'ಶಿಲೆಯೊಳಗಣ ಪಾವಕನಂತೆ'
ಶಿಲೆಯೊಳಗಣ ಪಾವಕನಂತೆ
ಉದಕದೊಳಗಣ ಪ್ರತಿಬಿಂಬದಂತೆ
ಬೀಜದೊಳಗಣ ವೃಕ್ಷದಂತೆ
ಶಬ್ದದೊಳಗಣ ನಿಶ್ಶಬ್ದದಂತೆ
ಗುಹೇಶ್ವರ, ನಿಮ್ಮ ಶರಣ ಸಂಬಂಧ
ಅಲ್ಲಮಪ್ರಭುವಿನ ಈ ವಚನವನ್ನು ವಿಶ್ಲೇಷಿಸುತ್ತ ಚಿಂತಾಮಣಿ ಕೊಡ್ಲೆಕೆರೆಯವರು ಅನ್ನುತ್ತಾರೆ: "ಭಕ್ತ ಶಿಲೆಯಾದರೆ ಭಗವಂತ ಪಾವಕ, ಭಕ್ತ ಉದಕವಾದರೆ ದೇವರು ಅಲ್ಲಿ ಹುಟ್ಟುವ ಪ್ರತಿಬಿಂಬ... ಮುಂದಿನ ಸಾಲು ಭಗವಂತನನ್ನು 'ಬೀಜದೊಳಗಣ ವೃಕ್ಷ'ವೆಂದು ಗುರುತಿಸುತ್ತದೆ." ಇತ್ಯಾದಿ. ಇದು ಅವರ "ಅಂತರಂಗದ ಆಕಾಶ" ಎನ್ನುವ ಪುಸ್ತಕದಲ್ಲಿ ಬರುವ ಮಾತುಗಳು. ಈ ಪುಸ್ತಕ ತಾತ್ವಿಕತೆ ಹಾಗೂ ಕಾವ್ಯದ ಕುರಿತ ಸಂಬಂಧದ ಅಧ್ಯಯನವಾಗಿದ್ದು, ಕನ್ನಡ ವಿಮರ್ಶಾ ಲೋಕಕ್ಕೆ ಒಳ್ಳೆಯ ಕೊಡುಗೆಯಾಗಿದೆ.
ಈ ವಚನವನ್ನು ಓದುತ್ತ ನನಗೆ ಒಂದು ಸಂದೇಹ. ಅಲ್ಲಮನ ತಾತ್ವಿಕ ವಿಚಾರಗಳ ಅರಿವಿಲ್ಲದ ನಾನು ಇದನ್ನು ಒಂದು ಕವನವಾಗಿ ಓದುತ್ತೇನೆ. ವಚನದ ಕೊನೆಯ ಸಾಲಿನ ಬಂಧ ನೋಡಿದರೆ, ಒಟ್ಟೂ ವಚನದಲ್ಲಿ ಬರುವ ಮೊದಲ ಶಬ್ದಗಳು, ಅಂದರೆ, ಶಿಲೆ, ಉದಕ, ಬೀಜ, ಶಬ್ದ, "ನಿಮ್ಮಶರಣ ಸಂಬಂಧ" ದ 'ನಿಮ್ಮ' ಜತೆ ಸೇರುತ್ತವೆ ಹಾಗೂ ಪಾವಕ, ಪ್ರತಿಬಿಂಬ, ವೃಕ್ಷ, ನಿಶ್ಶಬ್ದ, ಇವು 'ಶರಣ' ಜತೆ ಸೇರುವುದೆಂದು ಅನಿಸುತ್ತದೆ. ಅಂದರೆ ಶರಣ ಈ ವಚನದಲ್ಲಿ ಕೊಡ್ಲೆಕೆರೆಯವರು ಅನ್ನುವಂತೆ ಶಿಲೆಯಾಗಿ ಬಾರದೆ ಅದರೊಳಗಣ ಪಾವಕನಾಗಿ, ಹಾಗೂ ಗುಹೇಶ್ವರ ಶಿಲೆಯಾಗಿ ಬರುತ್ತಾರೆ. ಅಂತೆಯೇ ಉಳಿದ ಸಾಲುಗಳಲ್ಲಿ ಕೂಡ. ಹೀಗೆ ನೋಡಿದಾಗ ಪ್ರಾಥಮಿಕತೆ ಬರೀ ತೋರಿಕೆಗಷ್ಟೇ ಅಲ್ಲದೇ ಅರ್ಥದಲ್ಲಿಯೂ ಗುಹೇಶ್ವರನಿಗೆ ಸಲ್ಲುತ್ತದೆ. ಅಂದರೆ, ಶಿಲೆ ಗುಹೇಶ್ವರನಾದರೆ, ಅದರೊಳಗಿರಬಹುದಾದ ಅಂಶಗಳಲ್ಲಿ ಶರಣನೂ ಒಂದು. ಉದಕ ಗುಹೇಶ್ವರನಾದರೆ ಆತನೇ ಇಡೀ ವಿಶ್ವವನ್ನು ಒಳಗೊಂಡಂತೇ ಪ್ರತಿಬಿಂಬಿಸುವನು; ಬೀಜ ಗುಹೇಶ್ವರನಾದರೆ ಶರಣನೆಂಬ ವೃಕ್ಷದ ಹುಟ್ಟಿನ ಮೂಲವೇ ಅವನಾಗುತ್ತಾನೆ. ಶಬ್ದ ಗುಹೇಶ್ವರನಾದರೆ ಅರ್ಥವಂತಿಕೆಯ ಅಂಶವಾದ ನಿಶ್ಶಬ್ದ ಶರಣನಾಗಿರುತ್ತಾನೆ. ಹಾಗೂ ಈ ಸಮೀಕರಣದಲ್ಲಿ ಮೊದಲು ಬರುವ ಅಂಶಗಳು ಹೆಚ್ಚಿನ ವ್ಯಾಪ್ತತೆ ಪಡೆದಿದ್ದು ದೈವಶಕ್ತಿಯ ವಿಶಾಲತೆ ಪಡೆಯುತ್ತವೆ. ನಂತರ ಬರುವ ಅಂಶಗಳು ಒಂದು ಘಟಕವಷ್ಟೇ ಆಗಿ ಮೊದಲಿನ ಘಟಕದಲ್ಲಿಯೇ ಲೀನವಾಗುವ ಅಂಶವಾಗುತ್ತವೆ.
ಈ ವಚನದ ರಚನಾ ಬಂಧ ನೋಡಿದರೆ ಕೂಡ ಹೀಗೆ ಓದುವುದು ಸಾಧ್ಯವೆನಿಸುತ್ತದೆ. ಏಕೆಂದರೆ 'ಒಳಗಣ' ಎಂಬ ಪದವು ಮೊದಲು ಬರುವ ಪದಗಳ ಜತೆ ಇದೆ. ಅಂದರೆ 'ಒಳಗೊಳ್ಳುವ' ವ್ಯಾಪ್ತಿ ಆ ಪದಗಳು ಸೂಚಿಸುವ ವಸ್ತುಗಳೊಂದಿಗೆ ಇವೆ. ಶಿಲೆಗೆ ಒಳಗೊಳ್ಳುವ ವ್ಯಾಪ್ತಿಯಿದೆ, ಉದಕಕ್ಕೆ ಪ್ರತಿಬಿಂಬವನ್ನು ಒಳಗೊಳ್ಳುವ ವ್ಯಾಪ್ತಿ ಇದೆ...ಇತ್ಯಾದಿ. ಹೀಗೆ ಒಳಗೊಳ್ಳುವ ವ್ಯಾಪ್ತಿ ಇರುವುದೇ ಗುಹೇಶ್ವರನ ಪ್ರಾಥಮಿಕತೆಯನ್ನು ಸೂಚಿಸುವುದರಿಂದ ಶರಣ ಆತನಲ್ಲಿ ಒಳಗೊಳ್ಳುವದನ್ನು ಬಯಸುತ್ತಾನೆ.
ಇನ್ನೊಮ್ಮೆ ಓದಿದರೆ ಅನಿಸುತ್ತದೆ: 'ಶಿಲೆಯೊಳಗಣ ಪಾವಕದಂತೆ' ಇರುವುದು ಏನೆಂದು ಅಲ್ಲಮಪ್ರಭು ಹೇಳುತ್ತಿದ್ದಾನೆ? 'ನಿಮ್ಮ ಶರಣ ಸಂಬಂಧ' ಎಂದು. ಅಂದರೆ, ಇಲ್ಲಿ ಶಿಲೆ ಪಾವಕಗಳು ಅಮುಖ್ಯ ಹಾಗೂ 'ಒಳಗಣ' ಮುಖ್ಯ. ಅಂದರೆ, ಶಿಲೆ ಗುಹೇಶ್ವರನೆಂದಾಗಲೀ, ಪಾವಕ ಶರಣನೆಂದಾಗಲೀ ನೋಡುವ ಬದಲು ಇವೆರಡರ ನಡುವಿನ ಸಂಬಂಧವಷ್ಟೇ ಉಪಮೆಯಾಗಿ ಬರುತ್ತದೆ. ಶಿಲೆ ಹಾಗೂ ಪಾವಕ ಆ ಉಪಮೆಯನ್ನು ಸಾಧ್ಯಗೊಳಿಸುವ ಘಟಕಗಳು ಮಾತ್ರ. ಅಂದರೆ, ಗುಹೇಶ್ವರ ಹಾಗೂ ಶರಣರ ಸಂಬಂಧಕ್ಕೂ, ಶಿಲೆಯೊಳಗೆ ಕಾಣದೆಯೂ ಹೂತಿರುವ ಪಾವಕಕ್ಕೂ ಸಂಬಂಧ ಬರುವುದು ಒಳಗೊಳ್ಳುವ ಅರ್ಥವನ್ನು ಗಮನಿಸಿದಾಗ ಮಾತ್ರ. ಹಾಗಾಗಿ, ಶಿಲೆಯೊಳಗೆ ಸದಾಸಾಧ್ಯವಿರುವ ಪಾವಕ, ನೀರಿನಲ್ಲಿ ಸದಾಸಾಧ್ಯವಿರುವ ಬಿಂಬ, ಬೀಜದಲ್ಲಿ ಸದಾಸಾಧ್ಯವಿರುವ ವೃಕ್ಷ, ಶಬ್ದದಲ್ಲಿ ಸದಾಸಾಧ್ಯವಿರುವ ನಿಶ್ಶಬ್ದದಂತೇ, ಶರಣರು ಗುಹೇಶ್ವರನೊಳಗೇ ಇರುವ ಅಂಶವಾಗಿ ಸಾಬೀತಾಗುತ್ತಾರೆ.