ಮಳೆಗೆ ಮಗು ಬಲಿಯಾಯಿತು.

ಮಳೆಗೆ ಮಗು ಬಲಿಯಾಯಿತು.

ಇತ್ತೀಚೆಗೆ ಬೆಂಗಳೂರಿನಲ್ಲಿ ಮಳೆಯ ನೀರನ್ನು ನಿಯಂತ್ರಣ ಮಾಡುವ ವ್ಯವಸ್ಥೆ ಸರಿಯಿಲ್ಲವಾಗಿ ಸಾವು ನೋವು ಸಾಮಾನ್ಯವಾಗಿದೆ. ಈ ರೀತಿಯ ಸಾವುಗಳನ್ನು ಗಮನಿಸಿದಾಗ ನಮ್ಮೂರ ಅಂದರೆ ಮದ್ದೂರಿನ ಹೊಳೆ ಅಂದರೆ ಶಿಂಷಾ ನದಿಯ ಕುರಿತ ನನ್ನ ಬಾಲ್ಯದ ನೆನೆಪುಗಳು ಬರುತ್ತವೆ. ನನಗೆ ಬಾಲ್ಯ ಅಂದರೆ ಅದು 50--ರ ದಶಕದ ಮಾತು. ನಮ್ಮೂರ ಹೊಳೆ ಅಂದರೆ ನನಗೆ ನೆನಪಾಗುವುದು ಮಳೆಗಾಲದ ಕೆಂಪು ನೊರೆ ನೊರೆಯ (ನೆರೆ)ಪ್ರವಾವ. ಪ್ರವಾವವನ್ನು ಅಳತೆ ಮಾಡಲು ಕೆಲವು ಗುರ್ತಿನಿಂದ ಮಾತಾಡಿಕೊಳ್ಳುತ್ತಿದ್ದರು. ಹೊಳೆಯಾಚಿನ ಹಾಲು ಮಾರುವ ಹೆಣ್ಣು ಮಕ್ಕಳು ಮದ್ದೂರು ಸೇತುವೆ (ಶಿವಪುರದ ಬಳಿ ಇರುವ) ಮೇಲೆ ಬರುವುದರಿಂದ, ನಮ್ಮಹೊಲಕ್ಕೆ ಕೆಲವು ವಯಸ್ಸಾದವರು ಗಯರು ಆಗುವುದರಿಂದ,ಇನ್ನೂ ಮುಂದೆ ಹೋಗಿ ಮಕ್ಕಳನ್ನು ಮನೆಯಿಂದಾಚೆ ಬರದಂತೆ ನಿಯಂತ್ರಿಸುತ್ತಿದ್ದರು.ನೀರು ಶ್ರೀನಿವಾಸ ಸಟ್ಟರ ಗದ್ದೆಯ ದೊಡ್ಡ ಕಡಕ್ಕೆ ಬಂದಿದೆ ಅಂದರೆ ಹತೋಟಿ ತಪ್ಪಿದ ಪ್ರವಾವ ಅಂತ. ವಿಶೇಷವೆಂದರೆ ಕುಣಿಗಲ್ಲ ತಾಲೋಕಿನ ಮಾಕೋನಳ್ಳಿ ಡ್ಯಾಂ ತುಂಬಿತಂತೆ,ಇನ್ನು ಕಷ್ಟ ಅನ್ನುವ ಮಾತು ಕೇಳಿ ಬರುತ್ತಿತ್ತು. ನಮ್ಮೂರಿನಲ್ಲಿ ಮಳೆ ಸಾಧಾರಣ ಇದ್ದರೂ ನದಿಯ(ಹೊಳೆಯ) ಉಗಮವಾದ ಆದಿಚುಂಚನಗಿರಿ ಮತ್ತು ಯಡಿಯೂರಿನಲ್ಲಿ ಎಥೇಚ್ಚ ಮಳೆ ಸುರಿದು ಅಲ್ಲಿನ ಕೆಂಪು ಮಣ್ಣನ್ನು ಕೊಚ್ಚಿಕೊಂಡು ಅತಿಯಾದ ರಭಸದಲ್ಲಿ ಬರುತ್ತಿತ್ತು. ಈ ರೀತಿ ಎಲ್ಲಿಯೋ ಅತಿ ಮಳೆಯಾಗಿ ಮಳೆಯಿಲ್ಲದ ನಮ್ಮೂರಿನಲ್ಲಿ ಪ್ರವಾವ ಮಾಡುತ್ತಿದ್ದ ಹೊಳೆಗೆ ಹುಚ್ಚು ಹೊಳೆ ಎಂದು ಹಿರೀಕರು ಶಪಿಸುತ್ತಿದ್ದರು. ಆ ಹೊಳೆಯಲ್ಲಿ ಸೊರೆ ಬುರುಡೆ ಕಟ್ಟಿಕೊಂಡು ದಾಟಿ ಬರುತ್ತಿದ್ದವರನ್ನು ಮನೆಯವರ ಕಣ್ಣು ತಪ್ಪಿಸಿ ನೋಡುತ್ತಿದ್ದ ರೋಚಕ ನೋಟ ಇಂದಿಗೂ ನೆನೆಪಿನಲ್ಲಿ ರಂಜನೀಯ. ಹೊಳೆಯಲ್ಲಿ ತೇಲಿ ಹೋಗುತ್ತಿದ್ದ ಹೆಣಗಳನ್ನು ನೋಡಿದವರು ಅಯ್ಯೋ ಅಂತ ವಿವರಿಸುತ್ತಿದ್ದರು. ಅಂದಿನ ದಿನಗಳಲ್ಲಿ ಹೊಳೆಗೆ ಜಾರಿದ ಮೇಲೆ ಶಿವನ ಪಾದಕ್ಕೆ ಸೇರಿದಂತೆಯೇ ಸರಿ. ಮದ್ದೂರಿನ ಪಟ್ಟಣಕ್ಕೆ ಬರುತ್ತಿದ್ದ ಹೊಳೆಯ ಬಾಜುವಿನ ಹಳ್ಳಿಗರು ಅವರೂರಿನಲ್ಲಿ ಆದ ಆಗುತ್ತಿರುವ ಅವಾಂತರಗಳನ್ನು ವಿವರಿಸುತ್ತಾ ನೆರೆ ಇನ್ನೂ ಒಂದು ವಾರ ಅಂತಲೋ ನಮ್ಮಪ್ಪ ಹೇಳುತ್ತಿದ್ದ ಇದಕ್ಕೂ ಜೋರಾದ ನೆರೆ ಬಂದಿತ್ತು ಅಂತಲೋ ಇಂತ ನೆರೆ ಮೂರು ತಲೆಮಾರಿನಿಂದ ಇರಲಿಲ್ಲವೆಂತಲೋ ಲೋಕಾಭಿರಾಮ ಮಾತಾಡುತ್ತಾ ಬೆಲ್ಲದ ಕಾಫಿ ಅಥವ ಟೀಯನ್ನೋ ಹೀರುತ್ತಿದ್ದರು. ಮಕ್ಕಳನ್ನು ಜೋಪಾನ ಮಾಡ್ಕಳ್ಳಿ ಅನ್ನುವುದನ್ನು ಮರೆಯುತ್ತಿರಲಿಲ್ಲ. ಸಾವಿಗಿಂತಲೂ,ಮಣ್ಣು ಕೊಚ್ಚೋಗಿರುವುದಕ್ಕಿಂತ ತಕ್ಷಣದ ಜಾಗ್ರತೆ ಮುಂಜಾಗ್ರತೆ ಬಗ್ಗೆ ಅವರಿಗಿದ್ದ ಕ್ಷಿಪ್ರ ಆಲೋಚನಾ ಕ್ರಮಗಳು ಇಂದಿನ ನಗರಿಗೆ ಮಾರ್ಗದರ್ಶನವೇ ಸರಿ. ಅಂದು ರಾಜನಿಗೋ ಸರಕಾರಕ್ಕೋ ದೂರುವುದರ ಬದುಲು ಅವರೇ ಪರಿಹಾರಕ್ಕೆ,ಮುಂಜಾಗ್ರತೆಗೆ ಒತ್ತು ನೀಡುತ್ತಿದ್ದರು ಎನ್ನುವುದು ಮುಖ್ಯ.ಇನ್ನೂ ಮುಂದುವರಿದು ಸಹ ಪ್ರಜೆಗಳೊಂದಿಗೆ ಕ್ರೀಡಾ ಮನೋಭಾವನೆಯಿಂದ ಪರಿಹಾರ ಕಂಡು ಕೊಳ್ಳುತ್ತಿದ್ದ ಕಾರಣಕ್ಕೋ ಏನೋ ದಳ್ಳಾಳಿಗಳು ಇರುತ್ತಿರಲಿಲ್ಲ.

ನಮ್ಮೂರ ಹೊಳೆಯ ಇನ್ನೊಂದು ಮುಖ ಬೇಸಿಗೆ ಕಾಲ. ಆಗ ನೀರು ಕನಿಷ್ಟ ಮಟ್ಟದಲ್ಲಿರುತ್ತಿತ್ತು. ಎಮ್ಮೆಗಳ ಹಿಂಡು ತೆಳು ನೀರಿಗೆ ಮಲಗಿದಾಗ ಒಂದು ಚೆಕ್ ಡ್ಯಾಂ ಏರ್ಪಡುತ್ತಿತ್ತು. ನಮಗೆ ಅದೇ ಸ್ವಿಮಿಂಗ್ ಫೂಲ್. ನಿಮಗೆ ಗೊತ್ತೆ ಚೆನ್ನಾಗಿ ಈಜಾಡಿದ ಮೇಲೆ ಹೊಳೆಯ ಮರಳಲ್ಲಿ ಬೆಳೆಯುತ್ತಿದ್ದ ಸ್ಔತೆಕಾಯಿ ಕರ್ಬುಜಾ ಕಲ್ಲಂಗಡಿ ಹಣ್ಣಿನ ಕದ್ದು ತಿನ್ನುವ ರುಚಿ. ಮನೆಯವರಿಗೆ ಗೊತ್ತಾದಾಗ ಬೆತ್ತದ ಬಾಸುಂದಿ ರುಚಿ.ಸವಿ ನೆನಪು ಮಾಡಿದ್ದು ವಿಷಾದದ ಚರಂಡಿಯಲ್ಲಿ ಕೊಚ್ಚಿಹೋದ ಮಗುವಿನ ಸಾವು.

ಶಿವಶಶಿ

Rating
No votes yet