ಇಲ್ಲದೆಯೂ ಇರುವವನ ಕಥೆ
ಸಾಮಿಯ ಮನೆಯ ಮೊದಲ ಮಹಡಿಯಲ್ಲಿ ಆತನ ಡಾರ್ಕ್‌ರೂಂ. ಆತ ಫೋಟೋ ಹಾಗೂ ವಿಡಿಯೋ ಕಲಾವಿದ. ಇಂದಿನ ಡಿಜಿಟಲ್ ಪ್ರಪಂಚದಲ್ಲಿ ಬೇಕೆಂದೇ ಆತ ನೆಗೆಟಿವ್-ಫೋಟೋಗ್ರಫಿ ಮಾಡುತ್ತಿದ್ದ. ಆಧುನಿಕೋತ್ತರಕ್ಕೆ ಆತನದು ನೆಗೆಟಿವ್ ಪ್ರತಿಕ್ರಿಯೆ. ಆ ಡಾರ್ಕ್‌ರೂಂನಲ್ಲಿ ಚಜ್ಜೆಯನ್ನೆಲ್ಲ ಕಪ್ಪು ಬಟ್ಟೆಯಿಂದ ಮುಚ್ಚಿಬಿಟ್ಟಿದ್ದ. ಅಥವ ಕಪ್ಪು ಕೋಣೆಯನ್ನು ಡಾರ್ಕ್ ಬಟ್ಟೆಯಿಂದ ಮುಚ್ಚಿದ್ದ. ಆ ಹಳೆಯ ಕಾಲದ ಕಪ್ಪುಬಿಳುಪು ಛಾಯಾಚಿತ್ರವನ್ನು ಹಳೆಯ ಕಾಲದ್ದೆಂದು ಪರಿಣಾಮಕಾರಿಯಾಗಿ ಮೂಡಿಸಲು ಸಹಾಯಕ್ಕಾಗಿ ಅನೇಕ ಕಂಪ್ಯೂಟರ್‌ಗಳನ್ನೂ ಇರಿಸಿಕೊಂಡಿದ್ದ. ಗಾಂಧೀಜಿಯನ್ನು ಬಡತನದಲ್ಲಿ ಇರಿಸಲು ಭಾರತ ಸರ್ಕಾರವು ಸಾಕಷ್ಟು ಖರ್ಚು ಮಾಡಿದಂತಿತ್ತು ಇದು. ಸಂಸಾರಸ್ಥರ ಮನೆಯೊಂದರಲ್ಲಿ ಮೇಜು, ಕುರ್ಚಿ, ಟೀಪಾಯಿ, ಹೂದಾನಿಗಳಿದ್ದಂತೆ ಆ ಕೋಣೆಯ ತುಂಬೆಲ್ಲ ವೈರುಗಳು, 'ಮೌಸುಗಳು' (ಇಲಿಗಳಿಲ್ಲದಿದ್ದರೂ), ಫ್ಲಾಪಿಗಳು, ಡಿಸ್ಕ್‌ಗಳು ಮರದ ಬೇರುಗಳಂತೆ ಟಿಸಿಲೊಡೆದಿದ್ದವು. ಮುಂಚಿನ ವಾಕ್ಯದ ಪ್ರತಿಯೊಂದು ಪದಕ್ಕೂ ನಾನು 'ಗಳು' ಸಿಕ್ಕಿಸಿರುವುದಕ್ಕೆ ಕಾರಣ ಅಂತಹ ವಸ್ತುಗಳಲ್ಲಿ ಯಾವುವೂ ಒಂಟಿಯಾಗಿರಲಿಲ್ಲ.
ಒಟ್ಟಾಗಿ ಆ ಕೋಣೆಯು ಎಲ್ಲ ಜಾತಿಯ ಪ್ರಾಣಿಗಳ ಒಂದೊಂದು 'ಜೋಡಿ'ಯನ್ನು (ಕಂಪನಿ ಕೊಡಲು ನಂತರ ಜಗಳ ಮಾಡಲು) 'ಹಳೆಯ ಒಡಂಬಡಿಕೆ' ಕಥೆಯ ನೋಹ ಎಂಬಾತ ಹಡಗಿನಲ್ಲಿ ತುಂಬಿಟ್ಟಂತಿತ್ತು. "ನೋಹನ ನೌಕೆಯಂತಿರುವುದರಿಂದ ಈಗ ಪ್ರಳಯ ಆಗುತ್ತದೆಯೆ ಈ ಕೋಣೆಯಲ್ಲಿ?" ಎಂದು ತಮಾಷೆಯಾಗಿ ಕೇಳಿದೆ. "ಹೌದು, ಒಂದರ್ಥದಲ್ಲಿ ಇಂದು ರಾತ್ರಿ ಪ್ರಳಯವೇ ಆಗಲಿದೆ. ಈ ನೋಹನ ನೌಕೆಗೆ ಇಂದು ನೀನೇ ನೋಹ್. ಅಲ್ಲಿರುವ ಮಂಚ ನಿನಗೇ. ನೀನು ಇಲ್ಲಿಯೇ ಮಲಗಬೇಕು. 'ಜೋಡಿ'ದಾರ ನೋಹ ಮಾತ್ರ ಒಂಟಿ ಮಲಗಬೇಕು", ಎಂದ ಸಾಮಿ.
" ಪ್ರಳಯ?!" ಎಂದೆ. ಬೆಳಿಗ್ಗೆ ಗೊತ್ತಾಗುತ್ತದೆ. ವ್ಯತ್ಯಾಸವಿಷ್ಟೇ. ಅಸಲಿ ನೋಹಾನಿಗೆ ಪ್ರಳಯದ ಆಗಮನ ಮೊದಲೇ ತಿಳಿದಿತ್ತು. ನಿನಗೆ ನಾಳೆ ತಿಳಿಯಲಿದೆ", ಎಂದು ನಗಾಡಿ ಸಾಮಿ ನನ್ನ ಒಡೆತನದ ನೋಹನ-ನೌಕೆಯಿಂದ ಕೆಳಗಿಳಿದು ಹೋದ ಕೆಳ ಅಂತಸ್ತಿಗೆ. "ನೌಕೆಯ ಕೆಳಗಿನ ಸಾಗರಕ್ಕೆ ಹೋಗಿಬಿಟ್ಟ ಪಾಪಿ, ಎಂತಹ ಪ್ರಳಯ ಎಂದು ಹೇಳದೆ" ಎಂದು ಬೈಯ್ದುಕೊಂಡೆ. ಒಂದು ತಾಸಿನ ನಂತರ, ಅಂದರೆ ಮುಂಜಾನೆ ಎರಡೂವರೆ ಸುಮಾರಿಗೆ ಮತ್ತೆ ಮೇಲೆ ಬಂದು ಮೆಲ್ಲಗೆ ಬಾಗಿಲು ತಟ್ಟಿದ ಸಾಮಿ. ದಡಕ್ಕನೆ ಬಾಗಿಲು ತೆಗೆದೆ. "ನಾನೇ ಬಂದದ್ದು ಎಂದು ಹೇಗೆ ಗೊತ್ತಾಯಿತು?" ಎಂದ.
"ಇರೋವ್ರು ನಾಲ್ಕು ಜನ, ಕದ್ದೋರು ಯಾರು ಅಂದಂಗಾಯ್ತು. ಹುಡುಕಿದ್ರೂ ಹತ್ತು ಕಿಲೋಮೀಟರ್ ಸುತ್ತಳತೇಲಿ ಇನ್ಯಾರಿದಾರೆ ಈ ಊರಲ್ಲಿ!" ಎಂದು ಆತ್ಮವಿಶ್ವಾಸದಿಂದಲೇ ಕೇಳಿದೆ. "ಆರಾಮವಾಗಿದ್ದೀ ತಾನೆ?" ಎಂದ. ಆಗ ನನಗೆ ಈ ಮಧ್ಯರಾತ್ರಿಯ ಪ್ರಶ್ನೆಯ ನಿಗೂಢ ತಿಳಿಯಲಿಲ್ಲ, ಹೊಳೆಯಲಿಲ್ಲ. "ಅಲ್ಲಿದೆಯಲ್ಲ ಕರಬೇವಿನ ಗಿಡ ಅದು ಇಡೀ ಫಿನ್ಲೆಂಡಿನಲ್ಲಿರುವ ಏಕೈಕ ಕರಬೇವಿನ ಗಿಡ, ಮೈಸೂರಿನಿಂದ ತಂದದ್ದು. ಅದನ್ನೇ ಇಂದಿನ ನಿನ್ನ ಪಾಲಿನ ದೇವರೆಂದು ಭಾವಿಸು", ಎಂದ. "ಕರಬೇವಿನ ಗಿಡವನ್ನು ಯಾರೂ ದೇವರೆಂದು ಭಾರತದಲ್ಲಿ ಭಾವಿಸುವುದಿಲ್ಲ?!" ಎಂದೆ. "ಬೆಳಿಗ್ಗೆ ಮಾತನಾಡುವ, ಗುಡ್ ನೈಟ್ ಅಥವ ಗುಡ್ ಮಾರ್ನಿಂಗ್" ಎಂದು ಸಾಮಿ ಹೋದ.
ಬೆಳಿಗ್ಗೆ ಹನ್ನೊಂದು ಗಂಟೆಗೆ ಎದ್ದೆ. ಸಾಮಿ ಬಂದ. ಆ ಕಪ್ಪು ಬಟ್ಟೆಯಾವೃತ್ತವಾದ ಡಾರ್ಕ್ ರೂಂನಲ್ಲಿ ಬೆಳಿಗ್ಗೆಗೂ ರಾತ್ರಿಗೂ ಏನೇನೂ ವ್ಯತ್ಯಾಸವಿರಲಿಲ್ಲ. ಚಜ್ಜೆಯ ಮೇಲಿನ ಕಪ್ಪು ಪರದೆ ಸರಿಸಿದ. ಆಗ ಕಾಣಿಸಿತು ಅವು. ಮೈಸೂರಿನಲ್ಲಿ ಅವರಪ್ಪ ನಿಜವಾದ ಹುಲಿ, ಚಿರತೆ, ಕರಡಿಗಳ ಸಾವಿನ ನಂತರ ಅವುಗಳ ಮುಖಗಳನ್ನು ಸ್ಟಫ್ ಮಾಡಿ ಮನೆಯ ಗೋಡೆಗೆ ತೂಗುಹಾಕುತ್ತಿದ್ದರಲ್ಲ, ಅಂತಹ ಮೂರು ಪ್ರಾಣಿಗಳ ಮುಖ-ಶವಗಳು ಅಲ್ಲಿದ್ದವು. ಸಾಮಿ ನಗತೊಡಗಿದ. "ರಾತ್ರಿಯೇ ಇವುಗಳನ್ನು ನನಗೆ ತೋರಿಸಿದ್ದಿದ್ದರೆ ನನಗೇನೂ ನಿದ್ರೆ ಕೆಡುತ್ತಿರಲಿಲ್ಲ ಬಿಡು" ಎಂದು ಆತನಿಗೆ ಸುಳ್ಳು ಹೇಳಿದೆ. "ಕರಬೇವಿನ ಗಿಡ ಈ ಪ್ರಾಣಿಗಳ ಶವಗಳ ಜೀವಂತ ಭೀತಿಯನ್ನು ದೂರ ಮಾಡುತ್ತವೆಯೆಂದು ನೀನು ನನಗೆ ರಾತ್ರಿ ಸೂಚಿಸಿದೆಯ?" ಎಂದು ಕೇಳಿದೆ.
ಆಗ ಹೇಳಿದ ಸಾಮಿ ಆ ಬೃಹತ್ ಮನೆಯ ಕಥೆಯನ್ನು. ಆ ಮನೆ ಅಷ್ಟು ದೊಡ್ಡದಿರಲು ಕಾರಣ ಇಬ್ಬರೇ ಅದರಲ್ಲಿ ವಾಸಿಸುತ್ತಿರುವುದರಿಂದ ಎಂದು ಭಾವಿಸಿದ್ದೆ. ಆದರೆ ಆ ಮನೆ ನಿಜಕ್ಕೂ ದೊಡ್ಡದಿತ್ತು, 'ಲಾರ್ಡ್ ಆಫ್ ದ ರಿಂಗ್ಸ್' ಸಿನೆಮದ ಕೋಟೆ ಕೊತ್ತಲಗಳಂತೆ. ಏಕೆಂದರೆ ಅದು ಮಕ್ಕಳ ಶಾಲೆಯಾಗಿತ್ತು ಹಿಂದೊಮ್ಮೆ. ಅತ್ಯಂತ ಕಡಿಮೆ ಬೆಲೆಗೆ ಆ ಶಾಲೆಯನ್ನು ಸರ್ಕಾರದಿಂದ ಕೊಂಡುಕೊಂಡಿದ್ದರು ಮಿಸ್ಟರ್ ಅಂಡ್ ಮಿಸ್ಸೆಸ್ ಸಾಮಿ. ಏಕೆಂದರೆ ಆ ಶಾಲೆಯ ಒಡೆಯ ಏಕಾಂಗಿತನ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದನಂತೆ. ಈಗ ಅಂದರೆ ಬೆಳಿಗ್ಗೆ, ಹಿಂದಿನ ರಾತ್ರಿಯ ನಿಗೂಢಗಳ ಮೇಲೆಲ್ಲ ಬೆಳಕು ಚೆಲ್ಲಿದಂತಾಯ್ತು. "ಅದಕ್ಕೇ ರಾತ್ರಿ ಎರಡೆರೆಡು ಸಲ ಬಂದು ನನ್ನನ್ನು ಮಾತನಾಡಿಸಿಕೊಂಡು ಹೋದದು ನೀನು?" ಎಂದು ಕೇಳಿದೆ. "ಅಸಲಿ ಪ್ರಾಣಿ ಚರ್ಮವು ದೆವ್ವಗಳನ್ನು ದೂರವಿರಿಸುತ್ತದೆಂದು ಮೈಸೂರಿನ ಹಳೆಯ ಮಂದಿ ಈಗಲೂ (ಅಂತಹವರು ಬದುಕಿದ್ದರೆ) ನಂಬುತ್ತಾರೆ," ಎಂದನಾತ. "ಓಹೋ ಈ ರೂಮಿನೊಳಕ್ಕೆ ಪ್ರೇತ ಬರುವುದನ್ನು ಈ ಸ್ಟಫ್ಡ್-ಪ್ರಾಣಿಗಳು ತಡೆಹಿಡಿದವೆ? ಹಾಗಿದ್ದರೆ ಪ್ರೇತ ಈ ಮನೆಯ ಮಿಕ್ಕೆಲ್ಲ ಕೋಣೆ, ಕೋನಗಳಲ್ಲೂ ಓಡಾಡುತ್ತದೆಂದು ಅರ್ಥವಲ್ಲವೆ?" ಎಂದು ತಮಾಷೆ ಮಾಡಿದೆ. " ಇಲ್ಲ ಇಲ್ಲ ಉಲ್ಟಾ ಕೇಸಿದು. ಈ ಕೋಣೆಯಲ್ಲೇ ಈ ಹಾಸಿಗೆ ಇರುವ ನೇರಕ್ಕೇ, ಹಾಸಿಗೆಯ ಮೇಲೆ ನಿಂತೇ ಶಾಲೆಯ ಒಡೆಯ ನೇಣು ಹಾಕಿಕೊಂಡಿದ್ದು. ಆದ್ದರಿಂದ ಈ ಕೋಣೆಯನ್ನು ಬಿಟ್ಟು ಪ್ರೇತ ಯಾವತ್ತೂ ಹೊರಗೆಲ್ಲೂ ನಮಗೆ ಕಾಟ ಕೊಟ್ಟದ್ದಿಲ್ಲ" ಎಂದು ಗಂಭೀರವಾಗಿ ನುಡಿದ ಸಾಮಿ. ನಾನು ಕೋಡಲೆ ಬಾತ್‌ರೂಮಿಗೆ ಓಡಿದೆ. ಬೆಳಿಗ್ಗೆ ತಡವಾಗಿ ಎದ್ದಿದ್ದರಿಂದ ಬಾತ್‌ರೂಮಿಗೆ ಇನ್ನೂ ಹೋಗಿರದಿದ್ದದ್ದು ಹಾಗೆ ಓಡಲು ನನಗಿದ್ದ ಕಾರಣಗಳಲ್ಲಿ ಎರಡನೆಯದು!!
ಸಾಮಿ ಹೆಲ್ಸಿಂಕಿಗೆ ಕೂಡಲೆ ಹಿಂದಿರುಗುತ್ತಿರಲಿಲ್ಲವಾದ್ದರಿಂದ ನಾನು ಆತನ ನಾದಿನಿಯೊಂದಿಗೆ ಸಮೀಪದ (ಗಂಟೆಗೆ ನೂರ ಇನ್ನೂರು ಕಿಲೋಮೀಟರ್ ಕ್ರಮಿಸುವ ನಿಧಾನದಲ್ಲಿ ಒಂದೆರೆಡು ಗಂಟೆ ಪ್ರಯಾಣ. ಲೈಟ್ ಇಯರ್ಸ್ ಲೆಕ್ಕದಲ್ಲಿ ಇದೆಷ್ಟು ನಿಕೃಷ್ಟ ನೋಡಿ) ರೈಲ್ವೇ ಸ್ಟೇಷನ್ನಿಗೆ ಬಳಿಗೆ ಡ್ರಾಪ್ ತೆಗೆದುಕೊಂಡೆ. ಸ್ಟೇಷನ್ನಿನ ಮರದಿಂದ ಕಟ್ಟಲಾಗಿದ್ದ ವಿಕ್ಟೋರಿಯನ್ ಶೈಲಿಯ ಸ್ಟೇಷನ್. ಅದೇ "ಇಂಗ್ಲೀಷ್ ಬರುವಂತಿದ್ದರೆ ನಾನ್ಯಾಕೆ ಈ ದೇಶದಲ್ಲಿರುತ್ತಿದ್ದೆ" ಎಂಬ ಭಾವ ಒಂದಿಬ್ಬರ ಮುಖದ ಮೇಲೆ. ಏಕೆಂದರೆ ಅಲ್ಲಿದ್ದವರು ಒಂದಿಬ್ಬರು ಮಾತ್ರ, ನಮ್ಮಿಬ್ಬರನ್ನು ಹೊರತುಪಡಿಸಿ. ವಿಶಾಲ ಸ್ಥಳ. ಅಲ್ಲಿ ನಿಂತಿದ್ದ ಒಂದೇ ಒಂದು ರೈಲೀಗೆ ಮೂರು ಬೋಗಿ! ಒಂದಿಬ್ಬರು ಪ್ರಯಾಣಿಕರಿಗಾಗಿ ಮೂರು ಬೋಗಿ, ಭಗವಾನ್! ರೈಲು ಹೊರಡಲು ಇನ್ನೂ ಮೂರು ತಾಸು ಇತ್ತು. ಅಷ್ಟರಲ್ಲಿ ನಾಲ್ವರು, "ಇಂಗ್ಲೀಷ್" ಎಂಬ ಪದವನ್ನೂ ಇಂಗ್ಲೀಷಿನಲ್ಲಿ ಸ್ಪಷ್ಟವಾಗಿ ಹೇಳಲಾಗದವರೊಂದಿಗೆ, ತಲಾ ಅರ್ಧ ತಾಸು ಮಾತನಾಡಿದೆ. "ಫಿನ್ನಿಶ್" ಎಂಬ ಒಂದೇ ಒಂದು ಫಿನ್ನಿಶ್ ಪದ ಗೊತ್ತಿತ್ತು ಆಗ ನನಗೆ. ಈಗಲೂ ಅಷ್ಟೇ.
ಭಾಷೆಯ ಸಹಾಯವಿಲ್ಲದೆ ಹಲವರೊಂದಿಗೆ ಮಾತನಾಡಿದ ನಂತರ ಊರು ನೋಡಲು ಹೊರಟೆ, ಲಗೇಜನ್ನು ಲಾಕರಿನಲ್ಲಿರಿಸಿ. ಅಲ್ಲಿ ಲಗೇಜ್ ಇರಿಸಿಕೊಂಡು, ಅಮೇರಿಕನ್ ಆಕ್ಸೆಂಟಿನಲ್ಲಿ ಇಂಡಿಯನ್ ಇಂಗ್ಲೀಷ್ ಮಾತನಾಡಿ, ನೀವುಗಳು ಮನಸ್ಸಿನಲ್ಲೇ ಮೈಯೆಲ್ಲ ಪರಿಚಿಕೊಳುವಂತೆ ಮಾಡಬಲ್ಲ ತಾಕತ್ತಿನ (ಭಾರತದ ಏರ್‌ಪೋರ್ಟ್‌ಗಳಲ್ಲಿರುವಂತಹ) ಸ್ಮಿತಾ ರಾವ್, ಶ್ಯಾಮಲ ಕುಂಡು ಅಂತಹವರು ಇರಲಿಲ್ಲ. ಈ ಮಹಿಳಾಮಣಿಗಳು ಕಾಲ್ಪನಿಕ ಎಂದು ಹೇಳಬೇಕಿಲ್ಲವಷ್ಟೇ.
ಊರು ಊರೇ. ಊರ ಮಧ್ಯದ ನದಿ ನೆಲದ ಮಟ್ಟದಲ್ಲಿ. ಬೇಸಿಗೆಯಾದ್ದರಿಂದ ಬಿಸಿಲು ಹೋಗುವವರೆಗೂ ಯಾರೂ ತಮ್ಮ ತಮ್ಮ ಮನೆಗಳ ಒಳಕ್ಕೆ ಹೋಗುತ್ತಿದ್ದುದು ಕತ್ತಲಾದ ಮೇಲೆಯೇ. ಬೇರೆಯವರ ಮನೆಗಳಿಗೆ ಹೋಗುತ್ತಿದ್ದುದೂ ಕತ್ತಲಾದ ಮೇಲೆಯೇ. ಆದರೆ ಕತ್ತಲೇ ಆಗುತ್ತಿರಲಿಲ್ಲವಾದ್ದರಿಂದ ಮನೆಗಳಿಗೆ ಹೋಗುತ್ತಿದ್ದುದು ಕೇವಲ ಊಟ ಸ್ವೀಕರಿಸಲು ಮತ್ತು ವಿಸರ್ಜಿಸಲು. ಸ್ನಾನ ಮಾಡುವ ಗ್ಯಾರಂಟಿ ಇರುತ್ತಿರಲಿಲ್ಲ. ಬೆವರು ಬಂದರಲ್ಲವೆ ಸ್ನಾನ ಮಾಡುವುದು. ಇಡೀ ಯುರೋಪಿನಲ್ಲಿ ಅತಿ ಕೆಟ್ಟ ಉಡುಪಿನ ಶೈಲಿ ಇವರದ್ದೇ. ಆದರೂ ಬಿಸಿಲು ಬಂದಂತೆಲ್ಲ ಊರುಗಳಲ್ಲಿ ಏನೋ ಕಲರವ. ಕಿವಿಗೆ ಕೇಳಿಸುವಷ್ಟು ಕಲರವ. ಫಿನ್ಲೆಂಡಿನ ಬೇಸಿಗೆಯಲ್ಲಿ ಆತ್ಮಹತ್ಯೆಗಳು ಕಡಿಮೆ!
ಅದೇ ಅಭ್ಯಾಸದಿಂದ ಕಡಿಮೆ ದರ್ಜೆಯ ಹೋಟೆಲು ಹುಡುಕಿಕೊಂಡು ಹೋಗಿ, ಹುಡುಕಿ, ಕಾಫಿ ಕುಡಿದೆವು ನಾನು ಮತ್ತು ನನ್ನ ಬೆಂಗಳೂರಿನ ಸ್ನೇಹಿತ ಪ್ರಕಾಶ್ ಬಾಬುವಿನ ಮೂಲಕ ಪರಿಚಿತನಾದ ಅರ್ಧ ಫಿನ್ನಿಶ್ ಅರ್ಧ ಭಾರತೀಯ ಗೆಳೆಯ ಸಾಮಿ ವ್ಯಾನಿಂಗನ ನಾದಿನಿಯ ಜೊತೆ. ಈಗಲ್ಲ ಆಗಲೂ ಆಕೆಯ ಹೆಸರು ನನಗೆ ತಿಳಿದಿರಲಿಲ್ಲ. ಕಾಫಿ ಹೌಸಿನಲ್ಲಿ ನಾಯಿಗಳನ್ನು ಬಿಡಿತ್ತಿರಲಿಲ್ಲವಾದ್ದರಿಂದ ತನ್ನ ಪುಟ್ಟ ನಾಯಿ ಮರಿಯನ್ನು ತನ್ನ ಪುಟ್ಟದಲ್ಲದ ಬ್ಯಾಗಿನ ಒಳಗಿಟ್ಟುಕೊಂಡೇ ಕಾಫಿ ಕುಡಿದಳು. ಇಡೀ ನಗರವು ಜಿಮ್ ಕ್ಯಾರಿಯ "ಟ್ರೂಮನ್ ಶೋ" ಸಿನೆಮದ ಸೆಟ್ಟಿಂಗಿನಂತಿತ್ತು. ಆ ಸಿನೆಮದಲ್ಲಿ ಸೆಟ್ಟಿಂಗನ್ನು ಸೆಟ್ಟಿಂಗಿನಂತೆಯೇ ತೋರಿಸಿದ್ದಾರೆಂಬುದು ನೆನಪಿರಲಿ! ಕಾಫಿ ಕುಡಿದ ನಂತರ "ಓಲೆ ಹೂವ" (ಕನ್ನಡವಲ್ಲ, ಕನ್ನಡದಲ್ಲಿ "ಹಾಯ್" ಎನ್ನುತ್ತೇವಲ್ಲ ಹಾಗೆ) ಹೇಳಿ ಆಕೆ ಹೊರಟಳು. ಇನ್ನು ಆಕೆಯನ್ನು ಮತ್ತೆ ನೋಡುವುದಿಲ್ಲ ಎಂದು ತಿಳಿದು ಆಶ್ಚರ್ಯವಾಯಿತು. ಹೆಚ್ಚು ವಿದೇಶ ಪ್ರವಾಸ ಮಾಡಿದಷ್ಟೂ ಹೆಚ್ಚು ಹೆಚ್ಚು ಮಂದಿಯನ್ನು "ಮತ್ತೆಂದೂ ನೋಡುವುದಿಲ್ಲ" ಎಂಬುದು ಹೆಚ್ಚು ಸ್ಪಷ್ಟವಾಗಿ ತಿಳಿಯುತ್ತದೆ. ನನ್ನ ತಾತ ಅಜ್ಜಿಯರಿಗಿಲ್ಲದ ಒಂದು ಸೌಕರ್ಯವಿದು. ದೇಶವನ್ನೇ ಬಿಟ್ಟು, ಗುಳೇ ಹೊರಟು ಪರದೇಶಿಯಾದರಂತೂ ಇಡೀ ದೇಶದ ಜನರನ್ನೇ ಮತ್ತೆಂದೂ ನಿಜವಾಗಿ ನೋಡುತ್ತೇವೆಂಬ ಗ್ಯಾರಂಟಿ ಇರುವುದಿಲ್ಲವಲ್ಲ. ಹಾಗೆ ಎದೆಯ ಮೇಲೆ ಹೆಚ್ಚು ಭಾರ ಹೊತ್ತು ಪರದೇಶಿಯಾಗುವವರು ಭಾರತೀಯರೇ. ಏಕೆಂದರ ಭಾರತದ ಪರದೇಶಿಯೊಬ್ಬ ನೂರು ಕೋಟಿ ಜನರನ್ನು ಒಮ್ಮೆಲೆ ಕಳೆದುಕೊಂಡುಬಿಡುತ್ತಾನಲ್ಲ--ನನ್ನದೇನು ಮಹಾ ಬಿಡಿ. ನಾಲ್ಕಾರು ತಿಂಗಳಾದ ನಂತರ ಪ್ರಕಾಶನ ಗೆಳೆಯ ಸಾಮಿಯ ನಾದಿನಿ ಎದುರಾದರೆ ಖಂಡಿತ ಆಕೆಯನ್ನು ಗುರ್ತಿಸಲಾರೆ!
ಮತ್ತೆ ಸ್ಟೇಷನ್ನಿಗೆ ವಾಪಸ್ಸಾದೆ. ಆಶ್ಚರ್ಯ. ಹದಿನೈದರಷ್ಟು ಅತಿ ಹೆಚ್ಚಿನ ಜನರಿದ್ದರು ಅಲ್ಲಿ, ಟ್ರೈನಿಗಾಗಿ ಕಾಯುತ್ತ. ನಾಲ್ಕು ಗಂಟೆ ಹೆಲ್ಸಿಂಕಿವರೆಗಿನ ರೈಲು ಪ್ರಯಾಣಕ್ಕೆ ಐವತ್ತು ಯೂರೊ (ಎರಡೂವರೆ ಸಾವಿರ ರೂಪಾಯಿ) ತೆತ್ತು, ತತ್ತೇರಿಕ್ಕೆ ಎಂದುಕೊಂಡೆ. ಹೆಲ್ಸಿಂಕಿಗೆ ಬಂದಾಗ ಚದರ ಮೈಲಿಗೆ ಹದಿನಾರು ಜನರನ್ನು ಕಂಡು ಖುಷಿಯಾದೆ. ಫಿನ್ಲೆಂಡಿನಲ್ಲಿ ಅತ್ಯಂತ ಜನನಿಭಿಡ ರಾಜಧಾನಿಯೆಂಬ ಶೇಕಡಾ ಎರಡರಷ್ಟು ಭೂಪ್ರದೇಶದಲ್ಲಿ ಇಡೀ ದೇಶದ ಶೇಕಡ ಎಂಬತ್ತು ಮಂದಿ ವಾಸಿಸಿತ್ತಿದ್ದಾರೆಂದು ಮೊದಲೇ ಹೇಳಿದ್ದೇನೆ. ಹೇಳಿರದಿದ್ದಲ್ಲಿ ಇದನ್ನೇ ಅದು ಎಂದು ಭಾವಿಸಬೇಕಾಗಿ ವಿನಂತಿ.
ಈ ಪ್ರವಾಸ ಕಥನದ ಇತರ ಭಾಗಗಳು