ನೂರು ವರ್ಷದ ಏಕಾಂತ - ಗೇಬ್ರಿಯಲ್ ಮಾರ್ಕ್ವೆಜ್ ನ ಕಾದಂಬರಿ
ಈ ಕಾದಂಬರಿಯನ್ನು ಹಿಂದೊಮ್ಮೆ ಓದಲು ಆರಂಬಿಸಿದ್ದೆ. ವಿಚಿತ್ರವಾಗಿದೆ . ಪ್ರಾರಂಭದ ಪುಟಗಳಲ್ಲಿ ಗಮನ ಸೆಳೆದ ಕೆಲವು ವಾಕ್ಯ ನೋಡಿ .
ಹಿಂದೊಂದು ಕಾಲದಲ್ಲಿ
"ಪ್ರಪಂಚದ ಹುಟ್ಟು ಇತ್ತೀಚೆಗಷ್ಟೆ ಆಗಿದ್ದು, ಎಷ್ಟೋ ವಸ್ತುಗಳಿಗೆ ಹೆಸರಿರಲಿಲ್ಲ ಮತ್ತು ಅವುಗಳನ್ನು ಗುರುತು ಹಿಡಿಯಲು ಕೈ ಮಾಡಿ ತೋರಿಸಬೇಕಾಗಿತ್ತು. ಪ್ರತಿ ವರ್ಷವೂ ಜಿಪ್ಸಿಗಳ ಸಂಸಾರವೊಂದು ಹಳ್ಳಿಯ ಹತ್ತಿರ ಬೀಡು ಬಿಟ್ಟು ಪೀಪಿಗಳನ್ನು ಊದಿ, ತಮಟೆ ಬಡಿದು ಹೊಸ ಆವಿಷ್ಕಾರಗಳನ್ನು ತೋರಿಸುತ್ತಿತ್ತು."
"ಸಾರ್ವಜನಿಕ ಪ್ರದರ್ಶನವೊಂದನ್ನು ಮಾಡುತ್ತ ಅದು ಪ್ರಪಂಚದ ಎಂಟನೇ ಅದ್ಭುತವೆಂದೂ ಮತ್ತು ಅದನ್ನು ತಾನು ಮೆಸಿಡೋನಿಯಾದ ರಸವಾದಿಗಳಿಂದ ಕಲಿತದ್ದೆಂದೂ ಹೇಳಿದ. ಅವನು ಭಾರಿ ಗಾತ್ರದ ಲೋಹದ ಇಟ್ಟಿಗೆಗಳನ್ನು ಎಳೆದುಕೊಳ್ಳುತ್ತ ಮನೆಯಿಂದ ಮನೆಗೆ ಹೋದ. ಮನೆಯಲ್ಲಿದ್ದ ಪಾತ್ರೆ ಪಡಗ ಇತ್ಯಾದಿಗಳು ಉರುಳಿ ಬಿದ್ದದ್ದನ್ನು ಕಂಡು ಎಲ್ಲರಿಗೂ ಆಶ್ಚರ್ಯವಾಯಿತು. ಅಲ್ಲದೆ ಸ್ಕ್ರೂಗಳು ಹಾಗೂ ಮೊಳೆಗಳು ತೊಲೆಗಳಿಂದ ಹೊರ ಬರಲು ಪ್ರಯತ್ನಿಸಿ ಸೀಳಿದವು. ಎಷ್ಟೋ ದಿನಗಳ ಹಿಂದೆ ಕಳೆದು ಹೋದ ವಸ್ತುಗಳು ಅವುಗಳನ್ನು ಹುಡುಕುತ್ತಿದ್ದ ಸ್ಥಳಗಳಿಂದ ಹೊರಗೆ ಬಂದು ಕಾಣಿಸಿಕೊಂಡು ದಡಬಡಿಸಿ ಮೆಲ್‌ಕಿಯಾದೆಸ್‌ನ ಮಾಂತ್ರಿಕ ಇಟ್ಟಿಗೆಯ ಹಿಂದೆ ಹೋದವು. "ವಸ್ತುಗಳಿಗೆ ಜೀವವಿರುತ್ತೆ, ಅವುಗಳ ಆತ್ಮವನ್ನು ಎಚ್ಚರಿಸಬೇಕಷ್ಟೆ ಎಂದು ಜಿಪ್ಸಿ ಒರಟು ದನಿಯಲ್ಲಿ ಹೇಳಿದ."
....
ಮಾರ್ಚ್‌ನಲ್ಲಿ ಜಿಪ್ಸಿಗಳು ತಿರುಗಿ ಬಂದರು. ಈ ಸಲ ಅವರು ದೂರದರ್ಶಕ ಮತ್ತು ಒಂದು ಡ್ರಮ್ಮಿನ ಗಾತ್ರದ ಭೂತಗನ್ನಡಿಯನ್ನು ತಂದು, ಅವು ಆಮ್‌ಸ್ಟರ್‌ಡ್ಯಾಂನ ಯಹೂದಿಗಳು ಇತ್ತೀಚೆಗೆ ಕಂಡು ಹಿಡಿದಿದ್ದೆಂದು ಪ್ರದರ್ಶಿಸಿದರು. ಅವರು ಜಿಪ್ಸಿ ಹುಡುಗಿಯೊಬ್ಬಳನ್ನು ಹಳ್ಳಿ ಅಂಚಿನಲ್ಲಿ ನಿಲ್ಲಿಸಿದರು. ದೂರದರ್ಶಕವನ್ನು ಟೆಂಟ್ ಮುಂಭಾಗದಲ್ಲಿಟ್ಟರು. ಐದು ರಿಯಲ್ಸ್ ದುಡ್ಡಿಗೆ ದೂರದರ್ಶಕದಲ್ಲಿ ನೋಡಿ ಜಿಪ್ಸಿ ಹುಡುಗಿಯನ್ನು ಕೈಯಳತೆಯ ಅಂತರದಲ್ಲಿ ಇರುವ ಹಾಗೆ ನೋಡಬಹುದಾಗಿತ್ತು. "ವಿಜ್ಞಾನ ದೂರವನ್ನು ಅಳಿಸಿ ಹಾಕಿದೆ" ಎಂದು ಮೆಲ್‌ಕಿಯಾದೆಸ್ ಘೋಷಿಸಿದ.
ಇನ್ನು ಸ್ವಲ್ಪ ಕಾಲದಲ್ಲೇ ಮನೆಯಿಂದ ಆಚೆ ಹೋಗದೆಯೇ ಜಗತ್ತಿನಲ್ಲಿ ಎಲ್ಲಾದರೂ ಸರಿಯೆ, ಏನಾಗುತ್ತಿದೆಯೆಂದು ನೋಡಬಹುದು ಎಂದ....
...ದೀರ್ಘ ಸಮಯದ ಕಟ್ಟೆಚ್ಚರ ಮತ್ತು ಕಲ್ಪನೆಯ ಹುಚ್ಚಿನಿಂದ ಜರ್ಜರಿತನಾದ ತಮ್ಮ ತಂದೆ ತಾನು ಕಂಡು ಹಿಡಿದಿದ್ದನ್ನು ಉತ್ಸಾಹ ಬೆರೆತ ಗಾಂಭೀರ್ಯದಿಂದ ತಿಳಿಸಿದ್ದನ್ನು ಅವನ ಮಕ್ಕಳು ತಮ್ಮ ಜೀವನವಿಡೀ ನೆನಪಿಟ್ಟುಕೊಳ್ಳುವಂತೆ ಆಯಿತು:
"ಭೂಮಿ ಗುಂಡಗಿದೆ, ಕಿತ್ತಲೆಯ ಹಾಗೆ."
ಉರ್ಸುಲಾ ತಾಳ್ಮೆ ಕಳೆದುಕೊಂಡು, "ನಿಮ್ಗೆ ಹುಚ್ಚು ಹಿಡೀಬೇಕು ಅಂತಿದ್ರೆ, ನಿಮ್ಮಷ್ಟಕ್ಕೆ ನೀವು ಹಿಡಿಸಿಕೊಳ್ಳಿ. ಆದರೆ ನಿಮ್ಮ ಜಿಪ್ಸಿ ಆಲೋಚನೆಗಳನ್ನ ಮಕ್ಕಳ ತಲೇಲಿ ತುರುಕಬೇಡಿ" ಎಂದು ಕೂಗಿದಳು.
......
ಒಂದು ಸ್ಥಳದಿಂದ ಪೂರ್ವ ದಿಕ್ಕಿನಲ್ಲೇ ಯಾನ ಮಾಡಿದರೆ ಮತ್ತೆ ಅದೇ ಸ್ಥಳಕ್ಕೆ ತಲುಪುವುದಾಗಿ ಹೇಳಿ ಜೊತೆಗೆ ಅವರಿಗೆ ಅರ್ಥವಾಗದ ಅನೇಕ ಅಂಶಗಳನ್ನು ತಿಳಿಸಿದ. ಇಡೀ ಹಳ್ಳಿಗೆ ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ತಲೆ ಕೆಟ್ಟಿದೆ ಎಂದು ಮನದಟ್ಟಾಯಿತು.
....
ಅವನು ಉರ್ಸುಲಾಗೆ, "ಪ್ರಪಂಚದಲ್ಲಿ ನಂಬಲು ಸಾಧ್ಯವಾಗದಂಥ ಸಂಗತಿಗಳು ನಡೀತಿವೆ. ಅಲ್ಲಿ ಹೊಳೆಯಾಚೆ ಎಲ್ಲ ರೀತಿಯ ಮಾಂತ್ರಿಕ ಉಪಕರಣಗಳಿವೆ. ನಾವಿಲ್ಲಿ ಕತ್ತೆಗಳ ಥರ ಇದೀವಿ" ಎಂದ.
....
ಲ್ಯಾಬೊರೇಟರಿಯ ಸಾಮಾನುಗಳನ್ನು ಬಿಚ್ಚಿಡಲು ಮಕ್ಕಳನ್ನು ಕರೆದ. ಮಧ್ಯಾಹ್ನದಿಂದ ಅವರ ಜೊತೆ ತನ್ನ ವೇಳೆಯನ್ನು ಕಳೆದ. ಪ್ರತ್ಯೇಕವಾಗಿದ್ದ ಆ ಚಿಕ್ಕ ರೂಮಿನ ಗೋಡೆಗಳ ಮೇಲೆ ವಿಚಿತ್ರವಾದ ನಕ್ಷೆಗಳು ಮತ್ತು ಡ್ರಾಯಿಂಗ್‌ಗಳು ಹರಡಿಕೊಳ್ಳುತ್ತಿದ್ದ ಹಾಗೆ ಅವನು ಅವರಿಗೆ ಓದುವುದನ್ನು, ಬರೆಯುವುದನ್ನು, ಲೆಕ್ಕ ಮಾಡುವುದನ್ನು ಕಲಿಸಿದ ಮತ್ತು ಪ್ರಪಂಚದ ಅದ್ಭುತಗಳ ಬಗ್ಗೆ ತನ್ನ ಕಲ್ಪನೆಯ ಮಿತಿಯನ್ನು ಅತಿಯಾಗಿ ವಿಸ್ತರಿಸಿ ತಿಳಿಸಿದ. ಇದರಿಂದ ಮಕ್ಕಳು ಆಫ್ರಿಕಾದ ದಕ್ಷಿಣದ ತುದಿಯ ಭಾಗದ ಜನರು ಅದೆಷ್ಟು ಬುದ್ಧಿವಂತರೆಂದರೆ ಅವರಿಗೆ ಕುಳಿತುಕೊಂಡು ಯೋಚಿಸುವುದೊಂದೇ ಕೆಲಸ ಎನ್ನುವುದನ್ನು ಕಲಿತರು.
---------------
ಮತ್ತೆ ಓದಲಾರಂಬಿಸಿದ್ದೇನೆ. ಗಾತ್ರ ಬಹಳ . ನಿಮಗೂ ಓದಬೇಕೆನಿಸಿದರೆ
[:http://kannadasaahithya.com/kanbrh/index.php?layout=main&cslot_1=74 | ಇಲ್ಲಿ ನೋಡಿ]
Comments
ನೂರು
ಒಂದು ರೆಕಮೆಂಡೇಷನ್ನು....
ಉ: ನೂರು ವರ್ಷದ ಏಕಾಂತ - ಗೇಬ್ರಿಯಲ್ ಮಾರ್ಕ್ವೆಜ್ ನ ಕಾದಂಬರಿ