ಏರೋಪ್ಲೇನ್ ಚಿಟ್ಟೆ

ಏರೋಪ್ಲೇನ್ ಚಿಟ್ಟೆ

FULVOUS FOREST SKIMMER

ಗಂಟೆಗೆ ಎಂಭತ್ತು ಕಿ.ಮೀ.ಗಳಷ್ಟು ವೇಗವಾಗಿ ಹಾರುವ ಏರೋಪ್ಲೇನ್ ಚಿಟ್ಟೆ ಅಥವಾ ಡ್ರಾಗನ್ ಫ್ಲೈ ಕೀಟ ಸಮೂಹದಲ್ಲಿ ನಿಸ್ಸೀಮ ಹಾರಾಟಗಾರರೆಂದು ಖ್ಯಾತಿ ಪಡೆದಿದೆ. ಬಣ್ಣ ಬಣ್ಣದ ದೇಹ, ಗಡುಸಾದ ಪಾರದರ್ಶಕ ರೆಕ್ಕೆಗಳು, ರೆಕ್ಕೆಗಳಲ್ಲಿ ಜಾಲದಂತೆ ಹರಡಿರುವ ರಕ್ತನಾಳಗಳು, ದೊಡ್ಡದಾದ ಸಂಯುಕ್ತ ಕಣ್ಣು ಇದರ ಗುಣ ಲಕ್ಷಣ. ಇತರ ಕೀಟಗಳಂತೆಯೇ ೩ ಜೊತೆ ಕಾಲುಗಳಿದ್ದರೂ ಅವು ಚಲಿಸಲು ನಿರುಪಯುಕ್ತವಾಗಿದೆ. ಏರೋಪ್ಲೇನ್ ಚಿಟ್ಟೆಗಳಲ್ಲೇ ಹಲವು ಜಾತಿ ಇದ್ದು, ಸುಮಾರು ೩ ಸೆ.ಮೀ.ನಷ್ಟು ಚಿಕ್ಕ ಚಿಟ್ಟೆಯಿಂದ ೧೦ ಸೆ.ಮೀ.ಗಳಷ್ಟು ಉದ್ದದವರೆಗಿನ ಚಿಟ್ಟೆಗಳೂ ಇವೆ. ಏರೋಪ್ಲೇನ್ ಚಿಟ್ಟೆಗಳು ಸೊಳ್ಳೆ, ನೊಣ, ಚಿಕ್ಕ ಚಿಕ್ಕ ಮಿಡತೆ, ಪತಂಗ, ಚಿಟ್ಟೆಗಳನ್ನು ಹಿಡಿದು ತಿನ್ನುತ್ತವೆ.

ಏರೋಪ್ಲೇನ್ ಚಿಟ್ಟೆಗಳು ಮೊಟ್ಟೆಗಳನ್ನು ನೀರಿನಲ್ಲಿಡುತ್ತವೆ. ಒಂದುವಾರದ ಕಾಲಾವಧಿಯಲ್ಲಿ ಮೊಟ್ಟೆಯಿಂದ ಹೊರಗೆ ಬರುವ ಲಾರ್ವಾಗಳು ನೀರಿನಲ್ಲಿ ಜಲಚರಗಳಾಗಿ ಬದುಕುತ್ತವೆ.ಚಿಕ್ಕ ಪುಟ್ಟ ಲಾರ್ವಾಗಳು ನೀರಿನೊಳಗಿನ ಸೂಕ್ಷ್ಮಜೀವಿಗಳನ್ನು ಭಕ್ಷಿಸಿದರೆ, ದೊಡ್ಡ ಗಾತ್ರದ ಲಾರ್ವಾಗಳು ಚಿಕ್ಕ ಪುಟ್ಟ ಮೀನುಗಳು, ಸ್ವಜಾತಿಯ ಚಿಕ್ಕ ಲಾರ್ವಾಗಳು, ಸೊಳ್ಳೆಯ ಲಾರ್ವಾಗಳನ್ನು ತಿಂದು ಬದುಕುತ್ತವೆ. ಇವು ಪ್ರೌಢಾವಸ್ಥೆಗೆ ಬರಲು ಒಂದು ವರ್ಷಗಳಷ್ಟು ಕಾಲ ಹಿಡಿಯುತ್ತದೆ. ಈ ಸಮಯದಲ್ಲಿ ಹನ್ನೆರಡು ಬಾರಿ ತನ್ನ ಹೊರಗವಚವನ್ನು ಬದಲಿಸುತ್ತವೆ.

Damselfly

ಹೆಲಿಕಾಪ್ಟರ್ ಚಿಟ್ಟೆ ಅಥವಾ ಡ್ಯಾಮ್ಸೆಲ್ ಫ್ಲೈ ಏರೋಪ್ಲೇನ್ ಚಿಟ್ಟೆಯಂತೆಯೇ ಕಾಣಿಸುವ ಅದರ ಹತ್ತಿರದ ಸಂಬಂಧಿ. ಏರೋಪ್ಲೇನ್ ಚಿಟ್ಟೆಗಳ ಹಲವು ಗುಣಲಕ್ಷಣವನ್ನು ಹೋಲುತ್ತವಾದರೂ, ಇವು ಅವುಗಳಿಗಿಂತ ಸೂಕ್ಷ್ಮ. ಏರೋಪ್ಲೇನ್ ಚಿಟ್ಟೆಗಳು ಕೂತಾಗ ರೆಕ್ಕೆಯನ್ನು ದೇಹಕ್ಕೆ ಸಮಾನಾಂತರವಾಗಿ ಬಿಡಿಸಿ ಹಿಡಿದರೆ, ಹೆಲಿಕಾಪ್ಟರ್ ಚಿಟ್ಟೆ ನಾಲ್ಕೂ ರೆಕ್ಕೆ ಒಂದಕ್ಕೊಂದಕ್ಕೆ ಸೇರಿಸಿ ಮಡಿಚಿಕೊಂಡು ಕುಳಿತಿರುತ್ತವೆ. ಹೆಲಿಕಾಪ್ಟರ್ ಚಿಟ್ಟೆಯ ನಾಲ್ಕೂ ರೆಕ್ಕೆಗಳು ಒಂದೇ ಗಾತ್ರದಲ್ಲಿದ್ದು, ಬುಡದಲ್ಲಿ ಚಿಕ್ಕದಾಗಿ ಬೆನ್ನಿಗೆ ಅಂಟಿಕೊಂಡಿದ್ದರೆ, ಏರೋಪ್ಲೇನ್ ಚಿಟ್ಟೆಯ ಮುಂದುಗಡೆಯ ಎರಡು ರೆಕ್ಕೆಗಳು ಹಿಂದಿನ ಎರಡು ರೆಕ್ಕೆಗಳಿಗಿಂತ ಚಿಕ್ಕದಾಗಿರುತ್ತವೆ. ಇವೆರಡೂ ಚಿಟ್ಟೆಗಳು ಹೆಲಿಕಾಪ್ಟರಿನಂತೆಯೇ ಗಾಳಿಯಲ್ಲಿ ಸ್ತಬ್ಧವಾಗಿ ನಿಲ್ಲಬಲ್ಲವಾದರೂ ಏರೋಪ್ಲೇನ್ ಚಿಟ್ಟೆಗಳಿಗಿರುವಂತೆ ವೇಗವಾದ ಹಾರಾಟ ಹೆಲಿಕಾಪ್ಟರ್ ಚಿಟ್ಟೆಗಳಿಗಿಲ್ಲ. ಏರೋಪ್ಲೇನ್ ಚಿಟ್ಟೆಯ ಕಣ್ಣುಗಳು ಒಂದುಗೂಡಿದಂತಿದ್ದರೆ,ಹೆಲಿಕಾಪ್ಟರ್ ಚಿಟ್ಟೆಯ ಕಣ್ಣುಗಳು ಬೇರೆ ಬೇರೆಯಾಗಿ ಗುರುತಿಸುವಂತಿದೆ.

ಆಧಾರ:
ನಡೆಯುವ ಕಡ್ಡಿ, ಹಾರುವ ಎಲೆ - ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಡಾ ವಿ.ವಿ. ಬೆಳವಾಡಿ
Damselflies
Dragonfly

Rating
No votes yet

Comments