ಪೂರ್ವ ಅಥವಾ ಅಪರ ಪ್ರಯೋಗ?
ಹಿಂದೊಮ್ಮೆ ಕರ್ಮವೀರ ವಾರಪತ್ರಿಕೆಯಾಗಿ ಹೊರಬರುತ್ತಿತ್ತು. ಒಮ್ಮಿಂದೊಮ್ಮೆಲೇ ಅದರ ಹೊರ ಪದರಲ್ಲಿ ಸತ್ತ ಕರುವಿನ ಚಿತ್ರವಿದ್ದು, ಇನ್ನು ಮುಂದೆ ಈ ಪತ್ರಿಕೆಯ ಹೊರಬರುವುದಿಲ್ಲವೆಂಬ ಅಂಕಣ ಪ್ರಕಟವಾಗಿತ್ತು. ಇಂದು ಆ ಚಿತ್ರ ನನ್ನ ಕಣ್ಮುಂದೆ ಬರುತ್ತಿದೆ.
ಸೆಪ್ಟೆಂಬರ್ ೪ ರಂದು ನನ್ನ ಕೂಸು ಆಶ್ರಯಕ್ಕೆ ವಾರ್ಷಿಕೊತ್ಸವವನ್ನು ಆಚರಿಸುವುದೋ ಅಥವಾ ವರ್ಷಾಬ್ಧಿಕವನ್ನೋ ಎಂಬ ಜಿಜ್ಞಾಸೆ ೨-೩ ತಿಂಗಳುಗಳಿಂದ ಕಾಡುತ್ತಿದೆ. ಈ ಮಧ್ಯೆ ತಾಣವನ್ನು ನಡೆಸುವ, ನಡೆಸುವಾಗ ಎದುರಿಸುತ್ತಿರುವ ತರಲೆ ತಾಪತ್ರಯಗಳಿಂದ ದೂರವಾಗುವ ಮನಸ್ಸೂ ಉಂಟಾಗುತ್ತಿದೆ. ನನಗೆ ಪ್ರಿಯವಾದ ಅಧ್ಯಾತ್ಮ ಅಭ್ಯಾಸದ ಕಡೆಗೇ ಪೂರ್ಣವಾಗಿ ವಾಲುವುದೆಂದು ಕೂಡಾ ಒಳ ಮನಸ್ಸು ಹೇಳುತ್ತಿದೆ. ಆದರೆ ಇಲ್ಲಿಯವರೆವಿಗೆ ಸಿಕ್ಕಿದ ಸನ್ಮಿತ್ರರಿಂದ ದೂರಾಗುವುದು ಕಷ್ಟಸಾಧ್ಯ. ಅವರಿಂದಲೇ ಅಲ್ಲವೇ ಎರಡಕ್ಷರ ಕಲಿತದ್ದು. ಅವರ ಸಖ್ಯ ಸಿಗದಿದ್ದರೆ ಅನಾಮಧೇಯನಾಗಿ ಮೂಲೆಯಲ್ಲಿಯೇ ಕುಳಿತುಬಿಡುತ್ತಿದ್ದೆ.
ಹುಟ್ಟು ಸಾವು, ಜನನ ಮರಣ, ನೋವು ನಲಿವು ಜೀವನದ ಮತ್ತು ಜಗತ್ತಿನ ಎರಡು ಮುಖಗಳು. ಬರಹ ಒಂದಿದ್ದರೆ ಸಾಕು. ಬರಹಗಾರನಿಲ್ಲದಿದ್ದರೂ ಪರವಾಗಿಲ್ಲ. ಅವನನ್ನು ಚಿರಂಜೀವಿಯಾಗಿಸಲು ಆತನ ಬರಹ ಒಂದಿದ್ದರೆ ಸಾಕು.
ಹುಟ್ಟಿದ ದಿನವನ್ನು ನೆನೆಯಲು ವರ್ಷಕ್ಕೊಮ್ಮೆ ಆ ದಿನದಂದು ಹುಟ್ಟಿದ ಹಬ್ಬವನ್ನಾಗಿ ಆಚರಿಸುವುದು ಪರಿಪಾಠ. ಅದನ್ನು ವಾರ್ಷಿಕೋತ್ಸವವೆಂದರೆ, ಸತ್ತ ದಿನವನ್ನು ನೆನೆಯಲು ವರ್ಷಾಬ್ಧಿಕ ಎಂದು ಕರೆವರು. ಆಶ್ರಯಕ್ಕೆ ಒಂದು ವರುಷ ಆಯಸ್ಸು ತುಂಬುತ್ತಿದೆ. ವಾರ್ಷಿಕೋತ್ಸವದಲ್ಲಿ ನಲಿಯುವವರೇ ಎಲ್ಲರೂ. ಹೆಚ್ಚೆಂದರೆ ಕಾರ್ಯಕ್ರಮ ನಿಯೋಜಿಸುವವನು ಮೈ ಕೈ ನೋವಿನಿಂದ ಸ್ವಲ್ಪ ನರಳಬಹುದಷ್ಟೆ. ಆದರೆಲ್ಲರಿಗೂ ಅದು ನಲಿವಿನ ದಿನ. ಉಂಡು ಕುಣಿದವರೆಲ್ಲರೂ ನಲಿವ ದಿನ. ಅದೇ ವರ್ಷಾಬ್ದಿಕದಲ್ಲಿ ಉಂಡರೂ ಆತ್ಮವನ್ನು ಕಳೆದುಕೊಂಡು ಅದರ ಸಖ್ಯದ ಸಿಂಹಾವಲೋಕನ ಮಾಡುತ್ತಾ ನೋವಿನನುಭವ ಪಡೆಯುವವರು ಹೆಚ್ಚು. ನಿಯೋಜಕನಿಗೆ ಇನ್ನೂ ಹೆಚ್ಚಿದ ದು:ಖದ ಕ್ಷಣ. ಅಂದಿನ ದಿನ ಬಾರದಿದ್ದರೇ ಅವನ ಮನಸ್ಸು ಸ್ವಲ್ಪ ಮಟ್ಟಿಗೆ ತಹಬಂದಿಯಲ್ಲಿರುತ್ತಿತ್ತೇನೋ. ಇನ್ನು ನನ್ನ ಮನದ ಚಿಂತನೆಗಳನ್ನು ಹರಿಯ ಬಿಡುವೆ. ಇಲ್ಲದಿದ್ದರೆ ಅದು ಮನದೊಳಗೇ ಅವಿತಿದ್ದು, ಚೇಳಿನಂತೆ ಕುಟುಕುತ್ತಲೇ ಇರುತ್ತದೆ. ಆ ಚಿಂತನೆಗಳು ನನ್ನ ಮನದಿಂದ ಹೊರಹಾಯ್ದು, ಮನವಾದರೂ ನಿರ್ಮಲವಾಗಿರಲಿ ಎಂಬುದೇ ನನ್ನ ಈ ಬರಹದ ಇಂಗಿತ.
ಬರಹ ಒಂದು ಕಲೆ. ಕನ್ನಡದಲ್ಲಿ ಬರೆಯುವ ಮೊದಲು ನನ್ನೆಲ್ಲಾ ಬರಹವೂ ಪರೀಕ್ಷೆಗಾಗಿ ಇಂಗ್ಲೀಷಿನಲ್ಲಿ ಬರೆದದ್ದೇ. ಕಾಲ ಕಳೆಯಲು ಕನ್ನಡ ಆಡಿಯೋ ವೇದಿಕೆಯಲ್ಲಿ ಒಂದೆರಡು ಪದಗಳನ್ನು ಬರೆಯುತ್ತಿದ್ದೆ. ಒಮ್ಮೆ ಶ್ರೀಮತಿ ಮಂಗಳ ಮತ್ತು ಅವರ ಮಗ ವಿಶ್ರುತನ ಬಗ್ಗೆ ಹೀಗೇನೋ ನಾಲ್ಕು ಸಾಲು ಬರೆದಿದ್ದೆ.
ವಿಶ್ರುತನ ಅಮ್ಮನಿಗೆ ವಿಶ್ರಾಂತಿಯೇ ಇಲ್ಲವಂತೆ
ದಿನವೆಲ್ಲಾ ಮನೆಯ ಕೆಲಸವೇ ಆಗುವುದಂತೆ
ಆ ತುಂಟನ ಹಿಡಿಯುವುದು ದೊಡ್ಡ ಕೆಲಸವಂತೆ
ಅಮ್ಮಾ ಎನಲು ನೋವೆಲ್ಲ ಮಾಯವಾಗುವುದಂತೆ
ಇದನ್ನು ಕಂಡ ನಿರ್ವಾಹಕರಲ್ಲೊಬ್ಬರಾದ ಶ್ರೀಯುತ ಪ್ರವೀಣ ಶಿವಶಂಕರ (ಹಾಗೂ ನನ್ನ ಕೋರಿಕೆಯ ಮೇರೆಗೆ) ಕಾವ್ಯಾಂತಾಕ್ಷರಿ ಎಂಬ ಒಂದು ಸೂತ್ರವನ್ನು ಆರಂಭಿಸಿದ್ದರು. ಮೊದ ಮೊದಲು ನಾಲ್ಕು ಸಾಲುಗಳನ್ನು ಬರೆಯುತ್ತಿದ್ದ ನಾನು ಕೆಲವೇ ಸಮಯಗಳಲ್ಲಿ ೧೬ - ೨೦ ಸಾಲುಗಳ ಕವನವನ್ನು ರಚಿಸಿದೆ. ಮೊತ್ತ ಮೊದಲ ಕವನವಾದ ೭.೨೨ ಲೋಕಲ್ ಮತ್ತು ಕನ್ನಡಮ್ಮ ಓದುಗರ ಮೆಚ್ಚುಗೆ ಗಳಿಸಿತು. ಆ ಸಮಯದಲ್ಲಿ ಕನ್ನಡಆಡಿಯೋ ವೇದಿಕೆಯಲ್ಲಿ ಪ್ರತಿ ದಿನವೂ ಮಿಕ್ಕೆಲ್ಲ ಕವಿ ಹೃದಯಿಗಳ ರಸದೌತಣ ನಡೆಯುತ್ತಿತ್ತು. ಎಷ್ಟರ ಮಟ್ಟಿಗೆ ಬಂದು ಮುಟ್ಟಿತ್ತೆಂದರೆ, ಸ್ನೇಹಿತರುಗಳ ಹುಟ್ಟಿದ ಹಬ್ಬಕ್ಕೆ ನನ್ನ ಕವನದ ಉಡುಗೊರೆಯಾದರೆ, ನನ್ನ ಹುಟ್ಟುಹಬ್ಬಕ್ಕೆ ಶ್ರೀಮತಿ ವಸಂತಶಶಿಯವರ ಹಾಡಿನ ಉಡುಗೊರೆ. ನಾನೆಂದಿಗೂ ಆ ಸಮಯವನ್ನು ಕನ್ನಡಆಡಿಯೋವಿನ ಸುವರ್ಣಕಾಲ ಎಂದೇ ತಿಳಿದಿರುವೆ. ಕರ್ಮಯೋಗಿ ಮತ್ತು ವಂಶದ ಕುಡಿ ಎಂಬ ಎರಡು ಕಥೆಗಳೂ ಅಲ್ಲಿಯೇ ಹುಟ್ಟಿಕೊಂಡಿದ್ದು. ಅವುಗಳನ್ನು ಅಪೂರ್ಣ ಕಥೆಯೆಂದು ಬರೆದಾಗ ತಮ್ಮ ಬರಹದ ವೈಖರಿಯನ್ನು ಪರಿಚಯಿಸಿದ ಮನೋಹರರು ಅನವರತ ಇಂದಿಗೂ ಕನ್ನಡದ ಸಾಹಿತ್ಯ ಕ್ಷೇತ್ರದಲ್ಲಿ ಅಹರ್ನಿಶಿ ದುಡಿಯುತ್ತಲೇ ಇದ್ದಾರೆ. ಇನ್ನೊಬ್ಬ ಬರಹಗಾರ್ತಿ ಶುಭಗಿರಿ ಕುಟುಂಬದ ಕಡೆ ಹೆಚ್ಚು ಗಮನವನ್ನಿತ್ತು, ಬರಹವನ್ನು ಕಡಿಮೆ ಮಾಡಿದ್ದಾರೆ. ಆದರೆ ಸದ್ಯದಲ್ಲಿಯೇ ಅವರು ಸಾಹಿತ್ಯ ಕ್ಷೇತ್ರದಲ್ಲಿ ಮಿಂಚುವರೆಂದರೆ ಅದು ಅತಿಶಯೋಕ್ತಿಯಲ್ಲ. ಸಂಶೋಧಿಸಿ ಚರಿತ್ರೆಯ ವಿಷಯಗಳನ್ನು ಕಥೆಯೋಪಾದಿಯಲ್ಲಿ ಬರೆಯುತ್ತಿದ್ದವರು ರವಿ. ಸದ್ಯಕ್ಕೆ ಅವರು ಬಹಳ ಬಿಜಿಯಾಗಿದ್ದಾರೆ ಎನಿಸುತ್ತಿದೆ. ಇದೇ ಸಮಯದಲ್ಲಿ ಹೇಳದೇ ಕೇಳದೇ ನಮ್ಮ ಮನೆಗೆ ದೂರವಾಣಿಯ ಮೂಲಕ ಸಂಪರ್ಕಿಸಿದ ಸುಬ್ಬುವನ್ನಂತೂ ಎಂದಿಗೂ ಮರೆಯುವಂತಿಲ್ಲ. ಸರಿರಾತ್ರಿಯಲ್ಲಿ ಯಾರದೇ ದೂರವಾಣಿ ಬಂದರೂ ನಮ್ಮ ಮನೆಯವರು ಸುಬ್ರಹ್ಮಣ್ಯ ಅವರದ್ದಾ ಎಂದು ಕೇಳುವಂತಾಗಿದೆ. ಇನ್ನು ಆಗಾಗ್ಯೆ ಸಂಪರ್ಕಿಸುವ ಶ್ರೀಧರ, ಮಂಜೇಶ ಮತ್ತು ಪ್ರಮೋದರ ಬಗ್ಗೆಯಂತೂ ಹೇಳಲು ಮರೆಯುವಂತಿಲ್ಲ.
ಅದೇ ಸಮಯದಲ್ಲಿ ಶ್ರೀಯುತ ಶ್ರೀವತ್ಸ ಜೋಶಿಗಳು ಅದುವೇಕನ್ನಡದಲ್ಲಿ ಮೆಟ್ಟಿಲೋಪಾಖ್ಯಾನ ಎಂಬ ಲೇಖನವನ್ನು ತಮ್ಮ ವಿಚಿತ್ರಾನ್ನ ಅಂಕಣದಲ್ಲಿ ಬರೆದಿದ್ದರು. ಕೊನೆಯಲ್ಲಿ ಓದುಗರೂ ತಮಗನ್ನಿಸಿದ್ದನ್ನು ಬರೆದು ಕಳುಹಿಸಲು ತಿಳಿಸಿದ್ದರು. ನಾನೂ ನನ್ನ ತಲೆಗೆ ಹೊಳೆದ ನಾಲ್ಕು ಸಾಲು ಬರೆದು ಕಳುಹಿಸಿದ್ದೆ. ಅದನ್ನು ಇತರ ೬-೭ ಓದುಗರ ಬರಹದೊಡನೆ ಪ್ರಕಟಿಸಿದ್ದರು. ಅಷ್ಟೇ ಅಲ್ಲ, ನನ್ನ ಬಗ್ಗೆ ನಾಲ್ಕು ಒಳ್ಳೆಯ ಮಾತುಗಳನ್ನು ಬರೆದು, ಎಲ್ಲರ ಬರಹಕ್ಕಿಂತ ಮೊದಲಿನದಾಗಿ ಪ್ರಕಟಿಸಿದ್ದರು. ಅಂದು ಬರಹವೆಂಬ ಏಣಿಯ ಮೆಟ್ಟಿಲ ಮೇಲೆ ಜೋಶಿಗಳು ಕುಳ್ಳಿರಿಸಿರದಿದ್ದರೆ ನಾನಿಂದು ೩೦೦ಕ್ಕೂ ಹೆಚ್ಚು ಬರಹ, ಕವನ, ಕಥೆಗಳನ್ನು ಬರೆದು ಪ್ರಕಟಿಸುತ್ತಿರಲಿಲ್ಲ. ಹಿಂದೆಯೇ ಆಗಾಗ ಉತ್ತೇಜನ ಕೊಡುತ್ತಾ ಬಂದಿರುವವರು ಶ್ರೀಮತಿ ತ್ರಿವೇಣಿ ಶ್ರೀನಿವಾಸರಾಯರು. ನನ್ನ ಮನ ಮುದುಡಿದಾಗಲೆಲ್ಲ, ನೀರಿರೆದು ಶಕ್ತಿ ತುಂಬಿದ ಸಹೃದಯಿ ಎಂದರೆ ಅತಿಶಯೋಕ್ತಿಯಾಗದಿರದು. ಇವರೆಲ್ಲರೊಂದಿಗೆ ಸದಾ ಕಾಲ ಉತ್ತೇಜಿಸುತ್ತಾ, ಪ್ರತಿಕ್ರಿಯಿಸುತ್ತಾ, ದೂರವಾಣಿಯ ಮೂಲಕವೂ ಸಂಪರ್ಕಿಸಿ ಮೇಲೇರಿಸಿದ ಇನ್ನೊಂದು ಹಿರಿಯ ಜೀವ ಹಿರಿಯಣ್ಣನ ಸಮಾನರಾದ ಶ್ರೀ ಕೇಸರಿ ಮಧುಸೂದನ ಪೆಜತ್ತಾಯರು. ಆಗಲೇ ಕನ್ನಡ ಆಡಿಯೋದಲ್ಲಿ ದಿನಕ್ಕೊಂದರಂತೆ ಕವನಗಳನ್ನು ಬರೆದು ಏರಿಸುತ್ತಿದ್ದೆ. ಲೋಕಲ್ ಟ್ರೈನ್‍ನಲ್ಲಿ ಪ್ರಯಾಣಿಸುವಾಗ ಸಿಗುವ ಬಿಡುವಿನಲ್ಲಿ ಯೋಚಿಸಿದ್ದನ್ನು ಮನೆಗೆ ಬಂದ ಕೂಡಲೇ ಬರಹದ ಮೂಲಕ ಬರೆಯುತ್ತಿದ್ದೆ. ನನ್ನ ಬರವಣಿಗೆ ಹೇಗಿದ್ದರೂ ಚೆನ್ನಾಗಿದೆಯೆಂದು ಪ್ರೋತ್ಸಾಹಿಸಿದ ಸಹೃದಯಿಗಳು ಹತ್ತು ಹಲವಾರು. ಕ್ಯಾತ್ಸಂದ್ರ ಕಾನ್ಸಾಸ್ ಮನೋಹರ ಅಂತಹ ಸಹೃದಯೀ ಗೆಳೆಯರು ಸಿಕ್ಕಿದ್ದು ನನ್ನ ಸೌಭಾಗ್ಯ. ಇದೇ ಸಮಯದಲ್ಲಿ ನಾಡಿಗರ ಪರಿಚಯವಾಯಿತು. ಅವರ ಮನದ ಮಗು ಸಂಪದ ಇನ್ನೇನು ಹುಟ್ಟಲಿತ್ತು. ಅದರ ಆರೈಕೆಗೊಂದು ಆಸರೆಯ ಅವಶ್ಯಕತೆ ಇತ್ತು. ನನಗೆ ನನ್ನ ಬರಹಗಳನ್ನು ಇರಿಸಲು ಒಂದು ತಾಣದ ಅವಶ್ಯಕತೆ ಇತ್ತು. ಸಂಪದ ಪ್ರಾರಂಭವಾದ ಸಮಯದಲ್ಲಿ ನನ್ನ ಮನದಲ್ಲಿ ಒಂದು ಆಲೋಚನೆ ಉಂಟಾಯಿತು. ಚೆನ್ನಾಗಿರುವ ಲೇಖನ, ಕವನಗಳನ್ನು ಸಾರ್ವಜನಿಕರ ಮುಂದಿಡಬಹುದು. ಆದರೆ ಅದರೊಂದಿಗೆ ಬರುವ ಜೊಳ್ಳಿಗೂ ಪ್ರಕಟವಾಗಲು ಒಂದು ಅವಕಾಶ ಬೇಕಲ್ಲವೇ? ಅದನ್ನು ಸಂಪದದಂತಹ ತಾಣದಲ್ಲಿ ಇರಿಸಲಾಗದು. ಇದಕ್ಕಾಗಿ ನನ್ನ ಮನಸ್ಸಿಗೆ ಬಂದದ್ದು, ನನ್ನ ರುಚಿಗೆ ತಕ್ಕುದಾದ ಬರಹಗಳನ್ನು ಇರಿಸಲು ನನ್ನದೇ ಒಂದು ತಾಣವಿದ್ದರೆ ಹೇಗೆ. ಅಂದು ಸೆಪ್ಟೆಂಬರ್ ೩ ರಂದು ನಾಡಿಗರ ಸಲಹೆ ಮೇರೆಗೆ ಆಶ್ರಯದ ಜನನವಾಯಿತು. ಜನನದಿಂದ ಅದರ ಆರೋಗ್ಯದ ವಿಚಾರಣೆಯನ್ನು ನಾಡಿಗರೇ ನಿರ್ವಸುತ್ತಿದ್ದಾರೆ. ಇಲ್ಲಿ ಇರಿಸುವ ಜೊಳ್ಳಿನ ಬಗ್ಗೆ ಯಾರಾದರು ಒಂದು ಮಾತು ಕೆಟ್ಟದಾಗಿ ಬರೆದರೆ, ನನ್ನ ಸೂಕ್ಶ್ಮ ಮನಸ್ಸಿಗೆ ತಡೆದುಕೊಳ್ಳಲಾಗದೆಂಬ ದೃಷ್ಟಿಯಿಂದ ಪ್ರತಿಕ್ರಿಯೆಗಳನ್ನು ಸುಲಭವಾಗಿ ಹಾಕದಿರುವಂತೆ ಮಾಡಿಸಲಾಯಿತು. ಈ ಮಧ್ಯೆ ಒಂದೆರಡು ಲೇಖನಗಳನ್ನು ಮೆಚ್ಚಿದ ಸ್ನೇಹಿತರು ಪ್ರತಿಕ್ರಿಯಿಸಲೆಂದೇ ಸದಸ್ಯರಾಗಿದ್ದಾರೆ. ಅವರೆಲ್ಲರಿಗೂ ನಾನು ಚಿರಋಣಿ. ಪ್ರತಿದಿನವೂ ಬಹಳಷ್ಟು ಜನ ಸ್ನೇಹಿತರು ಆಶ್ರಯದ ಮೇಲೆ ಒಂದು ಕಣ್ಣು ಹಾಯಿಸುತ್ತಿದ್ದಾರೆ. ಅವರುಗಳು ಯಾರೆಂದು ಮಾತ್ರ ನನಗೆ ಗೊತ್ತಿಲ್ಲ. ಎಲ್ಲರಿಗೂ ನಾನು ಕೃತಾರ್ಥನಾಗಿರಬೇಕಾದ್ದು ನನ್ನ ಕರ್ತವ್ಯ.
ಈ ಮಧ್ಯೆ ಶ್ರೀ ಶಾಮಸುಂದರ್ ಮತ್ತು ಪ್ರಸಾದ ನಾಯಕರ ದೀವಿಗೆಯ ಬೆಳಕಿನಲ್ಲಿ ಅದುವೇಕನ್ನಡದಲ್ಲ್ಲಿ ನನ್ನವಳು ಮತ್ತು ಚಟ ಕವನ ಪ್ರಕಟವಾಯಿತು. ಇಲ್ಲಿಯವರೆವಿಗೆ ನಾನೇನೇ ಬರೆದರೂ, ತಿದ್ದಿ, ಸರಿಯಾದ ಬರಹದ ರೂಪ ತೋರಿಸಿ ಪ್ರಕಟಿಸುತ್ತಿದ್ದಾರೆ. ಇವರಿಬ್ಬರಿಗೂ ನಾನೆಂದಿಗೂ ಚಿರಋಣಿಯಾಗಿರಲೇ ಬೇಕು. ಅದೇ ತರಹ ಸಹಾರಾ ವಿಮಾನ ನಿಲ್ದಾಣದಲ್ಲಿ ಸಿಕ್ಕು ನನ್ನ ಬರವಣಿಗೆ ಒತ್ತು ಕೊಟ್ಟ ಇನ್ನೊಬ್ಬ ಮಹನೀಯರಾದ ಕನ್ನಡಧ್ವನಿ ಸಂಪಾದಕರು ಶ್ರೀ ಗೋಪೀನಾಥರಾಯರು. ಇದಲ್ಲದೇ ಟೋಟಲ್‍ಕನ್ನಡದ ಲಕ್ಷ್ಮೀಕಾಂತ ಅವರೂ ಕೂಡಾ ನನ್ನ ಕೆಲವು ಬರವಣಿಗೆಗಳನ್ನು ತಮ್ಮಲ್ಲಿ ಪ್ರಕಟಿಸಿದರೆ, ಹೊಸದಾಗಿ ಹುಟ್ಟಿರುವ ವಿಕ್ರಾಂತ ಕರ್ನಾಟಕದಲ್ಲಿ ಶ್ರೀಮತಿ ರಾಜಲಕ್ಷ್ಮಿ ಮತ್ತು ವೀರೇಶರ ಉಮೇದುವಾರಿಕೆಯಲ್ಲಿ ಒಂದೆರಡು ಲೇಖನಗಳು ಪ್ರಕಟವಾಗಿವೆ. ಅದಲ್ಲದೇ ನನ್ನ ಬ್ಲಾಗಿನ ಕೊಂಡಿಯನ್ನು ತಮ್ಮ ಗಾಡಿಗೆ ಸಿಕ್ಕಿಸಿಕೊಂಡು ತಮ್ಮೊಂದಿಗೆ ಪ್ರಯಾಣಿಸಲು ಅನುವು ಮಾಡಿಕೊಡುತ್ತಿದ್ದಾರೆ. ಇದರ ರೂವಾರಿ ರವಿ ಕೃಷ್ಣಾ ರೆಡ್ಡಿಯವರು ನೇರವಾಗಿ ಪರಿಚಯವಿಲ್ಲದಿದ್ದರೂ ತಮ್ಮ ಪತ್ರಿಕೆಯ ಮೂಲಕ ನನ್ನನ್ನು ಮೇಲೆತ್ತಲು ಪ್ರಯತ್ನಿಸುತ್ತಿದ್ದಾರೆ. ಮುದ್ರಣ ಮಾಧ್ಯಮದಲ್ಲಿ ಒಂದು ಲೇಖನವು ಉದಯವಾಣಿ ಪತ್ರಿಕೆಯ ಮೂಲಕ ಪ್ರಕಟವಾಗಿದೆ. ಇದಕ್ಕಾಗಿ ಸಹಕರಿಸಿದ ನನ್ನ ಇನ್ನೋರ್ವ ಮಿತ್ರ ಇಸ್ಮಾಯಿಲ್ ಅವರಿಗೆ ನಾನು ಚಿರಋಣಿಯಾಗಲೇಬೇಕು. ಇವರೆಲ್ಲರಿಗೂ ನಾನು ಚಿರಋಣಿಯಾಗಿರದೇ ಇದ್ದರೆ ಕರ್ತವ್ಯ ಭ್ರಷ್ಟನೆಂಬ ಹಣೆಪಟ್ಟಿಯನ್ನು ಅಂಟಿಸಿಕೊಳ್ಳಬೇಕಾದೀತು.
ಇದಲ್ಲದೇ ಸಂಪದದಲ್ಲಿ ಮಿತ್ರರಾದ ಶ್ರೀಯುತ ವೆಂಕಟೇಶಮೂರ್ತಿಗಳು, ಮತ್ತು ಮುಂಬಯಿಯವರೇ ಆದ ಶ್ರೀಮಾನ್ ವೆಂಕಟೇಶ್ ಮತ್ತು ಶ್ರೀಕಾಂತ ಮಿಶ್ರಿಕೋಟಿಯವರುಗಳೂ ನನಗೆ ಪ್ರೋತ್ಸಾಹ ಕೊಡುತ್ತಿರುವರು. ಶ್ರೀಕಾಂತರವರು ಒಮ್ಮೆ ನಮ್ಮ ಬ್ಯಾಂಕಿಗೆ ಬಂದು ಸಂಧಿಸಿದ್ದರು ಕೂಡಾ. ಹಾಗೆಯೇ ಶ್ರೀಯುತ ರೋಹಿತ, ದೀಪಕ್ ಮತ್ತು ಪ್ರದೀಪರು ಒಮ್ಮೆ ನಮ್ಮ ಮನೆಗೂ ಬಂದಿದ್ದಾರೆ. ಮುಂಬಯಿಯಲ್ಲಿ ಸರಣಿ ಬಾಂಬ್ ಸ್ಫೋಟವಾದಾಗಲಂತೂ ನನ್ನನ್ನು ತಮ್ಮ ಕುಟುಂಬದ ಸದಸ್ಯನೆಂದು ತಿಳಿದು, ನನ್ನ ಆರೋಗ್ಯದ ಬಗ್ಗೆ ತಿಳಿಯಲು ದೂರದೂರುಗಳಿಂದ ದೂರವಾಣಿಯ ಮೂಲಕ ಸಂಪರ್ಕಿಸಿದ ಮನೋಹರ, ತ್ರಿವೇಣಿ, ಲೀಲಾ, ರಾಮಪ್ರಿಯ ಮತ್ತಿತರರು ಇನ್ನೂ ಹತ್ತಿರವಾದರು.
ಇನ್ನು ಓರ್ಕುಟ್ ಎಂಬ ಸಮುದಾಯದಲ್ಲಿಯೂ ನನಗೆ ಕೆಲವು ಸ್ನೇಹಿತರುಗಳು ದೊರಕಿದರು. ಅವರುಗಳಲ್ಲಿ ನನ್ನನ್ನು ಎಂದೂ ಪ್ರೋತ್ಸಾಹಿಸುತ್ತಾ ಬಂದವರೆಂದರೆ ಶ್ರೀಯುತ ಶಿವಶಂಕರರು. ನನ್ನ ಕೆಲವು ಬರಹಗಳನ್ನು ಪುಕ್ಕಟೆಯಾಗಿ ದೊರೆತಿರುವ ಬ್ಲಾಗ್ ಒಂದರಲ್ಲಿ ಹಾಕುತ್ತಿರುವೆ. ಅದನ್ನು ಕಂಡು ಪ್ರೋತ್ಸಾಹಿಸುತ್ತಿರುವ ಮತ್ತು ಸಲಹೆ ಕೊಡುತ್ತಿರುವವರಲ್ಲಿ ಹಿರಿಯರಾದ ಶ್ರೀಯುತ ಶೇಖರಪೂರ್ಣ, ಶ್ರೀ ಅಸತ್ಯಾನ್ವೇಷಿ, ಕುಮಾರಿ ಸೋನಿ, ಕುಮಾರಿ ಶ್ರೀಮಾತಾ ಇವರುಗಳನ್ನು ಮರೆಯುವಂತಿಲ್ಲ.
ಇವೆಲ್ಲದರ ಮಧ್ಯೆ ನೋವಿನ ಕ್ಷಣಗಳಿಗೇನೂ ಕಡಿಮೆ ಇಲ್ಲ. ಎಷ್ಟೋ ಜನಗಳು, ನನ್ನಿಂದ ಪಡೆದವರು ನನಗೆ ಲೆಕ್ಕ ಬಾರದೆಂದು ತಿಳಿದಿದ್ದಾರೆ. ಕೊಟ್ಟವನು ಕೋಡಂಗಿ ಇಸ್ಕೊಂಡವ್ನು ಈರಭದ್ರ ಎಂದು ಎಂದವರೂ ಇದ್ದಾರೆ. ಯಾವುದೂ ಶಾಶ್ವತವಲ್ಲದ ಕಾರಣ ನಾನೆಲ್ಲವನ್ನೂ ಮರೆಯಬಯಸುವೆ. ಆದರೂ ಮೂಲೆಯಲ್ಲಿ ಅವಿತುಕುಳಿತಿರುವ ಚೇಳು ಆಗಾಗ ಕುಟುಕುತ್ತಲೇ ಇರುತ್ತದೆ. ಜೀವನದ ಪರಿಯನ್ನು ತಿಳಿಯಲು ಇದೂ ಒಂದು ಪಾಠವೆಂದು ತಿಳಿದಿರುವೆ. ಆದರೂ ಸನ್ಮಿತ್ರರುಗಳ ಒಂದೊಂದು ಮಾತಿನಿಂದ ನಾನೆಲ್ಲ ನೋವನ್ನೂ ಮರೆಯಬಲ್ಲೆ. ಈ ಶಕ್ತಿಯನ್ನು ದಯಪಾಲಿಸಿರುವ ಆ ಗುರುವಿಗೆ ನಾನೆಂದೂ ಚಿರಋಣಿಯಾಗಿರಲೇಬೇಕು.
ಈಗ ನೀವೇ ಹೇಳಿ ಈ ಒಂದು ವರ್ಷದಲ್ಲಿ ನಾನು ಕಳೆದುಕೊಂಡದ್ದೆಷ್ಟು ಪಡೆದದ್ದೆಷ್ಟು. ನನ್ನ ಪ್ರಕಾರ ನಾನು ಒಂದಂಶವನ್ನೂ ಕಳೆದುಕೊಂಡಿಲ್ಲ, ಮಿಗಿಲಾಗಿ ಜಗತ್ತಿನಲ್ಲಿ ಹೆಚ್ಚಿನ ಸಹೃದಯ ಮಿತ್ರರನ್ನು ಪಡೆದುಕೊಂಡಿದ್ದೇನೆ.
ಕೊನೆಯ ಮಾತು:
ಬೆಳೆಯುವ ಬಳ್ಳಿಯನ್ನು ಚಿವುಟಲುಬಾರದು. ಚಿವುಟಲು ನವಿರಾಗಿ ನಲುಗುವುದೆಂದೂ, ನೋಡಲು ಚಂದವೆಂದೂ ಮತ್ತೆ ಮತ್ತೆ ಚಿವುಟಲುಬಾರದು. ತನ್ನ ಕಾಲ್ಗಳ ಮೇಲೆ ಸ್ವಂತವಾಗಿ ನಿಲ್ಲಲು ಬಳ್ಳಿಯು ಹಾತೊರೆಯುತ್ತಿದೆ. ಅಕ್ಕ ಪಕ್ಕದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿರುವ, ಬೆಳೆಯುತ್ತಿರುವ ಇತರ ಮರಗಳನ್ನು ಕಂಡು ತಾನೂ ಅವರಂತೆ ಯಾಕಾಗಬಾರದು ಎಂಬ ಹಂಬಲ ಬರುವುದು ಸಹಜವೇ. ತಮ್ಮ ನಲಿವಿನ ನೋಟಕಾಗಿ, ಎಳೆ ಬಳ್ಳಿಯನ್ನು ಮತ್ತೆ ಮತ್ತೆ ಚಿವುಟುವುದರಿಂದ ಬಳ್ಳಿಯ ಮನಸ್ಸಿಗಾಗುವ ಆಘಾತ ಅಪರಿಮಿತ. ಅದರಿಂದ ಬಳ್ಳಿಯ ಬಾಳು ಕೊನೆಯಾಗುವುದು ಖಚಿತ. ಹೀಗಾಗಲು ಅವಕಾಶವನೀಡುವುದು, ಈ ಸಮಾಜಕ್ಕೆ ಸಮಂಜಸವೇ? ಏನಂತೀರಿ? ಸ್ವಂತ ಮನೆಯನ್ನು ಇಟ್ಟುಕೊಳ್ಳಲಾರದವನು ಬಾಡಿಗೆ ಮನೆಗೆ ಅಥವಾ ಎಂದೋ ಎತ್ತಂಗಡಿಯಾಗುವ ಪುಕ್ಕಟೆ ಮನೆಗೆ ಹೋಗುವುದೊಳಿತಲ್ಲವೇ?
ನನ್ನ ಮೇಲೆ ಮೂರು ಕಾಸಿನ ಅಭಿಮಾನ ಇಟ್ಟಿರುವ ಎಲ್ಲರಿಗೂ ನಾನು ಚಿರಋಣಿಯಾಗಿರುತ್ತೇನೆ. ಎಲ್ಲರೂ ನೂರ್ಕಾಲ ಬಾಳಿ, ನಿಮ್ಮನ್ನು ನಂಬಿದವರೆಲ್ಲರನ್ನೂ ಬದುಕಿಸಿ. ಆ ಸರ್ವಶಕ್ತನ ಕರುಣೆಯಿಂದ ಎಲ್ಲರಿಗೂ ಒಳ್ಳೆಯದಾಗಲಿ ಮತ್ತು ಸುಖ ದು:ಖಗಳನ್ನು ಸಮನಾಗಿ ಸ್ವೀಕರಿಸುವ ಶಕ್ತಿ ದೊರೆಯಲಿ.
Comments
ಯಾಕಿದು ಅತೀವ ವಿಶಾದ?
ನಮ್ಮಂತವರಿಗೆ ಮಾದರಿ
ಸಂನ್ಯಾಸಿ ಮತ್ತು ಚೇಳು
In reply to ಸಂನ್ಯಾಸಿ ಮತ್ತು ಚೇಳು by pavanaja
ಚಿರಋಣಿ
ಅವಮಾನ ಮತ್ತು ಬೆಳವಣಿಗೆ