ಫಿನ್ನಿಶ್ ನಾಲಗೆ ಹೊರಳಿದರೆ ಕನ್ನಡ!

ಫಿನ್ನಿಶ್ ನಾಲಗೆ ಹೊರಳಿದರೆ ಕನ್ನಡ!

ಬರಹ

ಹೆಲ್ಸಿಂಕಿಯಲ್ಲಿ ತೊಂಬತ್ತು ದಿನವಿದ್ದೆ. ಯುನೆಸ್ಕೋ-ಆಶ್‌ಬರ್ಗ್ ಸ್ಕಾಲರ್‌ಷಿಪ್‌ನ ನಿಯಮವದು.ದೋಣಿ ಯಾತ್ರೆ ಅದನ್ನು ಮುರಿಯದವರು ಇಲ್ಲವೇ ಇಲ್ಲವೆಂದು ಕೇಳಿ ತಿಳಿದಿದ್ದೆ. ನನ್ನ 'ಕೇರ್‌ ಟೇಕರ್' ಮಿನ್ನ ಹೆನ್ರಿಕ್‌ಸನ್ ಇಪ್ಪತ್ತೊಂಬತ್ತು ವರ್ಷದ ಚುರುಕು ಕಲಾವಿದೆ. ಅಲ್ಲಿನ ಕಲಾಶಾಲೆಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಳು. "ಬೇಜಾರಾಗುತ್ತಿದೆಯ? ಊರಿಗೆ ಹೋಗಬೇಕೆನಿಸುತ್ತಿದೆಯ? ಒಂಟಿ ಎನಿಸುತ್ತಿದೆಯ?" ಎಂದೆಲ್ಲ ಒಮ್ಮೆ ಕೇಳಿದಳು. ಪಾಪ ಎಂದುಕೊಂಡು ಬಿಯರ್ ಕೊಡಿಸಿದೆ. "ಹೀಗೆ ಹೇಳಿ ಊರಿನ ನೆನಪು ಮಾಡುತ್ತಿದ್ದೀಯ" ಎಂದೆ. ಅಲ್ಲಿ ನಾನು ಭೇಟಿ ಮಾಡಿದ ಕಲಾವಿದರ ಹೆಸರುಗಳನ್ನೆಲ್ಲ ಆಕೆಗೆ ದಿನನಿತ್ಯ ಹೇಳುತ್ತಿದ್ದೆ. "ಎಸ್ಕೊ ಮನಕ್ಕೊ ಗೊತ್ತೆ? ಯಾರ್ಮ ಪುರಾನನ್ನ ಭೇಟಿ ಮಾಡಿದೆ, ಯಾನ್ ಕಾಯ್ಲಾ ಸಿಕ್ಕಿದ್ದ" ಎಂದೆಲ್ಲ ಹೇಳುತ್ತಿದ್ದಾಗ ಆಕೆ ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದಳು. ನೆನಪಿರಲಿ ಫಿನ್ನಿಶ್ ಜನ ನಗುವುದಿಲ್ಲ, ನಗದವರ ಮುಖಭಾವ ಓದುವುದು ಸುಲಭವಲ್ಲ. "ಹೇಗೆ ನೀನು ಹೆಸರುಗಳನ್ನು ಜ್ಞಾಪಕವಿರಿಸಿಕೊಳ್ಳುವೆ?" ಎಂದು ಕೇಳಿದಳು.

ಇತರೆ ಯುರೋಪಿಯನ್ನರಿಗೆ ಫಿನ್ಲೆಂಡ್ ಒಂದು ಅಂಚಿನ ದೇಶ. ನಮಗೆ ಮಿಜೋರಾಮ್ ಜನರ ಬಗ್ಗೆ ಎಷ್ಟು ಗೊತ್ತೋ, ಅಥವ ಗೊತ್ತಿಲ್ಲವೋ ಅಷ್ಟೇ ತಿಳುವಳಿಕೆ ಅವರ ಬಗ್ಗೆ ಯುರೋಪಿನವರಿಗಿದೆ. ಆದರೆ ಭಾರತೀಯರಿಗೆ ಇಂಗ್ಲೀಷ್ ಅವರಿಗಿಂತ ಚೆನ್ನಾಗಿ ಬರಲು ಕಾರಣ ಗೊತ್ತಿಲ್ಲ. ಮತ್ತೂ ಇಂಗ್ಲೀಷೂ ನೆಟ್ಟಗೆ ಗೊತ್ತಿಲ್ಲ. "ಸಿಂಪಲ್, ಫಿನ್ನಿಶ್ ಪದಗಳೆಲ್ಲ ನನ್ನ ಮಾತೃಭಾಷೆಯಾದ ಕನ್ನಡದಂತೆ 'ಕೇಳಿಸುತ್ತದೆ" ಎಂದೆ. ಆಕೆ ನಂಬಲಿಲ್ಲ. 'ಲಾರಿ ಇಲ್ಮರಿ ಹಸ್ತ್ಲ' ಎಂಬ ಕಲಾವಿದ ಗೆಳೆಯನ ಹೆಸರು 'ಲಾರಿ ಇಲಿಮರಿ ಹಸ್ತಲ' ಎಂದು ಕನ್ನಡದಲ್ಲಿ ಓದಿಕೊಂಡು ಇಂಗ್ಲೀಷಿನಲ್ಲಿ ಅವರಿಗೆ ತಿಳಿಸಿದೆ, "ಅ ಟ್ರಕ್ ಅಂಡ್ ಅ ಮೌಸ್ ಆನ್ ಯುವರ್ ಹ್ಯಾಂಡ್". ಎಲ್ಲರೂ ಬಿದ್ದು ಬಿದ್ದು ನಕ್ಕರು. ಕೆಲವರು ಬಿದ್ದು ಬಿದ್ದು ನಕ್ಕರು. ಕೆನಡಿಯನ್ ಲೀಸ ಕೊಂಕು ತೆಗೆದಳು, "ಎಲ್ಲಾ ಸುಳ್ಳು. ಏನೇನೋ ಹುಟ್ಟುಹಾಕ್ತಿದ್ದಾನೆ" ಎಂದು.

ಒಂದು ತಿಂಗಳ ನಂತರ ಬೇಕಾದರೆ ಕೇಳಿ, ಇದೇ ಉತ್ತರ ಹೇಳ್ತೇನೆ ಎಂದೆ. ನಿನಗೆ ಸ್ಮರಣ ಶಕ್ತಿ ಜಾಸ್ತಿ ಇದ್ದು, ನೀನೇ ಅರ್ಥಗಳನ್ನ ಹುಟ್ಟುಹಾಕ್ತಿರಬಹುದು! ಎಂದಳಾಕೆ. "ಅಂದ ಹಾಗೆ ನಿನ್ನ ಹೆಸರೇನೆಂದೆ?" ಎಂದು ಎರಡು ತಿಂಗಳಿಂದ ಪಕ್ಕದ ಕೋಣೆಯವಳಾದ ಲೀಸಳನ್ನು ಕೇಳಿದೆ. ಮತ್ತೆ ಎಲ್ಲ ಬಿದ್ದು ಬಿದ್ದು ನಕ್ಕು....

ಅವರ ಮ್ಯೂಸಿಯಂ ಅನ್ನು 'ತಾಯ್ದೆ ಹಳ್ಳಿ' ಎನ್ನುತ್ತಾರೆ. ಕೆಲವು ಕಲಾವಿದರ ಹೆಸರುಗಳು: ಕಿರ್ಸಿ ವಾಕಿಪಾರ್ಥ, ಪೆಕ್ಕ ಕಂಟೋನನ್, ಮಿಕ್ಕ ಲೆಹ್‌ಟಿನೆನ್. ಇಡೀ ದೇಶದ ಏಕೈಕ ಜನನಿಭಿಡ ರಸ್ತೆಯಾದ ಮ್ಯಾನರ್‌ ಹಿಂಕಾತುವಿನಲ್ಲಿ ನಿಂತು "ಲೇಯ್ ಪೆಕ್ಕಾ, ಲೇಯ್ ಮಿಕ್ಕಾ" ಎಂದು ಒಮ್ಮೆ ಜೋರಾಗಿ ಕೂಗಿದರೆ ಸಾಕು. ಪೆಕ್ಕ, ಮಿಕಗಳೆಲ್ಲ ಪೆಕರು ಪೆಕರಾಗಿ ನಿಮ್ಮನ್ನು ನೋಡುತ್ತವೆ.

"ಕನ್ನಡವು ಫಿನ್ನೋ-ಅಗ್ರೇರಿಯನ್ ಭಾಷೆಯಿಂದ ಹುಟ್ಟಿಕೊಂಡದ್ದು", ಎಂಬರ್ಥದ ಮಾತುಗಳನ್ನು ಕೆ.ವಿ.ಸುಬ್ಬಣ್ಣನವರು ಬರೆದಿದ್ದಾರೆ. ಅದನ್ನು ಫಿನ್ಲೆಂಡ್ ಹಾಗೂ ಉಕ್ರೇನಿಯ ಎಂದು ಓದಿಕೊಂಡು, ನಾನು ಕಾಲ್ಪನಿಕವಾದರೂ ಒಂದು ತಂತಿಯನ್ನು ಜೋಡಿಸಲು ಪ್ರಯತ್ನಿಸಿದೆ, ಕನ್ನಡ ಮತ್ತು ಫಿನ್ನಿಶ್ ಪದಗಳ ಸದ್ದಿನ ಸಾಮ್ಯತೆಯ ಬಗ್ಗೆ. "ಮಿತಾಸ್ ಕೋಲೊ, ಕೆಕೊ ಕಾಸ್ಕೊ, ಓಲೆ ಹೂವ, ತೆರೆವೆ ತುಲ" ಇತ್ಯಾದಿ ವಾಕ್ಯಗಳನ್ನು ಒಮ್ಮೆ ಜೋರಾಗಿ ಓದಿಕೊಳ್ಳಿ.

ಬಂಗಾಲದಲ್ಲಿದ್ದ ಎರಡೂ ವರ್ಷ ಕಾಲ ನಾನು ಬೀಚಿಯವರ ಜೋಕನ್ನು ನನ್ನದೆಂದೇ ಹೇಳಬೇಕಾಗಿ ಬಂದ, ಕೃತಿಚೌರ್ಯವಲ್ಲದ ಕ್ರಿಯೆಯಂತೆ ಇದು. ಏಕೆಂದರೆ ಬಂಗಾಲಿಯಲ್ಲಿ "ಬೀಚಿ" ಎಂದರೆ...ಹೇಗೆ ಹೇಳುವುದು!!? ಒಂದು ಜೋಕಿನ ಮೂಲಕ ವಿವರಿಸುವೆ. ಮಹಾನ್ ಫಿನ್ನಿಶ್ ನವ್ಯ ಕಲೆಯ ಸಂಗ್ರಹಾಲಯಪೋಲಿಯೊಬ್ಬ ಪಾರ್ಟಿಯಲ್ಲಿ ವಿಪರೀತ ಕುಡಿದು ಅಲ್ಲಿದ್ದ ಮರ್ಯಾದಸ್ಥ ಹೆಂಗಸರನ್ನು "ನನ್ನ ತೊಡೆಗಳ ಮಧ್ಯೆ ಏನಿದೆ" ಎಂದು ಕುರ್ಚಿಯ ಮೇಲೆ ಕುಳಿತು ಕೇಳಿದನಂತೆ. ಎಲ್ಲರೂ ಒಕ್ಕೊರಲಿನಿಂದ "ಅಯ್ಯೋ ಅಯ್ಯೋ" ಎಂದು ನಾಚಿಕೊಂಡರಂತೆ. "ನನ್ನ ತೊಡೆಗಳ ಮಧ್ಯೆ ಕುರ್ಚಿಯಿದೆ. ಅಷ್ಟೇ" ಎಂದು ಆತನೇ ಉತ್ತರಿಸಿದನಂತೆ. ಎರಡನೇ ಬಾರಿ ಅದೇ ಪ್ರಶ್ನೆಗೆ ಕೇಳಿದಾಗ "ಕುರ್ಚಿ" ಎಂದು ಎಲ್ಲರೂ ಒಕ್ಕೊರಲಿನಿಂದ ಕೂಗಿದರಂತೆ. "ಅಲ್ಲ, ಈ ಬಾರಿ ನನ್ನ ತೊಡೆಗಳ ಮಧ್ಯೆ ಇರುವುದೇನೆಂದರೆ, ನೀವು ಮೊದಲು ಕಲ್ಪಿಸಿಕೊಂಡು ಅಯ್ಯಯ್ಯೋ ಅಂದರಲ್ಲ ಅದು!!" ಎಂದನಂತೆ.

ಕೊನೆಯ ಎರಡು ಪದಗಳು ಕನ್ನಡದಲ್ಲಿ ಹೊರಡಿಸುವ ಶಬ್ದದ ಕನ್ನಡ ಅರ್ಥವನ್ನು ಇಂಗ್ಲೀಷಿನಲ್ಲಿ ಮಿನ್ನಳಿಗೆ ವಿವರಿಸಲು ನನ್ನೆಲ್ಲ ಸಂಸ್ಕೃತ ಜ್ಞಾನ ಹಾಗೂ ಗ್ರೀಕ್-ಲ್ಯಾಟಿನ್ ಜ್ಞಾನವನ್ನೆಲ್ಲ ಬಳಸಬೇಕಾಗಿ ಬಂತು. ಅಂದ ಹಾಗೆ ಈ ಮೂರೂ ಭಾಷೆಗಳ ಜ್ಞಾನ ನನಗೆ ಅಷ್ಟಕ್ಕಷ್ಟೇ. ಅಬ್ಬಬ್ಬಾ ಎಂದರೆ ಆ ಮೂರೂ ಪದಗಳನ್ನು ಇಂಗ್ಲೀಷಿನಲ್ಲಿ ಬರೆದೇನು. ಹಿಂದಿ ಪದಗಳ ಕೊನೆಯಲ್ಲಿ ಒಂದು ಅಥವ ಎರಡು ಸೊನ್ನೆ ಬೆರೆಸಿ ಸಂಸ್ಕೃತ ಮಾಡಿ ನಗಾಡುತ್ತಿದ್ದೆ. ಅರ್ಜೆಂಟಾಗಿ ಸಾರು ಮಾಡಬೇಕಾದರೆ ಉಪ್ಪಿನಕಾಯಿಗೆ ನೀರು ಅನ್ನ ಹಾಕಿ ಚಿತ್ರಾನ್ನ ಮಾಡುವುದಿಲ್ಲವೆ ಹಾಗೆ. ಇವೆಲ್ಲ ತಮಾಷೆಗಾಗಿ ಎಂದು ಗಂಭೀರವಾಗಿ ಹೇಳಬೇಕಾಗಿಲ್ಲವಷ್ಟೇ.

ಫಿನ್ಲೆಂಡ್ ಜನ ಕೇವಲ ನೂರು ವರ್ಷಗಳ ಹಿಂದೆ ಬೇಟೆಗಾರರು, ರೈತರಾಗಿದ್ದವರು. ಪೂರ್ವಕ್ಕೆ ರಷ್ಯ ಹಾಗೂ ಪಶ್ಚಿಮಕ್ಕೆ ಸ್ವೀಡನ್ ಸರದಿ ಪ್ರಕಾರ ಈ ದೇಶವನ್ನು ಆಳಿರುವುದರಿಂದ, ಅವೆರಡರ ಬಗ್ಗೆ ಫಿನ್ಲೆಂಡಿಗೆ ಜೀತಕ್ಕಿರುವವನ ಭಾವವಿದೆ. ಕೇವಲ ಏಳು ಶೇಕಡ ಫಿನ್ನಿಶ್ ಮಾತನಾಡುವವರಿದ್ದಾಗ್ಯೂ ಫಿನ್ಲೆಂಡಿನಲ್ಲಿ ದ್ವಿಭಾಷಾ ಸೂತ್ರ: ಫಿನ್ನಿಶ್ ಹಾಗೂ ಸ್ವೀಡಿಷ್. "ನಮ್ಮ ದೇಶದಲ್ಲಿ ಸ್ವೀಡಿಷ್ ಜನಸಂಖ್ಯೆಗಿಂತ ಬೆಂಗಳೂರಿನಲ್ಲಿ ತಮಿಳರು ಜಾಸ್ತಿ ಇದ್ದಾರೆ. ಕನ್ನಡ-ತಮಿಳು ದ್ವಿಭಾಷಾ ಸೂತ್ರವನ್ನೇಕೆ ಅಳವಡಿಸುವುದಿಲ್ಲ ನೀವು?" ಎಂದು ಕೇಳಿದ್ದ

"ನೈ ಟಿಡ್" ಸ್ವೀಡಿಷ್ ಪತ್ರಿಕೆಯ ಸಂಪಾದಕ ಮಿಕ್ಕೊ ಒಮ್ಮೆ. (ಆತನ ಹೆಸರು ಮಿಕ್ಕೊ ಎಂದು ಮಾತ್ರ ಗೊತ್ತು, ಮತ್ತು ಆತನ ಪೂರ್ಣ ಹೆಸರು ಮಿಕ್ಕೋ ಒಮ್ಮೆ ಎಂದಲ್ಲವೆಂಬುದನ್ನು ಗಮನಿಸಿ). "ಇಲ್ಲ ಈಗ ಅದು ಸಾಧ್ಯವಿಲ್ಲ" ಎಂದೆ. "ಏಕೆ?" ಎಂದ. "ಏಕೆಂದರೆ ಈಗಾಗಲೇ ಬೆಂಗಳೂರು ಮದ್ರಾಸಿನ ರಾಜಧಾನಿಯಾಗಿ ಹೋಗಿದೆ. ಸಮಸ್ಯೆ ಇರುವುದು ಕನ್ನಡವನ್ನು ಎರಡನೆ ಭಾಷೆಯನ್ನಾಗಿಯಾದರೂ ಉಳಿಸಿಕೊಳ್ಳಿ ಎಂಬುದು. ಇನ್ನಷ್ಟು ವರ್ಷಗಳ ನಂತರ ಕನ್ನಡವನ್ನು ಐವತ್ತನೆ ಭಾಷೆಯನ್ನಗಿಯಾದರೂ ಬೆಂಗಳೂರಿನಲ್ಲಿ ಉಳಿಸಿಕೊಳ್ಳಿ ಎಂಬುದಾಗಿರುತ್ತದೆ" ಎಂದೆ.

ಮಿಕ್ಕೋ ಮಿಕಿ ಮಿಕಿ ನೋಡುತ್ತಿದ್ದ. ಆತನ ಕಂಪ್ಯೂಟರ್ ಮೌಸ್‌ಪ್ಯಾಡ್ ಮೇಲೆ ಗಾಂಧಿ ಚಿತ್ರ, ಗೋಡೆ ಮೇಲೆ ರಜನಿಕಾಂತ್ ಮತ್ತು ಆತನ ಜೋಡಿ ಚಿತ್ರ. ಯಾರ ಹೆಗಲ ಮೇಲೆ ಯಾರು ಕೈಹಾಕಿದ್ದರೆಂಬುದು ಮರೆತುಹೋಗಿದೆ ಈಗ. ಆತನ ಶಿಷ್ಯರೊಂದಿಗೆ ಆತ ವರ್ಷಕ್ಕೊಮ್ಮೆ ದಕ್ಷಿಣ ಭಾರತಕ್ಕೆ ಪ್ರವಾಸ ಬರುತ್ತಾನೆ. ಕೇರಳವನ್ನು ಒಮ್ಮೆಯಾದರೂ ಭೇಟಿ ಮಾಡುವುದು ಖಂಡಿತ. ಅಲ್ಲಿ ಆತ ಹೋದಾಗಲೆಲ್ಲ ಅಡುಗೆ ಮಾಡಿ ಹಾಕಲು ಒಂದು ಹೆಂಗಸಿಗೆ ಒಂದು ಎಮ್ಮೆ ಕೊಂಡು ಕೊಡಿಸಿದ್ದಾನಂತೆ. ಚಳಿಯಲ್ಲೂ ಚಡ್ಡಿ ಧರಿಸಿರುತ್ತಾನೆ, ಫಿನ್ಲೆಂಡಿನಲ್ಲೂ ಗಣೇಶ್ ಬೀಡಿ ಅಂಟಿಸಿರುತ್ತಾನೆ. ಕುತ್ತಿಗೆ ಕಾಣದಷ್ಟು ದಾಡಿ. ಹೆಲ್ಸಿಂಕಿಯಲ್ಲಿ ಲೆನಿನ್ ಬದುಕಿದ್ದ ಮನೆಯಲ್ಲಿ ಒಂದಷ್ಟು ವರ್ಷ ಬದುಕಿದ್ದನಂತೆ ಈ ಸಂಪಾದಕ.

ಈ ಪ್ರವಾಸ ಕಥನದ ಇತರ ಭಾಗಗಳು

1. ಸಾವಿನ ಚೇತೋಹಾರಿ ಆರಂಭ 2. ಮೊಬೈಲ್ ಮೌನಿಗಳು
3. ಏಕಾಂಗಿತನದ ವಿರಾಟ್ ರೂಪ 4. ಸಾಮಿ ಎಂಬ ಕಂಪೆನಿಕೊಡುವ ವಾನ್ ಇಂಜನ್
5. 'ಸಾನ' ಮಾಡಿದರೆ ಫಿನ್ನಿಶ್ 6. ಒಬ್ಬಂಟಿಯೊಳಗೊಬ್ಬಂಟಿತನದ ಗ್ಯಾರಂಟಿ
7. ಫಿನ್ಲೆಂಡಿನಲ್ಲಿ 'ಭಾರ'ತದ ಅಡುಗೆ 8. ಇಲ್ಲದೆಯೂ ಇರುವವನ ಕಥೆ
9. ಫಿನ್ನಿಶ್ ನಾಲಗೆ ಹೊರಳಿದರೆ ಕನ್ನಡ! 10.ಎಲ್ಲೆಲ್ಲಿಯೂ ಎದುರು ಸಿಗುವವರು
11.ಏಳೇಳು ಸುತ್ತಿನ ಕೋಟೆಯೊಳಗಿನ ರಾಜಕುಮಾರಿ