ಭಾಷೆಗೆ ಸಾಹಿತ್ಯೇತರ ಕೊಡುಗೆ
ಎಲ್ಲರಿಗೂ ಗೊತ್ತಿರುವ ವಿಷಯವಾದರೂ, ತಿರುಗಿ ನೆನಪಿಸಿಕೊಳ್ಳಬಹುದಾದದ್ದರಿಂದ ನಮೂದಿಸುತ್ತಿದ್ದೇನೆ. ಭಾಷೆಯೊಂದರ ಬೆಳವಣಿಗೆ ಕುರಿತು ಯೋಚಿಸುವಾಗ ಸಾಮನ್ಯವಾಗಿ ನಾವು ಸಾಹಿತಿಗಳನ್ನು ನೆನಪಿಸಿಕೊಳ್ಳುತ್ತೇವೆ. ಕವಿಗಳು, ಕತೆಗಾರರು, ವಿಶೇಷಜ್ನರುಗಳೆಲ್ಲ ನೆನಪಿಗೆ ಬರುತ್ತಾರೆ. ಇಂಥ ಸಂದರ್ಭದಲ್ಲಿ ನಮ್ಮ ಭಾಷೆಯ ಅಚ್ಚುಗಳನ್ನು ಮೊದಲಿಗೆ ತಯಾರಿಸಿದ, ಟೈಪರೈಟರಿನಲ್ಲಿ ಕನ್ನಡ ಅಳವಡಿಸಿದ, ಗಣಕಕ್ಕಾಗಿ ಕನ್ನಡ ತಂತ್ರಾಂಶಗಳನ್ನು ಹುಟ್ಟುಹಾಕಿದ, ಬಗೆಬಗೆಯ ಅಕ್ಷರ ಶೈಲಿಗಳನ್ನು ತಯಾರಿಸಿದ ಹಲವು ತಂತ್ರಜ್ನರನ್ನು ಭಾಷಾಬೆಳವಣಿಗೆಯ ದೃಷ್ಟಿಯಿಂದ ನೆನಪಿಸಿಕೊಳ್ಳುವುದು ಕಡಿಮೆ. ಹಲವು ಬರಹಗಾರರು, ತಂತಮ್ಮ ವಲಯಗಳಲ್ಲಿ ಬರೆದ ಪುಸ್ತಕಗಳು ಆಯಾ ವಲಯಗಳಲ್ಲಿ ನಮ್ಮ ಭಾಷೆ ಶ್ರೀಮಂತವಾಗುವಂತೇ ಮಾಡಿದ್ದಾರೆ. ಉದಾ: ಜಿ. ಟಿ. ನಾರಾಯಣ ರಾವ್ ವಿಜ್ನಾನ ಕುರಿತಾದ ಎಷ್ಟೆಲ್ಲ ಪುಸ್ತಕಗಳನ್ನು ಬರೆದಿದ್ದಾರೆ. ಎಚ್ಚೆಸ್ಕೆ ಅರ್ಥಶಾಸ್ತ್ರದ ಕುರಿತು ಬಹಳ ಬರೆದಿದ್ದಾರೆ. ಹೀಗೆ ಬರೆಯುತ್ತ ಇವರುಗಳು ಕನ್ನಡದಲ್ಲಿ ಆಯಾ ಕ್ಷೇತ್ರದ ಪರಿಭಾಷೆಗಳು ತಯಾರಾಗುವಂತೇ ಮಾಡಿದ್ದಾರೆ. ಹೀಗೆ ಬಹಳ ಜನರಿದ್ದಾರೆ. ಕನ್ನಡ ಭಾಷೆ ಆಧುನಿಕ ಜ್ನಾನವಲಯಗಳಲ್ಲಿ ತನ್ನದೇ ಶಬ್ದಗಳನ್ನು ಬೇಕಿದ್ದಷ್ಟು ಹೊಂದಿಲ್ಲವಾದರೂ, ತಂತ್ರಾಂಶಗಳನ್ನು ಬೇಕಿದ್ದಷ್ಟು ಹೊಂದಿಲ್ಲವಾದರೂ, ಆ ದಿಕ್ಕಿನಲ್ಲಿ ಕೆಲಸ ಮಾಡಿದವರನ್ನು ನಾವು ನೆನಪಿಸಿಕೊಳ್ಳುತ್ತಿರುವುದು ಒಳ್ಳೆಯದು.
Comments
ಜಿಟಿಎನ್ ಮತ್ತು ವಿಜ್ಞಾನ ಬರೆಹ