ಇದು ಎಂಥಾ ಮೌಢ್ಯವಯ್ಯಾ?

ಇದು ಎಂಥಾ ಮೌಢ್ಯವಯ್ಯಾ?

ಬರಹ

ಇದು ಎಂಥಾ ಮೌಢ್ಯವಯ್ಯಾ?

ಸ್ವಾಗತ "ಅಬ್ರಕದಬ್ರ" ಲೋಕಕ್ಕೆ. ವೈದ್ಯಕೀಯ ಲೋಕ ನೀಡಲಾಗದ, ಎಂಥ ವಿವೇಕಿಗಳೂ ನೀಡಲಾರದ ಮದ್ದನ್ನು ಇವರು ನೀಡುತ್ತಾರೆ. ಮಂತ್ರವಾದಿಗಳು. ಸಮಸ್ಯೆ ಹೇಳಿದರೆ ಸಾಕು ಪರಿಹಾರ ತೀರ್ಥ ರೂಪದಲ್ಲೂ, ಭಸ್ಮದ ರೂಪದಲ್ಲೂ ತಯಾರು. ಓನ್ಲಿ ಆನ್ ಒನ್ ಕಂಡೀಷನ್, ಅವರನ್ನು ಅವರ ಚಿಕಿತ್ಸೆಯನ್ನು ನಂಬಬೇಕು. ಹಾಗಿದ್ದರೆ ನಿಮ್ಮ ಎಲ್ಲ ಬ್ಯಾನೆಗಳೂ ಬೈ, ಬೈ ಹೇಳಿ ಬಿಡುತ್ವೆ.
ಇವರಲ್ಲೂ specialist ಗಳಿದ್ದಾರೆ. psychologist, gynaecologist, geologist etc.

ನನಗೆ ತಿಳಿದ ಮಟ್ಟಿಗೆ ಕೇರಳದವರು ಈ ವಿದ್ಯೆಯಲ್ಲಿ ಮುಂದು. ನೀರು ಮಂತ್ರಿಸಿ ಕೊಟ್ಟು ಜನರಿಗೆ ನೀರು ಕುಡಿಸುವುದು, ಭಸ್ಮದ ಮೇಲೆ ಊದಿ ಬುಧ್ಧಿಗೆ ಮಂಕು ಹಿಡಿಸುವುದು ಇವರ ಜಾಯಮಾನ. ಇವರ ಮೋಸ ತಿಳಿದರೂ ಅಯಸ್ಕಾಂತದ ಮೋಹ ಪಾಶಕ್ಕೆ ಬೀಳುವ ಲೋಹಗಳಂತೆ ಬೀಳುವರು ಜನರು.

ಒಬ್ಬಾಕೆಗೆ ಬಹಳ ವರ್ಷಗಳಿಂದ ಮಕ್ಕಳಾಗಲಿಲ್ಲ. ಎಲ್ಲ ದೇವರುಗಳಿಗೆ ಕಾಣಿಕೆ ಅರ್ಪಿಸಿದರೂ ಫಲವಿಲ್ಲ. ಕೊನೆಗೆ ಯಾರೋ ಹೇಳಿದರು ಒಬ್ಬ ಮಂತ್ರವಾದಿಯ ಹೆಸರನ್ನು, ಅಡ್ರೆಸ್ಸನ್ನು. ಸರಿ ಬೆಳೆಯಿತು ಪ್ರಯಾಣ ನಮ್ಮ gynaecologist ಮಂತ್ರವಾದಿಯ ಕಡೆಗೆ. ಈಕೆಯ ಸಂಕಟ ಆಲಿಸಿದ ಮಹಾಶಯ ಕೊಟ್ಟ ಮಂತ್ರಿಸಿದ ತೀರ್ಥವನ್ನು. ಹುರ್ರೇ, ಆದಳು ಆಕೆ ಮಹಾತಾಯಿ. ತೀರ್ಥ ಕೊಟ್ಟ ಮಂತ್ರವಾದಿಯ ಬಯೋ ಡಾಟಾ ಕ್ಕೆ ಮತ್ತೊಂದು "ಜೋಗುಳ" ಸೇರಿಕೊಂಡಿತು.

ಈ ಮಂತ್ರವಾದಿಯ ತೀರ್ಥದಿಂದ pregnancy guaranteed!!!

ಇನ್ನೊಬ್ಬ ಮಂತ್ರವಾದಿಯ ಸ್ಟೈಲ್ ಹೀಗೆ. ಈತ ಸ್ವಲ್ಪ ಮಾಡರ್ನ್. ಒಳ್ಳೆ ಕಾರು, ಕಾರಿನಲ್ಲಿ ಸಾಫ್ಟ್ ರಾಕ್ ಮ್ಯೂಸಿಕ್. ಒಬ್ಬ ತನಗೆ ರಾತ್ರಿ ನಿದ್ದೆ ಬರುತ್ತಿಲ್ಲ ಎನ್ನುವ ಶಿಕಾಯತಿನೊಂದಿಗೆ ಬಂದ. ಮಂತ್ರವಾದಿ ಹೇಳಿದರು, ನೋಡು ರಾತ್ರಿ ಒಳ್ಳೆ ಗಜ್ಯಲ್ ಹಾಕಿ ಮಲಗು ತಂತಾನೇ ನಿದ್ದೆ ಬಂದು ಬಿಡುತ್ತೆ ಅಂತ. ಈ ಮಂತ್ರವಾದಿ geologist ಸಹ ಹೌದು. and also a good samaritan. ಹೇಗೆ ಅಂತೀರಾ? ನೀರಿಗೆ ಅಭಾವ ವಿರುವ ಸ್ಥಳವೊಂದರಲ್ಲಿ ಮನೆ ಕಟ್ಟಿಸಿ ಬೋರ್ ಹೊಡೆಸಿದ. ಬಂತು ನೀರು. ನೀರಿಲ್ಲದ ಸ್ಥಳದಲ್ಲಿ ನೀರು. ಅಕ್ಕ ಪಕ್ಕದವರಿಗೆ ಫ್ರೀ ಆಗಿ ಕೊಟ್ಟ ನೀರನ್ನು. ಹೆಸರು ಮನೆ ಮಾತಾಯಿತು. ಬೋರ್ ಹೊಡೆಯುವ ಮುನ್ನ ಇಂಜಿನಿಯರ್ ಆನ್ನು ಕಾಣುವುದನ್ನು ಬಿಟ್ಟು ಇವನ ಮನೆ ಮುಂದೆ ಜಮಾಯಿಸಿದರು ಜನ. ಈತ ತೋರಿಸಿದ ಕಡೆಯಲ್ಲೆಲ್ಲ ಹೆಚ್ಚು ಕಡಿಮೆ ನೀರು ಸಿಕ್ಕಿತು.

ಒಬ್ಬ ಹುಡುಗಿಗೆ ಸಂಜೆ ಆದ ಕೂಡಲೇ ಭೂತ ಹಿಡಿಯುತ್ತೆ. ಪ್ರೇಮದ ಭೂತವೋ ಏನೋ ಗೊತ್ತಿಲ್ಲ. ಮನೆಯವರು ಕಂಗಾಲಾದರು. ಚೆನ್ನಾಗಿದ್ದ ಹುಡುಗಿ ಯಾಕೆ ಹೀಗೆ ಆಡುತ್ತಿದ್ದಾಳೆ ಅಂತ. ಏನೇನೋ ಬಡಬಡಿಸುತ್ತಾಳೆ. ಯಾರೋ ಹೇಳಿದರು psychologist ಮಂತ್ರವಾದಿಯ ಹೆಸರನ್ನು. ಈತ ತರುಣ. ಮನೆಯವರಿಗೆ ಹೊರಗೆ ಹೋಗುವಂತೆ ಹೇಳಿ ಏನೇನೋ ಅರಬ್ಬೀ ಭಾಷೆಯಲ್ಲಿ ಮಂತ್ರ ಓದಿದ. ಒಂದು ವಾರ ಬೇಕು ಈ ಭೂತ ಹೋಗಲು ಎಂದ. ಮನೆಯವರು ಒಪ್ಪಿದರು. ಒಂದು ವಾರ ದಿನವೂ ಬಂದು ಊದಿ ಊದಿ ಭೂತದೊಂದಿಗೆ ಹುಡುಗಿಯನ್ನೂ ಎತ್ತಿ ಕೊಂಡು ಹೋದ. ನನತರ ತಿಳಿಯಿತು ಇವನಿಗೂ ಹುಡಿಗಿಗೂ ಲವ್ ಇತ್ತು ಅಂತ.

ಸಾಕಷ್ಟು ಹೆಸರು ಮಾಡಿದ್ದ ಹೆರಿಗೆ ಆಸ್ಪತ್ರೆಗೆ ದಾರಿದ್ರ್ಯ ತಗುಲಿಕೊಂಡಿತು. ಇದ್ದಕ್ಕಿದ್ದಂತೆ ರೋಗಿಗಳು ಬರುವುದನ್ನು ನಿಲ್ಲಿಸಿದರು ಈ ಆಸ್ಪತ್ರೆಗೆ. ಹೆರಿಗೆ ಮಾಡಿಸುವ ಡಾಕ್ಟರಿಗೆ labor room (ಡೆಲಿವರಿ ಆಗೋ ಸ್ಥಳ ) ಗೆ ಹೋದ ಕೂಡಲೇ ತಲೆ ಸುತ್ತು ಬರುತ್ತಂತೆ, ಕಣ್ಣೆಲ್ಲ ಮಂಜು ಮಂಜಂತೆ ಅಂತ ಪುಕಾರು. ಭಯದಿಂದ ಗರ್ಭಿಣಿಯರು ಬೇರೆ ಆಸ್ಪತ್ರೆ ಕಡೆ ನಡೆದರು. ಪಾಪ ಈ ಆಸ್ಪತ್ರೆಯ ಡಾಕ್ಟರಿಗೆ ಸಂಕಟ. ಏನು ಯಾರೂ ಬರುತ್ತಾ ಇಲ್ವಲ್ಲ ಅಂತ. ಮಿತ್ರರ ಮಾತು ಕೇಳಿ ಒಬ್ಬ ಮಂತ್ರವಾದಿಯ ಬಳಿ ಹೋದರು. ಆತ ಬಂದು ಆಸ್ಪತ್ರೆಯನ್ನೆಲ್ಲ ವೀಕ್ಷಿಸಿ labor room ನೋಡ್ಬೇಕು ಅಂದ. ಸರಿ ಹೇಗೂ ಗಿರಾಕಿ ಯಾರೂ ಇಲ್ಲ, ರೂಂ ತೋರಿಸಲಿಕ್ಕೆ ಅಡ್ಡಿ ಇಲ್ಲ ಅಂತ ಈತನನ್ನು ಕರೆದುಕೊಂಡು ಹೋದರು ಭಾವಿ ಪ್ರಜೆಗಳು ರಿಲೀಸ್ ಆಗೋ ರೂಮಿಗೆ. ರೂಂ ವೀಕ್ಷಿಸಿದ ಈತ ಹೇಳಿದ. ಇಲ್ಲಿರೋ ಮಂಚದ ಕಾಲಿಗೆ ಯಾರೋ ನಿಮಗೆ ಆಗದವರು ಅಥವಾ ಪಕ್ಕದ ಆಸ್ಪತ್ರೆಯವರು ಮಾಟ ಮಾಡಿದ್ದಾರೆ ಅಂತ. ಸರಿ ಸಾಕಷ್ಟು ಹಣ ಕೊಟ್ಟು ಮಾಟ ಕೀಳಿಸುವ ಗುತ್ತಿಗೆಗೆ ಒಪ್ಪಿದರು ವೈದ್ಯರು. ನೀವು ನಂಬಲಿಕ್ಕಿಲ್ಲ, ಮಾಟದ ವಿಕೆಟ್ ಎಗರಿದ ಕೆಲವೇ ದಿನಗಳಲ್ಲಿ ಸಾಲು ಸಾಲಾಗಿ ಬಂದರು ನಮ್ಮ ಭವಿಷ್ಯವನ್ನು ಬೆಳಗುವ ಮಕ್ಕಳನ್ನು ಒಡಲಲ್ಲಿ ಹೊತ್ತ ಗರ್ಭಿಣಿಯರು.

ಈ ಮೌಢ್ಯ ಬರೀ ಮಾಟ ಮಂತ್ರಕ್ಕೆ ಸೀಮಿತ ಅಲ್ಲ. ಪ್ರತಿ ಮನೆಯಲ್ಲೂ ಒಂದಲ್ಲ ಒಂದು ರೀತಿಯಲ್ಲಿ ವಕ್ಕರಿಸುತ್ತವೆ ಮೂಡ ನಂಬಿಕೆಗಳು.

ನನ್ನ ಅಮ್ಮ ಮಂಗಳವಾರ ಉಗುರು ತೆಗೆಯಲು ನಮ್ಮನ್ನು ಬಿಡುವುದಿಲ್ಲ. ಸಂಜೆ ಸಹ ತೆಗೆಯಬಾರದಂತೆ. ಮನೆಗೆ ದಾರಿದ್ರ್ಯ ಹಿಡಿಯುತ್ತಂತೆ. ನನಗೂ ನನ್ನ ಅಮ್ಮನಿಗೂ ಯಾವಾಗಲೂ ಜಗಳ. ಯಾವುದೋ ನಿಗೂಢ ಕಾರಣಕ್ಕೆ ನನಗೆ ನೆನಪಾಗುವುದೇ ಮಂಗಳವಾರದಂದು ಉಗುರು ತೆಗೆಯಲು. ದಾರಿದ್ರ್ಯದ ಸಿದ್ಧಾಂತ ತರುವ ಅಮ್ಮನಿಂದ ಒಂದಿಷ್ಟು ಬೈಗುಳ ತಿಂದು ಕತ್ತರಿಸುತ್ತೇನೆ ಉಗುರುಗಳನ್ನು ಮಂಗಳವಾರ ಅದೂ ಸೂರ್ಯ ಅಸ್ತಮಿಸಿದ ನಂತರ.

ನನ್ನ ಅಪ್ಪನಿಗೆ ರಾಹು ಕಾಲ, ಗುಳಿಗೆ ಕಾಲ, ಕೆಟ್ಟ ದೃಷ್ಟಿ ಹೀಗೆ ಕೆಲವು ಪ್ರಾಬ್ಲಮ್ಗಳು. ನಾನು ರಜೆಗೆ ಎಂದು ಮನೆಗೆ ಬಂದಾಗ ಹೊಸ ಸೀನ್ ಸಿಕ್ಕಿತು ನೋಡಲು. ಮನೆಯ ಬಾಗಿಲ ಮೇಲೆ ತೆಂಗಿನಕಾಯಿಗೆ ಬಟ್ಟೆ ಸುತ್ತಿ ನೇತು ಹಾಕಿದ್ದರು. ವಿಚಾರಿಸಿದಾಗ ಅಮ್ಮ ಹೇಳಿದರು ಅದು ನಿನ್ನ ಅಪ್ಪ ನೇತು ಹಾಕಿದ್ದು ಅಂತ. ನನಗೆ ಕೋಪ ತಡೆಯಲಾಗಲಿಲ್ಲ. ನಾನೆಲ್ಲೋ ಹೊರಟಿದ್ದೇನೆ, ಮನೆಗೆ ವಾಪಸಾಗುವ ಮೊದಲು ಮನೆಯಲ್ಲಿ ತೆಂಗಿನಕಾಯಿ ಇರಬಾರದು, ಒಂದೋ ನಾನು ಇಲ್ಲಾ ಆ ಪಂಚೆ ಸುತ್ತಿಕೊಂಡ ತೆಂಗಿನಕಾಯಿ ಅಂತ್ಹೇಳಿ ಹೊರ ನಡೆದೆ. ವಾಪಸು ಬಂದಾಗ ತೆಂಗಿನ ಕಾಯಿ ನೇತುಕೊಂಡಿದ್ದ ಉದ್ದದ ಮೊಳೆ ಸಂಗಾತಿ ಇಲ್ಲದೆ ಒಂಟಿಯಾಗಿ ನಿಂತಿತ್ತು.

ನಮ್ಮ ಮನೆಯ ಒಂದು ತೆಂಗು ನೂರಾರು ಕಾಯಿಗಳನ್ನು ಕೊಡುತ್ತೆ. ನೆಟ್ಟ ಕೇವಲ ೪ ವರ್ಷಗಳಲ್ಲಿ ಮರ ತುಂಬಾ ಕಾಯಿಗಳೇ. ದೃಷ್ಟಿ ತಾಗೀತೆಂದು ತೆಂಗಿನ ಕೊರಳಿಗೆ ಪೊರಕೆ ಕಟ್ಟಿದರು ಅಪ್ಪ. ಈ ಕೆಲಸ ಎಲ್ಲ ಅಪ್ಪ ನಾನಿಲ್ಲದ ಸಮಯ ಮಾಡೋದು. ನಾನು ಬರುವುದು ವರ್ಷಕ್ಕೊಮ್ಮೆ, ಇವನ ಕಣ್ಣಿಗೆ ಬೀಳಲಿಕ್ಕೆ ಇಲ್ಲ ಅಂತ ಅಪ್ಪನ ಲೆಕ್ಕಾಚಾರ. ಇದು ನನ್ನ ಕಣ್ಣಿಗೆ ಬಿತ್ತು. ಕೇಳಿದಾಗ ಅಪ್ಪ ಹೇಳಿದರು ದೃಷ್ಟಿ ತಾಗೀತು ಅಂತ ಕಟ್ಟಿದ್ದೇನೆ ಎಂದು. ನಿಮಗೆ ದೇವರ ಮೇಲೆ ನಂಬಿಕೆ ಕಡಿಮೆ, ಇಂಥ ವಿಷಯದಲ್ಲಿ ನಂಬಿಕೆ ಜಾಸ್ತಿ ಅಂತ ಗದರಿಸಿ, ಜಗಳ ಮಾಡಿ ಪೊರಕೆ ತೆಗೆಸಿದೆ. ಒಂದು ವರ್ಷ ಕಳೆಯಿತು. ಮತ್ತೊಂದು ರಜೆಯ ಮೇಲೆ ಊರಿಗೆ ಬಂದೆ. ಅಪ್ಪನ ನಗು ಮೊಗದ ಬದಲು ಕೋಪ ಕಾಣ ಸಿಕ್ಕಿತು. " ನೋಡು, ನೀನು ಪೊರಕೆ ತೆಗೆಸಿದ ಮೇಲೆ ತೆಂಗಿನ ಮೇಲೆ ಕೆಟ್ಟ ದೃಷ್ಟಿ ಬಿದ್ದು ಕಾಯಿಗಳೆಲ್ಲ ಉದುರಿ ಹೋದವು, ಈಗ ಮೊದಲಿನಂತೆ ಕಾಯಿಗಳಿಲ್ಲ ಎಂದು ನನ್ನೆಡೆ ಕೋಪದಿಂದಲೂ, ತೆಂಗಿನಕಡೆ ಕನಿಕರದಿಂದಲೂ ನೋಡಿ ಒಳನಡೆದರು. ನಿಮ್ಮ ಸಹವಾಸಕ್ಕೆ ನಾನು ಬರುವುದಿಲ್ಲ ತೆಂಗಿಗೆ ಪೋರಕೆಯಾದರೂ ಕಟ್ಟಿ, ಚಪ್ಪಲಿಯಾದರೂ ಕಟ್ಟಿ ಎಂದು ಅಪ್ಪ ಮಗನ ಮಧ್ಯೆ ವಿರಸ ಹುಟ್ಟು ಹಾಕಿದ ಆ ಪೊರಕೆ ಮತ್ತು ತೆಂಗನ್ನು ಶಪಿಸುತ್ತಾ ಅಪ್ಪನನ್ನು ಹಿಂಬಾಲಿಸಿದೆ.