ಪರಿಚಯ

ಪರಿಚಯ

ಬರಹ

ನನಗೆ ರಾಜಕೀಯ ಗೊತ್ತಿಲ್ಲ ಆದರೆ ರಾಜಕೀಯದಲ್ಲಿರುವವರು ಗೊತ್ತು
ಅವರ ಹೆಸರನ್ನು ವಾರದ ದಿನಗಳಂತೆ ತಿಂಗಳುಗಳ ಹೆಸರುಗಳನ್ನು
ಹೇಳುವಷ್ಟೇ ಸುಲಭವಾಗಿ ಆಗಾಗ್ಗೆ ಹೇಳಬಲ್ಲೆ-ಅದು ನೆಹರೂವಿನಿಂದ ಶುರುವಾಗುತ್ತದೆ.
ನಾನೊಬ್ಬ ಭಾರತೀಯಳು, ಕಂದು ಬಣ್ಣದವಳು, ಮಲಾಬಾರಿನಲ್ಲಿ ಹುಟ್ಟಿದವಳು.
ನಾನು ಮೂರು ಭಾಷೆಗಳಲ್ಲಿ ಮಾತನಾಡುತ್ತೇನೆ, ಎರಡರಲ್ಲಿ ಬರೆಯುತ್ತೇನೆ, ಒಂದರಲ್ಲಿ ಕನಸು ಕಾಣುತ್ತೇನೆ.
ಇಂಗ್ಲೀಷಿನಲ್ಲಿ ಬರೆಯಬೇಡ: ಅದು ನಿನ್ನ ಮಾತೃಭಾಷೆಯಲ್ಲ ಅವರು ಹೇಳಿದರು
ವಿಮರ್ಶಕರೇ, ಸ್ನೇಹಿತರೇ, ಹಾಗೂ ಆಗಾಗ್ಗೆ ಭೇಟಿಯಿಡುವ ನನ್ನ ಬಂಧುಗಳೇ,
ನನ್ನನ್ನೇಕೆ ಬಿಡಲಾರಿರಿ ನನಗಿಷ್ಟವಾದ ಭಾಷೆಯಲ್ಲಿ ಮಾತನಾಡಲು?
ನಾನಾಡುವ ಭಾಷೆ ನನ್ನದು, ಕೇವಲ ನನ್ನದು
ಅದರ ಸ್ವರೂಪ ವಿರೂಪಗಳೆಲ್ಲವೂ ನನ್ನವೇ, ನನ್ನೊಬ್ಬಳದು ಮಾತ್ರ!
ಅರ್ಧ ಇಂಗ್ಲೀಷ್, ಅರ್ಧ ಭಾರತೀಯತೆ-ಬಹುಶಃ ನಿಮಗೆಲ್ಲ
ತಮಾಷೆಯಾಗಿ ಕಾಣಬಹುದು ಆದರದು ಪ್ರಾಮಾಣಿಕವಾಗಿರುತ್ತದೆ
ನಾನು ಜೀವಂತವಾಗಿರುವಷ್ಟೇ ಅದು ಸಹ ಜೀವಂತವಾಗಿರುತ್ತದೆ.
ನೀವದನ್ನು ಗುರುತಿಸಲಾರಿರೆ?
ಅದು ನನ್ನ ಖುಶಿಗಳನ್ನು ಧ್ವನಿಸುತ್ತದೆ, ಆಸೆಗಳನ್ನು ಹೊರಗೆಡವುತ್ತದೆ.
ಕಾಗೆ ಕಾಕಾ ಎನ್ನುವಂತೆ ಸಿಂಹ ಘರ್ಜಿಸುವಂತೆ
ನಾನು ಕೂಡ ಅದರಲ್ಲಿ ಚೀರಬಲ್ಲೆ.
ಅದು ಸಹಜವಾಗಿರುವ ಮಾತು. ಸದಾ ಎಚ್ಚರದಿಂದ
ಕೇಳುವ, ನೋಡುವ ಮನಸಿನ ಮಾತದು.
ನಾನು ಚಿಕ್ಕವಳಾಗಿದ್ದೆ ನಂತರ ಅವರು ದೊಡ್ದವಳಾಗಿದ್ದೇನೆಂದು ಹೇಳಿದರು.
ಏಕೆಂದರೆ ನಾನು ಎತ್ತರಕ್ಕೆ ಬೆಳೆದಿದ್ದೆ, ನನ್ನ ಅಂಗಾಂಗಗಳು ಊದಿಕೊಂಡು
ಒಂದೆರಡು ಕಡೆ ಕೂದಲು ಸಹ ಮೊಳೆತಿದ್ದವು.
ನಾನು ಅವನ ಬಳಿ ಏನು ಬೇಡಬೇಕೆಂದು ಗೊತ್ತಾಗದೆ ಪ್ರೀತಿಯನ್ನು ಬೇಡಿದೆ.
ಆಗ ಅವನು ಹದಿನಾರರ ಹುಡುಗನನ್ನು ಯಾವೊಂದು ಮುಜುಗರವಿಲ್ಲದೆ
ಮಲಗುವ ಕೋಣೆಗೆ ಎಳೆದುಕೊಂಡು ಬಾಗಿಲು ಮುಚ್ಚಿದ.
ಅವನು ನನಗೆ ಹೊಡೆಯಲಿಲ್ಲ
ಆದರೆ ನನ್ನೊಳಗಿನ ದುಃಖತಪ್ತ ಹೆಂಗಸಿಗೆ ಹೊಡೆತ ಬಿದ್ದಿತ್ತು.
ನನ್ನ ಮೊಲೆ, ಗರ್ಭಗಳು ಭಾರವಾದಂತೆನಿಸಿ ನಾನು ಜಜ್ಜಿಹೋದ ಅನುಭವ.
ನನ್ನ ಮೇಲೆ ನಾನೇ ಕನಿಕರಪಡುತ್ತಾ ಮುದುಡಿ ಕುಳಿತೆ.
ಅಲ್ಲಿಂದಾಚೆ ನಾನು ಅಂಗಿ ಧರಿಸಿದೆ, ತಮ್ಮನ ಪ್ಯಾಂಟು ಹಾಕಿಕೊಂಡೆ,
ಕೂದಲನ್ನು ಸಣ್ಣದಾಗಿ ಕತ್ತರಿಸಿದೆ,
ನನ್ನ ಹೆಣ್ತನವನ್ನು ಸಂಪೂರ್ಣವಾಗಿ ಕಡೆಗಣಿಸಿದೆ.
ಸೀರೆ ಉಡು, ಹುಡುಗಿಯಂತಿರು, ಹೆಣ್ಣಾಗು, ಹೆಂಡತಿಯಾಗು,
ಕಸೂತಿ ಹಾಕು, ಅಡಿಗೆ ಮಾಡು, ಆಳುಗಳ ಜೊತೆ ಬಿಗುವಾಗಿರು,
ಹೊಂದಿಕೊ, ತಕ್ಕನಾಗಿ ನಡೆದಿಕೊ
ಅಬ್ಬಬ್ಬ, ಎಷ್ಟೊಂದು ನಿರೀಕ್ಷಕರು!
ಗೋಡೆಯ ಮೇಲೆ ಕೂರಬೇಡ, ಕಿಟಕಿಯಲ್ಲಿ ಇಣುಕುಬೇಡ
ಆಮಿಯಾಗಿರು, ಅಥವಾ ಕಮಲಾಳಾಗಿರು ಅಥವಾ
ಮಾಧವಿ ಕುಟ್ಟಿಯಾಗಿದ್ದರೆ ಇನ್ನೂ ಒಳಿತು.
ಹೆಸರೊಂದನ್ನು, ಕೆಲಸವೊಂದನ್ನು ಆಯ್ದುಕೊಳ್ಳಲು ಇದು ತಕ್ಕ ಸಮಯ
ಸೋಗಲಾಡಿತನ ಬಿಡು, ಭ್ರಾಂತಿಯಾದವರ ತರ ವರ್ತಿಸಬೇಡ,
ಕಾಮನ್ಮೋತ್ತಳಾಗಿ ಕಾಣಿಸಬೇಡ,
ಪ್ರೀತಿ ಸಿಗದೆ ಹೋದಾಗ ಜೋರಾಗಿ ಧ್ವನಿ ತೆಗೆದು
ಮುಜುಗುರವಾಗುವಂತೆ ಅಳಬೇಡ.............ಎಷ್ಟೊಂದು ಆಜ್ಞೆಗಳು!
ನನಗೊಬ್ಬ ಗಂಡು ಸಿಕ್ಕ, ನಾನು ಅವನನ್ನೇ ಪ್ರೀತಿಸಿದೆ.
ಅವನನ್ನು ಹೆಸರು ಹಿಡಿದು ಕರೆಯಬೇಡಿ
ಏಕೆಂದರೆ ಅವನಿಗೆ ಹೆಸರಿಲ್ಲ.
ಅವನು ಎಲ್ಲ ಗಂಡಸರ ತರ ಹೆಣ್ಣನ್ನು ಬಯಸುವವ
ನಾನು ಎಲ್ಲ ಹೆಂಗಸರ ತರ ಪೀತಿಯನ್ನು ಬಯಸುವವಳು
ಅವನೊಳಗೆ ಅಬ್ಬರಿಸಿ ಉಕ್ಕಿ ಉಕ್ಕಿ ಹರಿಯುವ ನದಿ
ನನ್ನೊಳಗೆ ಆಯಾಸವಿಲ್ಲದೆ ಕಾಯುವ ಶಾಂತ ಸಮುದ್ರ.
ನಾನು ಸಿಕ್ಕ ಸಿಕ್ಕವರನೆಲ್ಲ ಕೇಳುತ್ತಾ ಹೋಗುತ್ತೇನೆ
“ಯಾರು ನೀನೆಂದು?” ಉತ್ತರವೊಂದೇ “ನಾನು ನಾನೇ”
ಈ ಜಗದಲ್ಲಿ “ನಾನು ನಾನೇ” ಎಂದು ಕರೆದುಕೊಳ್ಳುವವ ಒರೆಯಲ್ಲಿ ಭದ್ರವಾಗಿ ಮುಚ್ಚಿಟ್ಟ ಖಡ್ಗದಂತೆ.
ಹನ್ನೆರಡು ಗಂಟೆಯಲ್ಲಿ, ಮಧ್ಯರಾತ್ರಿಯಲ್ಲಿ, ಅಪರಿಚಿತ ಪಟ್ಟಣಗಳ ಬೀದಿಗಳಲ್ಲಿ
ಎಲ್ಲೆಂದರಲ್ಲಿ ಯಾವಾಗೆಂದರವಾಗ ಒಂಟಿಯಾಗಿ ಕುಡಿಯುವವಳು ನಾನು,
ನಗುವವಳು ನಾನು, ಪ್ರೀತಿ ಮಾಡುವವಳು ನಾನು,
ಆಮೇಲೆ ನಾಚಿಕೆಪಟ್ಟುಕೊಂಡು ಬೀಳುವವಳು ಸಹ ನಾನು.
ಪಾತಕಿ ನಾನು ಪೂಜ್ಯಳು ನಾನು
ಪತಿವೃತೆಯು ನಾನು ಶೀಲಗೆಟ್ಟವಳು ನಾನು
ನನ್ನ ಖುಶಿಗಳು ನಿನ್ನವಲ್ಲ ನನ್ನ ನೋವುಗಳು ನಿನ್ನವಲ್ಲ
ಇದೀಗ ನಾನು ಸಹ ನನ್ನನ್ನು ನಾನೇ ಎಂದು ಕರೆದುಕೊಳ್ಳುತ್ತಿದ್ದೇನೆ.

ಇಂಗ್ಲೀಷ ಮೂಲ: ಕಮಲಾ ದಾಸ್
ಕನ್ನಡಕ್ಕೆ: ಉದಯ ಇಟಗಿ
ಚಿತ್ರ ಕೃಪೆ: www.flickr.com/by Tafa