ಅಭಯ ನೀಡಿ ತಲೆ ಕಾಯ್ದ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಆಶೀರ್ವಾದ.

Submitted by manju787 on Sat, 06/20/2009 - 15:09

ಆಗ ಅಪ್ಪ ಅಮ್ಮ ಇನ್ನೂ ಅಜ್ಜಿ ತಾತನೊಟ್ಟಿಗೆ ಹೊಳೆ ನರಸೀಪುರದಲ್ಲೇ ಇದ್ದರಂತೆ. ಅಮ್ಮನಿಗೆ ಒಂದರ ಹಿಂದೊಂದರಂತೆ ಐದು ಹೆಣ್ಮಕ್ಕಳು ಹುಟ್ಟಿ ಅವರಲ್ಲಿ ಮೂರು ಅದ್ಯಾವುದೋ ಕಾಯಿಲೆಯಿಂದ ಕಣ್ಮುಚ್ಚಿಕೊಂಡವಂತೆ. ಸದಾ ಅಜ್ಜಿಯ ಕಿರಿಕಿರಿ ಮನೆಯಲ್ಲಿ, ನೆಮ್ಮದಿಯೇ ಇರಲಿಲ್ಲವಂತೆ. ಒಂದು ದಿನ ತಲೆ ಕೆಟ್ಟ ಅಪ್ಪ, ಅಜ್ಜಿ ತಾತನೊಂದಿಗೆ ಜಗಳವಾಡಿಕೊಂಡು ಅಮ್ಮನೊಟ್ಟಿಗೆ ಮೈಸೂರಿನ ಪ್ಯಾಸೆಂಜರ್ ರೈಲು ಹತ್ತಿದರಂತೆ. ಚಿಕ್ಕವಳಾಗಿದ್ದ ಶೋಭಕ್ಕನನ್ನು ಅಜ್ಜಿಯ ಬಳಿಯೇ ಬಿಟ್ಟು ಸ್ವಲ್ಪ ದೊಡ್ಡವಳಾಗಿದ್ದ ಮಂಜುಳಕ್ಕನನ್ನು ಜೊತೆಯಲ್ಲಿ ಕರೆದುಕೊಂದು ಬಂದರಂತೆ.

ಮೈಸೂರಿನ ಕ್ಷೇತ್ರಯ್ಯ ರಸ್ತೆಯಲ್ಲಿ ಒಂದು ಬಾಡಿಗೆ ಮನೆ ಹಿಡಿದು ಶಿವರಾಂ ಪೇಟೆಯ ವಿವಿಧ ಹೋಟೆಲ್ ಗಳಲ್ಲಿ ಮಾಣಿಯಾಗಿ, ದೋಸೆ ಭಟ್ಟರಾಗಿ, ಕೆಲಸ ಮಾಡುತ್ತಿದ್ದ ಸಮಯದಲ್ಲಿ ಅಮ್ಮ ಮತ್ತೆ ಗರ್ಭಿಣಿಯಾದಾಗ ಸೀದಾ ಧರ್ಮಸ್ಥಳಕ್ಕೆ ಹೋಗಿ ದರ್ಶನ ಮಾಡಿ, ಹರಕೆ ಕಟ್ಟಿದರಂತೆ. "ಗಂಡು" ಮಗು ಹುಟ್ಟಿದರೆ ನಿನ್ನ ಹೆಸರೇ ಇಡುತ್ತೇವೆ, ದೇವಾ, ವಂಶೋದ್ಧಾರಕನನ್ನು ಕರುಣಿಸು ಎಂದು ಬೇಡಿಕೊಂಡರಂತೆ. ಆಗ ಹುಟ್ಟಿದ್ದೇ ನಾನು, ಅಂದುಕೊಂಡಂತೆ ನನಗೆ ಆ ದೇವನ ಹೆಸರನ್ನೇ ಇಟ್ಟು ಮೊದಲ ಮುಡಿ ಅಲ್ಲಿಯೇ ತೆಗೆಸಿದರಂತೆ. ನಾನು ದೊಡ್ಡವನಾದ ಮೇಲೆ ನನ್ನ ಬಾಲ್ಯದ ತುಂಟಾಟಗಳನ್ನು ಅಮ್ಮ ನನಗೆ ಆಗಾಗ ಬಹಳ ರಸವತ್ತಾಗಿ " ಸ್ವಚ್ಚ ಮೈಸೂರು ಭಾಷೆಯಲ್ಲಿ" ವರ್ಣಿಸಿ ಹೇಳುತ್ತಿದ್ದರು.

ಹಾಗೆಯೇ ಅಪ್ಪನ ಅದ್ರುಷ್ಟ ಖುಲಾಯಿಸಿ, ಅಂದಿನ ಮಂತ್ರಿ ದಂಪತಿಗಳಾಗಿದ್ದ ಯಶೋಧರಮ್ಮ ದಾಸಪ್ಪನವರ ಮನೆಯಲ್ಲಿ ಅಡಿಗೆ ಭಟ್ಟರಾಗಿ ಕೆಲಸಕ್ಕೆ ಸೇರಿ, ಹೇಗೋ ಮಸ್ಕಾ ಹೊಡೆದು ಅಮ್ಮನಿಗೆ ಕ್ರುಷ್ಣ ರಾಜೇಂದ್ರ ಆಸ್ಪತ್ರೆಯಲ್ಲಿ ದಾದಿಯ ತರಬೇತಿಗೆ ಒಂದು ಸೀಟನ್ನೂ ಗಿಟ್ಟಿಸಿ ಬಿಟ್ಟರಂತೆ. ಆಗ ನನಗೆ ಇನ್ನೂ ಎರಡು ವರ್ಷ ತುಂಬಿರಲಿಲ್ಲ, ಅಮ್ಮನಿಂದ ಅನಿವಾರ್ಯವಾಗಿ ಅಗಲಬೇಕಾಯಿತು. ಆಗ ನನಗೆ ತಾಯಿಯಾದವಳು, ನನ್ನ ಅಕ್ಕ "ಮಂಜುಳ". ಅಮ್ಮ ಈ ಎಲ್ಲಾ ಕ್ರೆಡಿಟ್ಟನ್ನೂ ಹೋಲ್ ಸೇಲ್ ಆಗಿ ಧರ್ಮಸ್ಥಳದ ಮಂಜುನಾಥನಿಗೆ ಕೊಟ್ಟು ಬಿಟ್ಟರಂತೆ. ನಾಲ್ಕು ವರ್ಷಗಳ ತರಬೇತಿಯ ನಂತರ ಅಮ್ಮನಿಗೆ ಕೆಲಸ ಸಿಕ್ಕಿ ದೂರದ ಚಿಕ್ಕಬಳ್ಳಾಪುರ ಜಿಲ್ಲೆಯ " ಮಂಡಿಕಲ್ಲಿಗೆ " ನಮ್ಮ ಪ್ರಯಾಣ. ಅಲ್ಲಿ ನನ್ನ ಪ್ರಾಥಮಿಕ ವಿದ್ಯಾಭ್ಯಾಸ ಮುಂದುವರೆಯಿತು. ಆದರೆ ಅಪ್ಪ ಅಲ್ಲಿಂದಲೂ ನಮ್ಮನ್ನು ಪ್ರತಿ ವರ್ಷ ತಪ್ಪದೆ ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದರು.

ಹಲವಾರು ಏಳು ಬೀಳುಗಳನ್ನು ಕಂಡು ಹಲವಾರು ಸಲ ಜೀವನದಲ್ಲಿ ಬಿದ್ದೆದ್ದ ನನಗೆ ಪ್ರತಿ ವರ್ಷ ಧರ್ಮಸ್ಥಳಕ್ಕೆ ಹೋಗುವುದು ಒಂದು ಚಟವಾಗಿ ಹೋಯ್ತು. ಅಲ್ಲಿ ಅಭಿಷೇಕದ ಚೀಟಿಯನ್ನೇ ತಗೆದುಕೊಂಡು, ಸಿಕ್ಕ ಅಲ್ಪ ಸಮಯದಲ್ಲೇ, ಆ ಗರ್ಭಗುಡಿಯ ಮುಂದೆ ನಿಂತು, ನನ್ನ ಎಲ್ಲಾ ನೋವುಗಳನ್ನೂ, ಕಷ್ಟಗಳನ್ನೂ ಹೇಳಿಕೊಂಡು, ದೇವಾ ಕರುಣೆ ತೋರು ಎಂದು ಪ್ರಾರ್ಥಿಸಿ ಆಚೆಗೆ ಬಂದಾಗ, ಅದೆಂಥಾ ನಿರುಮ್ಮಳ ಭಾವನೆ ಬರುತ್ತಿತ್ತು ಗೊತ್ತೇ ? ನಾನು ಮಾಡುತ್ತಿದ್ದ ಕೆಲಸಗಳಲ್ಲಿ ಅನೇಕ ಬಾರಿ ತೊಂದರೆಗಳಾಗಿ, ಕೆಲವೊಮ್ಮೆ ಊಟಕ್ಕೂ ಲಾಟರಿಯಾಗಿ ಬಿಡುತ್ತಿತ್ತು. ಮಗ ವಿಷ್ಣುವಿಗೆ ಅದೆಂಥದೋ ಖಾಯಿಲೆ ಬಂದು, ಕುಡಿದ ಹಾಲು - ನೀರೆಲ್ಲಾ ಹೊಟ್ಟೆಯಲ್ಲಿ ನಿಲ್ಲದೆ, ಮೇಲಿಂದಲೂ ಕೆಳಗಿನಿಂದಲೂ ಆಚೆಗೆ ಬಂದು ಬಿಡುತ್ತಿತ್ತು. ತೋರಿಸಿದ ವೈದ್ಯರೆಲ್ಲಾ ಒಂದಿಲ್ಲೊಂದು ರೋಗದ ಹೆಸರಿಟ್ಟು, ಪರೀಕ್ಷೆಗೆ ಬರೆದು ಕೊಟ್ಟು, ಬೆಂಗಳೂರಿನ ಎಲ್ಲಾ " ಲ್ಯಾಬ್" ಗಳಲ್ಲೂ ಅವನ ರಕ್ತ ಕೊಟ್ಟಿದ್ದಾಯ್ತು. ಒಬ್ಬ ಪುಣ್ಯಾತ್ಮ ವೈದ್ಯ ಅವನ ಲಿವರ್ ಹೋಗಿದೆ, ಲಿವರ್ ಬಯಾಪ್ಸಿ ಮಾಡಬೇಕಾಗುತ್ತದೆ ಎಂದಾಗ ನನ್ನ ಧೈರ್ಯವೇ ಉಡುಗಿ ಹೋಗಿತ್ತು.

ಕೊನೆಗೆ ದೇವರೇ ಗತಿಯೆಂದು ಸೀದಾ ಹೋಗಿದ್ದು ಧರ್ಮಸ್ಥಳಕ್ಕೆ, ಅಲ್ಲಿ , ಈ ಮಗನಿಗೆ ವಾಸಿಯಾದರೆ ಮುಂದಿನ ಸಲ ಬಂದಾಗ ಅವನಿಗೆ ಅಕ್ಕಿಯಲ್ಲಿ ತುಲಾಭಾರ ಮಾಡಿಸುತ್ತೇನೆಂದು ಹರಕೆ ಕಟ್ಟಿ ಬಂದೆವು. ಮಗನ ಖಾಯಿಲೆ ವಾಸಿಯಾಯ್ತು, ಇತ್ತೀಚಿನ ದಿನಗಳಲ್ಲಿ ಅವನಿಗೆ ಒಂದು ಆರ್ಡಿನರಿ ಜ್ವರವೂ ಬಂದಿಲ್ಲ, ಹರಕೆ ಕಟ್ಟಿದಂತೆ ಕಲಾ ಮತ್ತು ಮಕ್ಕಳೊಂದಿಗೆ ಹೋಗಿ ಮಗನ ಜೊತೆಗೆ ನನ್ನ ತುಲಾಭಾರವನ್ನೂ ಮಾಡಿಸಿದೆ. ಶ್ರೀ ವೀರೇಂದ್ರ ಹೆಗ್ಗಡೆಯವರು ಮುಂದೆ ನಿಂತು ತುಲಾಭಾರ ಮಾಡಿಸಿ, ತಲೆಯ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿ, ನಿಮ್ಮ ಹರಕೆ ಸಲ್ಲಿಕೆಯಾಗಿದೆ, ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಹೇಳುವಾಗ, ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಸಾಕ್ಷಾತ್ ಆ ಮಂಜುನಾಥನೇ ನಮ್ಮ ಮುಂದೆ ನಿಂತು ಅಭಯವನ್ನಿತ್ತಂತಾಯಿತು.

ಅವನ ಅನುಗ್ರಹದಿಂದ ಎಲ್ಲವೂ ಒಳ್ಳೆಯದೇ ಆಗಿದೆ, ಕಂಡ ಕನಸುಗಳೆಲ್ಲ ಕೈಗೂಡುತ್ತಿವೆ. ಬಾಳಿನ ಬಂಡಿ, ಏರು ಪೇರುಗಳನ್ನೆಲ್ಲಾ ದಾಟಿ, ಸುಗಮವಾಗಿ ಸಾಗುತ್ತಿದೆ. ಅವನ ಕರುಣೆ ನಮ್ಮ ಮೇಲೆ ಸದಾ ಹೀಗೇ ಇರಲಿ ಎಂಬುದೇ ನನ್ನ ಆಸೆ.

Rating
No votes yet

Comments