ಕಾರಿನ ಕಥೆ.

Submitted by manju787 on Fri, 06/19/2009 - 14:31

ದುಬೈನಲ್ಲಿ ಕೆಲಸ ಮಾಡಲು ಬಂದ ನಂತರ ಇಲ್ಲಿನ ವಾಹನ ಚಾಲನಾ ಪರವಾನಗಿ ಪಡೆದೆ.  ಕಂಪನಿಯಿಂದ ಒಳ್ಳೆಯ ಕಾರ್ ಕೂಡ ಸಿಕ್ಕಿತು.  ಕಾರು ನನ್ನ ಕೆಲಸದ ಅವಿಭಾಜ್ಯ ಅಂಗ.  ನನಗೆ ಇಲ್ಲಿ ಕಾರು ಸಿಕ್ಕಿದ ದಿನ ಅಲ್ಲಿ ಬೆಂಗಳೂರಿನಲ್ಲಿ ಪತ್ನಿ - ಮಕ್ಕಳು ಅಕ್ಕ ಪಕ್ಕದವರಿಗೆಲ್ಲಾ ಸಿಹಿ ಹಂಚಿ ಸಂತೋಷಪಟ್ಟಿದ್ದರು.  ಸ್ವಲ್ಪ ದಿನಗಳು ಕಳೆದ ನಂತರ ಶುರುವಾಯಿತು ನೋಡಿ, ಒಮ್ಮೆ ಮೆತ್ತಗೆ ಮಗ ಶುರು ಮಾಡಿದ, ಅಪ್ಪ, ನಮಗೂ ಒಂದು ಕಾರ್ ಕೊಡಿಸಪ್ಪ, ಮತ್ತೊಮ್ಮೆ ಮುದ್ದಿನ ಮಗಳು ಕೇಳಿಸಿಯೂ ಕೇಳಿಸದಂತಹ ಧ್ವನಿಯಲ್ಲಿ ಉಸುರಿದ್ದಳು,  ಅಪ್ಪಾ, ನಮಗೊಂದು ಕಾರ್.

ಕೊನೆಗೆ ಪತ್ನಿ, ಕಲಾ,  ಫೋನಿನಲ್ಲಿ  "ಮಕ್ಕಳು ತುಂಬಾ ಆಸೆ ಪಡ್ತಿದಾರೆ, ಎಲ್ಲಾದ್ರೂ ಹೋಗ್ಲಿ, ಒಂದು ಕಾರ್ ಕೊದಿಸಿಬಿಡ್ರೀ"  ಅಂತ ಬೇರೆ ಶಿಫಾರಸ್ಸು ಮಾಡಿದಳು.  ಮೊದಲು ಅವಳಿಗೆ ವಾಹನ ಚಾಲನಾ ಪರವಾನಗಿ ಪಡೆಯುವಂತೆ ಹೇಳಿದೆ.  ತರಬೇತಿ ಪಡೆದು ಕೇವಲ ಎರಡೇ ತಿಂಗಳಲ್ಲಿ ಕಲಾ ಪರವಾನಗಿ ಪಡೆದೇ ಬಿಟ್ಟಳು.  ನನಗೆ ಅನುಮಾನ, ಕಾರ್ ನಿಜವಾಗಲೂ ಬೇಕಿದ್ದದ್ದು ಮಕ್ಕಳಿಗಾ ಅಥವಾ ಇವಳಿಗಾ ??  ಈಗ ಕಾರಿಗಾಗಿ ಬೇಡಿಕೆ ಮತ್ತಷ್ಟು ಹೆಚ್ಚಾಯಿತು. ಮಕ್ಕಳಿಬ್ಬರೂ ದಿನಕ್ಕೊಮ್ಮೆ ನನಗೆ ಕಾರಿನ ಬಗ್ಗೆ ಕುಯ್ಯತೊಡಗಿದರು.  ಕೊನೆಗೆ ಅವರಿಗೆ " ಈ ಸಲ ರಜಕ್ಕೆ ಬಂದಾಗ" ಕಾರ್ ಕೊಡಿಸುವ ಭರವಸೆ ಕೊಟ್ಟೆ.

ಭರವಸೆ ಕೊಟ್ಟಂತೆ ಈ ಸಲ ರಜಕ್ಕೆ ಬೆಂಗಳೂರಿಗೆ ಹೋದಾಗ ಹೊಸ ಕಾರ್- - ಹ್ಯುಂಡೈ - ಐ 10, ಟೆಸ್ಟ್ ಡ್ರೈವ್ ಮಾಡಿದೆ, ತುಂಬಾ ಚೆನ್ನಾಗಿದೆ ಅನ್ನಿಸಿತು. ಖರೀದಿಸಿಯೇ ಬಿಟ್ಟೆ, ಕಲಾ ಮತ್ತು ಮಕ್ಕಳ ಖುಷಿಗೆ ಪಾರವೇ ಇರಲಿಲ್ಲ. ಎಲ್ಲರಿಗೂ ಸಿಹಿ ತಿನ್ನಿಸಿದ್ದೇ ತಿನ್ನಿಸಿದ್ದು, ಎಲ್ಲರಿಗೂ ಹೇಳಿದ್ದೇ ಹೇಳಿದ್ದು, ಹೊಸ ಕಾರ್ ತಂದ್ವಿ ಅಂತ.

ಅವರನ್ನು ಚೆನ್ನಾಗಿ ಕಾರಿನಲ್ಲಿ ಸುತ್ತಾಡಿಸಿದೆ, ಕಲಾ ಮತ್ತು ಮಗಳು ಗೌತಮಿಗೆ ಕಾರ್ ಓಡಿಸಲು ಕೊಟ್ಟು ಪ್ರೋತ್ಸಾಹಿಸಿದೆ. ನಾನು ರಜೆ ಮುಗಿದು ದುಬೈಗೆ ಹೊರಟಾಗ ಎಲ್ಲರ ಕಣ್ಣಲ್ಲೂ ನೀರು, ಮಗ ವಿಷ್ಣು ಅಳುವಾಗ ಹ್ರುದಯ ಹಿಂಡಿದಂತಾಗಿ ದುಬೈಗೆ ಹೋಗುವುದೇ ಬೇಡ ಅನ್ನಿಸಿತ್ತು. ಆದರೆ ಇನ್ನೂ ನಿರ್ವಹಿಸಬೇಕಾದ ಜವಾಬ್ಧಾರಿಗಳು ತುಂಬಾ ಇವೆ, ಹೋಗಲೇಬೇಕು ಎಂದ ಮನಸ್ಸಿನ ಮಾತು ಕೇಳಿ ಹೊರಟು ಬಂದೆ,, ಭಾರವಾದ ಹ್ರುದಯದೊಂದಿಗೆ.

ಸಂಪದಿಗರಿಗಾಗಿ.... ಪ್ರೀತಿಯಿಂದ..

Comments