ಆಷಾಢ--ವಿರಹ---ಮುಕ್ತಕಗಳು...

Submitted by umeshhubliwala on Sun, 06/21/2009 - 11:29

೧) ಈ ಆಷಾಢದ ಗಾಳಿಗಳೇಕೆ
ಇಷ್ಟೊಂದು ಜೋರು...
ನಿನ್ನ ನೆನಪು ಇವು
ಹೊತ್ತು ತಂದಿರಲಾರವಷ್ಟೆ....!

೨) ಸುಂದರ ಸಂಜೆಗೆಂಪ
ನುಂಗಿದ ಮೇಘ
ಶಹನಾಯಿ ನುಡಿಸಿದ..

೩) ಅಗಲಿಕೆಯ ಕಹಿಕಷಾಯ
ಕುಡಿಸಿದ್ದಾನೆ
ಹೊಸ ಮದುಮಕ್ಕಳಿಗೆ
ಈ ಆಷಾಢ ಮಹಾರಾಯ...!

೪) ಸುಂಯ ಗುಡುವ ಗಾಳಿ
ತಂಪಲ್ಲಿ ನಿನ್ನ ನೆನಪಿನ
ಹಪ್ಪಳ ಸುಟ್ಟು ತಿನ್ನುತ್ತಿರುವೆ...

೫) ಆ ಚಂದಿರ ನೋಡಿ
ಮೋಡದ ಕಂಬಳಿಯೊಳಗೆ
ಹೇಗೆ ಮಲಗಿದ್ದಾನೆ.....!

೬) ದೂರದಲ್ಲೆಲ್ಲೊ ನವಿಲು
ಗರಿಗೆದರಿದೆ ಸಖಿ, ಬಂದುಬಿಡು
ಈ ಭೂಮಿ
ಬಾಯಾರಿದೆ....

೭) ಎದ್ದಾಗ ಪಕ್ಕದ ಹಾಸಿಗೆ
ಬೆಚ್ಚಗಿತ್ತು ರಾತ್ರಿ ಕಾಡಿದ ನಿನ್ನ
ನೆನಪು ಉಸಿರಿಗೆ ಶಾಖ
ಕೊಟ್ಟಿತ್ತು....!

೮) ಮಡುಗಟ್ಟಿದ ನಿಶೆ
ಎಣಿಸಲೂ ತಾರೆಗಳೂ ಇಲ್ಲ...
ಹೊದ್ದುಕೊಳ್ಳಲು ನಿನ್ನ ನೆನಪು
ಕಳಿಸಿದೆಯಲ್ಲ....!

೯) ಆಷಾಢದ ಆಗಸದ ತುಂಬ
ಚಾಚಿಕೊಂಡ ಕಪ್ಪು ಮೇಘ...
ಮತ್ತಷ್ಟು ರಂಗೇರಿದೆ
ವಿರಹಿಯ ನಿಟ್ಟುಸಿರಿಗೆ....!

೧೦) ಅವನ ತೋಳು ನಿನ್ನ ನಡು
ಬಳಸಿರಬೇಕಿಗ ,ಅವನ ಮಾತಿಗೆ
ನಿನ್ನ ಕೆನ್ನೆ ಕೆಂಪಗಾಗಿರಬೇಕಿಗ.....
ನಾ ಹಿಡಿದ ಮಧು ಬಟ್ಟಲಲಿ
ನನ್ನ ಕಣ್ಣೀರು ಜಾರಿ ಬಿದ್ದಿತೀಗ....

೧೧) ಒಂದೇ ಸಮಯದಿ ಎರಡು ಮಳೆ
ಮೇಘದ ಸಂಗಡ ಕಣ್ಣೀರು..
ಹರಿದರೇನು...
ಹೃದಯದ ಬೆಂಕಿ ಆರದಿನ್ನೂ....!

೧೨) ಹೊರಗೆ ಸೋನೆ ಮಳೆ ಸುರಿದು
ಅವನಿಯ ಬೆಂಕಿ ಆರಿ ಮೈ ತುಂಬ
ತಂಪು... ಒಳಗೆ ನಿನ್ನ ನೆನಪಿನ
ಮಳೆ ಸುರಿದು ಹೃದಯದ ಬೆಂಕಿ
ಹೊಸ ಕಿಚ್ಚು ಪಡೆದಿದೆ...

Rating
No votes yet

Comments