ಮಿಲಿ, ಆನಂದ್, ಗುಡ್ಡಿ ಯಂತಹ ಶ್ರೇಷ್ಟ ಹಿಂದಿ ಚಿತ್ರ ನಿರ್ಮಾಪಕ, ಹೃಷೀಕೇಶ್ ಮುಖರ್ಜಿ ನಿಧನ !

ಮಿಲಿ, ಆನಂದ್, ಗುಡ್ಡಿ ಯಂತಹ ಶ್ರೇಷ್ಟ ಹಿಂದಿ ಚಿತ್ರ ನಿರ್ಮಾಪಕ, ಹೃಷೀಕೇಶ್ ಮುಖರ್ಜಿ ನಿಧನ !

ಬರಹ

ಹಿಂದೀ ಚಿತ್ರರಂಗದ ಮಹಾನ್ ಹಸ್ತಿ, ಶ್ರೇ‍ಷ್ಟ ನಿರ್ದೇಶಕ, 'ಹೃಷಿದಾ', ತಮ್ಮ ೮೪ ನೆಯ ವಯಸ್ಸಿನಲ್ಲಿ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ರವಿವಾರ, ೨೭ನೆ ಆಗಸ್ಟ್, ೨೦೦೬ ರಂದು ನಿಧನರಾದರು. ಅವರು ಸುಮಾರು ೩ ತಿಂಗಳಿನಿಂದ ಲೀಲಾವತಿಯಲ್ಲಿ ಚಿಕಿತ್ಸೆ ಪಡೆಯುತ್ತಲೇ ಇದ್ದರು. 'ಡಯಾಲಿಸಿಸ್' ನಿರಂತರವಾಗಿ ಮಾಡಿಸಿಕೊಳ್ಳುತ್ತಲೇ ಇದ್ದರು. ಹೋದವಾರ 'ನ್ಯುಮೋನಿಯ ಜ್ವರ'ದಿಂದ ಅವರ ಆರೋಗ್ಯ ತೀರ ಹದಗೆಟ್ಟಿತ್ತು. ಉಲ್ಬಣಗೊಂಡ ಜ್ವರ, ಈ ಬಾರಿ ಅವರ ಜೀವವನ್ನೇ ಆಹುತಿ ತೆಗೆದುಕೊಂಡಿತು. ಬಾರತೀಯ ಚಿತ್ರರಂಗಕ್ಕೆ ಸುಮಾರು ೫ ದಶಕಗಳಲ್ಲಿ ೪೬ ಮಹಾನ್ ಚಿತ್ರಗಳನ್ನು ಸಮರ್ಪಿಸಿದ ಹೃಷಿಕೇಶ್ ಮುಖರ್ಜಿಯವರಿಗೆ ಭಾರತಸರ್ಕಾರದ ಶ್ರೇಷ್ಟ ಪುರಸ್ಕಾರ, 'ಬಾಬಾಸಾಹೇಬ್ ಫಾಲ್ಕೆ ಪ್ರಶಸ್ತಿ' ೨೦೦೧ ರಲ್ಲಿ ದೊರೆಯಿತು. ಅವರು ತಯಾರಿಸಿದ 'ಝೂಟ್ ಬೊಲೆ ಕೌವ್ವ ಕಾಟೆ' ಆಂತಿಮ ಚಿತ್ರ, ಮಾತ್ರ ಹೆಚ್ಚಿನ ಯಶಸ್ಸು ಕಾಣಲಿಲ್ಲ. ಬೇರೆ ಎಲ್ಲಾ ಚಿತ್ರಗಳು ಒಂದಕ್ಕಿಂತ ಒಂದು ರಸವತ್ತಾದ "ದೃಶ್ಯ ಕಾವ್ಯ" ಗಳು ! "ಆನಂದ್" ಚಿತ್ರ ರಾಜೇಶ್ ಖನ್ನ, ಅಮಿತಾಬ್ ಬಚ್ಚನ್, ರವರನ್ನು ಯಶಸ್ಸಿನ ಶಿಖರಕ್ಕೆ ತೆಗೆದುಕೊಂಡು ಹೋಯಿತು ! ಹಾಗೆಯೆ ಕಿಶೊರ್ ಕುಮಾರ್, ಮನ್ನಾಡೆ, ಮುಖೆಶ್ ಕೂಡ ಹೆಸರುವಾಸಿಯಾದ ಗಾಯಕರಾದರು. ಅವರ ಇನ್ನು ಹೆಸರುಮಾಡಿದ ಚಿತ್ರಗಳೆಂದರೆ, ಬಾವರ್ಚಿ, ಚುಪ್ ಕೆ ಚುಪ್ ಕೆ, ಅನುರಾಧ, ಮುಸಾಫಿರ್, ಅನಾರಿ, ಸತ್ಯಕಾಮ್, ಗುಡ್ಡಿ, ನಮಕ್ ಹರಾಮ್, ಮಿಲಿ, ಇತ್ಯಾದಿ. ಮಧ್ಯಮವರ್ಗದ ಸಮಾಜದ ಜೀವನವನ್ನು, ನಿರೂಪಿಸಿ ಅದರ ತುಡಿತಗಳಿಗೆ ಸ್ಪಂದಿಸಿ, ಅದರ ನೊವು, ನಲುವಿನಲ್ಲಿ ಒಂದು ವಿಶೇಷ ಅನುಭವವನ್ನು ಉಣಬಡಿಸಿದ ಹೆಗ್ಗಳಿಕೆ ಅವರಿಗೆ ಸೇರಬೇಕು. ಚಿಕ್ಕ ಚಿಕ್ಕ ಸನ್ನಿವೇಶಗಳು ; ಉದಾಹರಣೆಗೆ, ಬಾವರ್ಚಿಯಲ್ಲಿ ರಾಜೇಶ್ ಖನ್ನ, ಪಾತ್ರೆ ತೊಳೆಯುತ್ತಾ, ಬಚ್ಚಲಿನ ಬಳಿ ಹಾಡುವ ಸನ್ನಿವೇಶದ ದೃಷೀಕರಣ, ಬಹುಶಃ ಹೃಷೀದಾ, ಒಬ್ಬರಿಗೆ ಮಾತ್ರ ಹೊಳೆಯ ಬಲ್ಲದು ! ಎಂತಹ ಅದ್ಭುತ ಸನ್ನಿವೇಶ ಅದು ! ಹೃಷೀದಾರ ತಮ್ಮ ಜೀವನದ ಕೊನೆಯಗಳಿಗೆಯಲ್ಲಿ ಅವರ ಪರಿವಾರದವರ್ಯಾರೂ ಹತ್ತಿರವಿರಲಿಲ್ಲ. ಕೊನೆಯ ಮಗನ ಸಾವಿನಿಂದ ಬಹಳ ನೊಂದಿದ್ದರು. ಒಬ್ಬ ಮಗ ಅಮೆರಿಕದಲ್ಲಿ ಇದ್ದರು. ಹೆಣ್ಣು ಮಕ್ಕಳೆಲ್ಲಾ ಅವರವರ ಕೆಲಸಗಳಲ್ಲಿ ನಿರತರಾಗಿದ್ದರು. ತಮ್ಮ ಆಪ್ತ ಕಾರ್ ಚಾಲಕ, ವಾಚ್ ಮನ್, ಮತ್ತು ೪-೫ ಸಾಕು ನಾಯಿಗಳೇ ಅವರ ಸಂಗಾತಿಗಳು ! ಮನರಂಜನೆಗೆ, ಚಾರ್ಲಿ ಚಾಪ್ಲಿನ್ ಡಿವಿಡಿ ಗಳು. ಬಾಲಿವುಡ್ ನ ಯಾವ ವ್ಯಕ್ತಿಗಳು ಬಂದು ಹೋಗುತ್ತಿರಲಿಲ್ಲ. ತಿಳಿನಗೆಯ ಹಾಸ್ಯದ ಹೊನಲನ್ನೇ ಹರಿಸಿದ, ಅಶ್ಲೀಲತೆಯ ಲೇಪವಿಲ್ಲದ, ಜೀವನ ಮೌಲ್ಯಗಳನ್ನು ಸಾರುವ ಶುದ್ಧ, 'ಚೊಕ್ಕ ಬಂಗಾರ'ವನ್ನು ಅವರ ಚಿತ್ರಗಳಲ್ಲಿ ಕಾಣುತ್ತೇವೆ. ಇಂದಿಗೂ ಅವರ ಚಿತ್ರಗಳು ಪ್ರಸ್ತುತ. ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ಮನರಂಜನೆ ಪಡೆಯಬಹುದಾದ ಭವ್ಯ ಪರಂಪರೆಯನ್ನು ಮತ್ತೆ ಕಾಣಲು ಸಾಧ್ಯವೇ ? ಈ ದಿನ (೨೯-೦೮-೨೦೦೬)ಮುಂಬೈನ "ಶಿವಾಜಿ ಪಾರ್ಕ್ ಸ್ಮಶಾನ" ದಲ್ಲಿ ಮಧ್ಯಾನ್ಹ ೩ ಘಂಟೆಗೆ ದಹನಕ್ರಿಯೆ ನಡೆಸಲಾಗುವುದು. ಅವರ ಆತ್ಮಕ್ಕೆ ಶಾಂತಿ ಕೊರೊಣ !! ಹೃಷೀದಾ ರವರ ಬಗ್ಗೆ ಓದ ಬಹುದು :http://hrl4venkatesh.blogspot.com