ಎಲ್ಲೆಲ್ಲಿಯೂ ಎದಿರು ಸಿಗುವವರು

ಎಲ್ಲೆಲ್ಲಿಯೂ ಎದಿರು ಸಿಗುವವರು

ಬರಹ

ಫಿನ್ಲೆಂಡಿಗೆ ನಾನು ಮೊದಲ ಸಲ ಒಂದೂವರೆ ತಿಂಗಳ ಕಾಲ ಹೋದದ್ದು ೨೦೦೧ರಲ್ಲಿ. ಸುರೇಖಳಿಗೆ ಅಲ್ಲಿ ಆರ್ಟಿಸ್ಟ್-ಇನ್-ರೆಸಿಡೆನ್ಸಿ ಸಿಕ್ಕಿತ್ತು (ಮನೆಯೊಳಗಿರುವ ಕಲಾವಿದೆ ಎಂದು ಕನ್ನಡ ಸಂಸ್ಕೃತಿ ಇಲಾಖೆ ಶೈಲಿಯಲ್ಲಿ ಕರೆಯಬಹುದು). ನಂತರ ಅದೇ ಸ್ಕಾಲರ್‌ಷಿಪ್ ಗೆಳೆಯ ಪ್ರಕಾಶ್ ಬಾಬುವಿಗೆ. ನಂತರ ನೂರು ಕೋಟಿ ಮಂದಿಯಿರುವ ಸಮಗ್ರ ಭಾರತದಲ್ಲಿ ಅದಕ್ಕೆ ಬಲಿ ಎಚ್. ಎ.ಅನಿಲ್ ಕುಮಾರ್, ಅಂದರೆ ನಾನು. ಮತ್ತು ಇನ್ನೂ ಅಶ್ಚರ್ಯವೆಂದರೆ ನಮ್ಮೆಲ್ಲರ ಆಯ್ಕೆಯಾದದ್ದು ಪ್ಯಾರಿಸಿನ ಯುನೆಸ್ಕೊ ಆಫೀಸಿನಲ್ಲಿ! ಆಯ್ಕೆ ಸಮಿತಿಯಲ್ಲಿ ಬಹುಮಂದಿಗೆ ಭಾರತವು ಭೂಪಟದಲ್ಲೆಲ್ಲಿದೆಯೆಂದೇ ತಿಳಿದಿರಲಾರದು. ಸುರೇಖಳೊಂದಿಗೆ ಇನ್ನೆರೆಡು ಸ್ಟುಡಿಯೊಗಳಲ್ಲಿ ಪೊಲ್ಯಾಂಡಿನ ಕಲಾ ಇತಿಯಾಸಕಾರ್ತಿ ಅಗ್ನೇಷ್ಕ ಹಾಗೂ ಬ್ರೆಜಿಲ್‌ನ ಕಲಾವಿದೆ ಕಾರ್ಲ ಗ್ವಾಲಿಯಾರ್ಜಿ. "ನಮ್ಮೂರು ಗ್ವಾಲಿಯರ್ ಜಿ" ಎಂದು ಭಾರತದಲ್ಲಿ ಹೇಳಿದರೆ ನಂಬುವಷ್ಟು ಆಕೆ ಪಂಜಾಬಿಯಾಗಿ ಕಾಣುತ್ತಿದ್ದಳು. ಆದ್ದರಿಂದ ಸುರೇಖಳ ಒಟ್ಟಿಗೆ ಒಬ್ಬ ಭಾರತೀಯನೊಬ್ಬ ಭಾರತೀಯ, ಪೊಲ್ಯಾಂಡ್, ಬ್ರೆಜಿಲ್ ದೇಶಗಳಿಗೆ ಸೇರಿದ ಮೂವರು ಕಲಾವಿದೆಯರೊಂದಿಗೆ ಫಿನ್ಲೆಂಡ್ ನೋಡಿದ್ದು ಒಂದು ಜೀರ್ಣವಾಗದ ವಿಷಯವಾಗಿತ್ತು. ದಿನದ ಕೊನೆಗೆ ನಾನು ಯಾವ ದೇಶದಲ್ಲಿದ್ದೇನೆಂಬುದೇ ಮರೆತುಹೋಗುತ್ತಿತ್ತು. ಬ್ರೆಜಿಲಿನ ಫುಟ್ಬಾಲ್, ಸಲ್ಮಾ ಹೈಕಳ ಫ್ರಿದ ಕಾರ್ಲೋ, ಪೊಲ್ಯಾಂಡಿನ ಪೊಲ್ಯಾಂಸ್ಕಿ, ವಿಸ್ಕಿ, ಅಗ್ನೇಷ್ಕ, ವೊಡ್ಕ ಇತ್ಯಾದಿಗಳ ಕಾಕ್‌ಟೈಲ್ ಆಗಿಬಿಟ್ಟಿರುತ್ತಿತ್ತು ನನ್ನ ಎರಡು ಕಿವಿಗಳ ಮಧ್ಯ-ಪ್ರದೇಶ.

ಸುರೇಖ ಕಳೆದ ಶತಮಾನದಲ್ಲಿ, ಒಂದು ದಶಕದ ಹಿಂದೆ ಸ್ವಿಟ್ಸರ್ಲೆಂಡಿನಲ್ಲಿದ್ದಾಗೊಮ್ಮೆ (೧೯೯೯) ಜರ್ಮನಿಗೆ ಒಂದೆರೆಡು ದಿನ ಹೋಗಿದ್ದರಂತೆ. ಅಲ್ಲಿ ಕಣ್ಣಿಗೆ ಬಿದ್ದ ಯಾವುದೋ ಕಲಾಕೇಂದ್ರವೊಂದಕ್ಕೆ ಒಂದರ್ಧ ಗಂಟೆ ಹೋಗಿದ್ದರಂತೆ. ಅಲ್ಲಿದ್ದ ಅನೇಕ ದೇಶಗಳ ಆರ್ಟಿಸ್ಟ್-ಇನ್-ರೆಸಿಡೆಂಟ್‌ಗಳಲ್ಲಿ ಸಿಕ್ಕದ್ದು ಒಬ್ಬ ಕಲಾವಿದೆ ಮಾತ್ರ. ಅರ್ಧ ಗಂಟೆ ಕಾಲ ಒಬ್ಬರಿಗೊಬ್ಬರು ಕೇಳದಷ್ಟು ಮಾತು. ನಂತರ ಬಾಯ್ ಬಾಯ್ ಚಾವ್ ಚಾವ್. ಮತ್ತೆ ಎರಡು ವರ್ಷದ ನಂತರ ಸುರೇಖ ಹೆಲ್ಸಿಂಕಿ ಸ್ಟುಡಿಯೋಕ್ಕೆ ಹೋದರೆ ಪಕ್ಕದಾಕೆ ಜರ್ಮನಿಯಲ್ಲಿ ಸಿಕ್ಕಿದ್ದವಳೇ. ಮೂರು ತಿಂಗಳ ನಂತರ ಬಾಯ್ ಬಾಯ್ ಚಾವ್ ಚಾವ್. ಮತ್ತೆ ಎರಡು ವರ್ಷ. ಮೈಸೂರಿನಲ್ಲಿ ಅಂತರರಾಷ್ಟ್ರೀಯ ಸಮಕಾಲೀನ ಕಲಾವಿದರ "ಖೋಜ್" ಕಲಾಕ್ಯಾಂಪ್. ಸುರೇಖಳಿಗೆ ಅಲ್ಲಿ ಭೇಟಿಯಾದದ್ದು ಅದೇ ಬ್ರೆಜಿಲಿನ ಕಾರ್ಲ ಗ್ವಾಲಿಯಾರ್ಜಿ ಎಂಬ ಬಾಯ್ ಬಾಯ್ ಚಾವ್ ಚಾವ್. ಮತ್ತೆ ಆಕೆ ನಮ್ಮ ಮನೆಯಲ್ಲಿ ಒಂದು ತಿಂಗಳ ವಾಸ.

ಸುರೇಖ ಮತ್ತು ಕಾರ್ಲ ಸೇರಿ ಒಂದು ಭೂಪಟದ ಮೇಲೆ ಬೇರೆ ಬೇರೆ ಬಣ್ಣಗಳ ದಾರದಿಂದ ತಾವಿಬ್ಬರೂ ಎಲ್ಲೆಲ್ಲಿ ಭೇಟಿಯಾಗಿದ್ದೆವೆಂದು ಗುರ್ತಿಸಿ, ಒಂದು ಪುಟ್ಟ ವಿಡಿಯೋ ಸಿನೆಮ ಮಾಡಿಬಿಟ್ಟರು. ಫ್ರೀದ ಕಾರ್ಲೊ ಹೋಗಿ ಫ್ರೀ ಡ ಕಾರ್ಲ ಆದಂತಾಯ್ತು. ಬ್ರೆಜಿಲಿಯನ್ ಫೋಟೋಗ್ರಾಫರ್ ಥಾಮಸ್‌ನನ್ನು ಮದುವೆಯಾಗಿ ಬರ್ಲಿನ್‌ನಲ್ಲಿ ವರ್ಷದ ಅರ್ಧ ಕಾಲ ಇರುತ್ತಾಳೆ. ಆದರೆ ಅಲ್ಲಿರುವುದೆಂದರೆ, "ಭಾರತೀಯಳೊಬ್ಬಳು ಅಲ್ಲಿ ನೆಲೆಸುವಂತೆ" ಎಂದಿದ್ದಳು. ಆಕೆ ಎಷ್ಟು ಚುರುಕು ಎಂಬುದಕ್ಕೊಂದು ಉದಾಹರಣೆ. ಬ್ರೆಜಿಲ್ ಕಾರ್ನಿವಲ್ ನೃತ್ಯಕ್ಕೆ ಹೆಸರುವಾಸಿ. ಕಾರ್ನಿವಲ್ ನೋಡದವರಿಗೆ ನಮ್ಮ ಕನ್ನಡ, ತಮಿಳು, ಹಿಂದಿ, ತೆಲುಗು ಸಿನೆಮ ನೃತ್ಯವನ್ನು ನೋಡಿದ್ದರೆ ಸಾಕು. ಭಾರತದ ಅಷ್ಟೂ ಭಾಷೆಯ ಅಷ್ಟೂ ನೃತ್ಯಗಾರರನ್ನು ಒಂದು ಮೈದಾನದಲ್ಲಿ ಸೇರಿಸಿ, ಆ ಜನಸಂಖ್ಯೆಯನ್ನು ಒಂದು ನೂರು ಸಲ ಕಾಪಿ-ಪೇಸ್ಟ್ ಮಾಡಿದರೆ ಅದು ಬ್ರೆಜಿಲ್ ಕಾರ್ನಿವಲ್ ನೃತ್ಯಗಾರರಿಗೆ ಸಾಲದೆ ಬರುತ್ತದೆ. ಕಾರ್ಲ ಅದನ್ನು ವಿಡಿಯೋ ಡಾಕ್ಯುಮೆಂಟ್ ಮಾಡಿದ್ದಳು. ಅದನ್ನು ನೋಡುವಲ್ಲಿ ಲೀನವಾಗಿದ್ದಾಗ ಒಮ್ಮೆಲೆ ಭೂಕಂಪವಾದರೆ ಕ್ಯಾಮೆರಮನ್ ಓಡತೊಡಗಿದರೆ ರೆಕಾರ್ಡಿಂಗ್ ಹೇಗಾಗುತ್ತದೋ ಹಾಗೆ ಚಿತ್ರೀಕರಣ. "ಗಲಾಟೆ ಗಲಭೆ ಏನಾದರೂ ಆಗಿತ್ತ?" ಎಂದು ಕೇಳಿದೆ. ಇಲ್ಲವಲ್ಲ ಎಂದಳು ಕಾರ್ಲ. "ಮತ್ತೆ ಆ ಯದ್ವಾ ತದ್ವಾ ಚಿತ್ರೀಕರಣಕ್ಕೆ ಕಾರಣ?" "ಓ ಅದಾ. ಡ್ರಮ್ ಬೀಟ್ಸ್‌ನ ಮಾಂತ್ರಿಕತೆ ತಡೆಯಲಾರದೆ ನಾನೂ ಕುಣಿಯತೊಡಗಿದೆ. ಕ್ಯಾಮರ ಆನ್‌ನಲ್ಲೇ ಇತ್ತು" ಎಂದಳು.

ವಿಚಿತ್ರವೆಂದರೆ ಲಂಡನ್ನಿನಂತಹ ಬೃಹತ್ ಮಹಾನಗರದಲ್ಲಿ ಆದ್ಯಂತವಾಗಿ ಓಡಾಡುವಾಗಲೂ ಒಂದೇ ಕಡೆ ಇದ್ದಂತೆನಿಸುತ್ತಿತ್ತು. ಹೆಲ್ಸಿಂಕಿಯಂತಹ ಯಲಹಂಕದಿಂದ ಗಂಗೇನಹಳ್ಳಿಯವರೆಗಿನ ಜಾಗದಲ್ಲಿ ಮಾತ್ರ ಯಾವಾಗಲೂ ದಿಕ್ಕುದೆಸೆಯಿಲ್ಲದೆ ಓಡಾಡುತ್ತಲೇ ಇದ್ದೆನೆಂದು ಈಗ ಅನ್ನಿಸುತ್ತಿದೆ. ಸಾಮಿಯೊಂದಿಗೆ ನಾನು ಹೋದದ್ದು ಆತನ ಊರಿಗೆ. ಆತನ ಊರಿನಲ್ಲಿ ಭೇಟಿ ಮಾಡಿದ್ದು ಅಕ್ಷರಶ: ಮೂರು ಮತ್ತೊಂದು ಮಂದಿಯನ್ನ. ಅಲ್ಲಿ ಹೋದ ಮರುದಿನ ಬೆಳಗಿನ ಜಾವ ಬಂಡೆ ಒಡೆಯುವ ಸದ್ದು ಕೇಳಿ ಕಡಿಮೆಯೆಂದರೂ ಹತ್ತು ಜನರಿದ್ದಾರೆಂದು ಭಾವಿಸಿ ಓಡಿದೆ ಸದ್ದು ಬಂದ ದಿಕ್ಕಿಗೆ. ದೊಡ್ಡ ಬಂಡೆ ದೂರದಿಂದಲೇ ಕಾಣುತ್ತಿತ್ತೆಂದು ಹೇಳಬೇಕಿಲ್ಲವಷ್ಟೇ. ಬಂಡೆ ದೊಡ್ಡದಾಗಿರುವುದೇ ದೂರದಿಂದ ಕಾಣಲಿಕ್ಕಲ್ಲವೆ? ಅಷ್ಟರಲ್ಲಿ ಬಾಂಬೆ ಲಾರಿಯಂತಹುದೊಂದು ಇಕ್ಕಟ್ಟು ರಸ್ತೆಯಲ್ಲಿ ಬರುವ ಸದ್ದು ಕೇಳಿತು. ಅಕ್ಕಪಕ್ಕ ದಟ್ಟ ಕಾಡು. ರಸ್ತೆಯಲ್ಲಿ ಇಲ್ಲದ ಬದುವಿನ ಕಡೆ ಸರಿದೆ. ವೇಗವಾಗಿ ಬಂದ ಲಾರಿ ಗಕ್ಕನೆ ಬ್ರೇಕ್ ಹಾಕಿತು. ಆತ ನನ್ನನ್ನು ನೋಡಿದ. ನಾನೂ ಆತನನ್ನು ನೋಡಿದೆ. ಕಾಡಿನೊಳಕ್ಕೆ ಓಡುವಂತಿಲ್ಲ, ಓಡಬೇಕೆನಿಸಿದರೂ. ಲಾರಿಯಿಂದ ಆತ ಧುಮುಕಿದ. ನಾನೂ ಧುಮುಕಿದೆ, ನಿಂತಲ್ಲೇ, ಗಾಭರಿಯಿಂದ. ಆತ ಕಪ್ಪು ಆಫ್ರಿಕನ್ ಅಜಾನುಬಾಹು. ಮೂರಡಿ ಅಗಲ, ಮತ್ತೂ ಮೂರಡಿ ಜರ್ಕಿನ್, ಆರಡಿ ಎತ್ತರ.

"ಮಿತಾಸ್ ಕೋಲೊ" ಎಂದ.

"ಫೈನ್" ಎಂದೆ.

"ಎಲ್ಲಿನವನು ನೀನು?"

"ಇಂಡಿಯ" ಎಂದೆ.

"ವಾವ್, ಇಂಡಿಯ. ಎಂತಹ ಮಹಾನ್ ನಗರ" ಎಂದ. ಹೌದು, ನಾನಲ್ಲಿ ಹುಟ್ಟಿದ ಮೇಲೆ ಅದು ಮಹಾನ್ ನಗರವೇ ಇರಬೇಕು ಎಂದುಕೊಂಡೆ.

"ಎಲ್ಲಿದೆ ಅದು?" ಎಂದ. ನಗು ಬಂದೇ ಬಂತು. 'ಮಹಾನ್ ದೇಶಗಳು ಇನ್ನೆಲ್ಲಿ' ಎಂಬ ಆತನ ತಾತ್ವಿಕ ಚಿಂತನೆ ನನಗೆ ಬಹಳ ಹಿಡಿಸಿತು. ಆತನ ಎರಡು ಪ್ರಶ್ನೆಗಳ ನಡುವಣ ಸಮೀಕರಣ ಆತನಿಗೇ ಇರಲಾರದು. "ಆ ಕಡೆ ಏಷ್ಯದಲ್ಲಿ" ಎಂದೆ, ಇಲ್ಲೇ ಮೂರ್ನಾಲ್ಕು ಕಿಲೋಮೀಟರ್ ದೂರದಲ್ಲಿ ಎಂಬಂತೆ. ನನಗೆ ತಿಳಿಯದೆ ದಕ್ಷಿಣದ ಕಡೆ ಬೊಟ್ಟು ಮಾಡಿದ್ದೆ. "ನೈಸ್ ಟು ಮೀಟ್ ಯು" ಎಂದು ಕೈ ಕುಲುಕಿದ. ಪಾಪ ಗಂಟೆಗೆ ನೂರಿಪ್ಪತ್ತು ಮೈಲಿನಂತೆ ಹತ್ತಾರು ಕಿಲೋಮೀಟರ್ ಗಾಡಿ ಓಡಿಸಿರಬೇಕು. ಯಾವೊಬ್ಬ ನರಪಿಳ್ಳೆಯೂ ಸಿಕ್ಕಿರಲಾರದು ಆತನಿಗೆ. ಅಚಾನಕ್ ಇಬ್ಬರು ಪರದೇಶೀಯರ ಮಾತು ಬಾರದವರ ನಾಡಿನಲ್ಲಿ ಒಟ್ಟಿಗೆ ಸಿಕ್ಕಾಗ ಇನ್ನೆಷ್ಟು ಮಾತನಾಡಿರಬೇಡ-ನಾವುಗಳು.

ಎಲ್ಲಿಯೋ ಹೋಗಲು ಹೋಗಿ ಫಿನ್ಲೆಂಡಿಗೆ ಬಂದು ಸೇರಿದ್ದನಂತೆ ಆತ. "ಇನ್ನು ಸ್ವಲ್ಪ ಮೇಲೆ ಹೋಗಿದ್ದಿದ್ದಲ್ಲಿ ಉತ್ತರ ಧ್ರುವ ತಲುಪಿಬಿಡುತ್ತಿದ್ದೆ" ಎಂದು ನಗಾಡಿದನಾತ. ಮೊರೊಕ್ಕೊದ ನರಹತ್ಯೆ ನೋಡಲಾಗದೆ, ಅದಕ್ಕೆ ಬಲಿಯಾಗದೆ ಇಲ್ಲಿ ಬಂದಿದ್ದ ಈ ಹೈಸ್ಕೂಲ್ ಭೂಗೋಳ ಟೀಚರ್. "ಉತ್ತರ ಧ್ರುವದಲ್ಲಿ ನಿಂತರೆ ದಕ್ಷಿಣ ದಿಕ್ಕು ಯಾವುದು?" ಎಂದೆ. "ಅಲ್ಲಿ ಉತ್ತರವೇ ದಕ್ಷಿಣ" ಎಂದ. "ಹಾಗಾದರೆ ಪೂರ್ವ ಹಾಗೂ ಪಶ್ಚಿಮ ಯಾವ ದಿಕ್ಕಿಗಿರುತ್ತದೆ?" ಎಂದೆ. "ನಿನ್ನ ಪ್ರಶ್ನೆಯಲ್ಲಿ 'ಹಾಗೂ' ಪದ ತೆಗೆದರಾಯಿತು. ಉತ್ತರ ಧ್ರುವದಲ್ಲಿ ಈ ಪ್ರಶ್ನೆಯ ವ್ಯಾಕರಣವೇ ತಪ್ಪಾಗುತ್ತದೆ. ಅಕ್ಕಪಕ್ಕದ ಯಾವ ದಿಕ್ಕಿನೆಡೆ ನೋಡಿದರೂ ಪ್ರತಿಯೊಂದು ದಿಕ್ಕೂ ಒಮ್ಮೆಲೆ ಪೂರ್ವ 'ಹಾಗೂ' ಪಶ್ಚಿಮವಾಗಿರುತ್ತದೆ" ಎಂದ. ತಲೆ ಕೆರೆದುಕೊಂಡೆ, ಉತ್ತರ ದಿಕ್ಕಿಗೆ ಮುಖ ಮಾಡಿ. ಬಂದಷ್ಟೇ ವೇಗವಾಗಿ ಆತ "ಚಾವ್" ಹೇಳಿ ಮಾಯವಾದ. ಮತ್ತೆ ಸೂರ್ಯನ ಬೆಳಕು "ಸ್ಲೀಪಿ ಹ್ಯಾಲೋ" ಸಿನೆಮದ್ದೇ. ಅತ್ತ ಮುಂಜಾನೆಯ ಬೆಳಕೂ ಅಲ್ಲ, ಇತ್ತ ಮುಸ್ಸಂಜೆಯ ಬೆಳಕೂ ಅಲ್ಲ, ನನ್ನ ಮಂಪರು ಕಣ್ಣಿಗೆ ಅದು ಹಿರಣ್ಯಕಶ್ಯಪುವನ್ನು ಕೊಲ್ಲಲು ನರಸಿಂಹ ಆಯ್ಕೆ ಮಾಡಿಕೊಂಡ ಗಳಿಗೆ ಹೀಗೆಯೇ ಇತ್ತು ಎಂಬುದರಲ್ಲಿ ಯಾವ ಅನುಮಾನವೂ ಉಳಿದಿರಲಿಲ್ಲ. ಬಂಡೆ ಒಡೆಯುತ್ತಿದ್ದಲ್ಲಿ ಹೋದರೆ ಹತ್ತಾರು ಜನರ ಕಲರವ ಮಾಡುತ್ತಿದ್ದ ಮೆಷಿನ್‌ನೊಂದಿಗೆ ಒಬ್ಬನೇ ಒಬ್ಬ ಮೇಲ್ವಿಚಾರಕ!

ಈ ಪ್ರವಾಸ ಕಥನದ ಇತರ ಭಾಗಗಳು

1. ಸಾವಿನ ಚೇತೋಹಾರಿ ಆರಂಭ 2. ಮೊಬೈಲ್ ಮೌನಿಗಳು
3. ಏಕಾಂಗಿತನದ ವಿರಾಟ್ ರೂಪ 4. ಸಾಮಿ ಎಂಬ ಕಂಪೆನಿಕೊಡುವ ವಾನ್ ಇಂಜನ್
5. 'ಸಾನ' ಮಾಡಿದರೆ ಫಿನ್ನಿಶ್ 6. ಒಬ್ಬಂಟಿಯೊಳಗೊಬ್ಬಂಟಿತನದ ಗ್ಯಾರಂಟಿ
7. ಫಿನ್ಲೆಂಡಿನಲ್ಲಿ 'ಭಾರ'ತದ ಅಡುಗೆ 8. ಇಲ್ಲದೆಯೂ ಇರುವವನ ಕಥೆ
9. ಫಿನ್ನಿಶ್ ನಾಲಗೆ ಹೊರಳಿದರೆ ಕನ್ನಡ! 10.ಎಲ್ಲೆಲ್ಲಿಯೂ ಎದುರು ಸಿಗುವವರು
11.ಏಳೇಳು ಸುತ್ತಿನ ಕೋಟೆಯೊಳಗಿನ ರಾಜಕುಮಾರಿ