ಹನ್ನೆರಡು ಉಪಯುಕ್ತ ಸ್ವತಂತ್ರ ತಂತ್ರಾಂಶಗಳು, ಮತ್ತೊಂದು

ಹನ್ನೆರಡು ಉಪಯುಕ್ತ ಸ್ವತಂತ್ರ ತಂತ್ರಾಂಶಗಳು, ಮತ್ತೊಂದು

ಬರಹ

"The best things in life are free." ಎಂಬ ಮಾತಿದೆ ಇಂಗ್ಲೀಷಿನಲ್ಲಿ. ನಮ್ಮೆಲ್ಲರ ಸುದೈವವೋ ಏನೋ, ತಂತ್ರಾಂಶ ಜಗತ್ತಿನಲ್ಲಿ ಕೂಡ ಈ ಮಾತು ನಿಜವಾಗಿದೆ. ಎಷ್ಟೋ ಉತ್ತಮ ತಂತ್ರಾಂಶಗಳನ್ನು ನೀವು ಹಣ ಕೊಟ್ಟು ಕೊಳ್ಳಬೇಕಿಲ್ಲ, ಸಂಪೂರ್ಣ ಮುಫತ್ತಾಗಿ ನಿಮಗೆ ಬಳಸಲು ಸಿಗುತ್ತದೆ!

ಹೀಗೇ ಒಂದೂ ಪೈಸೆ ಖರ್ಚು ಮಾಡಿಸದೆ ಸಿಗುವ ಉತ್ತಮ ತಂತ್ರಾಂಶಗಳಲ್ಲಿ ಸಿಂಹಪಾಲು ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳದ್ದು (free and open source software). ತಂತ್ರಾಂಶ ಪಡೆದು ಬಳಸುವವರಿಗೆ ಬಳಕೆಗೆ ಅನುಮತಿ ನೀಡುವುದಷ್ಟೇ ಅಲ್ಲದೆ ಅದನ್ನು ತಮಗೆ ಬೇಕಿರುವಂತೆ ಬದಲಾಯಿಸಿಕೊಳ್ಳುವ ಸ್ವಾತಂತ್ರ್ಯವನ್ನೂ ನೀಡುವ ತಂತ್ರಾಂಶಗಳಿವು. ದುಡ್ಡು ಕೊಟ್ಟು ಮನೆ ಖರೀದಿಸಿದವನಿಗೆ, "ನಿನ್ನದೇ ಮನೆಯಪ್ಪ ನಿನಗಿಷ್ಟ ಬಂದಂತೆ ಬದಲಾಯಿಸಿಕೊಳ್ಳುವ ಸ್ವಾತ್ರಂತ್ರ್ಯ ನಿನಗಿದೆ" ಎನ್ನುವಷ್ಟು ಸಹಜವಾದ ಸಿದ್ಧಾಂತ ಇದರ ಹಿಂದಿರುವುದು. ತಂತ್ರಾಂಶಗಳನ್ನು ಬಳಸುವವರ ಅದೃಷ್ಟ, ಇಂತಹ ಹಲವು ತಂತ್ರಾಂಶಗಳು ನಿಮಗೆ ಆ ಸ್ವಾತಂತ್ರ್ಯ ನೀಡುವುದರ ಜೊತೆಜೊತೆಗೇ ಉಚಿತವಾಗಿ ಕೂಡ ಸಿಗುತ್ತದೆ!

ಅಂತಹ ಕೆಲವು ಉತ್ತಮ ತಂತ್ರಾಂಶಗಳ ಪರಿಚಯ ಮಾಡಿಕೊಳ್ಳೋಣ ಬರ್ತೀರ? ಕಂಪ್ಯೂಟರ್ ಬಳಕೆದಾರನ ದಿನಬಳಕೆಗೆ ಬೇಕಾದ ಹದಿಮೂರು ಅತ್ಯುತ್ತಮ ತಂತ್ರಾಂಶಗಳು ಇಗೋ ನಿಮ್ಮ ಮುಂದಿದೆ.


ಓಪನ್ ಆಫೀಸ್ ಡಾಟ್ ಓ ಆರ್ ಜಿ (Openoffice.org):
ಕಂಪ್ಯೂಟರಿನಲ್ಲಿ ಹೆಚ್ಚಿನ ಮಟ್ಟಿಗೆ ಬಳಕೆಯಾಗುವ ತಂತ್ರಾಂಶಗಳಲ್ಲಿ ಆಫೀಸ್ ಆಟೋಮೇಶನ್ ತಂತ್ರಾಂಶಗಳದ್ದು ಅತಿ ದೊಡ್ಡ ಪಾಲು. ಅಂದರೆ ಆಫೀಸಿನ ಕೆಲಸ: ಲೆಕ್ಕ, ಪತ್ರ, ದಾಖಲೆಗಳು ಮುಂತಾದವುಗಳನ್ನು ಸುಲಭವಾಗಿಸುವ ತಂತ್ರಾಂಶ. ಆಫೀಸ್ ತಂತ್ರಾಂಶ ಎಂದರೆ 'ಮೈಕ್ರೊಸಾಫ್ಟ್ ಆಫೀಸ್' ಎಂದೇ ಬಾಯ್ಮಾತಾಗಿರುವ ಸಮಯದಿಂದ ಅದಕ್ಕೆ ಎದುರಾಳಿಯಾಗಿ ರೂಪುಗೊಳ್ಳುತ್ತ ಬರುತ್ತಲೇ ಸ್ವತಂತ್ರ ತಂತ್ರಾಂಶವಾಗಿಯೂ ಉಳಿದಿರುವ ಬಹುಮುಖ್ಯ ತಂತ್ರಾಂಶ ಓಪನ್ ಆಫೀಸ್.

ಉಳಿದ ಯಾವುದೇ ಆಫೀಸ್ ತಂತ್ರಾಂಶಗಳಿಗಿಂತ ಕಡಿಮೆಯಿಲ್ಲ ಎಂಬಂತೆ ರೂಪುಗೊಂಡಿದೆ.

ಇಂದು ಲಭ್ಯವಿರುವ ಅತ್ಯುತ್ತಮ ಆಫೀಸ್ ತಂತ್ರಾಂಶಗಳಲ್ಲಿ ಇದೂ ಒಂದು.

ಈ ಯೋಜನೆಗೆ ಸಹಾಯ ಧನ ಹಾಗೂ ಬೆಂಬಲ ಭಾರತೀಯ ಮೂಲದ ಉದ್ಯಮಿ ವಿನೋದ್ ಖೋಸ್ಲ ಸಹ-ಸಂಸ್ಥಾಪಕರಾದ ಸನ್ ಮೈಕ್ರೋಸಿಸ್ಟಮ್ ಕಂಪೆನಿಯಿಂದ ಬರುತ್ತಿರುವುದಲ್ಲದೆ ಯೋಜನೆಯ ಸುತ್ತ ಇದನ್ನು ಬಳಸುವವರ ಸಮೂಹ, ಇದನ್ನು ಡೆವಲಪ್ ಮಾಡುವವರ ಸಮೂಹ - ಇವರೆಲ್ಲರನ್ನೂ ಒಟ್ಟಾಗಿಸಿದ ಉತ್ತಮ ಸಮುದಾಯ ಕೂಡ ರೂಪುಗೊಂಡಿದೆ!

http://www.openoffice.org/

ಮಿರೋ ಎಂಬ ಮೀಡಿಯ ಕಿಟಕಿ


ಮಿರೋ ಅಂತರ್ಜಾಲದ ಟಿವಿ ತಂತ್ರಾಂಶ, ಅಂದರೆ ಅಂತರ್ಜಾಲದಲ್ಲಿ ಪ್ರಸಾರವಾಗುವ, ವಿತರಣೆಯಾಗುವ ಟಿವಿ ಕಾರ್ಯಕ್ರಮಗಳನ್ನು ನೋಡಲು ಬಳಸಬಹುದಾದ ತಂತ್ರಾಂಶ. ಪಾರ್ಟಿಸಿಪೇಟರಿ ಕಲ್ಚರ್ ಫೌಂಡೇಶನ್ ಎಂಬ ಅಮೇರಿಕೆಯ ಸಂಸ್ಥೆಯಿಂದ ನಡೆಸಿಕೊಂಡುಬರಲಾಗುತ್ತಿರುವ ಈ ಯೋಜನೆ ಮತ್ತೊಂದು ಉತ್ತಮ ಸ್ವತಂತ್ರ ತಂತ್ರಾಂಶ ಯೋಜನೆ.

ಯೂಟ್ಯೂಬ್ (Youtube.com) ಬಳಸಿದ್ದೀರಲ್ವ? ಅಂತರ್ಜಾಲದಲ್ಲಿ ಜನಪ್ರಿಯತೆಯ ಉತ್ತುಂಗಕ್ಕೇರಿರುವ ಸೇವೆ ಅದು. ಜಗತ್ತಿನಾದ್ಯಂತ ಜನ ತಮ್ಮ ವೀಡಿಯೋ ತೀರ ಸುಲಭವಾಗಿ ಹಂಚಿಕೊಳ್ಳಬಹುದಾದ ತಾಣ. ಯೂಟ್ಯೂಬ್ ಮತ್ತು ಅದೇ ರೀತಿಯ ಹಲವು ಇತರೆ ತಾಣಗಳಲ್ಲಿ ಬೇಕುಬೇಕಾದ ವೀಡಿಯೋ ಹುಡುಕಿ ನೇರ ವೀಕ್ಷಿಸಬಹುದು. ಯೂಟ್ಯೂಬ್ ಒಂದರಲ್ಲೇ ಪ್ರತಿ ನಿಮಿಷಕ್ಕೂ ಜಗತ್ತಿನೆಲ್ಲೆಡೆಯಿಂದ ೨೦ಘಂಟೆಗಳಷ್ಟು ವೀಡಿಯೋ ಅಪ್ಲೋಡ್ ಆಗುತ್ತಿದೆಯಂತೆ ಈಗಿನಂತೆ.

ಸಾಮಾನ್ಯವಾಗಿ ಯೂಟ್ಯೂಬ್ ಮುಂತಾದ ವೆಬ್ಸೈಟುಗಳಲ್ಲಿ ಲಭ್ಯವಿರುವ ವೀಡಿಯೋಗಳು ಅಲ್ಲೇ ನೇರ ನೋಡಲು ಮಾತ್ರ ಸಾಧ್ಯವಾಗುತ್ತದೆ, ಡೌನ್ಲೋಡ್ ಮಾಡಲು ಸಿಗದು. ಆದರೆ  ಮಿರೋ ಈ ತೊಂದರೆಯನ್ನು ಬಗೆಹರಿಸುತ್ತದೆ. ಇದು ಯೂಟ್ಯೂಬ್ ಮತ್ತು ಅದೇ ರೀತಿಯ ಹಲವು ವೆಬ್ಸೈಟುಗಳಿಂದ ವೀಡಿಯೋ ಡೌನ್ಲೋಡ್ ಮಾಡಿ ತೆಗೆದಿಟ್ಟುಕೊಳ್ಳುವ ಸೌಲಭ್ಯವನ್ನೂ ಒದಗಿಸುತ್ತದೆ. ಬೇಕಾದ ವೀಡಿಯೋ ಹುಡುಕಿ ಡೌನ್ಲೋಡ್ ಮಾಡಿಟ್ಟುಕೊಂಡು ಯಾವಾಗ ಬೇಕಾದರೂ ನೋಡಿಕೊಳ್ಳಬಹುದಾದ ಸೌಲಭ್ಯ ಇದರಲ್ಲುಂಟು. ಹೀಗೆ ಮಾಡುವುದರಿಂದ ಮತ್ತೆ ಮತ್ತೆ ಡೌನ್ಲೋಡ್ ಮಾಡುವ ಪ್ರಸಂಗ ಬರದು. ಇಂಟರ್ನೆಟ್ ಕನೆಕ್ಷನ್ ನಿಧಾನ ಇದ್ದವರಿಗಂತೂ ಇದು ಬಹಳ ಉಪಯುಕ್ತ ತಂತ್ರಾಂಶವಾಗಬಲ್ಲುದು!

http://www.getmiro.com/

ಫೈರ್ ಫಾಕ್ಸ್ (Firefox)
ಒಂದು ದಶಕದ ಹಿಂದೆ ಅಂತರ್ಜಾಲ ಬಳಸುತ್ತಿದ್ದವರಿಗೆ ನೆಟ್ ಸ್ಕೇಪ್ ನ್ಯಾವಿಗೇಟರ್ ಎಂಬ ತಂತ್ರಾಂಶ ಚಿರಪರಿಚಿತ. ಆಗ ಸಿಗುತ್ತಿದ್ದ ಅತ್ಯುತ್ತಮ ಬ್ರೌಸರ್ (ಅಂತರ್ಜಾಲದ ಪುಟಗಳನ್ನು ವೀಕ್ಷಿಸಲು ಬಳಕೆಯಾಗುವ ತಂತ್ರಾಂಶ) ಅದು!

ಅದೇ ಬ್ರೌಸರಿನ ಹೊಸ ಅವತಾರ ಮಾಝಿಲ್ಲಾ ಫೈರ್ ಫಾಕ್ಸ್. ಬೆಂಕಿಯುಗುಳುತ್ತ ಇಡೀ ಜಗತ್ತನ್ನು ಆಕ್ರಮಿಸುವ ನರಿ ಇದರ ಚಿಹ್ನೆ. ಹೊಸ ಪೀಳಿಗೆಯ ಬ್ರೌಸರುಗಳಲ್ಲಿ ಅತ್ಯುತ್ತಮ ಎನ್ನಲಾದ ತಂತ್ರಾಂಶ ಇದಾದರೂ ಇದರ ಪ್ರಾಮುಖ್ಯತೆ ಹೆಚ್ಚಾಗುವುದು ಇದರ ಸುತ್ತ ಇರುವ ಡೆವಲಪರ್ (ತಂತ್ರಾಂಶ ಅಭಿವೃದ್ಧಿ ಪಡಿಸುವವರ) ಸಮುದಾಯದಿಂದ! ಜಗತ್ತಿನ ವಿವಿಧ ದೇಶಗಳಿಂದ, ಕೋನೆ ಕೋನೆಗಳಿಂದ ತಂತ್ರಾಂಶ ಅಭಿವೃದ್ಧಿಪಡೆಸುವವರು ತಮ್ಮ ತಿಳುವಳಿಕೆಯನ್ನು ಯೋಜನೆಗೆ ಧಾರೆ ಎರೆದು ಈ ತಂತ್ರಾಂಶವನ್ನು ಅತ್ಯುತ್ತಮಪಡಿಸಿದ್ದಾರೆ. ಇದರಲ್ಲಿ ಭಾಗವಹಿಸಿ ಕಲೆಯುವ, ಅನುಭವ ಹೆಚ್ಚಿಸಿಕೊಳ್ಳುವ ಅವಕಾಶ ಅವರದ್ದಾದರೆ, ಈ ತಂತ್ರಾಂಶ ಬಳಸುವವರಿಗೆ ಅದರಿಂದ ನೂರಾರು ಸವಲತ್ತುಗಳನ್ನು ಬಳಸಬಹುದಾದ ಅವಕಾಶ! ಬೇರಾವುದೂ ಬ್ರೌಸರುಗಳಲ್ಲಿ ಇದರಲ್ಲಿರುವಷ್ಟು ಸವಲತ್ತುಗಳಿಲ್ಲ! ಜಗತ್ತಿನಾದ್ಯಂತ ಸುಮಾರು ೩೦% ಅಂತರ್ಜಾಲ ಬಳಕೆದಾರರಿಂದ ಬಳಸಲ್ಪಡುವ ಇದು ಇಂದು ಜಗತ್ತಿನ ಅತ್ಯುತ್ತಮ ಬ್ರೌಸರುಗಳಲ್ಲಿ ಒಂದು.

http://getfirefox.com
(ಈಗ ಕನ್ನಡದ ಆವೃತ್ತಿ ಕೂಡ ಲಭ್ಯ)

ಸ್ಟೆಲೇರಿಯಂ (Stellarium) – ಇನ್ನು ಪ್ಲಾನೆಟೇರಿಯಂ ದೂರವಿಲ್ಲ!


ಚಿಕ್ಕವರಿದ್ದಾಗ ಕರೆಂಟು ಹೋಯಿತೆಂದರೆ ಮಹಡಿಯ ಮೇಲೆ ಜಮಾಯಿಸುತ್ತಿದ್ದೆವು. ತಲೆ ಎತ್ತಿ ನೋಡಿದರೆ ಅಲ್ಲಿ ಕಾಣುವ ನಕ್ಷತ್ರಗಳು ಹುಟ್ಟುಹಾಕುತ್ತಿದ್ದ ಸೋಜಿಗ, ಅಮೂರ್ತ ಚಹರೆಗಳು ಬಣ್ಣಿಸಲಾಗದ ಅನುಭವ! ಆದರೀಗ ಬೆಂಗಳೂರಿನಂತಹ ನಗರಗಳಲ್ಲಿ ನಕ್ಷತ್ರಗಳಿರಲಿ ಆಗಸದಲ್ಲಿ ಸ್ವಲ್ಪ ಮಟ್ಟಿಗೆ ಕಣ್ಣಿಗೆ ಚೆನ್ನಾಗಿ ಬೀಳುವ ಗ್ರಹಗಳೇ ಹುಡುಕಲಾಗದಷ್ಟು ಬೆಳಕು, ರಾತ್ರಿಯ ಹೊತ್ತು. ಹಾಗಾದರೆ ನಕ್ಷತ್ರಗಳನ್ನು ನೋಡಬೇಕೆಂದರೆ ಪ್ಲಾನೆಟೇರಿಯಂಗೇ ಹೋಗಬೇಕೆ?
ಇಲ್ಲ! ನಿಮ್ಮ ಕಂಪ್ಯೂಟರನ್ನೇ ಪ್ಲಾನೆಟೇರಿಯಂ ಮಾಡಿಕೊಳ್ಳಬಹುದು!

ಸ್ಟೆಲೇರಿಯಂ ೨೦೦೧ರಲ್ಲಿ ಪ್ರಾರಂಭವಾದ ಯೋಜನೆ. ಫ್ರೆಂಚ್ ಆಸಕ್ತನೊಬ್ಬ ಪ್ರಾರಂಭಿಸಿದ ಯೋಜನೆ ಈಗ ತನ್ನದೇ ಆಸಕ್ತರ ಸಮುದಾಯದ ಸುತ್ತ ದಿನ ದಿನಕ್ಕೂ ಉತ್ತಮಗೊಳ್ಳುತ್ತ ಮುಂದುವರೆದಿದೆ. ಸುಮಾರು ೨೧೦ ಮಿಲಿಯನ್ ನಕ್ಷತ್ರಗಳ ಕೆಟೆಲಾಗ್ ಇದೆ ಈ ತಂತ್ರಾಂಶದಲ್ಲಿ. ಜೊತೆಗೆ ಮಕ್ಕಳಿಗೆ ತೋರಿಸಲು ಸುಲಭವಾಗುವಂತೆ ಪ್ರತಿಯೊಂದು ನಕ್ಷತ್ರ-ಪುಂಜಕ್ಕೂ ಒಂದೊಂದು ಸುಂದರವಾದ ಚಿತ್ರ ಬರೆದು ತೋರಿಸುತ್ತದೆ ಈ ತಂತ್ರಾಂಶ!

http://www.stellarium.org/

ವಿ ಎಲ್ ಸಿ ಮೀಡಿಯ ಪ್ಲೇಯರ್ (VLC media player)
ಗೆಳೆಯರಿಂದ ಪಡೆದ ಡಿವಿಡಿ ಅಥವ ಸಿಡಿ ತಂದು ಕಂಪ್ಯೂಟರಿನಲ್ಲಿ ಹಾಕಿರುತ್ತೀರಿ. ಆಗೊಮ್ಮೆ ಈಗೊಮ್ಮೆ ಅದು ಪ್ಲೇ ಆಗುವುದೇ ಇಲ್ಲ! ಮತ್ತೇನೋ ತಂತ್ರಾಂಶ ಡೌನ್ಲೋಡ್ ಮಾಡಿದರೆ ಪ್ಲೇ ಆಗುತ್ತದೆ ಎಂದು ಪರದೆಯ ಮೇಲೆ ಮೂಡಿಬಂದ ಸಂದೇಶ ನಿಮಗೆ ತಿಳಿಸಿಕೊಡುತ್ತದೆ. ಆದರೆ ಅದೇನು ಎಂದು ತಲೆಕೆಡಿಸಿಕೊಳ್ಳಲಾಗದೆ ನೀವು ಅದನ್ನು ಅಲ್ಲಿಗೇ ಬಿಟ್ಟುಬಿಡುತ್ತೀರಿ. ಅಥವ ಸಿಡಿ, ಡಿವಿಡಿ ವಾಪಸ್ ಕೊಟ್ಟು ಬಂದಿರುತ್ತೀರಿ!

ಈ ಸಮಸ್ಯೆಗೆ ಪರಿಹಾರ ವಿ ಎಲ್ ಸಿ ಮೀಡಿಯ ಪ್ಲೇಯರ್. ಜಗತ್ತಿನ ಎಲ್ಲ ಫಾರ್ಮ್ಯಾಟುಗಳನ್ನೂ ಪ್ಲೇ ಮಾಡಬಲ್ಲುದು ಎಂಬ ಹೆಗ್ಗಳಿಗೆ ಇದರದ್ದು.

http://www.videolan.org/vlc/

ಕ್ಲಾಮ್ ವಿನ್ (Clamwin)
ಕಂಪ್ಯೂಟರಿನಲ್ಲಿ ವೈರಸುಗಳ ಭಾದೆ ಯಾರಿಗೆ ಗೊತ್ತಿಲ್ಲ? ವೈರಸ್ ಎಂಬ ಹೆಸರಿಗೆ ತಕ್ಕಂತೆ ನಡೆಯುವ ತೊಂದರೆಗಳು ಬಂದಲ್ಲಿ ಕಂಪ್ಯೂಟರಿಗೆ ಔಷಧಿ ಏನೆಂದು ಹುಡುಕುತ್ತ ಕಳೆದ ಕಾಲವನ್ನು ಯಾರೂ ಮರೆಯಲಾರರು. ಏಕೆಂದರೆ ಅದು ತೆಗೆದುಕೊಳ್ಳುವ ಸಮಯ, ತಂದಿಡುವ ಗೋಳು ಕಂಪ್ಯೂಟರಿನಿಂದಲೇ ದೂರ ಓಡಿಸುವಷ್ಟು.

ನೂರಾರು anti-virus ತಂತ್ರಾಂಶಗಳಿರುವ ಈ ದಿನದಲ್ಲಿ ಉತ್ತಮ ಸ್ವತಂತ್ರ ತಂತ್ರಾಂಶವೊಂದು ಹೆಚ್ಚು ಗಮನಕ್ಕೆ ಬಾರದೆ ಉಳಿದಿದೆ. ಅದುವೇ ಕ್ಲಾಮ್ ವಿನ್.

ಅಂತರ್ಜಾಲದಲ್ಲಿ ಸರ್ವರುಗಳನ್ನು ನಿಭಾಯಿಸುವ ಇಂಜಿನೀಯರುಗಳಿಗೆ 'Clam AV' (clam  anti-virus) ಪರಿಚಯ ಇದ್ದೇ ಇರುತ್ತದೆ. ಸರ್ವರುಗಳಿಗೆ ವೈರಸ್ ಬಾರದಂತೆ ತಡೆಗಟ್ಟುವ ಬಹು ಸಮರ್ಥ ತಂತ್ರಾಂಶ ಅದು. ಅದರದ್ದೇ ಡೆಸ್ಕ್ ಟಾಪ್ ಹಾಗು ವಿಂಡೋಸ್ ಆವೃತ್ತಿ Clamwin.

http://www.clamwin.com/

ಇನ್ಫ್ರಾ ರೆಕಾರ್ಡರ್ (Infra-recorder)


ಸಿಡಿ, ಡಿವಿಡಿ ಬರೆಯುವುದನ್ನು (ಅಥವ 'burn' ಮಾಡುವುದನ್ನು) ತೀರ ಸರಳವಾಗಿಸುವ ತಂತ್ರಾಂಶ Infra-recorder. ಸರಳ ಇಂಟರ್ಫೇಸ್ ಮೂಲಕ ಗಮನ ಸೆಳೆಯುತ್ತದೆ. ಕಂಪ್ಯೂಟರಿನಲ್ಲಿ ಹಾಕಿಕೊಂಡಾಗ ಒಟ್ಟಾರೆ ತೆಗೆದುಕೊಳ್ಳುವ ಜಾಗ ಕೂಡ ಕಡಿಮೆ. ಹೆಚ್ಚು ಗೊಂದಲ ಬಯಸದ ಕಂಪ್ಯೂಟರ್ ಬಳಕೆದಾರರಿಗೆ ಉತ್ತಮ ಆಯ್ಕೆಯಾಗಬಲ್ಲದು, ಈ ತಂತ್ರಾಂಶ.

http://infrarecorder.org/

Inkscape (ಇಂಕ್ ಸ್ಕೇಪ್)
ಚೆಂದದ ಡಿಸೈನುಗಳು, ಸ್ಕೆಚ್ ಮಾಡುವುದು ಎಂದಿಗೂ ಇಷ್ಟು ಸುಲಭವಿರುತ್ತಿರಲಿಲ್ಲ! ಸಣ್ಣವರಿದ್ದಾಗ ಪೇಪರ್ ಪೆನ್ಸಿಲ್ ಹಿಡಿದು, ಡಿಸೈನುಗಳಿಗಾಗಿ ಜಿಯೋಮೆಟ್ರಿ ಬಾಕ್ಸಿನಲ್ಲಿ ಇದ್ದದ್ದನ್ನೆಲ್ಲ ಬಳಸಿ ಏನೆಲ್ಲ ಕಸರತ್ತು ಮಾಡುತ್ತಿದ್ದೆವು. ಈಗ ಅದೆಲ್ಲ ಏನೂ ಬೇಡ! ಜೊತೆಗೆ ಏನೆಲ್ಲ ಹೊಸತನ್ನು ಸೃಷ್ಟಿಸುವ ಸವಲತ್ತು ಒದಗಿಸಿಕೊಡುತ್ತದೆ ಈ ತಂತ್ರಾಂಶ. ಇದೊಂದು ವೆಕ್ಟರ್ ಗ್ರಾಫಿಕ್ಸ್ (Vector Graphics) ತಂತ್ರಾಂಶ. ಅಂದರೆ ವೆಕ್ಟರ್ ಗ್ರಾಫಿಕ್ಸ್ ಬಳಸಿ ಏನೆಲ್ಲ ಮಾಡಬಹುದೋ ಅದೆಲ್ಲ ಈ ತಂತ್ರಾಂಶದಲ್ಲಿ ಸಾಧ್ಯ.

ಆಮಂತ್ರಣ ಪತ್ರಿಕೆ, ವಿಸಿಟಿಂಗ್ ಕಾರ್ಡುಗಳಿಂದ ಹಿಡಿದು ಡಿವಿಡಿ ಕವರ್ರಿಗೆ ಬೇಕಾದ ಗ್ರಾಫಿಕ್ಸ್ ವರೆಗೂ ಎಲ್ಲ ಇದರಲ್ಲಿಯೇ ತಯಾರಿಸಬಹುದು!

ಇದರಿಂದ ತಯಾರಿಸಿದ ಗ್ರಾಫಿಕ್ಸ್ ನಿರ್ದಿಷ್ಟಮಾನಗಳನ್ನು ಅನುಸರಿಸಿ ತೆಗೆದಿಡಲ್ಪಡುತ್ತದಷ್ಟೇ ಅಲ್ಲದೆ ಹೆಚ್ಚಿನ ಜಾಗ ಕೂಡ ತೆಗೆದುಕೊಳ್ಳುವುದಿಲ್ಲ.

ಇಂಕ್ ಸ್ಕೇಪ್ ಸ್ವತಂತ್ರ ತಂತ್ರಾಂಶ ಯೋಜನೆಗಳಲ್ಲಿ ಪ್ರತಿಷ್ಟಿತ ಯೋಜನೆಗಳಲ್ಲೊಂದು. ಇದರಿಂದ ತಂತ್ರಾಂಶ ಜಗತ್ತಿನಲ್ಲಾಗಿರುವ ಬದಲಾವಣೆಗಳು ಪದಗಳಲ್ಲೂ ತಿಳಿಸಲಸಾಧ್ಯವೆನ್ನುವಷ್ಟು. ಇಂದಿಗೂ ಉತ್ತಮ ಗ್ರಾಫಿಕ್ಸ್ ಪ್ರಿಯರ ಸಮುದಾಯವೊಂದರ ಸುತ್ತ, ಅವರಿಂದಲೇ ಹೆಣೆಯಲ್ಪಡುತ್ತಿರುವ ಈ ತಂತ್ರಾಂಶ ಇದೇ ರೀತಿಯ ಮತ್ತೊಂದು ತಂತ್ರಾಂಶವನ್ನು ತಳಹದಿಯಾಗಿಸಿ ೨೦೦೩ರಲ್ಲಿ ಪ್ರಾರಂಭವಾದದ್ದು,

http://www.inkscape.org/

7Zip
ಕಂಪ್ಯೂಟರ್ ಬಳಸುವವರಲ್ಲಿ ಹೆಚ್ಚಿನವರಿಗೆ winzip ಪರಿಚಯ ಇದ್ದೇ ಇರುತ್ತದೆ. ಆ ತಂತ್ರಾಂಶ ಪ್ರಾರಂಭವಾದಂತೆಲ್ಲ ಕೊಡುವ ತೊಂದರೆಗೆ ರೋಸಿ ಹೋದವರು 7zip ಬಳಸಬಹುದು. 7Zip ಬೇರೆಲ್ಲ ಆರ್ಕೈವಿಂಗ್ (archiving) ತಂತ್ರಾಂಶಗಳು ಕೊಡುವ ಆಯ್ಕೆಗಳಿಗಿಂತ ಹೆಚ್ಚಿನ ಆಯ್ಕೆಗಳನ್ನು ಕೊಡುತ್ತದೆಯಲ್ಲದೆ ಉಳಿದ ಎಷ್ಟೋ ಇದೇ ರೀತಿಯ ತಂತ್ರಾಂಶಗಳಿಗಿಂತ ಗಾತ್ರದಲ್ಲಿ ಬಹು ಚಿಕ್ಕದು. ಇದು ತನಗಾಗಿ ಬಳಸುವ ಸಂಪನ್ಮೂಲ ಕೂಡ ಕಡಿಮೆ.

ಸ್ವತಂತ್ರ ತಂತ್ರಾಂಶಗಳ ಆಗರವಾದ sourceforge.net ಸಮುದಾಯದ ೨೦೦೭ ರ "ಉತ್ತಮ ಟೆಕ್ನಿಕಲ್ ಡಿಸೈನ್" ಹಾಗು "ಅತ್ಯುತ್ತಮ ಯೋಜನೆ" ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಯೋಜನೆ ಇದು. ಜಗತ್ತಿನ ಅತ್ಯುತ್ತಮ ಆರ್ಕೈವಿಂಗ್ ತಂತ್ರಾಂಶಗಳಲ್ಲೊಂದು!

http://www.7-zip.org/

GIMP (ಗಿಂಪ್ ಅಥವ ಜಿಂಪ್)


ಕಂಪ್ಯೂಟರ್ ಬಳಸಿ ಗೊತ್ತಿರುವವರಿಗೆ ಅಡೋಬ್ ಫೋಟೋಶಾಪ್ ತಂತ್ರಾಂಶದ ಪರಿಚಯ ಇಲ್ಲದೇ ಇರದು. GIMP ಅಡೋಬ್ ಫೋಟೋಶಾಪ್ ನೀಡುವ ಸುಮಾರು ಎಲ್ಲ ಸವಲತ್ತುಗಳನ್ನೂ ಒದಗಿಸುವ ಸ್ವತಂತ್ರ ತಂತ್ರಾಂಶ ಆವೃತ್ತಿ ಎಂದರೆ ತಪ್ಪಾಗಲಾರದು. ಜೊತೆಗೆ ತನ್ನದೇ ಮತ್ತಷ್ಟು ಸವಲತ್ತುಗಳನ್ನೂ ಕೂಡ ಸೇರಿಸಿ ಬಹಳ ಪ್ರಸಿದ್ಧಿ ಪಡೆದಿದೆ, ಈ ಯೋಜನೆ. ಜಿಟಿಕೆ ಇಮೇಜ್ ಮ್ಯಾನಿಪ್ಯುಲೇಶನ್ ಪ್ರೋಗ್ರಾಮ್ ಎಂದು ಪ್ರಾರಂಭವಾದ ಈ ಯೋಜನೆ ೧೯೯೫ರಲ್ಲಿ ಒಂದು ಕಾಲೇಜಿನ ಪ್ರಾಜೆಕ್ಟ್ ಆಗಿ ಪ್ರಾರಂಭವಾದದ್ದು! ಹದಿನಾಲ್ಕು ವರ್ಷಗಳ ಪ್ರತಿಷ್ಟಿತ ಯೋಜನೆಯಾಗಿ ರೂಪುಗೊಂಡಿದೆಯಲ್ಲದೆ ಬಹು ಉಪಯುಕ್ತ ತಂತ್ರಾಂಶ.

http://www.gimp.org/

Celtx (ಸೆಲ್ಟ್ ಎಕ್ಸ್)
ಸಿನಿಮಾ ಹುಚ್ಚು ಯಾರಿಗಿಲ್ಲ? ಅದರಲ್ಲೂ ಪ್ರತಿಭೆಯುಳ್ಳ ಬರಹಗಾರರು ಹಲವರಿಗೆ ನಾನೂ ಒಮ್ಮೆ ಸಿನಿಮಾ ಚಿತ್ರಕಥೆಯೊಂದನ್ನೋ, ನಾಟಕವೊಂದನ್ನೋ ಬರೆಯಬೇಕು ಎಂಬ ಆಕಾಂಕ್ಷೆಯಿರುತ್ತದೆ.

ಚಿತ್ರಕಥೆ ಬರೆಯುವುದನ್ನು ಸುಲಭವಾಗಿಸುವ ತಂತ್ರಾಂಶ Celtx. ಇದರಲ್ಲಿ ಕನ್ನಡದಲ್ಲೂ ಬರೆದಿಟ್ಟುಕೊಳ್ಳಬಹುದು! ಸಿನಿಮಾ ಚಿತ್ರಕಥೆಯೊಂದಷ್ಟೇ ಅಲ್ಲ, ಹಲವು ಹೆಜ್ಜೆಗಳು ಮುಂದೆ ಹೋಗಿ ಇಡಿಯ ಸಿನಿಮಾ ನಿರ್ಮಾಣದ ಪೂರ್ವತಯಾರಿ (ಮೀಡಿಯ ಪ್ರಿ-ಪ್ರೊಡಕ್ಷನ್) ಸುಲಭವಾಗಿಸುವ ತಂತ್ರಾಂಶ ಕೂಡ.

http://celtx.com/

Pidgin (ಪಿಡ್ಜಿನ್)
ಅಂತರ್ಜಾಲದಲ್ಲಿ 'ಚ್ಯಾಟ್' (chat) ಮಾಡುವುದು ಈಗ ಸಾಮಾನ್ಯ ಮಾತುಕತೆಯಂತೆ ಆಗಿಹೋಗಿದೆ. ಕನ್ನಡದಲ್ಲೂ ಚ್ಯಾಟ್ ಮಾಡುತ್ತ ಕೂರಬಹುದಾದ ಸವಲತ್ತುಗಳುಳ್ಳ ತಂತ್ರಾಂಶಗಳು ಲಭ್ಯವಿರುವಾಗ ಚ್ಯಾಟ್ ಮಾಡುವ ಕೆಲಸವನ್ನು ತೀರ ಗೊಂದಲಮಯವಾಗಿಸದೇ ಇರುವುದು ಹೇಗೆ ಎಂಬ ಪ್ರಶ್ನೆ ಎದುರಾಗುವುದು ಸಹಜ. ಏಕೆಂದರೆ ಯಾಹೂ ಚ್ಯಾಟ್, ಗೂಗಲ್ ಚ್ಯಾಟ್, ಎಮ್ ಎಸ್ ಎನ್ ಚ್ಯಾಟ್ - ಹೀಗೆ ಚ್ಯಾಟ್ ಮಾಡಲು ಲಭ್ಯವಿರುವ ಆಯ್ಕೆಗಳು ಹಲವು!

ಮುಂಚೆ ಇವೆಲ್ಲವನ್ನೂ ಬಳಸಲು ಹೊರಟರೆ ಪ್ರತಿಯೊಂದಕ್ಕೂ ಒಂದೊಂದು ತಂತ್ರಾಂಶ ಡೌನ್ಲೋಡ್ ಮಾಡಿಟ್ಟುಕೊಳ್ಳಬೇಕಿತ್ತು. ಈಗ ಪಿಡ್ಜಿನ್ ರೀತಿಯ ಹಲವು ತಂತ್ರಾಂಶಗಳು ಒಂದೇ ಪ್ರೋಗ್ರಾಮಿನಲ್ಲಿ ಎಲ್ಲ ಆಯ್ಕೆಗಳನ್ನೂ ಬಳಸುವ ಸವಲತ್ತು ನೀಡುತ್ತವೆ. ಪಿಡ್ಜಿನ್ ಕೂಡ ಜನಪ್ರಿಯ ಸ್ವತಂತ್ರ ತಂತ್ರಾಂಶಗಳಲ್ಲೊಂದು.

http://www.pidgin.im/

ಅಡಾಸಿಟಿ (Audacity) – ಕಂಪ್ಯೂಟರು ಈಗ ಮ್ಯೂಸಿಕ್ ಸ್ಟೂಡಿಯೊ


ಅಡಾಸಿಟಿ ನಿಮ್ಮ ಕಂಪ್ಯೂಟರಿನಲ್ಲಿರುವ ಮ್ಯೂಸಿಕ್ ಸ್ಟೂಡಿಯೋ ಎಂದರೂ ತಪ್ಪಾಗಲಾರದು. ಕೈಯಲ್ಲಿರುವ ಮೊಬೈಲು ಅಥವ mp3 ಪ್ಲೇಯರಿನಲ್ಲೇ ಧ್ವನಿ ರೆಕಾರ್ಡ್ ಮಾಡಿಕೊಳ್ಳುವುದು ಸಾಧ್ಯವಾಗುತ್ತಿರುವ ಈ ದಿನಗಳಲ್ಲಿ ಆ ಧ್ವನಿ ಮುದ್ರಣವನ್ನು ಎಡಿಟ್ ಮಾಡುವ ತಂತ್ರಾಂಶ ಬಹು ಉಪಯುಕ್ತ.
ಅಡಾಸಿಟಿ ಸಂಪೂರ್ಣ ಎಡಿಟಿಂಗ್ ವ್ಯವಸ್ಥೆಯನ್ನು ಒದಗಿಸಿಕೊಡುತ್ತದೆ.
http://audacity.sourceforge.net/

(ಕನ್ನಡ ಪ್ರಭಕ್ಕಾಗಿ ಬರೆದ ಲೇಖನ. ಇದರ ಪರಿಷ್ಕೃತ ಆವೃತ್ತಿ ಕನ್ನಡ ಪ್ರಭದಲ್ಲಿ ಜೂನ್ ಏಳನೇ ತಾರೀಖು ಭಾನುವಾರದ ಸಾಪ್ತಾಹಿಕ ಪ್ರಭದಲ್ಲಿ ಪ್ರಕಟವಾಗಿತ್ತು)