ಸಪ್ತಗಿರಿ ಸಂಪದ(ಪೌರಾಣಿಕ ಕಥಾನಕ) ಸಂಚಿಕೆ-3

ಸಪ್ತಗಿರಿ ಸಂಪದ(ಪೌರಾಣಿಕ ಕಥಾನಕ) ಸಂಚಿಕೆ-3

ಬರಹ

ದೇವರು ಎಲ್ಲಿದ್ದಾನೆ? ಇಲ್ಲ ಅವನು ಇದ್ದಿದ್ದರೆ ಇಷ್ಟೆಲ್ಲಾ ಅನಾಹುತಗಳು ಆಗುತ್ತಿರಲಿಲ್ಲ ಎಂದು ಹೇಳುತ್ತೇವೆ. ಅಂಥವರು ಈಗಾಗಲೇ ಹೇಳಿದಂತೆ ಈ ಜಗತ್ತಿನ ತ್ರಿಗುಣಾತ್ಮಕ ತತ್ವವನ್ನು ಮನಗಾಣಬೇಕಾಗುತ್ತದೆ. ಈಗ ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಪರಪಮ ಪಾಪಿಗಳೂ ಹೆಚ್ಚುತ್ತಲೇ ಇದ್ದಾರಷ್ಟೇ... ಕೇವಲ ಕಾಲುಭಾಗ ಮಾತ್ರವೆ ಆದರೂ ಸಾತ್ವಿಕ ಶಕ್ತಿ ಯಾವಾಗಲೂ ಬೆಂಕಿ ಮುಚ್ಚಿದ ಕೆಂಡದಂತೆಯೆ ಇರುತ್ತದೆಯಲ್ಲ... ಅದು ಸಿಡಿದೆದ್ದ ಸಂದರ್ಭಗಳಲ್ಲೆಲ್ಲ ಪಾಪಿಗಳ ದಮನವಾಗುತ್ತಲೆ ಇರುತ್ತದೆಯಾದರೂ ನಾವು ಅವರ ಸಂಖ್ಯೆ ಹೆಚ್ಚುತ್ತಲೆ ಇರುವುದು ಇನ್ನೂ ನಡೆದೇ ತೀರುವುದರಿಂದ, ಎಷ್ಟೇ ದುಷ್ಟ ನಿಗ್ರಹವಾದರೂ ಕೂಡ ನಮಗೆ ತೃಪ್ತಿ ಇಲ್ಲವಾಗಿರುತ್ತದೆ
ದೇವರಿಲ್ಲ ಎಂದು ಸುಲಭವಾಗಿ ಹೇಳಿಬಿಡುವ ವ್ಯಕ್ತಿ ತಾನು ಸ್ವತಃ ದೇವರೇ ಆಗಿರಬೇಕಷ್ಟೇ. ಆತನ ಅಪರಾಧಗಳಿಗೆ ಕ್ಷಮೆ ಎಂಬುದೇ ಇಲ್ಲವಲ್ಲ... ! ಹಾಗೆಯೆ, ದೇವರಿದ್ದಾನೆಂದು ಪರಮ ಭಕ್ತಿಯಿಂದ ಮಾಡಬಾರದ ಪಾತಕಗಳನ್ನೂ ಮಾಡುವ ವ್ಯಕ್ತಿ ಕೂಡ ಕ್ಷಮಾರ್ಹನಲ್ಲ; ಅವನಿಗೆ ಆ ದೇವರೇ ಅವನ ಜೀವಿತದಲ್ಲಿ ನಾವೇ ಕಾಣುವಂತೆ ಶಿಕ್ಷೆ ವಿಧಿಸದಿರಲಾರ. ಶಿಶುಪಾಲ ನೂರೊಂದು ತಪ್ಪು ಮಾಡುವವರೆಗೆ ಶ್ರೀ ಕೃಷ್ಣ ಕಾದು ಕುಳಿತವನಂತೆ ನಾವು ಅಂಥ ಪಾತಕಿಗಳ ಪಾಪದ ಕೊಡ ತುಂಬುವ ತನಕವೂ ಕಾಯುವುದು ಅನಿವಾರ್ಯ.....
ದೇವರು, ಮನುಷ್ಯನಿಗೆ ದೈವತ್ವದಲ್ಲಿ ನಂಬಿಕೆ ಎಂದರೆ- ಸತ್ಯ ಧರ್ಮ, ಪ್ರಾಮಾಣಿಕತೆ, ಇತರರಿಗೆ ಉಪದ್ರವ ಕೊಡದೇನೆ, ದ್ವೇಷಾಸೂಯೆಗಳಿಗೆ ಮನ ತೆರದೇನೆ, ಕಷ್ಟಕಾರ್ಪಣ್ಯಗಳನ್ನು ಎದುರಿಸುತ್ತಲೇ ಬದುಕನ್ನು ನಿಭಾಯಿಸುವುದು. ಯಾವಾಗಲೂ, ಸಭ್ಯರಿಗೆ, ಜ್ಞಾನಿಗಳಿಗೇ ಈ ಜಗತ್ತಿನಲ್ಲಿ ತೊಂದರೆಗಳು ಅಧಿಕ. ಅದು ವಿಧಿ ನಿಯಮವೇ ಸರಿ. ಅದನ್ನು ಮೀರಿ ಅಡ್ಡ ದಾರಿ ಹಿಡಿಯುವುದೆಂದರೆ ಅಪಗತಿ ತಂದು ಕೊಂಡಂತೆಯೆ ಸರಿ. ಅಷ್ಟೇಕೆ , ಮಾನವೀಯ ಪ್ರಜ್ಞೆಯೊಂದಿದ್ದರೆ, ಸಾಲದು ದೈವ ಶ್ರದ್ಧೆ ಇರಲೇಬೇಕು. ನೀವೇ ಯೋಚಿಸಿ; ಅದಿಲ್ಲದಿದ್ದರೆ, ಈ ಜಗತ್ತು ತನ್ನ ವ್ಯಾಪಾರ ವ್ಯವಹಾರದಲ್ಲಿಯೂ ನಂಬಿಕೆಯುಳ್ಳವರಿಲ್ಲದೇನೆ ಸ್ತಗಿತಗೊಳ್ಳುವುದಿಲ್ಲವೇ? ವ್ಯವಹಾರದಲ್ಲಿ ಎಷ್ಟೇ ಲೆಕ್ಕಪತ್ರಗಳು, ದಾಖಲೆಗಳಿರಲಿ ನಂಬಿಕೆಯ ಮೇಲೇ ಕೊಟ್ಯಂತರ ರೂ.ಗಳ ವಹಿವಾಟು ನಡೆಯುತ್ತಲೇ ಇರುವುದನ್ನು ಕಾಣುತ್ತಲೇ ಇದ್ದೇವೆ. ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳು, ಬೃಹತ್ ಬಂಡವಾಳ ಶಾಹಿಗಳೂ ಇಂದಿಗೂ ದೇವರನ್ನು ನಂಬದೇನೆ ತಮ್ಮ ಹಣ ಹೂಡಿಕೆ ಮಾಡದಿರುವವರು ವಿರಳವೇ ಸರಿ. ಕೋಟಿಗಟ್ಟಲೆ ಚೆಲ್ಲುವ ಚಿತ್ರೋದ್ಯಮಿಗಳಂತೂ, ದೇವರು ಹಾಗೂ ತಮ್ಮ ಭವಿಷ್ಯದಲ್ಲಿ ನಂಬಿಕೆ ಎಂದಿಗೂ ಬಿಡಲಾರರಲ್ಲ...!
*********

ಸಪ್ತಗಿರಿಯೊಡೆಯನ ಕಥಾನಕದಲ್ಲಿ ಸಾತ್ವಿಕತೆ ಮತ್ತು ಸಾತ್ವಿಕ ಶಕ್ತಿ ಏನೆಂಬುದನ್ನು ಆ ಶ್ರೀನಿವಾಸನ ಕಥೆಯ ಮೂಲಕವೇ ನಾವು ತಿಳಿಯೋಣ ಇನ್ನೊಮ್ಮೆ ಹೇಳುವೆ- ನೀವು ಈ ಹಿಂದೆ ಓದಿಕೊಂಡಿರಬಹುದಾದ ಶ್ರೀನಿವಾಸ ಕಲ್ಯಾಣ ಅಥವಾ ವೆಂಕಟೇಶ ಪುರಾಣ ಕಥೆಗೆ ಕಿಂಚಿತ್ ಲೋಪವಿಲ್ಲದೇನೆ ಆ ಭಗವಂತನ ಪ್ರೇರೇಪಣೆಯಂತೆಯೆ ನಾನು ಹೇಳಿರುವ ಈ ಕಥೆಯಲ್ಲಿ , ನಿಮಗೆ ಸತ್ವಗುಣದ ಹಿರಿಮೆಯನ್ನು ಸಾರುವ ಎಂದಿಗೂ ಸಾರ್ವಕಾಲಿಕವೆನಿಸುವ ಜೀವನ ಮೌಲ್ಯಗಳು ಪುಟಪುಟಗಳಲ್ಲೂ ಕಾಣಸಿಗುವುದಾದರೆ , ಅದೂ ಆ ದೇವ ದೇವನ ಮಹಿಮೆಯೇ ಅಲ್ಲದೆ ಇನ್ನೇನು! ದ್ವಾಪರಯುಗದಲ್ಲಿ ಶ್ರೀಕೃಷ್ಣನ ಅವತಾರ ಮುಗಿದಿತ್ತು. ಆನಂತರವೇ ಕಲಿಯುಗದಲ್ಲಿ ಶ್ರೀನಿವಾಸನು ಕಾಣಿಸಿಕೊಂಡಿರುವುದು. ದಶಾವ ತಾರಗಳಲ್ಲಿ ಇದೊಂದು ಅವತಾರವೇನಲ್ಲ ಆದರೂ ಕಲಿಯುಗದ ಜನರಿಗೆ ಶ್ರೀನಿವಾಸ ಅವತಾರ ಸ್ವರೂಪಿಯೆ. ಸೃಷ್ಟಿಕರ್ತನ ಬ್ರಹ್ಮಲೋಕದಿಂದ ಈ ಕಥಾನಕದ ಆರಂಭ. ಅಂದೊಮ್ಮೆ ಬ್ರಹ್ಮದೇವನಿಗೆ ಭವಲೋಕದ ಸ್ಥಿತಿಗತಿಗಳ ಕುರಿತು ದೊಡ್ಡ ಚಿಂತೆ. ಆತನ ಶೃತಿ ಸೂತ್ರಗಳು ಉತ್ತರಿಸದಿರಲಾರದೂ ಇದೆಯೇನು? ಸೃಷ್ಟಿಗೆ ಮೂಲಾಧಾರವಾದ, ಏಕಸೂತ್ರವಾದ ಒಂದು ಸಾಮರ್ಥ್ಯವಿದೆ. ಅದೇ “ಸತ್” ಚರಾಚರ ಜಗತ್ತಿನ ಅಸ್ತಿತ್ವಶಕ್ತಿ. ಅದಕ್ಕೆ ಹತ್ತಿರ ಹತ್ತಿರವಾಗತ್ತಾ ಬದುಕುವುದೇ ಮನುಷ್ಯನ ಐಹಿಕ ಸಾಧನೆ. ಆ ಪರಿಯಲ್ಲಿ ಯಥಾರ್ಥವನ್ನು ಮನಗಾಣವುದೇ ಜೀವಿತದ ಧರ್ಮ. ಸತ್ ಶಕ್ತಿಗೆ ತಲೆ ಬಾಗುವುದೆಂದರೇನೆ ಮಾನವ ಧರ್ಮ ಪಾಲಿಸಿದಂತೆ. ಧಾರ್ಮಿಕತೆ ಎಂದರೆ ಒಂದು ಜಾತಿ, ಪಂಗಡವಲ್ಲ; ಯಾವ ಜನಾಂಗದವರೇ ಆಗಲಿಎನ್ನುವುದರ ಬದಲು,ಯಾವ ಧರ್ಮೀಯರೆ ಆಗಲೆಂದು ಹೇಳುವುದು ನಿಜಕ್ಕೂ ತಪ್ಪಾಗುತ್ತದೆ. ನಾವು ದೈವತ್ವದ ಅಳತೆಗೋಲಾಗಿರುವ ದೈವಿಕತೆಗೆ ತಲೆಬಾಗುವುದೆಂದರೆ ಒಂದು ಜಾತಿ ಅಥವಾ ಪಂಗಡ ತೋರಿದ ಪದ್ಧತಿಗಳಿಗೆಂದೇನೂ ಅಲ್ಲ, ಯಾಕೆಂದರೆ, ದೈವಿಕತೆಯ ಇನ್ನೊಂದು ಮುಖವೇ ಧಾರ್ಮಿಕತೆ. ಎಲ್ಲ ಜಾತಿ-ಪಂಗಡದವರಿಗೂ ದೇವರೊಬ್ಬನೇ.. ಧಾರ್ಮಿಕತೆ ದೈವಿಕತೆಯೂ ಒಂದೇ ಅಂತೆಯೇ, ಎಲ್ಲ ಧರ್ಮೀಯರೂ ಎಂದು ಸಂಬೋಧಿಸಿದಾಗ ಎಲ್ಲ ಜಾತಿಯವರೂ ಎಂದೇ ತಿಳಿಯುವುದರಲ್ಲೇ ತಪ್ಪು ಮಾಡುತ್ತೇವಲ್ಲವೇ...
-ಶಿವರಾಂ ಎಚ್. 23 ಆಗಸ್ಟ್ ,2006

ಮುಂದಿನ ಸಂಚಿಕೆಗಳಿಗೆ ಇಲ್ಲಿ ನೋಡಿ-
[http://sapthagirisampada.blogspot.com|ಸಪ್ತಗಿರಿ ಸಂಪದ]