ಮನಸೆಂಬ ಕಪಾಟು

ಮನಸೆಂಬ ಕಪಾಟು

ಮನಸೆಂಬ ಕಪಾಟು

 

ಎಷ್ಟು ಮುಕ್ತವಾಗಿ ಇರಬಲ್ಲುದೋ ಅಷ್ಟೇ ಭದ್ರ ಕಪಾಟಾಗುವ ನನ್ನ ಮನಸ್ಸಿನ ಬಗ್ಗೆ ಅದೆಷ್ಟು ಸಲ ನನಗೆ ಸೋಜಿಗವಾಗಿದೆ! ಎಲ್ಲವನ್ನು ಎಷ್ಟು ಸಲೀಸಾಗಿ ಇಲ್ಲಿ ಅವಿತಿಡಬಹುದು! ಒಮ್ಮೊಮ್ಮೆ ಅಲ್ಲಿಟ್ಟವನೇ ಅದನ್ನು ಮರೆತು ಮತ್ತೆ ಯಾವಾಗಲೋ ಅದನ್ನು ಹೆಕ್ಕಿ- ಬೆಳಕಿಗೆ ತಂದು... ನನಗೆ ಕಡಲೆಕಾಯಿಗಳ ತೋಡಿ ತಂದು ಹುಲ್ಲಿನ ನಡುವೆ ಜಾಗ ಮಾಡಿ ಬಚ್ಚಿಟ್ಟ ಕಾಗೆಯ ನೆನಪು. ಬಾಲ್ಯದಲ್ಲಿ ಆ ಕಾಯಿಗಳನ್ನು ನಾವು ಕದ್ದುಬಿಡುತ್ತಿದ್ದೆವು. ಆಗ ನಮಗೆ ಪಾಪ ಪ್ರಜ್ಞೆಯೇನೂ  ಕಾಡುತ್ತಿರಲಿಲ್ಲವೆನ್ನಿ. ಈಗಾದರೆ ಅದನ್ನು ಹುಡುಕಾಡುತ್ತಿರುವ ಕಾಗೆಯ ಚಿತ್ರ ಮನಸ್ಸಿಗೆ ಬಂದೀತು.  ಅದು ತನ್ನ ಮರಿಗೆ ಕಡಲೆಕಾಯಿ ತರುವೆನೆಂದು ಅದು ಹೇಳಿ ಬಂದಿದ್ದರೆ? ಎಂಬ ದುಃಖ ಮೂಡೀತು. 

 

ಆದರೆ ಯಾರೂ ಒಡೆಯದ, ಯಾರ ಬಳಿಯು ಪಾಸ್ ವರ್ಡ್ ಇರದ ಈ ಮನಸಿನ ಕಪಾಟಿನ ಬಾಗಿಲ ತೆರೆಯುವುದೆಂದರೇನು? ಅಲ್ಲಿನ ಗಾಢ ಅಂಧಕಾರದಲ್ಲಿ ಏನನ್ನಾದರೂ ಹುಡುಕುವುದೇನು ಸುಲಭವೇ? ಅದೆಷ್ಟು ಸಾವಿರ ಅನಂತವೆಂಬಂತೆ ತೋರುವ ಕಡಲುಗಳಿಗಿಂತ ವಿಸ್ತಾರವಾಗಿದೆ? ಅದರ ಧಾರಣ ಶಕ್ತಿ ಎಷ್ಟು ಅಗಾಧ! ಇಂತಹ ಸೌಲಭ್ಯವೇ ಮನುಷ್ಯ ಇಷ್ಟು ನಿಗೂಢನಾಗಲು ಕಾರಣವೋ, ಈ ಅವಕಾಶದಿಂದ ಮಾತ್ರವೇ ಮನುಷ್ಯ ಪ್ರಚಂಡ ಮಾಯಾವಿ ಆಗಿಬಿಟ್ಟು ಸಾಚಾ ಭ್ರಷ್ಟನಾಗಲು ಸಾಧ್ಯವಾಯಿತೋ.

 

ನೆನಸಿಕೊಂಡರೆ ಆಶ್ಚರ್ಯವಾಗುತ್ತದೆ. ಹೇಳದೆ ಉಳಿಸಿಕೊಂಡಿರುವ ಮಾತುಗಳನ್ನ ನೆನೆದಾಗ, ಆಡಿದ ಮಾತುಗಳನ್ನು  ಸರಿಯಾಗಿ ಹೇಳಿದ್ದರೆ ಹೇಗಿರುತ್ತಿತ್ತೆಂದು ಕಲ್ಪಿಸಿಕೊಂಡಾಗ. ನಾನೇನೋ ಸಿಂಪಿಯ ರೂಪದಲ್ಲಿ ಚಿಪ್ಪು ನಿರ್ಮಿಸಿ ಏನೇನೆಲ್ಲವನ್ನೂ ಬೈತಿಟ್ಟಿದ್ದೇನೆ. ಒಳಗಿರುವುದು ಮುತ್ತೇನು? ಕಂಡ ಕನಸುಗಳೆಷ್ಟು ಮತ್ತು ಅವು ಎಂಥವು! ಅವುಗಳಲ್ಲಿ ಹೇಳದೆ ಉಳಿಸಿದ್ದು ಎಷ್ಟು ಮತ್ತು ಏಕೆ? ನಿಜವಾಗಲು ಹೇಳಲೇಬೇಕಾದ ಅನಿವಾರ್ಯತೆ ಇದ್ದಾಗಲು ನಾವು ಆಡಿ ಕೆಡಲು(?) ತಯಾರಾದೆವೇನು? ಬಂಧನದ ವ್ಯವಸ್ಥೆಯಲ್ಲಿ ಸತ್ಯದ ಮಾತು ಕೂಡಾ ಸ್ವೇಚ್ಛೆಯೆಂದು ಪರಿಗಣಿಸಲ್ಪಡುತ್ತದೆ. 

 

ಇದೊಂದಾದರೆ ಇನ್ನೊಂದನ್ನಿಲ್ಲಿ ಹೇಳಬಹುದು ಎನ್ನಿಸುತ್ತದೆ.

1988ರ ಫೆಬ್ರುವರಿ. ನಾನು ಮಂಗಳೂರಿನಲ್ಲಿ ಒಂದು ವಾರ ನಡೆದ ತರಬೇತಿ ಕಾರ್ಯಕ್ರಮಕ್ಕೆಂದು ಹೋಗಿದ್ದೆ. ನನಗೆ ಜೊತೆ ವೇಣು ಎಂಬ ನನ್ನ ಗೆಳೆಯ. ಕಡಲ ತೀರಕ್ಕೆ ಅಡ್ಡಾಡಿ ಬರಲು ಒಂದು ಸಂಜೆ ಸೂರ್ಯಾಸ್ತದ ಸಮಯದಲ್ಲಿ ಹೋದೆವು.  ಎಲ್ಲ ನೋಡಿ ಬರುವಾಗ ದಾರಿಯಲ್ಲಿ ಒಬ್ಬ ತೀರಾ ದುರ್ಬಲನೂ ವಿಕಲಾಂಗನೂ ಅದ ಒಬ್ಬ ಹುಡುಗನನ್ನು ನೋಡಿದೆವು.  ಥಟ್ಟನೆ ನೆನಪಿನ ದಾರ ಹಿಡಿದು ಹತ್ತು ವರ್ಷಗಳ ಹಿಂದೆ ಕಂಡ ಅವನನ್ನು ಗುರುತು ಹಿಡಿದೇಬಿಟ್ಟ ವೇಣು ಅಲ್ಲೆಲ್ಲೋ ಇದ್ದ ಒಬ್ಬಾಕೆಯ ಬಳಿಹೋಗಿ ಅರ್ಧ ತಾಸು ಮಾತಾಡಿದ. ಅವನು ಮತ್ತು ಆಕೆ ಅಷ್ಟು ಆತ್ಮೀಯವಾಗಿ ಮಾತಾಡುತ್ತಲಿರುವಾಗ ಒಂದುಬಗೆಯ ಉದಾಸೀನತೆಯಲ್ಲಿ ಪಕ್ಕ ನಿಂತಿದ್ದ ಆಕೆಯ ಗಂಡನನ್ನು ಇದಾವುದರ ಪರಿವೆಯೇ ಇರದಂತೆ ಹುಚ್ಚು ಹುಚ್ಚಾಗಿ ಅಲ್ಲಿ ಇಲ್ಲಿ ನೋಡುತ್ತಿದ್ದ ಆ  ಹುಡುಗನನ್ನು ಗಮನಿಸಿದೆ. ಇದೆಲ್ಲ ಎಷ್ಟು ನನ್ನ ಕಲಕಿತೆಂದರೆ ಅದೊಂದು ಕಥೆಯಾಗಿ ನನ್ನಲ್ಲಿ ಬೆಳೆಯತೊಡಗಿತು. ಆದರೆ ನಾನು ಆ ಕಥೆಯನ್ನು ಬರೆಯಲಿಲ್ಲ. ಕಾರಣವೆಂದರೆ ಆಕೆ, ಅವಳ ಗಂಡ, ಮತ್ತವಳ ಮಗನೂ, ವೇಣುವೂ ಒಂದು ಸುಳಿಯಲ್ಲಿ ಸಿಕ್ಕಿಬಿಡುವರೆಂಬ ಭಯ ನನ್ನಲ್ಲಿ ಹುಟ್ಟಿಬಿಟ್ಟಿತು.

 

ಇದು ಆತ್ಮ ನಿಯಂತ್ರಣದ ಮಾತೇ? ತಮಗೆ ಆಗದವರ ಬಗ್ಗೆ ಕವಿತೆ ಬರೆಯಬಹುದೇ, ಕಥೆ ಹೊಸೆದು ಪ್ರಕಟಿಸಬಹುದೇ? ಒಬ್ಬರು ಬರೆದದ್ದು ತನ್ನ ಬಗ್ಗೆ ಎಂದು ಭಾವಿಸಬಹುದೇ?

ಇದರ ಬಗ್ಗೆ ಟಿಪ್ಪಣಿ ಮಾಡಿಕೊಂಡಿದ್ದು ತುಂಬಾ ಹಿಂದೆ. ಅದರ ಕೊನೆಗೆ ಬರೆದಿದ್ದೆ: ಒಮ್ಮೊಮ್ಮೆ ಪೆನ್ನಲ್ಲಿ ಇಂಕು ಇಲ್ಲದಿರುವುದೂ ಒಂದುಬಗೆ ವರವೇನೋ ಎಂದು.

ಆರ್ ವಿಜಯರಾಘವನ್‌

21.08.2006

Rating
No votes yet