ದೂರದ ಹರ್ಯಾಣಾದಿಂದ ಧಾರವಾಡಕ್ಕೆ ಪ್ರವಾಸಿಗ -Black Ibis ಭೇಟಿ!

ದೂರದ ಹರ್ಯಾಣಾದಿಂದ ಧಾರವಾಡಕ್ಕೆ ಪ್ರವಾಸಿಗ -Black Ibis ಭೇಟಿ!

ಬರಹ

"ಕರುಳರಿಯದ ಸಂಗತಿಯನ್ನು ಕಣ್ಣು ಗುರುತಿಸುವುದಿಲ್ಲ" ಹಿರಿಯರನೇಕರ ಅನುಭವದ ಮಾತು.

ಆದರೆ, ನಮ್ಮ ಛಾಯಾ ಪತ್ರಕರ್ತರು ಯೋಚಿಸುವುದು ಬಹುಶ: ಹೃದಯದಿಂದ. ಹಾಗಾಗಿ ಅವರ ಕರುಳು ಹಲವಾರು ವಿಷಯಗಳನ್ನು ಸುಪ್ತವಾಗಿ ಅರಿತಿರುತ್ತದೆ. ಅಗೆದು, ಮೊಗೆದು ಆಳ ಒಳ ನೋಟಗಳ ಸುದ್ದಿ ಸುಳಿವು ದೊರಕಬೇಕಾದರೆ ಅವರ ಸಾಂಗತ್ಯ ಅವಶ್ಯ. ಅವರ ಕಣ್ಣುಗಳ ಮೂಲಕ ಬಹುಶ: ಈ ಜಗತ್ತನ್ನು ನೋಡುವ ಅಕ್ಷರ ‘ಬ್ರಹ್ಮರು’ ನಾವು ನುಡಿಚಿತ್ರ ಬರಹಗಾರರು ಅಂದರೂ ಅತಿಶಯೋಕ್ತಿಏನಲ್ಲ!

ಕರಿಯನ್ನು ಕನ್ನಡಿಯಲ್ಲಿ ಹಿಡಿದು ತೋರಿಸಬಲ್ಲ ಚಾಕ ಚಕ್ಯತೆಯ ಈ ಛಾಯಾಪತ್ರಕರ್ತರ ಸಾವಿರಾರು ಶಬ್ದಗಳಿಗೆ ಸಮನಾದ ಫೊಟೋಗಳಿಗೆ ಸರಿಗಟ್ಟುವ ರೀತಿಯಲ್ಲಿ ನುಡಿಚಿತ್ರ ಬರೆಯಲಾಗದೇ ಸಾಕಷ್ಟು ಸಾರಿ ನಾನು ಪೇಚಾಡಿದ್ದಿದೆ. ಹಾಗೆಯೇ ಕೇವಲ ಫೊಟೋ ತೋರಿಸಿ ‘ಮಾಹಿತಿ ಹುಡುಕಿ ಬರೆದು ಬಿಡಿ’ ಎಂದು ಅಪ್ಪಣೆ ಸಹ ನನ್ನ ಮಿತ್ರರು ಕೊಡಿಸಿದ ಉದಾಹರಣೆಗಳಿವೆ. ನಿನ್ನೆ ಕೂಡ ಛಾಯಾಪತ್ರಕರ್ತ ಮಿತ್ರ ಕೇದಾರನಾಥ ವಿಚಿತ್ರ ಪಕ್ಷಿಯೊಂದರ ಫೊಟೋ ಹೊಡೆದು..ಹಾಗೆಯೇ ಮಾಡಿಬಿಟ್ಟರು. ಧಾರವಾಡದ ಭೂಸಪ್ಪ ಚೌಕ ಹತ್ತಿರದ ರೌನಕಪುರ್ ಮಸ್ಜಿದ್ ಬಳಿಯ ತೆಂಗಿನ ಗಿಡಗಳಲ್ಲಿ ಸುಮಾರು ೧೨ ಕೊಕ್ಕರೆ ಜಾತಿಯ ಅಪರೂಪದ ಪಕ್ಷಿಗಳು ಕಂಡು ಬಂದಿದ್ದವು. ಈ ಸುದ್ದಿ ತಲುಪುತ್ತಲೇ ಮಿತ್ರ ಕೇದಾರನಾಥ್ ಶಸ್ತ್ರ ಸನ್ನದ್ಧರಾಗಿ ಶಾಸ್ತ್ರ ಮುಗಿಸಿಯೇ ಬಿಟ್ಟರು!

ಈಗ ನಾನೇನು ಮಾಡಬೇಕು? ಕೆಲ ಮಿತ್ರರಿಗೆ ಆ ಛಾಯಾಚಿತ್ರ ರವಾನಿಸಿದೆ. ಅವರುಗಳಲ್ಲಿ ನನ್ನ ಸಹೋದ್ಯೋಗಿ ಮಿತ್ರ ದೀಪಕ್ ಕರಾಡೆ ಛಾಯಾಚಿತ್ರ ನೋಡಿದ್ದೇ ತಡ ಅಂತರ್ಜಾಲ ತಡಕಾಡಿ ಮಿಂಚಂಚೆಯಲ್ಲಿ ಮಾಹಿತಿ ರವಾನಿಸಿದರು. ದಕ್ಷಿಣ ಏಷಿಯಾ ಭಾಗಗಳಾದ ಭಾರತ, ಬಾಂಗ್ಲಾದೇಶ, ಬ್ರಿಟೀಶ್ ಹಾಗು ಭಾರತದ ಸಮುದ್ರ ತಟಗಳು, ಭೂತಾನ್, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ್, ಶ್ರೀಲಂಕಾ, ಅಫಘಾನಿಸ್ತಾನ್, ಮಯನ್ಮಾರ್, ಟಿಬೇಟ್ ಹಾಗು ಇರಾನ್ ಗಳಲ್ಲಿ ಈ ವಿಶಿಷ್ಠ ಕೊಕ್ಕರೆಯ ಇರುವಿಕೆಯನ್ನು ಗುರುತಿಸಿ, ಅಲ್ಲಿನ ಪಕ್ಷಿ ಶಾಸ್ತ್ರಜ್ಞರು ದಾಖಲಿಸುವ ಪ್ರಯತ್ನ ಮಾಡಿದ್ದಾರೆ.

ಆ ಅಪರೂಪದ ಪಕ್ಷಿಯನ್ನು Black Ibis ಎಂದು ಕರೆಯಲಾಗುತ್ತದೆ. Pseudibis Papillosa ಎಂಬ ವೈಜ್ಞಾನಿಕ ಹೆಸರಿನಿಂದ ಪಕ್ಷಿ ಶಾಸ್ತ್ರಜ್ಞರು ಗುರುತಿಸುವ ಈ ಕೊಕ್ಕರೆ ಉತ್ತರ ಭಾರತದ ಗುಜರಾತ್ ಹಾಗು ಹರ್ಯಾಣಾದಿಂದ ದಕ್ಷಿಣ ಭಾರತಕ್ಕೆ ವಲಸೆ ಬಂದ ಪಕ್ಷಿ. ಹರ್ಯಾಣಾದಲ್ಲಿ ಈ ಪಕ್ಷಿಗಳನ್ನು ಹೇರಳವಾಗಿ ಕಾಣಬಹುದು. ನಮ್ಮ ಭಾಗದ ಬೆಳ್ಳಕ್ಕಿಗಳಂತೆ ಅವು ಅಲ್ಲಿ ಸಾಮಾನ್ಯ ಕೊಕ್ಕರೆಗಳು. ಕಪ್ಪಾದ ಉದ್ದ ಕೊಕ್ಕು, ತಲೆಯ ಮೇಲೆ ಕೇಸರಿ ಬಣ್ಣದ ತುರಾಯಿ, ಹಾಗು ಕೆಂಪಾದ ವೃತ್ತದ ಮಧ್ಯೆ ಕಡು ಕಪ್ಪು ಕಣ್ಣುಗಳನ್ನು ಹೊಂದಿದ ಪಕ್ಷಿ. ರೆಕ್ಕೆಯ ಮೇಲೆ ತುಸು ಬಿಳಿಯಾದ ಪುಚ್ಛಗಳನ್ನು ಹೊಂದಿದ್ದು, ನೀಲಿ ರೆಕ್ಕಗಳ ಆಕರ್ಷಕ ಕೊಕ್ಕರೆ. ಇಡಿ ಮೈ ಬೂದು ಬಣ್ಣದ್ದಾಗಿದ್ದು, ಕಾಲುಗಳು ಬಲಿಷ್ಠವಾಗಿದ್ದು ಗುಲಾಬಿ ಬಣ್ಣ ಹೊಂದಿವೆ.

ಉಳಿದ ಕೊಕ್ಕರೆಗಳಂತೆ ಇದು Acquatic ಪ್ರದೇಶಗಳಲ್ಲಿ ವಾಸಿಸಲು ಇಷ್ಟಪಡದ ಪಕ್ಷಿ ಎಂಬುದೇ ಸೋಜಿಗ. ೬ ರಿಂದ ೧೦ ಪಕ್ಷಿಗಳ ಗುಂಪು ಕಟ್ಟಿಕೊಂಡು ಸಾವಿರಾರು ಕಿಲೋ ಮೀಟರ್ ಗಳಷ್ಟು ದೂರ ಆಹಾರ ಅರಸಿ ವಲಸೆ ಬರುವ Ibis ಕೊಕ್ಕರೆ ಅದು. ಗಂಡು ಹಾಗು ಹೆಣ್ಣು ಕೊಕ್ಕರೆಗಳಲ್ಲಿ ಸಾಕಷ್ಟು ಸಾಮ್ಯತೆಗಳಿದ್ದು, ಪ್ರತ್ಯೇಕವಾಗಿ ಗುರುತಿಸುವುದು ಕಷ್ಟ. ಅತ್ಯಂತ ಗೊಗ್ಗರು ಧ್ವನಿಯಲ್ಲಿ ಈ ಕೊಕ್ಕರೆ ಕೂಗುತ್ತದೆ. ಆದರೆ ಮಾರ್ಚನಿಂದ ಅಕ್ಟೋಬರ್ ತಿಂಗಳ ವರೆಗೆ ಸಂತಾನಾಭಿವೃದ್ಧಿಯಲ್ಲಿ ತೊಡಗುವ ಈ ಪಕ್ಷಿ ಮತ್ತೆ ಉತ್ತರ ಭಾರತಕ್ಕೇ ತೆರಳಿ ಅಲ್ಲಿ ಗೂಡು ಕಟ್ಟುತ್ತದೆ! ಗೂಡುಗಳು ಮಾತ್ರ ಅತ್ಯಂತ ಎತ್ತರದ ಗಿಡದ ಮೇಲೆ. ಆದರೆ ಈ ಕೊಕ್ಕರೆಯ conservation status - Least Concern ಎಂದು ವಿಜ್ಞಾನಿಗಳು ದಾಖಲಿಸಿರುವುದು ಗಮನಾರ್ಹ.

ಕಪ್ಪೆ ಚಿಪ್ಪು, ಮೀನು, ಕಪ್ಪೆ, ಹುಳು ಹುಪ್ಪಡಿ, ಇತರೆ ಪಕ್ಷಿಗಳ ಗೂಡುಗಳಲ್ಲಿನ ಮೊಟ್ಟೆ, ಮರಿ ಹಾಗು ಭತ್ತದ ಗದ್ದೆಯಲ್ಲಿನ ಮಿಡತೆಗಳು ಹಾಗು ಭತ್ತದ ಚಿಗುರು, ಹಾವಸೆ, ಪಾಚಿ Black Ibis ಕೊಕ್ಕರೆಯ ಇಷ್ಟದ ಆಹಾರ. ಬಹುಶ: ಕೆಲಗೇರಿ ಕೆರೆ ಅಥವಾ ನವಿಲೂರು ಕೆರೆಗಳ ಕಡೆ ಈ ಮೃಷ್ಟಾನ್ನ ಲಭ್ಯ. ಹಾಗಗಿ ಅವುಗಳ ಸದ್ಯದ ಠಿಕಾಣಿ ಅಲ್ಲಿ ಇರಬಹುದೇ ಎಂದು ಪರೀಕ್ಷಿಸಲು ಕೇದಾರ ಅಣ್ಣ ಕ್ಯಾಮೆರಾ ಸಜ್ಜಿತ ಯೋಧನಾಗಿ ಪರ್ಯಟನೆ ಕೈಗೊಂಡಿದ್ದಾರೆ. ಅವರ ಕಣ್ಣು ಹಾಗು ಕರುಳು ಈ ಸಂಗತಿ ಅರಿತಿದ್ದರಿಂದ ಉತ್ತರ ಭಾರತದ ಹರ್ಯಾಣಾದಿಂದ ದಕ್ಷಿಣ ಭಾರತದ ಸಾಂಕೃತಿಕ ರಾಜಧಾನಿ ಧಾರವಾಡಕ್ಕೆ ಅಪರೂಪಕ್ಕೆ ಎಂಬಂತೆ ಸಹ ಕುಟುಂಬ, ಪರಿವಾರ ಭೇಟಿ ನೀಡಿದ ಶ್ರೀ ಹಾಗು ಶ್ರೀಮತಿ Black Ibis ನಮಗೆ ಪರಿಚಿತರಾದರು.

ನಗರಕ್ಕೆ ಬಂದವರು ಕಾಲಂನಲ್ಲಿ ಪ್ರಕಟಿಸುವಷ್ಟು ಈ ಸುದ್ದಿಗೆ ಗ್ರಾಸ ಒದಗಿಸಿದ್ದಕ್ಕಾಗಿ ಇಬ್ಬರಿಗೂ ನಮ್ಮ ಪುಟ್ಟ ಥ್ಯಾಂಕ್ಸ್!