ಒಂಟಿ ಹೇಗಿರುವಿರಿ ಇಲ್ಲಿ ಅಂದರೆ ಏನು ಹೇಳಲಾದೀತು?!

Submitted by asuhegde on Wed, 06/17/2009 - 16:06

ಮಗಳನ್ನು ಹಾಸ್ಟೆಲಿಗೆ ಕಳುಹಿಸಿ ನಾವಿಲ್ಲಿ ಹೇಗೆ ಇರುವುದು
ಈ ಪ್ರಶ್ನೆ ಈ ಮುಂಜಾನೆ ನನ್ನ ಮಗಳಬ್ಬೆ ನನ್ನ ಕೇಳಿದ್ದು

ಮಗಳ ಜೊತೆಗೆ ನೀನೂ ಹೋಗಿರು ಮತ್ತೇನು ಮಾಡಲಾದೀತು
ನೀವು ಒಂಟಿ ಹೇಗಿರುವಿರಿ ಇಲ್ಲಿ ಅಂದರೆ ಏನು ಹೇಳಲಾದೀತು

ಮಗಳ ಮೇಲೆ ಮಮತೆ ನಿನಗೆ ನನ್ನ ಮೇಲೆ ಪ್ರೀತಿ ಇಹುದು
ಎಲ್ಲರೂ ಜೊತೆಗಿರಲೆಮ್ಮ ಮೇಲೆ ದೇವರ ದಯೆ ಎಲ್ಲಿಹುದು

ಮಕ್ಕಳಿಗಾಗಿ ನಾವು ತ್ಯಾಗ ಮಾಡಬೇಕು ಅದುವೇ ನಮ್ಮ ಜೀವನ
ಮಕ್ಕಳ ಮರೆತು ಬದುಕಿದರೆ ಯಾರಿರುವರೆಮಗೆ ಬಂದಾಗ ಮರಣ

ಭಂಗದ ಬದುಕು ಕಷ್ಟವಾಗದು ನೋವು ತಿಂದಿಹ ಜೀವವೆಮ್ಮದು
ಹಾಸ್ಟೆಲಿನಲ್ಲಿ ಮಗಳು ನೊಂದರೆ ನಮಗೆ ನೆಮ್ಮದಿ ಎಲ್ಲಿಹುದು

ಮಗಳು ನಲಿಯುತ್ತಿದ್ದರೆ ನಿನ್ನ ಮೊಗದಲ್ಲೂ ನಗುವು ಇರಬಹುದಲ್ಲ
ನೀವಿಬ್ಬರೂ ಖುಷಿಯಲ್ಲಿದ್ದರೆ ನನಗೂ ಒಳ್ಳೆಯ ನಿದ್ದೆ ಬರಬಹುದಲ್ಲಾ

ನಮ್ಮ ಮಗಳು ಡಾಕ್ಟರ್ ಆಗಬೇಕಿದ್ದರೆ ಈ ಕಷ್ಟವನು ಸಹಿಸಬೇಕು
ನಾಳೆ ಒಳ್ಳೇದಾಗಬೇಕಿದ್ದರೀ ನೋವ ನಾವಿಂದು ನುಂಗಿಕೊಳ್ಳಬೇಕು

ಮಗಳ ಜೊತೆಗೆ ನೀನೂ ಹೋಗಿರು ಮತ್ತೇನು ಮಾಡಲಾದೀತು
ನೀವು ಒಂಟಿ ಹೇಗಿರುವಿರಿ ಇಲ್ಲಿ ಅಂದರೆ ಏನು ಹೇಳಲಾದೀತು

(ತುಳುವಿನಲ್ಲಿ ಓದಬೇಕಿದ್ದರೆ ಇಲ್ಲಿಗೆ ಭೇಟಿ ಕೊಡಿ. http://athradi.wordpress.com)

Rating
No votes yet

Comments