದಿದ್ದರೆ ಎಲ್ಲರೂ ಬೇರೆಬೇರೆಯಾಗಿ ಬಿಡುತ್ತಿದ್ದೆವು.

ಯಮುನೋತ್ರಿಯ ದರ್ಶನ ಅತ್ಯಂತ ಕಠಿಣ ಮತ್ತು ಕಷ್ಟಕರವಾದದ್ದು. ಹಾಗೂ ಹೀಗೂ ಮಾಡಿ ಮುಗಿಸಿದಾಗ, ಒಂದು ದೊಡ್ಡ ಸಮಾಧಾನ ಆಗತ್ತೆ. ಈ ತರಹದ ಅನುಭವ ಜೀವನದಲ್ಲಿ ಒಂದೇ ಬಾರಿ ಸಾಕೆಂದುಕೊಂಡು, ತಾಯಿ ಯಮುನೆಗೆ ದೊಡ್ಡ ನಮಸ್ಕಾರ ಹಾಕಿದೆವು. ವಾಪಸ್ಸು ಬಂದು ಬಿಸಿ ನೀರಿನ ಸ್ನಾನ ಮಾಡಿ, ಹಾಸಿಗೆಯಲ್ಲಿ ಕುಳಿತಾಗ, ಮೈಯ ಎಲ್ಲಾ ಮೂಳೆ ಮಾಂಸಕಂಡಗಳೂ ತಮ್ಮ ಇರುವನ್ನು ನೆನಪಿಸಿದ್ದವು. ಊಟ ಮಾಡಿ ನೋವು ನಿವಾರಕ ಮಾತ್ರೆಗಳನ್ನು ನುಂಗಿ ಛಳಿಗೆ ಬೆಚ್ಚಗೆ ರಜಾಯಿ ಹೊದ್ದು ಮಲಗಿದೆವು.

http://www.sampada.net/blog/shamala/08/06/2009/21226

ಮುಂದುವರಿಯುವುದು............................

Rating
No votes yet

Comments