ಕನ್ನಡ , ಸಂಸ್ಕೃತ , ಇಂಗ್ಲೀಷ್ ಶಬ್ದಗಳು - ಬಿ.ಎಂ.ಶ್ರೀ. ಅವರ ವಿಚಾರಗಳು
ಕೆಲವು ಆಯ್ದ ಭಾಗಗಳು
(೧೯೧೨ರಲ್ಲಿ ಬಿ.ಎಂ.ಶ್ರೀ. ಅವರು ಮಾಡಿದ ಉಪನ್ಯಾಸದ ಮುಖ್ಯ ಅಂಶಗಳು .
೧. ಕನ್ನಡಕ್ಕೆ ಹೊಸ ಸಾಹಿತ್ಯ ಬೇಕಾಗಿದೆ.
೨. ಪ್ರಾಚೀನ ಸಾಹಿತ್ಯದ ಅಭ್ಯಾಸ ಮಾಡಿ ಭಾಷೆಯ ಹಳೆಯ ಶಬ್ದರಾಶಿಯನ್ನೂ ಪ್ರಯೋಗಗಳನ್ನೂ ಚೆನ್ನಾಗಿ ತಿಳಿದುಕೊಳ್ಳುವುದು ಹೊಸ ಬರವಣಿಗೆಗೆ ಅತ್ಯಂತ ಅವಶ್ಯಕ ಸಿದ್ಧತೆ.
೩. ಅಷ್ಟೇ ಸಾಲದು . ಹೊಸ ಬರವಣಿಗೆ ಬರೆಯುವವನು ಸಂಸ್ಕೃತದ ಪರಿಚಯ ಸಂಪಾದಿಸಿಕೊಳ್ಳಬೇಕು . ಸಂಸ್ಕೃತದ ಸಹಾಯವಿಲ್ಲದೆ ಹೊಸ ಸಾಹಿತ್ಯಕ್ಕೆ ಬೇಕಾದ ಶಬ್ದಸಾಮಗ್ರಿ ಒದಗಲಾರದು.
೪. ಆದರೆ ಹೊಸ ಕನ್ನಡ ಬರವಣಿಗೆಯಲ್ಲಿ ಸಂಸ್ಕೃತ ಪದಗಳ ಬಳಕೆ ಮಿತವಾಗಿರಬೇಕು . ನಮ್ಮ ಹಳಗನ್ನಡಕಾವ್ಯಗಳಲ್ಲಿರುವಷ್ಟು ಅತಿಯಾಗಿರಬಾರದು.
೫ ಸಂಸ್ಕೃತ ಹೇಗೆ ಅವಶ್ಯವೋ ಇಂಗ್ಲೀಷ್ ಸಾಹಿತ್ಯವೂ ಹಾಗೆ ಅವಶ್ಯಕ. ನಾವು ಹೊಸ ಹೊಸ ಭಾವನಾಧೋರಣೆಗಳನ್ನೂ ಹೊಸಹೊಸ ವಿಚಾರಧಾರೆಗಳನ್ನೂ ಇಂಗ್ಲೀಷಿನಿಂದ ಸಂಗ್ರಹಿಸಿಕೊಳ್ಳಬೇಕು. ನಮ್ಮ ಹೊಸಕನ್ನಡ ಸಾಹಿತ್ಯವು ಪ್ರಪಮ್ಚದ ನಾನಾ ಸಾಹಿತ್ಯಗಳ ಕಲ್ಪನೆಗಳನ್ನೂ ಭಾವನೆಗಳ್ನ್ನೂ ಸಮಾಲೋಚನೆಗಳನ್ನೂ ಸ್ವಾಧೀನಪಡಿಸಿಕೊಂಡು ಸಾರ್ವಲೌಕಿಕವಾಗಬೇಕು.
೬. ಹೊಸ ಕನ್ನಡ ಸಾಹಿತ್ಯದಲ್ಲಿ ನಮ್ಮ ಹಳೆಯ ಸಾಹಿತ್ಯದ ರಸಪುಷ್ಟಿ , ಓಜಸ್ಸು , ಮನೋರಂಜಕತೆ , ಭಾಷಾಶುದ್ಧಿ - ಇವುಗಳ ಜತೆಗೆ ಹೊಸಹೊಸ ಛಂದಃ ಪ್ರಯೋಗಗಳೂ ಹೊಸಹೊಸ ಪದಸಂಯೋಜನೆಗಳೂ ಹೊಸಹೊಸ ಕಥಾಪ್ರಪಂಚ ನಿರ್ಮಿತಿಗಳೂ ಸೇರಿ ನಮ್ಮ ಸಾಹಿತ್ಯವು ಜನ ಜೀವನಕ್ಕೆ ಒಂದು ಹೊಸ ಪ್ರಚೋದಕ ಶಕ್ತಿಯಾಗಬೇಕು.
ಮತ್ತೆ ಬೇರೆಡೆ
೧. ಪಾರಿಭಾಷಿಕ ಪದಕ್ಕೆ ಕನ್ನಡದಲ್ಲಿಯೋ ಸಂಸ್ಕೃತದಲ್ಲಿಯೋ ಪ್ರತಿಪದವನ್ನು ತಯಾರು ಮಾಡಿ ಉಪಯೋಗಿಸಲು ನಮ್ಮ ಆಕ್ಷೇಪವಿಲ್ಲ . ಇದು ಐಚ್ಚಿಕ ವಿಷಯ . ನಮಗೆ ಮುಖ್ಯವಾದ ಗುಣವು ಸೌಲಭ್ಯ - ಅರ್ಥದ ಸುಲಭತೆ , ಉಚ್ಚಾರಣೆಯ ಸುಲಭತೆ , ಲಿಪಿಯ ಸುಲಭತೆ .
೨. ಕನ್ನಡದಲ್ಲಿ ಎಷ್ಟೋ ಪದಪ್ರಯೋಗಗಳು ವ್ಯಾಕರಣಶಾಸ್ತ್ರದ ದೃಷ್ಟಿಯಿಂದ ತಪ್ಪೆನಿಸಿದರೂ ಬಹುಕಾಲದ ಜನರೂಢಿಯಿಂದ ತಪ್ಪೆನಿಸಿದರೂ ಬಹುಕಾಲದ ಜನರೂಢಿಯಿಂದ ಅವಸರದ ಉಪಯೋಗಕ್ಕೆ ಅನುಕೂಲವಾಗಿದೆ. ಇಂಥ ಅಸಾಧು ಪ್ರಯೋಗಗಳೂ ಇಂಗ್ಲೀಷಿನಲ್ಲಿಯೂ ಹೇರಳವಾಗಿವೆ ಅವನ್ನು " Sturdy indefensible "- ಬಲಿಷ್ಟವಾದ ಅಕ್ಷಮ್ಯಗಳು ಎಂದು ಅಂಗೀಕರಿಸಿಕೊಂಡಿದ್ದಾರೆ . ಈ ತತ್ವ ಕನ್ನಡಿಗರಿಗೂ ಅನುಕರಣೀಯವಗಿದೆ.
೩. ನಾವು ಕೂಡಿದ ಮಟ್ಟಿಗೂ ಶಬ್ದ ಸಂಪತ್ತನ್ನು ವೃದ್ಧಿಮಾಡಿಕೊಳ್ಳಬೇಕೇ ಹೊರತು ಕಡಮೆ ಮಾಡಿಕೊಳ್ಳಬಾರದು . ಇದು ತಪ್ಪು , ಅದು ಅಶುದ್ಧ , ಇದು ಗ್ರಾಮ್ಯ , ಇದು ಅನ್ಯದೇಶೀಯ ಎಂದು ಮಾತುಗಳನ್ನು ತಳ್ಳಿಹಾಕುತ್ತಾ ಹೋದರೆ ಕಡೆಗೆ ಉಳಿಯುವದು ನಮ್ಮ ಇಂದಿನ ಕೆಲಸಕ್ಕೆ ಹೇಗೆ ಸಾಕಾದೀತು? ಭಾಷಾವಿಷಯದಲ್ಲಿಯೂ ಉದಾರದೃಷ್ಟಿ ಅವಶ್ಯ .
ಶ್ರೀಕಂಠಯ್ಯನವರ 'ಕನ್ನಡ ಮಾತು ತಲೆ ಎತ್ತುವ ಬಗೆ ' ಎಂಬ ಉಪನ್ಯಾಸ ಇಂದಿಗೂ ಉಪಯುಕ್ತವಾಗಿದೆ. ಕನ್ನಡದ ಉತ್ಸಾಹಿಗಳು ಅದರಲ್ಲಿ ವಿಚಾರಾರ್ಹವಾದ ಅಂಶಗಳನ್ನು ಗಮನಿಸುವರೆಂದು ಬೇಡುತ್ತೇನೆ .
---ಡಿ.ವಿ.ಜಿ. ಯವರ ' ಹಕ್ಕಿಯ ಪಯಣ' ದಿಂದ
Comments
ಉ: ಕನ್ನಡ , ಸಂಸ್ಕೃತ , ಇಂಗ್ಲೀಷ್ ಶಬ್ದಗಳು - ಬಿ.ಎಂ.ಶ್ರೀ. ಅವರ ವಿಚಾರಗಳು