ಒಲವಿಲ್ಲದ ಸತ್ಯವು
ನಾನು ಜೀವಿ ನೀನು ಭುವಿ
ನಮ್ಮ ಮೇಲೇ ಆಕಾಶವು
ಗಾಳಿ ಬೆಳಕು ಹಕ್ಕಿಗಳ ಚಿಲಿಪಿಲಿ
ಎತ್ತೆತ್ತಲೂ ವಿಪುಲ ಅವಕಾಶವು.
ನಾನು ಮನುಜ ನೀನು ಕಣಜ
ಉಳ್ಳವರದೇ ಇಲ್ಲಿ ಆಧಿಪತ್ಯವು
ಮಳೆಬೆಳೆ ದವಸ ಧಾನ್ಯ ನಮ್ಮದೆ ನಿಜ
ಕಲಿತರೆಲ್ಲ ಬದುಕಿನ ಪಾರುಪತ್ಯವು.
ನಾನು ಕವಿ ನೀನು ಛವಿ
ನಮಗೆ ಎದುರೇನು ಈ ಲೋಕವು
ಸಾವು ನೋವು ಬಹಳ ಕಹಿ
ಎಂದಿಗೂ ತಿಳಿವಿನ ಹರವಿದ್ದರೆ ಚೆನ್ನವು.
ನಾನು ಜ್ಞಾನಿ ನೀನು ದಿವ್ಯ ಮೌನಿ
ಏಕೆ ನಮ್ಮೊಳಗೇ ಆಂತರ್ಯುದ್ಧವು
ಭಾವದಲೆ ಬೆರಗು ಬೆಲೆ ಆತ್ಮ ಗ್ಲಾನಿ
ಎಲ್ಲ ಇಲ್ಲೇ ಒಲವಿಲ್ಲದ ಸತ್ಯವು.
ನನ್ನ “ಮಾರ್ದನಿ” ಕವನ ಸಂಕಲನದಿಂದ
Rating