ಮನಸುಖರಾಯನ ಮನಸು - ಭಾಳ ಛಲೋ ಪುಸ್ತಕ , ಓದ್ರಿ , ಬಿಡಬ್ಯಾಡ್ರಿ

ಮನಸುಖರಾಯನ ಮನಸು - ಭಾಳ ಛಲೋ ಪುಸ್ತಕ , ಓದ್ರಿ , ಬಿಡಬ್ಯಾಡ್ರಿ

ಭಾಳ ದಿವಸದಿಂದ ಈ ಪುಸ್ತಕದ ಬಗ್ಗೆ ಬರೀಬೇಕು ಅಂದ್ಕೊಂಡಿದ್ದೆ. ಈಗ ವ್ಯಾಳ್ಯಾ ಕೂಡಿ ಬಂತು.
ಈ ಪುಸ್ತಕದ ಬಗ್ಗೆ ಹೀಂಗ ಬರದರs ಛಲೋದು. ಯಾಕಂದರ 'ಇಂಗ್ಲೀಷಿನ್ಯಾಗ BONEY M ಗ್ರುಪ್ಪಿಂದು ಒಂದು ಹಾಡದ. ಸಂದರ್ಭಾ ಹಿಂಗ ಅದ . ಕೈದಿಗಳನ್ನ ಒಂದು ದೇಶದಿಂದ ಇನ್ನೊಂದು ದೇಶಕ್ಕ ತಗೊಂಡು ಹೊಂಟಿರತಾರ. ಒಂದು ಕಡೆ ವಿಶ್ರಾಂತಿ ಅಂತ ನೆಳ್ಳಾಗ ಕೂತ್ಕೋತಾರ . ಕೈದಿಗಳಿಗೆ ಅವರನ್ನ ಹಿಡಕೊಂಡು ಹೊಂಟಾವರು ತಮ್ಮ ಮನರಂಜನಿಗಂತ 'ನಿಮ್ಮ ದೇವರ ಹಾಡು ಹಾಡ್ರಿ' ಅಂತ ಹೇಳ್ತಾರ . ಆವಾಗ ಈ ಕೈದಿಗಳಿಗೆ ಅನಿಸೋದು ಏನಂದ್ರ ' How shall we sing our Gods song on a strange land? ನಮ್ಮ ದೇವರ್ ಹಾಡು ಪರದೇಶದಾಗ ಹೆಂಗ್ ಹಾಡೋದು?' .

ಹಂಗ ಈ ಪುಸ್ತಕದ ಬಗ್ಗೆ ಪುಸ್ತಕದ ಭಾಷಾದಾಗ ಬರದರ ಛಲೋ ಆಗೂದಿಲ್ಲ. ಇಷ್ಟಕ್ಕೂ ಈ ಪುಸ್ತಕಾನೂ ನಾನು ಇಲ್ಲೆ ಈಗ ಬರದೀನಲಾ ಅದs ಆಡು ಭಾಷಾದಾಗs ಅದ. ಮತ್ತs ಛಲೋ ಪುಸ್ತಕಾ ಓದಿ ಸಂತೋಷ ಪಡಬೇಕಂತಿದ್ರ ನೀವೂ ಈ ಪುಸ್ತಕಾ ಓದSಬೇಕು. ಇಲ್ಲಾ ಅಂದ್ರ ನಿಮಗs ಲುಕಸಾನು ನೋಡ್ರಿ . ನಿಮಗ ಧಾರವಾಡ ಭಾಷಾ ಅನಾನುಕೂಲ ಆದರ ಯಾರರ ಧಾರವಾಡದವರ ಕಡೇಯಿಂದ ಓದಿಸಿಗೋಡ್ರಿ.

ಇರಲಿ . ಇದು ಶ್ರೀನಿವಾಸ ವೈದ್ಯ ಅವರ ಪುಸ್ತಕಾ . ಕಸ್ತೂರಿ /ಉದಯವಾಣಿ ಒಳಗ ಒಂದೆರಡು ಛಲೋ ಲೇಖನ ನೋಡಿ ಅಲ್ಲಿ ಕೊಟ್ಟಿದ್ದ ಈ ಪುಸ್ತಕದ ಹೆಸರು ಕೇಳ್ಕೊಂಡು ೨ -೩ ವರ್ಷಾ ಅಂಗಡಿ ಅಂಗಡಿ ಅಡ್ಡಾಡಿದೆ. ಈ ಪುಸ್ತಕ ಸಿಕ್ಕಿರಲಿಲ್ಲ. ಅವರೂ ಬ್ಯಾರೇ ಪುಸ್ತಕಾ ಸಿಕ್ಕೂ . ' ತಲೆಗೊಂದು ತರ ತರ ' ' ರುಚಿ ಹುಳಿಯೊಗರು' ಇವೂ ಛಲೋ ಅವ . ಭಾಳ ಸೇರಿದೂ. ಸಿಕ್ರ [ ಸಿಗತಾವ] ಅವನ್ನೂ ಓದ್ರಿ . ಆದರ ಈ ಪುಸ್ತಕ ಮಾತ್ರ ಸಿಗ್ತಿರ್ಲಿಲ್ಲ . ಕಡೀಕ ಅದರ ಪ್ರಕಾಶಕರು, ಧಾರವಾಡದಾಗ ಮನೋಹರ ಗ್ರಂಥ ಮಾಲಾ ' ಅವರನ್ನೂ ಕೇಳಿದೆ . ಪ್ರತಿ ಮುಗದಾವ ಅಂದ್ರು. ಇನ್ನೇನು ಮಾಡೋದು . ಛಲ ಬಿಡದ ತ್ರಿವಿಕ್ರಮನಂಗ ಹುಡುಕೋತ ಇದ್ದೆ. ಕಡೀಕ ಬೆಂಗಳೂರಾಗ ಸಪ್ನಾದಾಗ ಸಿಕ್ತು . ಎರಡs ಕಾಪಿ ಇದ್ದು . ಒಂದು ತಗೊಂಡು ಬಿಟ್ಟು ತಕ್ಷಣ ಓದ್ದೆ. ಖರೇನ ಮಾಸ್ಟರ್ ಪೀಸ್ ಅಂತಾರಲ್ಲ ಹಂಗ ಅದ.
ಬಳ್ಳಾರಿ ರಾಯಚೂರ ಕಡೆವ್ರು. ಧಾರವಾಡದಾಗ ಕಲ್ತು ಮುಂಬೈವಳಗ ಭಾಳ ವರ್ಷ ಇದ್ದು ಈಗ ಬೆಂಗಳೂರು ಸೇರ್ಕೊಂಡಾರ. ಇವರ ಜೀವನಾನುಭವದ ಸಾರ ಇವರ ಲೇಖನ ಅಂತ ಹೇಳಬಹುದೇನೋ .

ಇದರೊಳಗ ಇರೋವು ಆರs ಕಥಿ/ಹರಟಿ . ಆದರ ಅವೆಲ್ಲ ಮನಸ್ಸಿಗೆ ತಟ್ಟೊ ಅಂಥಾವು , ರೋಮ್ಯಾಂಟಿಕ್ , ಜಿವನದ ಅನೇಕ ಸತ್ಯಗಳನ್ನು ತಿಳಿಸೋ ಅಂಥಾವು. ಅನುಭವದಿಂದ ಬಂದದ್ದು . ಬರಿಯೋ ಧರತೀ ( ಶೈಲಿ) ಭಾಳ ಛಂದ ಅದ. ಉದಾಹರಣೆಗೆ ನೀವ ನೋಡ್ರಿ
"ಒಂದು ದೃಷ್ಟಿಯಿಂದ ನೋಡಿದರ ನಾನು ಸುಖದಿಂದಲೇ ಇದ್ದೀನಿ. ಊಟಾ ಮಾಡತೇನಿ, ಆಫೀಸಿಗೆ ಹೋಗತೇನಿ, ಪೇಪರ ಓದತೇನಿ . ಟಿ.ವ್ಹಿ. ನೋಡತೇನಿ , ಯಲ್ಲಾ ಥೇಟ ನಾಕ ಮಂದೀ ಹಾಂಗs ಹೇಣ್ತೀ ಮಕ್ಕಳ ಸಂಗತೀ ಸಂತೋಷದಿಂದನs ಇದ್ದೇನಿ . ಖರೇ ಅದ . ಆದರೂ ಯಾವಾಗರ ಒಮ್ಮೊಮ್ಮೆ ತಲೀ ಕೆಡತsದ, ಯಾವಾಗ ಅಂದ್ರ ss " ಅಂತ ಸುರು ಆಗೋ 'ತ್ರಯಸ್ಥ' ಎಂಬ ಲೇಖನ ಮಧ್ಯವಯಸ್ಕನ ಬಾಲ್ಯ ಕಾಲದ ಪ್ರೇಮದ ನೆನಪನ್ನ ರೋಮ್ಯಾಂಟಿಕ್ ಆಗಿ ಹೇಳ್ತsದ.

'ಶೃದ್ಧಾ ' ಅಂತ ಇನ್ನೊಂದು ಲೇಖನ ಅಪ್ಪನ ಜೋಡಿ ಇರೋ ಲವ್-ಹೇಟ್ ಸಂಬಂಧವನ್ನು ನಿಮ್ಮನ್ನೂ ಭಾವುಕ ಮಾಡ್ತsದ. ಹಿಂಗ ಉಳದ ಲೇಖನ 'ಪುಸ್ತಕದ ಹುಳ' , 'ಬಾಶಿಂಗ ಬಲ' 'ಗಾಯಕವಾಡ ದಾದಾ', 'ಗಧೇ ಪಂಚವೀಶೀ' . ಎಲ್ಲಾನೂ ಛಲೋ ಅವ. ನೀವೂ ಓದ್ರಿ. ಅಂಧಂಗ . ಈ ಪುಸ್ತಕ ಮತ್ತ ಪ್ರಿಂಟಾಗೇದ - ಧಾರವಾಡದ ಮನೋಹರ ಗ್ರಂಥ ಮಾಲಾದವರಿಂದ . ಪ್ಯಾಟಿ ಒಳಗ ಸಿಗಲಿಕ್ಕೆ ಹತ್ತ್ಯಾವ . ತಡ ಮಾಡಬ್ಯಾಡ್ರಿ. ಇದು ಸಿಗದಿದ್ದ್ರೂ ಅವರ ಉಳಿದ ಎರಡು ಪುಸ್ತಕ (ಮ್ಯಾಲೆ ಹೆಸರು ನೋಡಿಕೋಳ್ರಿ) ಎಲ್ಲಾ ಕಡೆ ಸಿಕ್ಕs ಸಿಗತಾವ. (ಅವರ್ದು ಹಳ್ಳ ಬಂತು ಹಳ್ಳ ಅಂತ ಒಂದು ಕಾದಂಬ್ರೀನೂ ಬಂದದ.)

ಕಡೀಕಂತೂ ಒಂದು ಮಾತು ಖರೆ ಅದ 'ಕಲ್ಲು ಸಕ್ಕರೆ ಸವಿ ಬಲ್ಲವರೇ ಬಲ್ಲರು ' .

Rating
No votes yet

Comments