ಅಪ್ಪನ ನೆನಪು
ನನ್ನ ತೊದಲು ತುಟಿಗಳಿಗೆ ಪ್ರಾರ್ಥಿಸಲು ಕಲಿಸಿದಿರಿ,
ನನ್ನ ತಪ್ಪಡಿಗಳನು ತಿದ್ದುತ್ತ ಜೊತೆಯಲ್ಲೆ ಸಾಗಿದಿರಿ,
ಕೈಹಿಡಿದು ಬರೆಸಿ ಕೈಬರಹವನ್ನು ಚೆಂದಗಾಣಿಸಿದಿರಿ,
ನನ್ನ ಚಿತ್ತಭಿತ್ತಿಯಲಿ ನೂರಾರು ಬಣ್ಣಗಳ ತುಂಬಿದಿರಿ.
ನಾನು ಕಲಿತಷ್ಟೂ ಕಲಿಸುವ ಉತ್ಸಾಹವಿತ್ತು ನಿಮ್ಮಲ್ಲಿ,
ನಿಮ್ಮಿಂದಾಗಿಯೆ ಕಲಿಕೆಯ ಹಂಬಲ ಚಿಗುರಿತ್ತು ನನ್ನಲ್ಲಿ.
ನೀವು ಕಲಿಸುವಾಗಲೆಲ್ಲ ಆಗುತ್ತಿತ್ತು ಪಾಠವೂ ಆಟ!
ದಿನಕಳೆದಂತೆ ಹತ್ತಿರವಾಗುತ್ತಿತ್ತು ನಮ್ಮೀ ಒಡನಾಟ.
ಹಂಚಿಕೊಂಡಿರಿ ನನ್ನೊಡನೆ ಸಂತಸದ ಘಳಿಗೆಗಳ
ಮುಚ್ಚಿಟ್ಟಿದ್ದು ಸರಿಯೆ ನಿಮ್ಮ ಯಾತನೆ-ತಳಮಳ?
ವಾಸಿಯಾಗದ ಖಾಯಿಲೆಯಿಂದ ನರಳುತ್ತಿದ್ದರೂ ನೀವು,
ನನ್ನೊಂದು ಸಾಧನೆ ಮರೆಸುತ್ತಿತ್ತು ನಿಮ್ಮೆಲ್ಲ ನೋವು.
ನನ್ನ ಪ್ರಗತಿಯನು ಕಂಡು ಹಿರಿ-ಹಿರಿ ಹಿಗ್ಗಿದ್ದು ನೀವೇ,
ನನಗಿಂತ ಹೆಚ್ಚು ಭವಿಷ್ಯದ ಕನಸು ಕಂಡಿದ್ದೂ ನೀವೇ;
ಬೀಜ ಬಿತ್ತಿ, ನೀರು-ಗೊಬ್ಬರವೆರೆದು ಪೋಷಿಸಿದ ನೀವೇ
ಮರವಾಗುವ ತನಕ ಕಾಯದೇ ಹೋದದ್ದು ನ್ಯಾಯವೇ?
ಇಂದು, ನಾನು ಅಪ್ಪ ಆಗುತ್ತಿರುವ ಸಮಯದಲ್ಲಿ,
ಬರಿಯ ನಿಮ್ಮ ನೆನಪೇ ತುಂಬಿದೆ ನನ್ನ ಮನದಲ್ಲಿ.
ಏಕಿರಬೇಕು ನೀವು ಎಲ್ಲೋ ದೂರದಲ್ಲಿ ದೇವರ ಬಳಿ?
ಬಂದುಬಿಡಿ ಅಪ್ಪ, ನಮ್ಮ ಕಂದನ ರೂಪ ತಾಳಿ!