ಹಳೆಯ ಹಾಳೆಯ ಮೇಲೊಂದು ಕವನ!

ಹಳೆಯ ಹಾಳೆಯ ಮೇಲೊಂದು ಕವನ!

ಬರಹ

ನಾ ಬರೆಯ ಹೊರಟೆ
ಹಳೆಯ ಹಾಳೆಯ ಮೇಲೆ ಕವನ!

ಯಾರೆಲ್ಲ ಬರೆದಿದ್ದಾರೆ, ನೀನೂ ಬರೆಯುತ್ತಿ, ಬರೆಯುತ್ತಲೇ ಇರುವೆ
ಅದರಲ್ಲೇನು ಅಂತಹ ವಿಶೇಷ, ಅನ್ನುವಿರಿ ತಾನೆ!

ನಾ ಬರೆಯ ಹೊರಟಿದ್ದು ಹಳೆಯ, ಹರಿದ, ರದ್ದಿಯಾದ ಕಾಗದದ ಮೇಲೆ!
ಸರಿ ಮಾರಾಯ ನೀನೂ ಬರಿ...
ಎಲ್ಲ ಕವಿಗಳು ಹೀಗೇ ಬರೆದಿದ್ದು ತಾನೇ
ರಸಭರಿತ ಕಾವ್ಯ, ಕವನವ ಹೊರ ಹೊಮ್ಮಿಸಿದ್ದು
ಇಂತಹ ರದ್ದಿ ಕಾಗದದಲ್ಲೇ ಅಲ್ಲವೆ!?

ಹೌದೂ, ನಾನು ಬರೆಯ ಹೊರಟಿದ್ದು ಅದೇ ಹಳೆಯ ಕಾಗದದ ಮೇಲೇನೇ!
ಆ ಹಾಳೆ ಹಾಳಾಗಿ ಕಸದ ಬುಟ್ಟಿ ಸೇರಿದ ಗೋಳಿನ ಕಥೆಯ ಬಣ್ಣಿಪ ಕವನ!

ಎಲ್ಲಾ ಕವಿಗಳೂ, ಬರೆದಿದ್ದಾರೆ, ಕೊರೆದಿದ್ದಾರೆ,
ಹೊಡೆದು, ತಿದ್ದಿ, ತಿಣುಕಿ, ಮಸಿ ಬಳಿದು, ಅಳಿಸಿದ್ದಾರೆ!!
ಹರಿದು ಚಿಂದಿ ಚಿಂದಿ ಮಾಡಿ ಮುದುರಿ ಕಸದ ಬುಟ್ಟಿಗೆ ಎಸೆದಿದ್ದಾರೆ...
ಮರುಪ್ರತಿಯಾದ ನಂತರ...!!!

ಕವಿಗಳಿಗೆ ಕವಿ ಹೃದಯವಿದೆ, ಸಣ್ಣ ಪುಟ್ಟದ್ದಕ್ಕೆಲ್ಲಾ
ಸ್ಪಂದಿಸುತ್ತಾ, ಭಾವುಕರಾಗುತ್ತಾ ಭಾವನಾ ಪ್ರಪಂಚದಲ್ಲಿ ತೇಲುತ್ತಾ..
ತೇಲಿ ತೇಲಿ ಎಲ್ಲೋ ಹೋಗಿ ಕಳೆದೇ ಹೋಗುತ್ತಾರೆ ಅನ್ನುತ್ತಾರೆ...

ಆದರೆ ವಾಸ್ತವದಿ ಹೀಗೆ ಈ ಹಾಳೆಯ ತಿವಿದು, ಚುಚ್ಚಿ, ಮಾರಣಾಂತಿಕ ಹಿಂಸೆ ಕೊಟ್ಟು..
ಮರಣ ಶಯ್ಯೆಗೆ ದೂಡಿರುವ...
ಕವಿಗಳ ವರ್ತನೆಯ ಬಗ್ಗೆ ಕವನ ಬರೆಯ ಹೊರಟಿದ್ದೇನೆ!

ನೀನೂ ಕವಿಯಲ್ಲವೇ, ನೀನೂ ಅದೇ ರೀತಿ ಹಿಂಸೆ ಮಾಡುವವನು ಎನ್ನುವರಲ್ಲವೆ!?
ನಿಮ್ಮ ಊಹೆ ಸರಿ. ಆದರೆ ನಾನು ಬರೆಯುತ್ತಿರುವ ಕವನ ಹಳೆಯ ಕಾಗದದ ಮೇಲಲ್ಲ!

ಗಣಕ ಯಂತ್ರದ ಇ-ಹಾಳೆಯಲಿ ...!!!

-ಸಂಕೇತ್ ಗುರುದತ್ತ
ಹೈದರಾಬಾದ್