ನಾವು ಕಳೆದುಕೊಂಡಿರುವ ಸೂಕ್ಷ್ಮಗಳು

ನಾವು ಕಳೆದುಕೊಂಡಿರುವ ಸೂಕ್ಷ್ಮಗಳು

ಬರಹ

ಜನವರಿ ಬಂತೆಂದರೆ ಯಾರು ಯಾರೋ ಡೈರಿ ತಂದು ಕೊಡುತ್ತಿದ್ದರು. ಅದರಲ್ಲಿ ಜಾಸ್ತಿ ಪುಟಗಳು, ಒಂದು ದಿನಕ್ಕೆ ಒಂದು ಪುಟ ಇರುವಂಥವು ಆಯ್ದು ಒಂದೋ ಎರಡೋ ನಾನು ಇಟ್ಟುಕೊಂಡು ಉಳಿದಿದ್ದನ್ನ ಯಾರು ಕೇಳಿದರೆ ಅವರಿಗೆ ಕೊಟ್ಟು ಬಿಡುತ್ತಿದ್ದೆ. ಸಾಮಾನ್ಯವಾಗಿ ನಾನು ಉಳಿಸಿಕೊಂಡವು ಕವಿತೆ ಬರೆಯಲು ಅಥವಾ ಮನಸ್ಸಿಗೆ ಹಿಂಸೆ ತಂದ ಘಟನೆಗಳನ್ನು ಕುರಿತು ಟಿಪ್ಪಣಿ ಬರೆಯಲು ಬಳಕೆಗೆ ಬರುತ್ತಿದ್ದವು. ಥಟ್ಟನೆ ಹೊಳೆದ ಒಂದೆರಡು ಸಾಲುಗಳು ಅಲ್ಲಿ ದಾಖಲಾಗುತ್ತಿದ್ದವು. ಕವಿತೆಯಾಗುವ ಭಾಗ್ಯವಿದ್ದವು ಆಗುತ್ತಿದ್ದವು. ಕೆಲವು ಸಲ ಕವಿತೆಗೆ ವಸ್ತುವಲ್ಲ ಇದು, ಪ್ರಬಂಧಕ್ಕೆ ಸಮ ಅನ್ನಿಸಿದರೆ ಅದು ಅಲ್ಲೇ ಪ್ರಬಂಧವಾಗಿ ಬೆಳೆಯುತ್ತಿತ್ತು; ಅಥವ ಕಥೆಯಾದರೆ ಕಥೆಯಾಗಿ. ಮೊದಲು ಹೊಳೆದ ಸಾಲು ಯಾವ ಸಂದರ್ಭದಲ್ಲಿ ಮನಸ್ಸಿನಲ್ಲಿ ಮೂಡಿದ್ದೆಂದು ನೆನಪಲ್ಲಿ ಇಲ್ಲದಿದ್ದರೆ ಮುಂದೆ ಹೋಗದೆ ಹಠ ಮಾಡಿಕೊಂಡು ಕೂರುತ್ತಿತ್ತು. ಒಂದು ಸಾಲು ಎರಡು ಸಾಲುಗಳಲ್ಲಿ ನಿಂತುಹೋದವು ಕೆಲವಕ್ಕೆ ಮುಂದೆಂದಾದರೂ ಬೆಳೆಯುವ ಭಾಗ್ಯ ದೊರಕಿದ್ದು ಉಂಟು. ಉಳಿದವುಗಳಲ್ಲಿ ಹಾಗೇ ಕುಟುಕು ಜೀವ ಹಿಡಿದುಕೊಂಡಿರೋವು ಕೆಲವು, ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ಕಾಟು ಹಾಕಿಸಿಕೊಂಡು ಸತ್ತುಬಿದ್ದ ಸಾಲುಗಳು ಕೆಲವು ಆ ಹಳೆಯ ಡೈರಿಗಳ ತೆರೆದರೆ ನಮ್ಮೂರ ದಾಸನ ಕೆರೆಯಲ್ಲಿನ ಹಳೆಯ ವಕ್ರವಾದ ಗೋರಿಕಲ್ಲುಗಳ ಹಾಗೆ ಕಾಣುತ್ತವೆ. ಯಾವಾಗಾದರೊಮ್ಮೆ ಈ ಹಳೆಯ ಡೈರಿಗಳನ್ನು ತೆರೆದು ಮುಂದಿಟ್ಟುಕೊಂಡು ಕೂರುತ್ತೇನೆ. ಕೆಲವೊಮ್ಮೆ ಅಲ್ಲಿ ನಮೂದಿಸಿದ ಹಳೆಯ ತಲ್ಲಣಗಳು ಅದೇನು ಇವತ್ತಿನ ಘಟನೆಯೆಂಬಂತೆ ಇನ್ನೂ ಜೀವಂತವಾಗಿಯೇ ಇರುವುದು ಏನೂ ಬದಲಾಗುವುದಿಲ್ಲವೆಂಬ ಸಿನಿಕತನಕ್ಕೆ ನೀರೆರೆದು ಪೋಷಿಸಿ ಮತ್ತಷ್ಟು ಸಿನಿಕತನದ ಹುಟ್ಟಿಗೆ ಕಾರಣವಾಗುವುದೇನೋ ಎನ್ನುವ ಹೊಸ ತಲ್ಲಣಕ್ಕೆ ಕಾರಣವಾಗುತ್ತದೆ.

ಕಂಪ್ಯೂಟರ್ ಬಸಲು ಶುರುಮಾಡಿದ ಮೇಲೆ ಡೈರಿಗಳಲ್ಲಿ ಬರೆಯುವುದು ಕಡಿಮೆಯಾಗಿದೆ. ಆದರೂ ನನಗೆ ಹಾಗೆ ನೋಟುಬುಕ್ಕುಗಳಲ್ಲಿ, ಹಳೆಯ ಡೈರಿಗಳಲ್ಲಿ ಏನಾದರೂ ಬರೆಯುವುದನ್ನು ಮತ್ತೆ ಆಚರಣೆಗೆ ತರಬೇಕೆಂದು ತುಂಬ ಸಲ ಅನ್ನಿಸಿದ್ದುಂಟು. ಇಂಥ ಒಂದು ಪಕ್ಕಕ್ಕೆಸೆದ ಒಂದು ಡೈರಿಯನ್ನು ಮೊನ್ನೆ ಭಾನುವಾರ ತೆರೆದು ನೋಡಿಕೊಂಡು ಕೂತಿದ್ದೆ. ಜೀರ್ಣಾವಸ್ಥೆಗೆ ತಲುಪಿದ್ದ ಅದರಲ್ಲಿ ಇನ್ನೂ ಕೆಲವು ಹಾಳೆಗಳಿದ್ದವು. ಬಳಸಬಹುದಾದ ಪರಿಸ್ಥಿತಿಯಲ್ಲಿ ಇರಲಿಲ್ಲ ಅಷ್ಟೆ. 22.3.1992 ಎಂದು ದಿನಾಂಕ ನಮೂದಿಸಿ ಬರೆದಿದ್ದ ಒಂದು ಟಿಪ್ಪಣಿ ಅಲ್ಲಿತ್ತು. ಓದಿದೆ. ಅದನ್ನು ನೀವೂ ಓದಿದರೆ ಚೆನ್ನ ಅನ್ನಿಸಿದ್ದರಿಂದ ಪ್ರಕಟಿಸುತ್ತಿದ್ದೇನೆ. ಅದು ಇಲ್ಲಿದೆ, ಓದಿ: “ ‘At some moment you must stop life and look in to it’ - Raja Rao. “ನಿನ್ನೆ ರಾತ್ರಿ ಟಿ.ವಿ ಯಲ್ಲಿ ವರ್ಲ್ಡ್ ದಿಸ್ ವೀಕ್ ಕಾರ್ಯಕ್ರಮ ನೋಡಿಕೊಂಡು ಕೂತಿದ್ದೆ. ನನ್ನ ಜೊತೆ ನನ್ನ ಮಗಳೂ ಇದ್ದಳು. ಹತ್ತೂವರೆ ಆದರೂ ಇನ್ನೂ ನಿದ್ದೆ ಮಾಡದೆ ಅವಳು ನನ್ನ ಏಕಾಗ್ರತೆಗೆ ಭಂಗ ತರುವ ಮಾತುಗಳನ್ನಾಡುತ್ತ ಕೂತಿದ್ದಳು. ಅವತ್ತಿನ ಕಾರ್ಯಕ್ರಮದ ಬಹುಪಾಲು ದಕ್ಷಿಣ ಆಫ್ರಿಕದಲ್ಲಿ ನಡೆದ ರೆಫರೆಂಡಮ್ಮಿನಲ್ಲಿ ಡಿ. ಕ್ಲಾರ್ಕ್ ತರಲಿರುವ ಸುಧಾರಣೆಗಳಿಗೆ ಬೆಂಬಲ ದೊರಕಿದ್ದು, ಅದರ ಬೆನ್ನಲ್ಲಿ ಬಿಳಿಯರು ಕರಿಯರ ನಡುವೆ ಹೊಡೆದಾಟ ಜೋರಾಗಿರುವುದು ಮೊದಲಾದವುಗಳ ಬಗ್ಗೆ ಇತ್ತು. ಬಿಳಿಯರು ಕರಿಯರು ಪ್ರತ್ಯೇಕ ಮೆರವಣಿಗೆಗಳನ್ನು ತೆಗೆದಿದ್ದರು. ಅವರ ನಡುವೆ ತೀವ್ರ ಘರ್ಷಣೆ ಹುಟ್ಟಿಕೊಂಡಿತ್ತು. ಒಂದು ಓಡುತ್ತಿದ್ದ ರೈಲಿನಿಂದ ಬಿಳಿಯರು ಕರಿಯರನ್ನು ಹೊರಕ್ಕೆ ಎಳೆದೆಳೆದು ಬಿಸುಟಿದ್ದರು. ಕರಿಯರನೇಕರು ದಾರುಣವಾದ ಸಾವನ್ನಪ್ಪಿದ್ದರು. ಹಾಗೆ ಸತ್ತ ಕರಿಯನೊಬ್ಬನ ಹೆಣ ಕಂಡು ನನ್ನ ಹತ್ತು ವರ್ಷದ ಮಗಳು ಕೇಳಿದ ಪ್ರಶ್ನೆ ಇದು: “ಅಪ್ಪಾ, ಅವರೇಕೆ ಹಾಗೆ ಕೊಂದುಕೊಳ್ಳುತ್ತಿದ್ದಾರೆ? ಅವರಿಗೆ ಇದರಿಂದ ಏನು ಸಿಗುತ್ತೆ?” “ಏನೆಂದು ಉತ್ತರ ಕೊಡಲಿ? ಇಂತಹ ಉತ್ತರಿಸಲಾಗದ ಸ್ಥಿತಿಯೇ ನನ್ನಿಂದ ಮರ್ತ್ಯವ ಕೊಡು ಮತ್ತೆ ಎಂದು ಏಸು ದೇವರನ್ನು ಬೇಡುವ ಕವಿತೆಯನ್ನು ಬರೆಸಿರಬೇಕು. “ರಾಜಾರಾಯರ ಒಂದು ವಾಕ್ಯವನ್ನು ಈ ಟಿಪ್ಪಣಿಯ ಮೊದಲಲ್ಲಿ ಉದ್ಧರಿಸಲಾಗಿದೆ. ಯಾವ ಪುಸ್ತಕದ್ದೆಂದು ಗೊತ್ತಿಲ್ಲ. ಈ ಸಾಲುಗಳನ್ನು ಮಾತ್ರ ಎಲ್ಲಿಯೋ ಓದಿದ್ದೆ. ವರ್ಲ್ಡ್ ದಿಸ್ ವೀಕ್ ಕಾರ್ಯಕ್ರಮ ನೋಡಿದ ಹಿನ್ನೆಲೆಯಲ್ಲಿ ಗದ್ದಲವಿಡಿದ ಮನಸ್ಸಿನಲ್ಲಿ ನಮಗೀಗ ವ್ಯವಧಾನವಿಲ್ಲ. ಕೇಳಲೂ ಇಲ್ಲ, ಒಳಗಿನೊತ್ತಾಯವನ್ನು ಆಡಲು ಮಾತೇ ಇಲ್ಲ.

ಜೊತೆಗೆ ಕೇಳುವವರು ಯಾರು ಎನ್ನುವ ಸಂಶಯ ಬೇರೆ. ಎಲ್ಲೋ ಒಂದು ಕಡೆ ಒಂದು ಬಗೆಯ ಕೈಲಾಗದ ಸ್ಥಿತಿಗೆ ನಾವು ತಲುಪಿಬಿಟ್ಟಿದ್ದೇವೇನೋ? ಇದರ ಜೊತೆಗೆ ನಮ್ಮ ಮನಸ್ಸುಗಳು ಗದ್ದಲದಿಂದ ತುಂಬಿಹೋಗಿವೆ. ಗದ್ದಲ ಇಡಿಕಿರಿದ ಮನ/ಮೌನಕ್ಕಾವ ಪರಿಭಾಷೆ ಎಂದು ನಾನೇ ಬರೆದೆ. ನನ್ನ ಬಗ್ಗೆ ತಾನೆ ಅನ್ನಿಸಿದೆ. “ಮನಸ್ಸುಗಳು ಗದ್ದಲದಿಂದ ತುಂಬಿಹೋಗಿವೆ. ಮೌನವಿಲ್ಲಿಲ್ಲ. ಮೌನದಲ್ಲಿ ವಿಕಾಸಗೊಳ್ಳುವ ಸಂಗೀತದ ಮಾರ್ದವತೆಯಿಲ್ಲ. ಮೌನಕ್ಕೆ ನಮ್ಮನ್ನು ದೂಡಿ ಅನುಸಂಧಾನಕ್ಕೆ ನೇರ್ಪುಗೊಳಿಸುವ ಓದು ಇಲ್ಲ. ಬದುಕನ್ನು ನೋಡುವ ನೋಟವೂ ಇಲ್ಲ. ನಮ್ಮ ಬದುಕಿನ ಗತಿ ವಿಧಾನಗಳನ್ನು ನೋಡಿಕೊಳ್ಳುವ ಕಾಲಾವಕಾಶವನ್ನು ದಕ್ಕಿಸಿಕೊಳ್ಳದೆ ಹೋಗಿದ್ದೇವೆ. ಅಂದ ಮೇಲೆ ನಮಗೆ ಸಂಗೀತವೋ, ಸಾಹಿತ್ಯವೋ ಲೌಕಿಕ ಲಾಭವಿರದ ತೀರಾ ಯಃಕಶ್ಚಿತ್ ವಿಷಯಗಳಷ್ಟೇ. “ಇಂತಹ ಜೀವನವು ಒಂದು ಕ್ರಮವಾಗಿ ಹೋಗುತ್ತಿದೆ ಎಂಬುದೇ ಆತಂಕವುಂಟುಮಾಡುವ ಸಂಗತಿ. ನಾವೀಗಲಾದರೂ ಥಟ್ಟನೆ ಬ್ರೇಕನ್ನೊತ್ತಿ ನಿಲ್ಲಬೇಕು. ಇದು ಸರಿಯಾದ ವೇಳೆ: ನಮ್ಮ ಬದುಕನ್ನು ನಿಲ್ಲಿಸಿ ಅದರ ಒಳಗಿಣುಕಿ ನೋಡಲು, ನಮ್ಮ ಬಗ್ಗೆ ನಾವೇ ಪ್ರಶ್ನಿಸಿಕೊಳ್ಳಲು.”ಇದಿಷ್ಟು ಟಿಪ್ಪಣಿ. ಉಳಿದದ್ದು ನೀವು ಹೇಳಬೇಕು.

ಆರ್. ವಿಜಯರಾಘವನ್‌ 24.08.2006