ಮಡಿ ಭಾಷೆ, ಮಡಿ ಭಾಷೆ

ಮಡಿ ಭಾಷೆ, ಮಡಿ ಭಾಷೆ

ಇದನ್ನು ಕೊಂಚ ತುಂಟತನದ ರೀತಿಯಲ್ಲಿ ಬರೆದಿರುವೆ. ತಮಾಷೆಗೆ ಸತ್ಯವನ್ನು ಕಾಣಿಸುವ ಶಕ್ತಿ ಇರುತ್ತದಲ್ಲವೆ? ಹಾಗೆ ನೋಡಿದರೆ ತಮಾಷೆ ತುಂಬ ಸೀರಿಯಸ್ಸಾದ ಮನಸ್ಸಿನಿಂದ ಮಾತ್ರ ಹುಟ್ಟಬಲ್ಲದು!
ಮಡಿ ಎಂದರೆ ಶುದ್ಧ ಅಂತಲೂ ಹೌದು, ಮಡಿ ಅಂದರೆ ಸಾಯಿ ಅಂತಲೂ ಹೌದು. ಯಾವುದೇ ಭಾಷೆ ತುಂಬ ಮಡಿಯಾದರೆ ಸತ್ತೇ ಹೋಗುತ್ತದೆ. ಸಂಸ್ಕೃತ. ಲ್ಯಾಟಿನ್, ಗ್ರೀಕ್ ಇತ್ಯಾದಿಗಳೆಲ್ಲ ತುಂಬ ಮಡಿವಂತ ಭಾಷೆಗಳಾದವು, ಆಯಾ ಭಾಷಾ ಪಂಡಿತರಿಂದ. ಹಾಗೆ ಅವರು ಮಡಿ ಮಾಡಿ ಮಾಡಿ ಇವತ್ತು ಅವು ಅಷ್ಟೇನೂ ಮಡಿಯಲ್ಲದ ಭಾಷೆಗಳಲ್ಲಿ ಮಾತ್ರ ಪದಗಳಾಗಿ ಉಳಿದುಕೊಂಡಿವೆ.

ಇಂಗ್ಲಿಷು ಇದೆಯಲ್ಲ, ಅದರಲ್ಲಿ ಶೇ ೯೦ ಬೇರೆ ಭಾಷೆಯ ಪದಗಳೇ ಇವೆ. ಟವಲ್, ಟೊಮೆಟೊ, ಕ್ವೆಶ್ಚನ್, ಲ್ಯಾಂಗ್ವೆಜ್, ವಕಾಬುಲರಿ ಇಂಥ ನಾವು ಇಂಗ್ಲಿಷ್ ಅಂದುಕೊಂಡ ಪದಗಳು ಎಲ್ಲೆಲ್ಲಿಂದಲೋ ಬಂದು ಇಂಗ್ಲಿಷಿನಲ್ಲಿ ಮನೆ ಮಾಡಿಕೊಂಡಿವೆ. ಇತ್ತೀಚಿನ ಆಕ್ಸ್-ಫರ್ಡ್ ಡಿಕ್ಷನರಿಯಲ್ಲಿ ಭಾರತೀಯ ಮೂಲದ ಸುಮಾರು ಎಂಟು ಸಾವಿರದಷ್ಟು ಪದಗಳ ಪಟ್ಟಿ ಕಾಣುತ್ತದೆ. ಆಕ್ಸ್ ಅಂದರೆ ಗೋವುಗಳು, ಫರ್ಡ್ ಅಂದರೆ ತೀರ್ಥ. ತೀರ್ಥ ಅಂದರೆ ನದಿ ದಾಟುವ ಜಾಗ. ಅದಕ್ಕೇ ಆ ಊರಿನ ಹೆಸರನ್ನು ಗೋತೀರ್ಥ ಎಂದು ಬದಲಾಯಿಸಿದ್ದೂ ಇದೆ. ಇದು ಕಡ್ಡಿಪುಡಿ ಕರಿಬಸಯ್ಯ ಅನ್ನುವ ಹೆಸರನ್ನು ಕಾಷ್ಠಚೂರ್ಣಕಾಳವೃಷಭಾರ್ಯ ಕಾಷ್ಠ (ಕಡ್ಡಿ) ಚೂರ್ಣ (ಪುಡಿ) ಕಾಳ (ಕರಿ) ವೃಷಭ (ಬಸವ) ಆರ್ಯ (ಅಯ್ಯ) ಅಂತ ಬದಲಾಯಿಸಿದ ಹಾಗೆ. ಸಿಗ್ನಲ್ ಅನ್ನುವುದನ್ನು ಧೂಮ್ರಚಾಲಿತ ಬಹುಚಕ್ರಶಕಟ ಗಮನಾಗಮನಸೂಚೀ ಲೋಹಪಟ್ಟಿಕಾ ಅಂದಹಾಗೆ. ಮಡಿ ಅತಿಯಾದರೆ ಹೀಗಾದೀತು. ಸಂಸ್ಕೃತವು ದೇಸೀಭಾಷೆಗಳಿಂದ ಪದಗಳನ್ನು ತೆಗೆದುಕೊಂಡೇ ಇಲ್ಲ ಎಂದಲ್ಲ, ತೀರ ಕಡಮೆ. ಸಾವಿರಕ್ಕೆ ಒಂದು ಹತ್ತು ಇದ್ದಾವು.

ಇಂಗ್ಲಿಷಿನ ಗತಿ ಇನ್ನೊಂದು ಥರದ್ದು. ಅದು ಹೊಟ್ಟೆಬಾಕನಂತೆ ಎಲ್ಲ ಪದಗಳನ್ನೂ ಗಿಡಿದುಕೊಂಡು ಎಗ್ಗಿಲ್ಲದೆ ಸಿಗ್ಗಿಲ್ಲದೆ ಜಗತ್ತಿನ ಮುಖ್ಯಭಾಷೆ ಆಯಿತು. ಅಷ್ಟಾದರೂ ಜಗತ್ತಿನಲ್ಲಿ ಅತಿ ಹೆಚ್ಚು ಜನ ಬಳಸುವ ಭಾಷೆಗಳ ಪೈಕಿ ಇಂಗ್ಲಿಷಿಗೆ ಎಂಟನೆಯ ಸ್ಥಾನವಂತೆ.

ಅಲ್ಲ ಭಾಷೆಯೊಂದು ವ್ಯಾಪಕವಾಗುವುದಕ್ಕೆ ಕೇವಲ ಭಾಷೆ ಬಳಸುವುದಷ್ಟೇ ಕಾರಣವಾಗುವುದಿಲ್ಲ. ಆದರೂ ಪೆಟ್ರೋಲ್ ಉಳಿಸಿ, ಕನ್ನಡ ಉಳಿಸಿ ಎಂಬ ಎರಡು ಘೋಷಣೆಗಳನ್ನೂ ಒಂದೇ ಥರ ಅಂತ ತಿಳಿದು ಪೆಟ್ರೋಲ್ ಉಳಿಸುವುದಕ್ಕೆ ಪೆಟ್ರೋಲು ಕಡಮೆ ಬಳಸಬೇಕು. ಕನ್ನಡವನ್ನು ಉಳಿಸುವುದಕ್ಕೆ ಕನ್ನಡವನ್ನೂ ಕಡಮೆ ಬಳಸಬೇಕು ಅಂತ ತೀರ್ಮಾನಮಾಡುವುದು ತಪ್ಪು. ಕನ್ನಡ ಹೆಚ್ಚು ಹೆಚ್ಚು ಬಳಸಿದರೇ ಕನ್ನಡ ಉಳಿಯುವುದು. ಹಾಗೆ ಬಳಸುವಾಗ ಕಲಿತ ನಾವು ಅಲ್ಲ, ಬಹುಸಂಖ್ಯೆಯ ಜನ ಯಾವಯಾವದನ್ನೆಲ್ಲ ಸ್ವೀಕರಿಸಿದ್ದಾರೋ ಅದೆಲ್ಲವೂ ಕನ್ನಡವೇ ಅಂತ ತಿಳಿಯಬೇಕು. ವ್ಯಾಕರಣದ ಕೆಲಸ ಭಾಷಾಪೋಲೀಸರ ಕೆಲಸದಂತಲ್ಲ. ಜೀವಂತವಾದ ಭಾಷೆಯಲ್ಲಿ ಪ್ರತಿತಲೆಮಾರಿಗೂ ಸಾವಿರ ಪದ ಸಾಯುತ್ತಿರುತ್ತವೆ, ಸಾವಿರಪದ ಹೊಸದಾಗಿ ಬಂದು ಸೇರಿಕೊಳ್ಳುತ್ತಿರುತ್ತವೆ, ಇನ್ನು ಸಾವಿರಪದಗಳು ಅರ್ಥವ್ಯತ್ಯಾಸಮಾಡಿಕೊಳ್ಳುತ್ತಿರುತ್ತವೆ. ಇವೆಲ್ಲವನ್ನು ಕುತೂಹಲದಿಂದ ಗಮನಿಸಿ ತಾರ್ಕಿಕವಾಗಿ ವಿವರಿಸುವುದು ಮಾತ್ರ ವ್ಯಾಕರಣಕಾರರ ಕೆಲಸ.
ಭಾಷೆ ನದಿಯಂತೆ, ಹೊಳೆಯಂತೆ ಅನ್ನುವ ಸುಪ್ರಸಿದ್ಧ ಮಾತು ಇದೆ. ನದಿಯೇ ಆಗಲಿ, ಹೊಳೆಯೇ ಆಗಲಿ ಅದರ ಪಾಡಿಗೆ ಅದು ಹರಿಯುತ್ತಿರುತ್ತದೆ. ಅದಕ್ಕೆ ಮಡಿವಂತೆ ದೊಣೆನಾಯಕರ ಅಪ್ಪಣೆ ಬೇಡ ಅಲ್ಲವೆ?
ಆದರೂ ತೀರ ತಪ್ಪು ತಪ್ಪಾಗಿ ಭಾಷೆ ಬಳಸಬಾರದು ಅನ್ನುವುದು ಕೂಡ ನಿಜವೇ. ದಯವಿಟ್ಟು ಗಮನಿಸಿ, ಅನಕ್ಷರಸ್ಥರು ಕೂಡ, ಎಂದೂ ವ್ಯಾಕರಣ ಓದದೆ ಇರುವವರು ಕೂಡ ತಪ್ಪು ವಾಕ್ಯಗಳನ್ನು ಬಳಸುವುದಿಲ್ಲ. ಇರುವ ತೊಡಕೆಲ್ಲ ಬರವಣಿಗೆಗೆ ಬಂದಾಗ ಹುಟ್ಟಿಕೊಳ್ಳುತ್ತದೆ. ಬರವಣಿಗೆ ಕೃತಕ, ಮತ್ತು ಅಸಹಜ, ಆಡುಮಾತಿಗೆ ಹೋಲಿಸಿದರೆ. ಅದರದೇ ಬೇರೆ ನಿಯಮಗಳು. ಆಡುಮಾತಿನ ಬನಿಯನ್ನೆಲ್ಲ ಬರವಣಿಗೆಯಲ್ಲಿ ತರುವುದು ಕೂಡ ಸಾಧ್ಯವಿಲ್ಲ.

ಇರಲಿ, ಅದು ಬೇರೆ ವಿವರವಾದ ಚಿಂತನೆಗೆ ವಸ್ತು. ಇಷ್ಟೇ. ಇನ್ನೊಬ್ಬರ ಮಾತಿನಲ್ಲಿ ದೋಷಗಳನ್ನೇ ಹುಡುಕುವುದು ಅದೇ ದೊಡ್ಡ ದೋಷ. ಪ್ರೀತಿಯಿಂದ ಇರುವ ದೋಷಗಳನ್ನು ತಿದ್ದಬೇಕು. ತಪ್ಪೇ ಮಾಡದ ಮನುಷ್ಯರು, ತಪ್ಪನ್ನೇ ಬರೆಯದ ಲೇಖಕರು ಯಾರೂ ಇಲ್ಲ. ಹಾಗೆ ನೋಡಿದರೆ ಎಂಥ ವ್ಯಕ್ತಿಯಲ್ಲೂ ಎಂಥ ಬರವಣಿಗೆಯಲ್ಲೂ ದೋಷಗಳನ್ನು ಸುಲಭವಾಗಿಯೋ ಕಷ್ಟಪಟ್ಟೋ ಹುಡುಕಬಹುದು. ಆದರೆ ಅಂಥ ಕೆಲಸದಿಂದ ಮನಸ್ಸು ಮುರಿಯುತ್ತದೆ, ಪ್ರೀತಿ ಹುಟ್ಟುವುದಿಲ್ಲ.

ಕೊನೆಗೆ ಒಂದು ಮಾತು. ಶುದ್ಧತೆ ಅನ್ನುವುದು ನಿಸರ್ಗದಲ್ಲಿ ಇದೆಯೋ ಅಥವ ನಮ್ಮ ಮನಸ್ಸಿನ ಕಲ್ಪಿತವೋ? ಅತಿ ಶುದ್ಧತೆಯ ಆಸೆ ಅಸ್ಪೃಶ್ಯತೆಯಂಥ ಆಚರಣೆಗೆ ಕಾರಣವಾದದ್ದು ನಮಗೆಲ್ಲ ತಿಳಿಯದೇ! ತೀರ ಪರಿಶುದ್ಧ ಚಿನ್ನದಿಂದ ಆಭರಣ ಮಾಡಿಸಲು ಸಾಧ್ಯವೇ? ಸ್ವಚ್ಛತೆಯೇ ಬೇರೆ, ಮಡಿವಂತಿಕೆಯೇ ಬೇರೆ. ಸ್ವಚ್ಛತೆ ಅಪೇಕ್ಷಣೀಯ, ಅಗತ್ಯ. ಮಡಿವಂತಿಕೆ ಸಂಕುಚಿತ, ಭೀತ ಮನಸ್ಸಿನ ಲಕ್ಷಣ.

ಹೀಗೆ ಹೇಳುತ್ತಿರುವಾಗ ನಮ್ಮ ಮಾಧ್ಯಮಗಳ ಪ್ರಭಾವದಿಂದ ಕನ್ನಡ ಕುಬ್ಜವಾಗುತ್ತಿದೆಯೋ ಅನ್ನುವ ಅನುಮಾನ ಬರುತ್ತಿದೆ. ಹೊಸಗನ್ನಡದ ಮಹಿಮಾವಂತ ಲೇಖಕರು ಇದ್ದಾರಲ್ಲ ಅವರ ಕನ್ನಡವನ್ನು ಓದುವುದೇ ಒಂದು ಖುಶಿ. ಕನ್ನಡದಲ್ಲಿ ಹೀಗೆಲ್ಲ ಬರವಣಿಗೆ ಸಾಧ್ಯವಿದೆಯೆಲ್ಲ ಎಂಬ ಅಚ್ಚರಿ. ಗೊತ್ತಿರುವುದನ್ನು ಬರೆಯುವುದು ಒಂದು ಥರ, ಬರೆಯುತ್ತಲೇ ಗೊತ್ತುಮಾಡಿಕೊಳ್ಳುತ್ತ ಬರೆಯುವುದು ಇನ್ನೊಂದು ಥರ. ಗೊತ್ತಿರುವುದನ್ನು ಬರೆಯುವುದು ಅಷ್ಟೇನೂ ಕಷ್ಟದ ಕೆಲಸವಲ್ಲ. ಗೊತ್ತುಮಾಡಿಕೊಳ್ಳುತ್ತ ಬರೆಯುವಾಗ ಆಗುವ ತಪ್ಪುಗಳೂ ಸೃಜನಶೀಲವಾಗುತ್ತವೆ. ನಮ್ಮ ನಮ್ಮ ಮಾತೃಭಾಷೆಗಳಲ್ಲಿ ತಪ್ಪು ಮಾಡುವುದು ನಮ್ಮ ಜನ್ಮಸಿದ್ಧ ಹಕ್ಕು. ಪರಭಾಷೆಗಳನ್ನು ಬಳಸುವಾಗ ಆ ಸ್ವಾತಂತ್ರ್ಯ ಇರುವುದಿಲ್ಲ. ಈ ಥರದ ಮಾತುಗಳನ್ನು ಒಮ್ಮೆ ರಾಜೀವತಾರಾನಾಥರು ಹೀಳಿದ್ದರು. ಕಲಿತ ವಾಕ್ಯಗಳ ಮಾದರಿಯಲ್ಲೇ ಬರೆಯುವ ಪರಭಾಷೆ ಹಳಿಗಳ ಮೇಲೆಯೇ ಸಾಗಬೇಕಾದ ರೈಲಿನಂತೆ. ಮಾತೃಭಾಷೆಯ ಬರವಣಿಗೆ ಹಕ್ಕಿಯ ಹಾರಾಟದಂತಿರಬೇಕು.
ತಪ್ಪುಗಳನ್ನು ಮಾಡುವ ಮೂಲಕವೇ ಭಾಷೆಯ ಸೃಜನಶೀಲ ಬಳಕೆಯನ್ನು ಮಕ್ಕಳು ಕಲಿಯುತ್ತಾರೆ. ಮಕ್ಕಳು ತಪ್ಪಿದಾಗ ಮನೆಯ ಹಿರಿಯರು ಹೇಗೆ ಪ್ರೀತಿಯಿಂದ ಮತ್ತೆ ಮತ್ತೆ ಸರಿ ಬಳಕೆಯನ್ನು ಹೇಳಿಕೊಡುತ್ತಾರೋ, ಸಹನೆಯಿಂದ ಕಲಿಸುತ್ತಾರೋ ಅಂಥದೇ ಸಹನೆ ಬರವಣಿಗೆಯನ್ನು ಕುರಿತೂ ಇರಬೇಕು. ಆದರೆ ನಮ್ಮ ಶಾಲೆಗಳನ್ನು ನೋಡಿ. ತಪ್ಪು ಮಾಡುವುದು, ತಪ್ಪು ಬರವಣಿಗೆ, ತಪ್ಪು ಉಚ್ಚಾರ ಇವುಗಳಿಗೆ ಶಿಕ್ಷೆಯೇ ಸೂಕ್ತ ಅನ್ನುವ ಧೋರಣೆ ಕಾಣುತ್ತದಲ್ಲವೆ. ತಪ್ಪು ಮಾಡದೆ ಏನನ್ನೂ ಕಲಿಯುವುದು ಸಾಧ್ಯವೇ ಇಲ್ಲ.
ಕಲಿಯುವ ಕಲಿಸುವ ಸಾಧ್ಯತೆಗಳು ಹಿಗ್ಗುವುದಕ್ಕೆ ಪ್ರೀತಿ, ಸಹನೆ, ತಾಳ್ಮೆಗಳು ಮುಖ್ಯ. ನಾವು ಅಸಹನೆಯ, ತಾಳ್ಮೆ ಇರದ ಬದುಕನ್ನೇ ಸಹಜವೆಂದು ಒಪ್ಪಿಕೊಂಡಾಗ ಭಾಷೆಯ ಬಗ್ಗೆಯೂ ಅಸಹನೆ, ಆತುರ, ಅಸಮಾಧಾನಗಳು ಹುಟ್ಟಿಕೊಳ್ಳುತ್ತವೆ. ಕೇವಲ ಮಾಹಿತಿ ತಿಳಿಸುವಂಥ, ನಿರ್ಜೀವ ವಾಕ್ಯರಚನೆಗಳನ್ನು ಕಲಿತರೆ ಸಾಕು ಅನ್ನಿಸತೊಡಗುತ್ತದೆ. ನಮ್ಮ ಭಾಷೆಯೂ ಕುಬ್ಜವಾಗತೊಡಗುತ್ತದೆ.

ಮಡಿಯಾದ ಭಾಷೆಯಲ್ಲಿ ತಪ್ಪುಗಳಿಗೆ ಅವಕಾಶವೇ ಇರುವುದಿಲ್ಲ. ಸತ್ತವರು ಯಾವ ತಪ್ಪನ್ನೂ ಮಾಡಲಾರರು, ತಾವು ಮಾಡಿದ್ದ ತಪ್ಪುಗಳನ್ನು ತಿದ್ದಿಕೊಳ್ಳಲೂ ಆರರು. ಮಡಿಯಲ್ಲದ ಭಾಷೆ ತನ್ನ ತಪ್ಪುಗಳ ಮೂಲಕವೇ ಜೀವಂತವಾಗಿರುತ್ತದೆ, ಬದುಕಿರುವ ಮನುಷ್ಯರು ತಪ್ಪುಗಳ ಮೂಲಕವೇ, ತಪ್ಪುಗಳನ್ನು ತಿದ್ದಿಕೊಳ್ಳುವ ಮೂಲಕವೇ ಜೀವಂತವಾಗಿರುವಂತೆ. ತಪ್ಪುಗಳಿಗೆ ಜಯವಾಗಲಿ! ತಪ್ಪುಗಳ ಬಗ್ಗೆ ಹುಟ್ಟುವ ಎಚ್ಚರ ಜೀವಂತವಾಗಿರಲಿ! ತಪ್ಪು ಆಗುತ್ತಿರುವ ಕ್ಷಣದಲ್ಲೇ ಇದು ತಪ್ಪು ಇದ್ದೀತು ಅನ್ನುವ ಅರಿವು ಮೂಡುತ್ತಿರಲಿ! ತಪ್ಪು ತಿದ್ದುವಾಗ ಕೊಂಚ ಅನುಮಾನವೂ ಸಹನೆಯೂ ಮಿಡಿಯುತ್ತಿರಲಿ! ತಪ್ಪುಗಳಿಗೆ ಜೈ! ಮಡಿಗೆ ಧಿಕ್ಕಾರ!!

Rating
No votes yet

Comments