ಬಾರೊ ಸಂತೆಗೆ ಹೋಗೋಣ ಬಾ....
ಮನೆಗೆ ಬೇಕಾದ ಸಾಮಾನುಗಳನ್ನು ತರುವ ಕೆಲಸ 4-5 ದಿನಗಳಿಂದ ಬಾಕಿ ಇತ್ತು. ವಾರಾಂತ್ಯಕ್ಕಿಂತ ಒಳ್ಳೆಯ ದಿನ ಇನ್ನ್ಯಾವುದಿದೆ ಅಂತ ನಾನು, ನನ್ನಾಕಿ ಹತ್ತಿರದ ವಾಣಿಜ್ಯ ಸಂಕೀರ್ಣವೊಂದಕ್ಕೆ ಹೋದೆವು. ತಳ್ಳುವ ಗಾಡಿಯೊಂದನ್ನು ಎಳೆದುಕೊಂಡು ನಮಗೆ ಬೇಕಾದ (ಅದಕ್ಕಿಂತ ಹೆಚ್ಚಾಗಿ ಬೇಡವಾದ!) ಎಲ್ಲಾ ಸಾಮಾನುಗಳನ್ನೂ ತುಂಬಿಕೊಳ್ಳುತ್ತಾ ಸಾಗಿದೆವು. ಯಾವುದರ ಬೆಲೆ ಎಷ್ಟು ಎಂದು ಯಾರನ್ನೂ ಕೇಳುವ ಪ್ರಮೇಯವೇ ಬಾರದಂತೆ ಪ್ರತಿ ವಸ್ತುವಿನ ಮೇಲೂ ಅದರ ಬೆಲೆ ಎದ್ದು ಕಾಣುವಂತೆ ನಮೂದಿಸಿದ stickers ಇದ್ದವು. ಖರೀದಿ ಮುಗಿದ ತಕ್ಷಣ ಹಣ ಪಾವತಿಸುವ ಸರದಿಯಲ್ಲಿ ನಿಂತು ಕಾದೆವು. ನಮ್ಮ ಸರದಿ ಬಂದಾಗ, 'ಕೌಂಟರ್'ನಲ್ಲಿ ಇದ್ದ ಮಹಿಳೆ ತನ್ನ ಅಭ್ಯಾಸಬಲದಿಂದ ಎಂಬಂತೆ ಮುಗುಳ್ನಕ್ಕು, "ಹಲೋ, ಹೌ ಆರ್ ಯು?" ಎಂದು ಕೇಳಿ, ನಮ್ಮ ಉತ್ತರಕ್ಕೂ ಕಾಯದೇ, ಎಲ್ಲವನ್ನೂ ಬಿಲ್ ಮಾಡಿದಳು. ಹಣ ತೆತ್ತು ಹೊರಬರುತ್ತಿದ್ದಂತೆ ಯಾಕೋ ಇದ್ದಕ್ಕಿದ್ದಂತೆ ಒಂದು ಯೋಚನೆ ಬಂತು: "ನಮ್ಮ ಈ ವ್ಯವಹಾರಕ್ಕೆ ಸುಮಾರು 40 ನಿಮಿಷ ತಗುಲಿದೆ. ಇಡಿಯ 40 ನಿಮಿಷದಲ್ಲಿ ನಾವು ಯಾರ ಜೊತೆಯಾದರೂ ಸಂಭಾಷಣೆ ನಡೆಸಿದೆವಾ?..". ಏನೋ ಒಂದು ರೀತಿಯ ನಿರ್ವಾತದ ಅನುಭವ.
ಮನೆಗೆ ಬಂದ ನಂತರವೂ ಸುಮಾರು ಹೊತ್ತು ಇದೇ ಯೋಚನೆ. ನನ್ನಾಕಿ ಹಲವಾರು ಬಾರಿ ಕೇಳಿದರೂ ವಿವರಿಸಲಾಗದ ಅನ್ಯಮನಸ್ಕತೆ. ಏನು, ಯಾಕೆ ಅಂತ ಬಿಡಿಸಿ ಹೇಳಲು ತಿಳಿಯುತ್ತಿರಲಿಲ್ಲ. ಒಟ್ಟಿನಲ್ಲಿ ಕಸಿವಿಸಿ, ತಳಮಳ. ಸಾಯಂಕಾಲದ ಹೊತ್ತಿಗೆ ತುಸು ತಿಳಿಯಾದ ಮನಸ್ಸು, ನಿಧಾನವಾಗಿ ನೆನಪಿನ ದೋಣಿಯಲ್ಲಿ ಹಿಂದೆ ಹಿಂದೆ ಪಯಣಿಸತೊಡಗಿತು.
ಸುಮಾರು 1987-89 ರ ಅವಧಿ. ನಾನಾಗ 6-8ನೇ ತರಗತಿಗಳಲ್ಲಿದ್ದೆ. ನಮ್ಮೂರಿನಲ್ಲಿ ಪ್ರತಿ ಶನಿವಾರ ಸಂತೆ ಸೇರುತ್ತಿತ್ತು. ನಮ್ಮ ಮನೆಗೆ ಇಡೀ ವಾರಕ್ಕೆ ಬೇಕಾದ ತರಕಾರಿಗಳಿಗೆಲ್ಲ ಈ ಸಂತೆಯೇ ಮೂಲ ಆಧಾರ. ಶನಿವಾರ ಅರ್ಧ ದಿನದ ಶಾಲೆ ಮುಗಿಸಿ ಮನೆಗೆ ಬಂದು, ಬ್ಯಾಗನ್ನು ಒಂದೆಡೆ ಎಸೆದು, ಏನಾದರೂ ಸ್ವಲ್ಪ ಊಟದ ಶಾಸ್ತ್ರ ಮಾಡಿ, ಕಾತುರದಿಂದ ನಮ್ಮಪ್ಪ ಶಾಲೆಯಿಂದ ಬರುವುದನ್ನೇ ಕಾಯುತ್ತಿದ್ದೆ. ಅಪ್ಪ ಅದೇ ಊರಿನ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು. ಅವರು ಶಾಲೆಯಿಂದ ಬಂದ ತಕ್ಷಣ ನಮ್ಮಿಬ್ಬರ ಮುಂದಿನ ಕೆಲಸ "ಸಂತೆಗೆ ಹೋಗುವುದು"! ತಲಾ ಎರೆಡೆರೆಡು ಕೈಚೀಲ ಹಿಡಿದು ಸಂತೆಗೆ ಹೊರಟೆವೆಂದರೆ ನನಗೋ ಎಲ್ಲಿಲ್ಲದ ಸಂತೋಷ. ಅಪ್ಪ ಪ್ರತಿಯೊಂದನ್ನೂ ಅಳೆದೂ-ಸುರಿದೂ ವ್ಯಾಪಾರ ಮಾಡುತ್ತಿದ್ದ ರೀತಿ ಬಹಳ "ಬೋರ್" ಅನ್ನಿಸಿದರೂ, ನಾನು ಸಂತೆಗೆ ಹೋಗುತ್ತಿದ್ದದ್ದೇ ಬೇರೆ ಕಾರಣಗಳಿಗೆ! ನಮ್ಮೂರ ಸಂತೆ ನನ್ನ ಪಾಲಿಗೆ ಒಂದು ಮಾಯಾಲೋಕ. ಹತ್ತು ಹಲವು ಆಕರ್ಷಣೆಗಳ ತಾಣ. ಸಂತೆ ಮೈದಾನದ ಹಾದಿಯಲ್ಲಿ "ಇದೋ, ಸಂತೆ ಶುರು" ಅಂತ ಸೂಚನೆ ಕೊಡುವಂತೆ ಎರಡೂ ಬದಿಗೆ ವಿಧ ವಿಧದ ಚಿತ್ರಪಟಗಳನ್ನು, ಆಟದ ಸಾಮಾನುಗಳನ್ನು ಹರಡಿ ಕುಳಿತ ವ್ಯಾಪಾರಿಗಳು. ಸರಿ ಅಲ್ಲಿಂದ ಮುಂದೆ ಹೋದರೆ ನಿಂಬೂ ಸೋಡ ಮಾರುವ, ಸೀಬೇಕಾಯಿ, ಅನಾನಸ್, ಸೌತೇಕಾಯಿ ಇತ್ಯಾದಿಗಳನ್ನು ಚೆಂದವಾಗಿ ಹೆಚ್ಚಿ, ಉಪ್ಪು-ಖಾರ ಹಾಕಿ ಮಾರುವ ಕೈಗಾಡಿಗಳು. ಪ್ರತಿ ಗಾಡಿಯ ಮುಂದೂ ಕನಿಷ್ಠ 6-7 ಜನ ಇದ್ದೇ ಇರುತ್ತಿದ್ದರು. ಆದರೆ ಅಪ್ಪ ಈ ವಿಚಾರದಲ್ಲಿ ತುಂಬಾ ಕಟ್ಟುನಿಟ್ಟು. "ಅವೆಲ್ಲಾ ಒಳ್ಳೇದಲ್ಲ ಮರೀ.." ಅಂತ ನನ್ನ ಮನದಾಳದ ಆಸೆಯನ್ನು, ಕೇಳುವ ಮೊದಲೇ ಸಾರಾಸಗಟಾಗಿ ತಳ್ಳಿಹಾಕಿ ಮುಂದೆ ಹೋಗುತ್ತಿದ್ದರು. ನನ್ನ ಕೆಲವು ಸ್ನೇಹಿತರು ಅವುಗಳನ್ನು ತಿನ್ನುತ್ತಾ "ಎಂಜಾಯ್" ಮಾಡೋದು ಕಂಡರೂ ಕಾಣದಂತೆ ನಾನು "ನನ್ನ ಭಾಗ್ಯ ಇಷ್ಟೇ" ಎಂದು ಮುಂದಕ್ಕೆ ಹೆಜ್ಜೆ ಹಾಕುತ್ತಿದ್ದೆ.
ನಮ್ಮೂರ ಸಂತೆಗೆ ವ್ಯಾಪಾರ ಮಾಡಲು ಸುಮಾರು ಸುತ್ತಮುತ್ತಲಿನ ೮-೧೦ ಹಳ್ಳಿಯ/ಊರುಗಳ ರೈತಾಪಿ ಜನರೂ, ವ್ಯಾಪಾರಿಗಳೂ ಬರುತ್ತಿದ್ದರು. ಸಂತೆಯ ತುಂಬಾ ಗಿಜಿ-ಗಿಜಿ ಜನ! ಮಧ್ಯಾಹ್ನದ ಬಿಸಿಲನ್ನೂ ಲೆಕ್ಕಿಸದೆ ಜನ ಬರುತ್ತಿದ್ದರು. ಅಪ್ಪ ವ್ಯಾಪಾರದಲ್ಲಿ ಮಗ್ನವಾಗಿದ್ದಾಗ ನನ್ನ ಕೆಲಸ ಸುತ್ತಮುತ್ತಲಿನ "ಪರಿಸರ ಅಧ್ಯಯನ". ಅವರಿವರ ಮಾತುಗಳನ್ನು ಕೇಳೋದು. ಅಬ್ಬಾ! ಎಂತಹ ವೈವಿಧ್ಯ ಇರುತಿತ್ತು. ಗಾಳೇಹಳ್ಳಿ ಲಿಂಗಣ್ಣ ತನ್ನ ಸೋದರಮಾವನ ಮಗ ತಿಮ್ಮಾಪುರದ ಬೀರಣ್ಣನನ್ನು ನಿಯಮಿತವಾಗಿ ಸಂಧಿಸಿ ತನ್ನ ಅತ್ತೆ-ಮಾವನ ಯೋಗಕ್ಷೇಮ ವಿಚಾರಿಸಲು ಈ ಸಂತೆಯೇ ವೇದಿಕೆ. ಹಾಗೆಯೇ ಯಾರೋ ಇಬ್ಬರು ಬೇರೆ ಬೇರೆ ಊರಿನ ಕಾಲೇಜು ಹುಡುಗರು ತಮ್ಮ ಊರಿನ ಹುಡುಗಿಯರ ಬಗ್ಗೆ ಸ್ವಲ್ಪ ಸಂಕೋಚ ಬಿಟ್ಟು "ವಿಚಾರ ವಿನಿಮಯ" ಮಾಡಿಕೊಳ್ಳುತ್ತಿದ್ದದ್ದೂ ಇದೇ ಸಂತೆಯಲ್ಲಿಯೇ!
ಬಹಳ ಕುತೂಹಲದ ಸಂಗತಿಯೆಂದರೆ, ಬಹುತೇಕ ಪ್ರತೀ ಅಂಗಡಿಯವನಿಗೂ ತನ್ನ ರೆಗ್ಯುಲರ್ ಗಿರಾಕಿಗಳ ಸಂಪೂರ್ಣ ಪರಿಚಯ ಇರುತ್ತಿತ್ತು. ಇದು ಕೇವಲ ವ್ಯಾವಹಾರಿಕ ಸಂಬಂಧ ಅಲ್ಲ, ಭಾವನಾತ್ಮಕ ಕೂಡಾ ಆಗಿರುತಿತ್ತು. ಒಂದೇ ಒಂದು ಉದಾಹರಣೆ ಸಹಿತ ಹೇಳೋದಾದ್ರೆ, ತರಕಾರಿ ಅಂಗಡಿಯ ಶಿವಣ್ಣ ಅದು ಹೇಗೆ ನೂರಾರು ಗಿರಾಕಿಗಳ ಹೆಸರುಗಳನ್ನೂ, ಅವರ ಸಂಬಂಧಗಳನ್ನೂ ನೆನಪಿಟ್ಟುಕೊಳ್ಳುತ್ತಿದ್ದ ಅನ್ನುವುದು ನನ್ನ ಪಾಲಿಗೆ ಆಗಲೂ-ಈಗಲೂ ಬಿಡಿಸಲಾಗದ ಒಗಟು. ಶಿವಣ್ಣನ (ಮೊದಲೇ ಹೇಳಿದಂತೆ ಶಿವಣ್ಣ ಜಸ್ಟ್ ಒಂದು ಉದಾಹರಣೆ ಮಾತ್ರ) ಮಾತೂ ಅಷ್ಟೆ, ಲಹರಿ ಹರಿದಂತೆ. ಯಾರೇ ಗಿರಾಕಿ ಬರಲಿ ಮೊದಲು 1-2 ನಿಮಿಷ ಉಭಯ ಕುಶಲೋಪರಿ. ಅವನ ಮಾತೋ, ಏಕಕಾಲದಲ್ಲಿ 3-4 ಜನರ ಜತೆ, ಅಷ್ಟಾವಧಾನ ಕಲೆಯಲ್ಲಿ ಪರಿಣತಿ ಹೊಂದಿದವನಂತೆ. "ಓ, ಬನ್ನಿ ಗೌಡ್ರು, ನಮಸ್ಕಾರ! ನಿಮ್ಮ ಕೊನೇ ಸೊಸೆ ಎಂಗವ್ಳೆ? ಹೆರಿಗೆ ನೋವು ಶುರು ಅಯ್ತಾ?" ಅನ್ನೋದರಿಂದ ಆರಂಭಿಸಿ, ಗೌಡ್ರು ಉತ್ತರಿಸುವಷ್ಟರಲ್ಲೇ, "ಬನ್ನಿ ಸೋಮಿ, ಅದ್ಯಾಕೆ ಅಂಗೇ ನಿಂತ್ಬುಟ್ರಿ? ಎಂಥಾ ಚೆಂದುಳ್ಳಿ ಬೀನ್ಸ್ ನೋಡಿ, ಮುಟ್ಟಿದ್ರೆ ಮುರಿದೋಯ್ತದೆ" ಅಂತ ಗಿರಾಕಿಗಳನ್ನು ಕೂಗಿ ಕರೆಯುತ್ತಾ, ಅಲ್ಲೇ ಹೋಗುತ್ತಿದ್ದ ನಮ್ಮಪ್ಪನ ಕಡೆ ತಿರುಗಿ "ಓ, ಮೇಷ್ಟ್ರು, ಬನ್ನಿ ಸಾ, ಎಂಗಿದೀರಾ? ನಮ್ಮ ಉಡುಗ ಎಂಗವ್ನೆ? ಸ್ವಲ್ಪ ನಿಗಾ ಮಡಗಿ ಸ್ವಾಮೀ.." ಅಂತ ಸ್ವಾಗತ ಕೋರಿ, ನಮ್ಮಪ್ಪ ಉತ್ತರಿಸುವಷ್ಟರಲ್ಲಿ ಇನ್ನ್ಯಾರನ್ನೋ ವಿಚಾರಿಸಿರುತ್ತಿದ್ದ! ಇಂತಹ ಮಾತಿನ ಓಘದ ನಡುನಡುವೆಯೇ ವ್ಯಾಪಾರ ಕೂಡಾ. ಆದರೆ ಯಾರೊಬ್ಬರೂ ಶಿವಣ್ಣನನ್ನು "ಏನಪ್ಪ ಇಷ್ಟು ತಡ ಮಾಡ್ತೀಯಾ, ನನಗೆ 2 ನಿಮಿಷ ತಡ ಆಯಿತು" ಅಂತ ಗದರುತ್ತಿರಲಿಲ್ಲ. ಮಾತುಗಳನ್ನು ಆಸ್ವಾದಿಸುತ್ತಾ, ನಗುತ್ತಾ, ಸಂಬಂಧವೇ ಇಲ್ಲದ ಮೂರನೆಯವರ ಸಮಸ್ಯೆಗಳಿಗೆ, ನೋವು-ನಲಿವುಗಳಿಗೆ ಸ್ಪಂದಿಸುತ್ತಾ ತಂತಮ್ಮ ವ್ಯಾಪಾರ ಮುಗಿಸುತ್ತಿದ್ದರು.
ಎಷ್ಟೆಲ್ಲ ನೋವು-ನಲಿವುಗಳು ಹಂಚಿಕೆಯಾಗುತ್ತಿದ್ದವು ನಮ್ಮೂರ ಸಂತೇಲಿ ಅಂತ ನೆನಪಾಗಿ ಈಗಲೂ ಅಚ್ಚರಿಯೆನಿಸುತ್ತದೆ. ಯಾರದೋ ಮನೆಯಲ್ಲಿ ಹಸುವೊಂದು ಕಾಲು ಮುರಿದುಕೊಂಡಿದ್ದು, ಯರದೋ ಮಗಳ ಮದುವೆ ಗೊತ್ತಾದದ್ದು, ಇನ್ಯಾರೋ ಎರಡನೇ ಮದುವೆಯಾದದ್ದು....ಹೀಗೆ ಎಲ್ಲವೂ ಮಾತಿನ ಲಹರಿಯಲ್ಲಿ ಬಂದು ಹೋಗುತ್ತಿದ್ದವು. ಬಹುಷಃ ಭಾಷೆ ಜೀವಂತವಾಗಿ ನುಡಿಗಟ್ಟುಗಳ ಮೂಲಕ ಮೈದಳೆದದ್ದನ್ನು ನಾನು ನೋಡಿ, ಕೇಳಿ ಕಲಿತದ್ದೇ ಸಂತೇಲಿ. "ಮನುಷ್ಯರಿಗೆ ಕಷ್ಟ ಬರದೇ ಇನ್ನೇನು ಮರಕ್ಕೆ ಬರುತ್ತಾ?", "ಆ ಶ್ರೀರಾಮನೇ ವನವಾಸಕ್ಕೆ ಹೋದನಂತೆ, ಇನ್ನು ನಮ್ಮಂಥವರ ಪಾಡೇನು ಬಿಡು", "ಅದೇನೋ ಅಂತಾರಲ್ಲ, ಕುಂತೀ ಮಕ್ಕಳಿಗೆ ಅಂತೂ-ಇಂತೂ ರಾಜ್ಯವಿಲ್ಲ ಅಂತ ಹಂಗಾಯ್ತು" ಹೀಗೆ ಹತ್ತು ಹಲವು ನುಡಿಗಟ್ಟುಗಳು ಸಹಜವಾಗಿ ದೈನಂದಿನ ಸಂಭಾಷಣೆಯಲ್ಲಿ ನುರಿತು, ಹದವಾಗಿ ಬಳಕೆಯಾಗುತ್ತಿದ್ದ ಪರಿ ಅದ್ಭುತ ಅನ್ನಿಸುತ್ತದೆ! ಇನ್ನು ಚೌಕಾಶಿಯಂತೂ ಸಂತೆ ವ್ಯಾಪಾರದ ಅವಿಭಾಜ್ಯ ಅಂಗ. ಯಾರೋ ಗಿರಾಕಿ ತರಕಾರಿ ವ್ಯಾಪಾರಿಗೆ "ಏನಪ್ಪ ನೀನು, ಕೆ.ಜಿ.ಗೆ 1 ರೂಪಾಯಿ ಅಂತೀಯ (1988-89 ರ ಕಾಲ, ಒಂದು ರೂಪಾಯಿಗೆ ಕೆ.ಜಿ. ತರಕಾರಿ ಸಿಗುತ್ತಿತ್ತು!)? ಅದೇ ಆ ಅಂಗಡಿಯವನು 75 ಪೈಸೆಗೆ ಕೊಡ್ತಾನೆ ಗೊತ್ತಾ?" ಅಂತ ಅಂದರೆ ಸಾಕು, ಶುರು ನೋಡಿ ದಿವ್ಯ ವೇದಾಂತ! "ಏನು ಮಾತೂಂತ ಹೇಳ್ತೀರಾ ಸೋಮಿ, ನಿಮ್ಮ ಹತ್ರ 25 ಪೈಸೆ ಲಾಭ ಮಾಡಿ ನಾನೇನು ಅರಮನೆ ಕಟ್ಬೇಕಾ?" ಅನ್ನುವ ಅಂಗಡಿಯವನ ವಾದಕ್ಕೆ ಎಂಥವರಾದರೂ ಮರುಳಾಗಬೇಕು. ಪ್ರತಿ ವ್ಯಾಪಾರಿಯೂ ಮಾತಿನಲ್ಲೇ ಅರಮನೆ ಕಟ್ಟುವುದರಲ್ಲಿ ನಿಸ್ಸೀಮನಾಗಿರುತ್ತಿದ್ದ. ಆದರೆ ಗಿರಾಕಿಗಳೂ ಕಡಿಮೆಯೇನಲ್ಲ ಬಿಡಿ. "ಇಲ್ಲಪ್ಪ, ಅವನು 75 ಪೈಸೆಗೇ ಕೊಡೋದು, ಬೇಕಾದ್ರೆ ಜತೇಲಿ ಬಾ ತೋರಿಸ್ತೀನಿ..." ಅಂತ ಪಟ್ಟು ಹಿಡಿದರೆ ಅಂಗಡಿಯವನ ಮಾತಿನ ಧಾಟಿಯೇ ಬದಲಾಗುತ್ತಿತ್ತು. "ಆಯ್ತು, ಅವನು 75 ಪೈಸೆಗೇ ಕೊಡಭೌದು. ಆದ್ರೆ ನೀವು ಹಸೀನ ಹಾಲಿಗೂ ಎಮ್ಮೆ ಹಾಲಿಗೂ ಒಂದೇ ಬೆಲೆ ಕಟ್ತೀರಾ? ನನ್ತಾವ ಇರೋ ಚಟ್ಟು ನೋಡಿ ಹೆಂಗದೆ. ಬಾಯಲ್ಲಿಟ್ರೆ ಅಂಗೇ ಬೆಣ್ಣೆ, ಬೆಣ್ಣೆ ಕರಗಿಧಂಗೆ ಕರಗಬೇಕು" ಅಂತ ಹೇಳಿ ಗಿರಾಕಿಯನ್ನು "ಚಿತ್ತು" ಮಾಡುತ್ತಿದ್ದ! ಆದರೆ ಚಟ್ಟಿಗೂ, ಬೆಣ್ಣೆಗೂ ಏನು ಹೋಲಿಕೆ ಅಂತ ದೇವರಿಗೇ ಗೊತ್ತು.
ಒಟ್ಟಾರೆ ಹೇಳೋದಾದ್ರೆ ಸಂತೆ ಮಾನವೀಯ ಸಂಬಂಧಗಳಿಗೊಂದು ವೇದಿಕೆಯಾಗಿತ್ತು. ತರಕಾರಿಗಳನ್ನು, ಸಾಮಾನುಗಳನ್ನು, ಊರೊಳಗಿನ ಅಂಗಡಿಗಳಲ್ಲೂ ಖರೀದಿಸಬಹುದಿತ್ತು. ಆದರೆ ಜನ ಸಂತೆಗೆ ಬರುವುದನ್ನು ತಪ್ಪಿಸುತ್ತಿರಲಿಲ್ಲ. ಎಷ್ಟೋ ಬಾರಿ ನಮ್ಮಪ್ಪನ ಜೊತೆ ಅವರ ಸ್ನೇಹಿತರು, ಅವರಿಗೆ ಅಗತ್ಯ ಇಲ್ಲದಿದ್ದರೂ ಸುಮ್ಮನೆ "ಕಂಪನಿ"ಗೆ ಅಂತ ಅರ್ಧ-ಮುಕ್ಕಾಲು ಘಂಟೆ ಸಂತೆಗೆ ಬರುತ್ತಿದ್ದನ್ನು ನಾನೇ ನೋಡಿದ್ದೇನೆ! ನಮ್ಮ ಸಂತೆ ವ್ಯಾಪಾರಕ್ಕೆ 15-20 ನಿಮಿಷ ಬೇಕಾದಷ್ಟಾಗಿತ್ತು. ಆದರೆ ನಮ್ಮಪ್ಪ ಅಲ್ಲಲ್ಲಿ, ಅವರ ಪರಿಚಯದವರು ಕಂಡಾಗ ನಿಂತು ಮಾತಾಡಿಸುವುದರಲ್ಲಿ ಕಾಲ ಕಳೆಯುತ್ತಿದ್ದರಿಂದ ಇನ್ನೊಂದು 20 ನಿಮಿಷ ಹೆಚ್ಚು ಬೇಕಾಗುತ್ತಿತ್ತು. ಆಗೆಲ್ಲ, "ಇದೇನು, ಇಷ್ಟು ಸಮಯ ವ್ಯರ್ಥ" ಅಂತ ನನಗೆ ಒಮ್ಮೊಮ್ಮೆ ಅನ್ನಿಸುತ್ತಿತ್ತು. ಆದರೆ ಈಗ ಅನ್ನಿಸುತ್ತಿದೆ, ವಾರಕ್ಕೊಮ್ಮೆ 20 ನಿಮಿಷ ಸುಮ್ಮನೆ ಸಮಯ ಖರ್ಚು ಮಾಡುತ್ತಿದ್ದರಿಂದ ಸಿಗುತ್ತಿದ್ದ ಆ ಅನುಭೂತಿಯನ್ನು ಯಾವ ಅಂಗಡಿಯಲ್ಲಿ ಎಷ್ಟು ದುಡ್ಡು ಕೂಟ್ಟು ಖರೀದಿಸಲು ಸಾಧ್ಯ ಹೇಳಿ? ತಾಂತ್ರಿಕತೆ (ಟೆಕ್ನಾಲಜಿ) ಏನೆಲ್ಲ ಸೌಲಭ್ಯ ಕೊಟ್ಟಿದೆ ನಿಜ. ಕುಳಿತ ಕಡೆಯೇ "ಇಂಟರ್ನೆಟ್"ನಲ್ಲೇ ಎಲ್ಲ ವಸ್ತುಗಳ ಖರೀದಿ ಕೂಡಾ ಸಾಧ್ಯವಾಗಿದೆ. ಅದೂ ನಿಜ. ಆದರೆ ಈ ತಾಂತ್ರಿಕ ಅಭಿವೃದ್ಧಿಯ ವೇಗದಲ್ಲಿ ನಾವು ಹಳತೆಲ್ಲವನ್ನೂ ಸಾರಾಸಗಟಾಗಿ ಬದಿಗೊತ್ತಿ ಓಡುತ್ತಿರುವುದರಿಂದ, ಕಳೆದುಕೊಂಡಿರುವುದು ಎಷ್ಟಿದೆ ಅನ್ನುವುದನ್ನೂ ಕೊಂಚ ಯೋಚಿಸಿ ನೋಡಿ. ಇಡಿಯ ಜಗತ್ತೇ ಸಂಕುಚಿಸಿ "ಜಾಗತಿಕ ಹಳ್ಳಿ"ಯಾಗುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಈ ಜಾಗತಿಕ ಹಳ್ಳಿಯಲ್ಲಿದ್ದು ಕೂಡಾ ನಮ್ಮ ಪಕ್ಕದ ಮನೆಯವರ ಜತೆ ಸಂಭಾಷಣೆ ನಡೆಸುವ ಅಗತ್ಯವಿಲ್ಲ (ಅಥವಾ ಆಗುವುದಿಲ್ಲ) ಎನ್ನುವಂತಹ ಸ್ಥಿತಿ ಮುಟ್ಟಿದ್ದೀವಿ ಅನ್ನಿಸುವುದಿಲ್ಲವೇ? ತಾಂತ್ರಿಕತೆಯಿಂದಾಗಿ ಉಳಿದ ಸಮಯ ಉಪಯೋಗವಾಗುತ್ತಿರೋದು ಇನ್ನೊಂದಿಷ್ಟು "ಇಂಟರ್ನೆಟ್ ಸರ್ಫ಼್" ಮಾಡಲೋ ಅಥವ ಬ್ಲಾಗಿಸಲೋ - ಒಟ್ಟು ನಿರ್ಜೀವ ವಸ್ತುಗಳ ಜತೆ ಕಾಲ ಕಳೆಯೋದಕ್ಕೆ ಅನ್ನಿಸುವುದಿಲ್ಲವಾ? ಇಲ್ಲ, ನಿನ್ನ ಕಲ್ಪನೆ ಶುದ್ಧ ತಪ್ಪು. ನಾವು ಬ್ಲಾಗಿಸೋದು, ಚಾಟಿಸೋದು ನಮ್ಮ ಗೆಳೆಯರ ಜತೆ ಗೊತ್ತಾ?" ಅಂತ ಅನ್ನೋದಾದರೆ, ಅದೇ ನಮ್ಮ ಬ್ಲಾಗ್/ಚಾಟ್ ಗೆಳೆಯರು ಎದುರಿಗೇ ಸಿಕ್ಕಾಗ ನಾವು ಅವರೊಂದಿಗೆ ಅಷ್ಟೇ ಚೆನ್ನಾಗಿ ಹರಟುತ್ತೇವಾ ಹೇಳಿ ನೋಡೋಣ? ನಾವು ನಮ್ಮ ಸ್ನೇಹಿತರ/ಆತ್ಮೀಯರ ಜತೆ ಒಂದು "ವಾಕ್" ಹೋಗಿ, ಯಾವುದೋ ಒಂದು ಕಟ್ಟೆಯ ಮೇಲೆ ಕೂತು ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿ, ಪರಸ್ಪರ ಕಷ್ಟ-ಸುಖ ಹಂಚಿಕೊಂಡು ಎಷ್ಟು ದಿನಗಳಾದವು? ಜಗತ್ತು ಸಂಕುಚಿಸಿರೋದಕ್ಕಿಂತ ಮಾನವೀಯ ಸಂಬಂಧಗಳು ಹೆಚ್ಚು ಸಂಕುಚಿಸಿವೆ ಅನ್ನಿಸುತ್ತಿದೆ. ಹಾಗಂತ ನಾನೇನೂ ಪ್ರಗತಿವಿರೋಧಿ ಅಲ್ಲ! ಈ ದಿನಗಳಲ್ಲೂ ಸಂತೆ ಹರಡಿಕೊಂಡು ಕೂರಬೇಕು ಅಂತಲ್ಲ ನನ್ನ ಅನಿಸಿಕೆ. ಸಂತೆ ಇಲ್ಲಿ ಕೇವಲ ನೆಪ ಮಾತ್ರ. ಮಾನವೀಯ ಸಂಬಂಧಗಳು ಹೇಗೆ ದೂರವಾಗುತ್ತಿವೆ ಅನ್ನುವುದು ಸಂತೆಯ ನೆನಪಿನ ಮೂಲಕ ಇವತ್ತು ನನ್ನ ವಿಚಾರಕ್ಕೆ ಬಂತು. ಹೊಸತನ, ತಾಂತ್ರಿಕತೆ ಎಲ್ಲಕ್ಕೂ ತೆರೆದ ಮನಸ್ಸಿನ ಸ್ವಾಗತ ಇರಲಿ; ಆದರೆ ಹಳತರಲ್ಲೂ ಕೆಲವು ಅಂಶಗಳನ್ನು ಉಳಿಸಿಕೊಳ್ಳೋಣ ಅಲ್ವಾ? ಡಿ.ವಿ.ಜಿ. ಹೇಳಿದಂತೆ "ಹೊಸ ಚಿಗುರು, ಹಳೆ ಬೇರು ಕೂಡಿರಲು ಮರ ಸೊಬಗು" ಅಲ್ಲವೇ?
ಯಾಕೋ ಒಂದು "ಶಾಪಿಂಗ್"ನಿಂದ ಶುರುವಾದ ಆಲೋಚನೆಗಳು ಎಳೆದುತಂದ ನಮ್ಮೂರ ಸಂತೆಯ ಮಧುರ ನೆನಪುಗಳ ಬುತ್ತಿಯನ್ನು ನಿಮ್ಮ ಜೊತೆ ಹಂಚಿಕೊಳ್ಳೋಣ ಅನ್ನಿಸಿತು. ಈ ಲೇಖನ ಬರೆಯುತ್ತಿದ್ದಾಗ ಅಡಿಗರ ಕವಿತೆಯ ಸಾಲೊಂದು ಪದೇ-ಪದೇ ನೆನಪಾಗುತ್ತಿದೆ; "ಅಮೃತವಾಹಿನಿಯೊಂದು ಹರಿಯುತಿದೆ ಮಾನವನ ಎದೆಯಿಂದ ಎದೆಗೆ ಸತತ..". ನಾವೆಷ್ಟೇ ಅಭಿವೃದ್ಧಿಹೊಂದಿದರೂ ಈ "ಅಮೃತವಾಹಿನಿ" ನಿಲ್ಲದಿರಲಿ ಅಂತ ಆಶಿಸೋಣ ಅಲ್ಲವೇ?