ಸವಾಲಿಗೆ ಜವಾಬ್!

ಸವಾಲಿಗೆ ಜವಾಬ್!

ಬರಹ

ಸವಾಲಿಗೆ ಜವಾಬ್!
vark.com ನಿಮ್ಮ ಪ್ರಶ್ನೆಗಳಿಗೆ ಕ್ಷಣದಲ್ಲಿ ಉತ್ತರ ದೊರಕಿಸಿಕೊಡಲು ಅಂತರ್ಜಾಲದಲ್ಲಿ ಆರಂಭವಾಗಿರುವ ಹೊಸ ತಾಣ. ತಾಣದಲ್ಲಿ ನೋಂದಾಯಿಸಿಕೊಂಡರೆ, ಈ ಸೇವೆ ನಿಮಗೆ ಲಭ್ಯ.ನೋಂದಾಯಿಸಿಕೊಳ್ಳುವಾಗ ನೀವು ಪರಿಣತಿ ಹೊಂದಿರುವ ಮೂರು ವಿಷಯಗಳನ್ನು ಸೂಚಿಸಬೇಕು. ಇನ್ಯಾರಾದರೂ ಈ ವಿಷಯಗಳಲ್ಲಿ ಪ್ರಶ್ನೆಗಳನ್ನು ಕೇಳಿದರೆ, ಅವನ್ನು ನಿಮಗೆ ರವಾನಿಸಿ,ಉತ್ತರ ಪಡೆಯಲು ಅಂತರ್ಜಾಲ ತಾಣ ಪ್ರಯತ್ನಿಸುತ್ತದೆ. ಗೂಗಲ್,ಯಾಹೂ ಹೀಗೆ ಯಾವುದಾದರೂ ದಿಡೀರ್ ಸಂದೇಶ ರವಾನಿಸುವ ಸೇವೆಯ ಮೂಲಕ ನಿಮಗೆ ಉತ್ತರವನ್ನು ಅಥವ ಇತರರ ಪ್ರಶ್ನೆಗಳನ್ನು ರವಾನಿಸಲಾಗುತ್ತದೆ. ನೀವು ಪ್ರಶ್ನೆ ಕೇಳಿ ನಂತರ ಆನ್‍ಲೈನ್ ಇಲ್ಲದಿದ್ದರೆ, ಆಗ ನಿಮಗೆ ಉತ್ತರವನ್ನು ಮಿಂಚಂಚೆ ಮೂಲಕ ರವಾನಿಸಲಾಗುತ್ತದೆ.""ಉದಯವಾಣಿ" ಏನು? ಇದು ಯಾವುದರ ಹೆಸರು?"ಎಂಬ ಪ್ರಶ್ನೆಗೆ ವರ್ಕ್ ತಾಣವು ತನ್ನ ಬಳಕೆದಾರರ ಮೂಲಕ ಪತ್ರಿಕೆಯ ಇ-ಪೇಪರ್ ಕೊಂಡಿ ರವಾನಿಸಿತು! "ಉಡುಪಿ-ಮಂಗಳೂರು ನಡುವಣ ದೂರ ಎಷ್ಟು?"ಎಂಬ ಇನ್ನೊಂದು ಪ್ರಶ್ನೆಗೆ ಅರುವತ್ತು ಕಿಲೋಮೀಟರ್-ಈ ದೂರವನ್ನು ರೈಲಿನ ಮೂಲಕವೂ ಕ್ರಮಿಸಬಹುದು ಎಂಬ ಸರಿಯಾದ ಉತ್ತರ ಬಂತು!ಪ್ರಶ್ನೆ ಕೇಳಿದಾಗ,ನಿಮ್ಮ ಸ್ನೇಹಿತರ ಬಳಗದ ಮೂಲಕ ಇಲ್ಲವೇ ಆನ್‍ಲೈನಿನಲ್ಲಿರುವ ಬಳಕೆದಾರರ ಪೈಕಿ, ಆ ವಿಷಯ ಪರಿಣತರಿಂದ ಉತ್ತರ ಪಡೆಯುವ ಕಾರಣ,ನಿಮಿಷ ಮಾತ್ರದಲ್ಲಿ ಉತ್ತರಗಳು ಲಭ್ಯವಾಗುವ ಸಂಭವವೇ ಹೆಚ್ಚು.

-----------------------------------------------------------------------------------
ಪತ್ರಿಕೆಯ ಇ-ಪ್ರತಿಗಳುಉದಯವನಿ
"ಉದಯವಾಣಿ"ಯ ಇ-ಪತ್ರಿಕೆಯೀಗ ಲಭ್ಯವಿರುವುದು ನಿಮಗೆ ಗೊತ್ತೇ ಇದೆ. www.udayavani.com/epaperನಲ್ಲಿದು ಲಭ್ಯವಿದೆ.ಹಾಗೆಯೇ www.pressdisplay.comನಲ್ಲಿ ವಿಶ್ವದ ನೂರಾರು ಪತ್ರಿಕೆಗಳ ಇ-ಪತ್ರಿಕೆ ಲಭ್ಯವಿದೆ.ಇಲ್ಲಿ ನೋಂದಾಯಿಸಿಕೊಂಡರೆ, ಸೀಮಿತ ಅವಧಿಗೆ ಉಚಿತ ಪ್ರಯೋಗಾರ್ಥ ಸೇವೆ ಲಭ್ಯವಿದೆ. ನಂತರ ಹಣ ಪಾವತಿಸಿ ಚಂದಾದಾರರಾಗಬಹುದು.ಸದ್ಯ ಕನ್ನಡಪತ್ರಿಕೆಗಳ ಪೈಕಿ "ಉದಯವಾಣಿ" ಮಾತ್ರಾ ಲಭ್ಯವಿದೆ.ವಿದೇಶಗಳ ಪತ್ರಿಕೆಗಳೂ ಇಲ್ಲಿ ಲಭ್ಯವಿದೆ.ದೇಶಾವಾರು ರೀತ್ಯ ಪತ್ರಿಕೆಗಳನ್ನು ವಿಭಾಗಿಸಿಟ್ಟಿರುವುದರಿಂದ ಪತ್ರಿಕೆಗಳನ್ನು ಹುಡುಕುವುದು ಸುಲಭ.
------------------------------------------------------------------
ಹೊಸ ವಿಂಡೋಸ್ 7 ಕಂಪ್ಯೂಟರ್ ಮಾರಾಟ ಕುದುರಿಸೀತೇ?
ಮೈಕ್ರೋಸಾಫ್ಟಿನ ಹೊಸ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶ ಅಕ್ಟೋಬರ್ ವೇಳೆ ಮಾರಾಟಕ್ಕೆ ಲಭ್ಯವಾಗಲಿದೆ. ಇದರ ಪ್ರಾಯೋಗಿಕ ಆವೃತ್ತಿ ಸದ್ಯ  ಲಭ್ಯವಿದ್ದು,ಉಚಿತ ಬಳಕೆ ಮಾಡಬಹುದು. ಈ ತಂತ್ರಾಂಶದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಹೊಸ ಆವೃತ್ತಿಯು ಲಭ್ಯವಾದಾಗ,ಅದನ್ನು ಕೊಳ್ಳಬಯಸುವವರು,ಅದರ ಜತೆ ಯಂತ್ರಾಂಶವನ್ನೂ ಬದಲಿಸುವುದು ಸಂಭವನೀಯ.ಹೀಗಾಗಿ ಅಕ್ಟೋಬರ್ ನಂತರವಾದರೂ ಕಂಪ್ಯೂಟರ್ ಮಾರಾಟವು ಚೇತರಿಸಿಕೊಳ್ಳಬಹುದೋ ಎಂಬ ನಿರೀಕ್ಷೆ ಉದ್ಯಮವಲಯದಲ್ಲಿದೆ.ಆದರೆ, ಅಂತರ್ಜಾಲದಲ್ಲೆ ಸಕಲ ಸೇವೆಗಳೂ ಲಭ್ಯವಾಗಿ, ಸರಳ ಕಂಪ್ಯೂಟರ್ ಬಳಸಿ, ಅತ್ಯುತ್ತಮ ಸೇವೆ ಪಡೆಯುವ ಕ್ಲೌಡ್ ಕಂಪ್ಯೂಟಿಂಗ್ ಈಗ ಜನಪ್ರಿಯವಾಗುತ್ತಿರುವುದರಿಂದ, ಈ ನಿರೀಕ್ಷೆ ಹುಸಿಯಾದರೂ ಅಚ್ಚರಿಯಿಲ್ಲ.
--------------------------------------------------------------
ಅಂತರ್ಜಾಲದ ಮೂಲಕ ನಿಸರ್ಗ ವೀಕ್ಷಣಾಲಯ
ನಿಸರ್ಗದಲ್ಲಿ ಆಗುತ್ತಿರುವ ಪ್ರತಿಯೊಂದು ಸಣ್ಣ ಬದಲಾವಣೆಯನ್ನು ದಾಖಲಿಸಲು ಅಂತರ್ಜಾಲದ ಶಕ್ತಿಯನ್ನು ಬಳಸುವತ್ತ ವಿಜ್ಞಾನಿಗಳು ಮುನ್ನಡೆದಿದ್ದಾರೆ.ಜನರು ತಾವು ಗಮನಿಸಿದ ಸಣ್ಣ ವಿಷಯವನ್ನು ದಾಖಲಿಸಲು ಅನುವು ಮಾಡುವ ತಾಣವೊಂದನ್ನು ಒದಗಿಸಿಕೊಡುವುದು ಪರಿಸರ ವಿಜ್ಞಾನಿಗಳ ಯೋಜನೆ.ಇಲ್ಲಿ ದಾಖಲಾದ ಮಾಹಿತಿಗಳು ಸಸ್ಯ,ಪ್ರಾಣಿ ಅಥವ ಪಕ್ಷಿ ಸಂಕುಲದ ಜೀವನದ ಬಗ್ಗೆ ಹೊಸ ಬೆಳಕು ಚೆಲ್ಲಿ,ಆನ್‍ಲೈನ್ ನಿಸರ್ಗವೀಕ್ಷಾಣಾಲಯವಾಗಿ ಬಿಡುವ ಸಾಧ್ಯತೆ ಉಜ್ವಲವಾಗಿದೆ. ನಿ೯ಸರ್ಗದ ಬಗ್ಗೆ ಚಿತ್ರ,ವಿಡಿಯೋ ಮತ್ತು ಬರಹಗಳನ್ನು ಸೇರಿಸುವ ಮೂಲಕ ಇದು ಅತ್ಯುತ್ತಮ ಮಾಹಿತಿಯನ್ನು ಒಳಗೊಳ್ಳಲಿದೆ. ಅಲ್ಲದೆ ಅಂತರ್ಜಾಲ ಮೂಲಕ ಅಗಣಿತ ಜನರೂ ಇದಕ್ಕೆ ತಮ್ಮ ಕಿಂಚಿತ್ ಮಾಹಿತಿಯನ್ನು ಸೇರಿಸಲು ಅವಕಾಶ ಇರುವುದು, ಅಗಾಧ ಮಾಹಿತಿಯನ್ನು ಕಲೆ ಹಾಕಲಿದು ಸಮರ್ಥವಾಗುವುದರಲ್ಲಿ ಸಂಶಯವಿಲ್ಲ.
----------------------------------------------------
ಆತ್ಮಹತ್ಯಾದಳಕ್ಕೆ ರೊಬೋ ಹಾವು!
ಇಸ್ರೇಲ್ ಮಿಲಿಟರಿಯು ರೋಬೋ-ಹಾವೊಂದನ್ನು ತಯಾರಿಸಿದೆ. ನೈಜ ಹಾವಿನ ರಚನೆಯನ್ನು ಅನುಕರಿಸಿ ಇದನ್ನು ತಯಾರಿಸಲಾಗಿದೆ. ಒಂದು ಕ್ಯಾಮರಾ ಮತ್ತು ಮೈಕನ್ನು ಇದರ ತಲೆಯಲ್ಲಿ ಅಳವಡಿಸಿರುವುದರಿಂದ ಈ ರೋಬೋ-ಹಾವು ಬಂಡೆ ಅಥವ ಕಟ್ಟಡದ ಸಂದುಗಳಲ್ಲೂ ಓಡಾಡಿ, ಮಾಹಿತಿಯನ್ನು ಸಂಗ್ರಹಿಸಬಲ್ಲುದು.ಇದಕ್ಕೆ ಬಾಂಬು ಅಳವಡಿಸಿ,ಬೇಕಾದಲ್ಲಿಗಿದು ತಲುಪಿದಾಗ ಬಾಂಬು ಸ್ಫೋಟವಾಗುವಂತೆ ಮಾಡಿದರೆ,ಇದು ಆತ್ಮಹತ್ಯಾ ಬಾಂಬರ್ ಕೂಡಾ ಆಗಬಲ್ಲುದು.ಭಯೋತ್ಪಾದಕರ ತಾಣಗಳಿಗಿವನ್ನು ನುಗ್ಗಿಸಿ,ನಿರ್ಮೂಲ ಮಾಡಲಿವನ್ನು ಬಳಸುವ ದಿನಗಳಿನ್ನು ದೂರವಿಲ್ಲ.
---------------------------------------------------
ಬಾಹ್ಯಾಕಾಶ ಕೇಂದ್ರದಲ್ಲಿ ಹದಿಮೂರು ಜನ
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವೂ ಕೆಲದಿನಗಳ ಮಟ್ಟಿಗೆ ಭೂಮಿಯಂತೆ ಜನಸಂದಣಿಯನ್ನು ಕಾಣಲಿದೆ. ಎಂಡೇವರ್ ಸ್ಪೇಸ್ ಶಟಲಿನ ಯಾತ್ರಿಗಳು ಬಾಹ್ಯಾಕಾಶ ಕೇಂದ್ರದಲ್ಲಿ ಉಳಕೊಳ್ಳುವುದರಿಂದ ಈ ಜನಸಂದಣಿ ಏರ್ಪಡಲಿದೆ. ಹದಿಮೂರು ಜನರು ಇಲ್ಲಿ ತಂಗಬೇಕಾಗಿದೆ.ಭೂಮಿಯಿಂದ ಇನ್ನೂರಿಪ್ಪತ್ತೈದು ಕಿಲೋಮೀಟರ್ ದೂರದಲ್ಲಿರುವ ಈ ಕೇಂದ್ರವನ್ನು ಎರಡು ವರ್ಷಗಳ ಹಿಂದೆ ವಿಸ್ತರಿಸಲಾಗಿದೆ.ಈಗ ಅಲ್ಲಿ ಹೊಸದಾಗಿ ನಾಲ್ಕು ವಿಭಾಗಗಳಿವೆ.ಸದ್ಯ ಅಲ್ಲಿರುವ ಜಾಗ ಇಪ್ಪತ್ತಾರು ಸಾವಿರ ಘನ ಅಡಿಗಳಷ್ಟು.ಅಂದರೆ ನಾಲ್ಕು ಬೆಡ್‌ರೂಮ್ ಮನೆಯ ಸ್ಥಳಾವಕಾಶ ಇಲ್ಲಿದೆ.ಇಲ್ಲಿನ ವಾಸಿಗಳು ಅತ್ಯಂತ ಸೀಮಿತ ನೀರು-ಆಹಾರವನ್ನು ಪಡೆಯಲಷ್ಟೇ ಸಾಧ್ಯ. ಮೂತ್ರವನ್ನು ಶುದ್ಧೀಕರಿಸಿ, ಕುಡಿಯುವ ನೀರು ಪಡೆಯುವ ವ್ಯವಸ್ಥೆಯನ್ನಲ್ಲಿ ಅವಲಂಬಿಸಬೇಕಿದೆ.


ಉದಯವಾಣಿ

*ಅಶೋಕ್‌ಕುಮಾರ್ ಎ