೨೦೧೨ರಲ್ಲಿ ಮಹಾಪ್ರಳಯವೇ?

೨೦೧೨ರಲ್ಲಿ ಮಹಾಪ್ರಳಯವೇ?

Comments

ಬರಹ

  ೨೦೧೨ರ ಅಂತ್ಯದ ವೇಳೆಗೆ ಮಹಾಪ್ರಳಯ ಸಂಭವಿಸುವುದೆಂದು ಒಂದು ಗುಲ್ಲೆದ್ದಿದೆ. ಮಾಯನ್ ಕ್ಯಾಲೆಂಡರನ್ನು ಉಲ್ಲೇಖಿಸಿ ಈ ಗುಲ್ಲನ್ನು ಎಬ್ಬಿಸಲಾಗಿದೆ. ’ಕಾಲಜ್ಞಾನಿ’ ನಾಸ್ಟ್ರಡಾಮಸ್ ಹೇಳಿರುವ ಭವಿಷ್ಯವಾಣಿಯಿಂದ ಮೊದಲ್ಗೊಂಡು ಅನೇಕಾನೇಕ ಭವಿಷ್ಯವಾಣಿಗಳನ್ನು ಈ ಗುಲ್ಲಿಗೆ ಆಧಾರವಾಗಿ ಪ್ರಸ್ತಾಪಿಸಲಾಗುತ್ತಿದೆ. ವಾರಪತ್ರಿಕೆಯೊಂದು ಈ ಕುರಿತು ಈಚೆಗೆ ಭರ್ಜರಿ ಮುಖಪುಟ ಲೇಖನವನ್ನೇ ಪ್ರಕಟಿಸಿದೆ. ೨೦೧೨ರ ಡಿಸೆಂಬರ್‌ನಲ್ಲಿ ಈ ಜಗತ್ತು ಸರ್ವನಾಶ ಹೊಂದುವುದೆಂಬ ಭಯವು ಈಗಾಗಲೇ ಹಲವು ಅಮಾಯಕರನ್ನು ಕಾಡತೊಡಗಿದೆ!
 
  ಹೌದು, ಪ್ರಳಯಸದೃಶ ಘಟನೆಗಳು ಸಂಭವಿಸಿಯಾವು. ಪರಿಸರ ನಾಶ, ಜಾಗತಿಕ ತಾಪಮಾನದ ಹೆಚ್ಚಳ, ಹೊಸ ಹೊಸ ರೋಗಗಳು, ದೇಶಗಳ ಅಣ್ವಸ್ತ್ರ ದಾಹ, ಯುದ್ಧ ದಾಹ ಇವುಗಳನ್ನೆಲ್ಲ ಗಮನಿಸಿದರೆ ಸನಿಹದಲ್ಲೇ ಭಾರೀ ಕೇಡುಗಾಲ ಉಂಟೆಂಬ ಅನುಮಾನ ಬರದಿರದು. ಆದರೆ, ಮಹಾಪ್ರಳಯವಾಗಿ ಜಗತ್ತೇ ಸರ್ವನಾಶವಾಗುತ್ತದೆಂಬ ನುಡಿ ಮಾತ್ರ ಉತ್ಪ್ರೇಕ್ಷೆಯೇ ಸರಿ.

  ನಾಸ್ಟ್ರಡಾಮಸ್‌ನ ಒಗಟಿನಂಥ ಹೇಳಿಕೆಗಳನ್ನು ನಾನಾ ವಿಧಗಳಲ್ಲಿ ಅರ್ಥೈಸಬಹುದು. ಅವನ ಭವಿಷ್ಯವಾಣಿಯ ಯಾವುದೇ ಒಂದು ನಿರ್ದಿಷ್ಟ ಹೇಳಿಕೆಯನ್ನು ಹಲವು ಘಟನೆಗಳ ಸಮರ್ಥನೆಗಾಗಿ ಬಳಸಲು ಸಾಧ್ಯ. ಅವನ ಹೇಳಿಕೆಗಳಲ್ಲಿ ಕಾಣ್ಕೆಯ ಜೊತೆಗೆ ಜಾಣ್ಮೆಯೂ ಬೆರೆತಿದೆ. ಆದ್ದರಿಂದ ಅವನ ಹೇಳಿಕೆಗಳನ್ನು ’ಇದಮಿತ್ಥಂ’ ಎಂದು ಅರ್ಥೈಸುವುದು ಸರಿಯಲ್ಲ. ವಿಜ್ಞಾನ ವಿಕಸಿಸಿರದ ಕಾಲದ ಮಾಯನ್ ಕ್ಯಾಲೆಂಡರನ್ನು ಮತ್ತು ಅದರ ಅಸ್ಪಷ್ಟ ಅರ್ಥಗಳನ್ನು ಆಧರಿಸಿ ಮಹಾಪ್ರಳಯದ ತೀರ್ಮಾನಕ್ಕೆ ಬರುವುದು ಉಚಿತವಲ್ಲ. ವೈಜ್ಞಾನಿಕ ತಳಹದಿಯಮೇಲೆ ನಿಂತು ಯೋಚಿಸಿದಾಗ ನಾವು ಇತರ ಭವಿಷ್ಯವಾಣಿಗಳನ್ನೂ ಸಾರಾಸಗಟಾಗಿ ಆಚೆ ಸರಿಸಿಬಿಡಬಹುದು.

  ಇದ್ದಕಿದ್ದಂತೆ ಸರ್ವನಾಶವಾಗುವಷ್ಟು ಈ ಜಗತ್ತು ಕ್ಷುಲ್ಲಕವಲ್ಲ. ಸೃಷ್ಟಿ, ಬೆಳವಣಿಗೆ, ಮಾರ್ಪಾಡು, ನಾಶ ಎಲ್ಲವೂ ನಿಧಾನಪ್ರಕ್ರಿಯೆಗಳು. ’ಶೀಘ್ರ ಸರ್ವನಾಶ’ದ ಭ್ರಮೆಗೆ ನಾವು ಬಲಿಯಾಗಬಾರದು.

  ಹಾಗೆ ನೋಡಿದರೆ, ಕಳೆದ ವರ್ಷ ವಿಜ್ಞಾನಿಗಳು ಉಂಟುಮಾಡಲೆತ್ನಿಸಿದ್ದ ’ಭೂಗರ್ಭದೊಳಗಿನ ಮಹಾಸ್ಫೋಟ’ ಹೆಚ್ಚು ಅಪಾಯಕಾರಿಯಾಗುವ ಸಂಭವವಿತ್ತು. (ಅಂಥದೇನೂ ಅಪಾಯ ಎದುರಾಗದೆಯೂ ಇರಬಹುದಿತ್ತು. ವಿಜ್ಞಾನಿಗಳಿಗೇ ಈ ಬಗ್ಗೆ ನಿಖರ ಅರಿವಿಲ್ಲ. ಅವರಲ್ಲೇ ಭಿನ್ನಾಭಿಪ್ರಾಯಗಳಿವೆ.) ಭೂಗರ್ಭದೊಳಗೆ ೭ ಟೆರಾಎಲೆಕ್ಟ್ರಾನ್‌ವೋಲ್ಟ್ಸ್ (೭ ಟಿಇವಿ) ಶಕ್ತಿಯ ದೂಲಗಳ ಡಿಕ್ಕಿಯನ್ನು ವಿಜ್ಞಾನಿಗಳು ನಡೆಸಿದಾಗ ಕೃಷ್ಣರಂಧ್ರ ಸೃಷ್ಟಿಯಾಗಿ ಭೂಮಿಯು ಅದರೊಳಗೆ ಲೀನವಾಗಿಬಿಡುವ ಅಥವಾ ಸರಪಳಿ ಕ್ರಿಯೆಯಾಗಿ ಜ್ವಾಲಾಮುಖಿ ಸ್ಫೋಟ, ಭೂಕಂಪನ ಮೊದಲಾದವು ಸಂಭವಿಸುವ ಭಯವಿತ್ತು. ತಾಂತ್ರಿಕ ಕಾರಣಗಳಿಂದ ಆಗ ಹಿನ್ನಡೆಗೀಡಾಗಿದ್ದ ಆ ಪ್ರಯೋಗಕ್ಕೆ ಈಗ ಮತ್ತೆ ರೆಕ್ಕೆ-ಪುಕ್ಕ ಬಂದಿದೆ. ದೊಡ್ಡ ಮಟ್ಟದ ಅಪಾಯವನ್ನು ಅಲ್ಲಗಳೆಯಲಾಗದಾದರೂ ಭೂಮಿಯನ್ನೇ ನುಂಗಿಬಿಡುವಷ್ಟು ಆ ಪ್ರಯೋಗವು ತೀವ್ರವಾಗಲು ಸಾಧ್ಯವಿಲ್ಲ.
 
   ಜೀವರಾಶಿ ಸಹಿತ ಬ್ರಹ್ಮಾಂಡದ ಸೃಷ್ಟಿಯನ್ನೇ ಮಾನವನಿಗೆ ’ಅನುಕೂಲಕರ’ವಾಗಿ ಮಾರ್ಪಡಿಸುವ ಯತ್ನ ಇಂದು ನಡೆಯುತ್ತಿದೆ. ಹಾಗೆ ಪ್ರಕೃತಿನಿಯಮಕ್ಕೆ ವಿರುದ್ಧವಾಗಿ ಸಾಗಿದಾಗ, ’ಸ್ಥಿತಿ’ಯನ್ನು ಅಂತರಗೊಳಿಸಲು ಹೊರಟಾಗ, ’ಲಯ’ ಸರ್ವಥಾ ಸಂಭಾವ್ಯ. ಆದರೆ, ’ಲಯ’ವೆಂಬುದು ದಿಢೀರನೆ ಘಟಿಸುವುದು ಅಸಾಧ್ಯ. ವಿಜ್ಞಾನದ ಸ್ಥಾಪಿತ ನಿಯಮಗಳು ಈ ಆತಂಕಕ್ಕೆ ಪುಷ್ಟಿ ನೀಡುವುದಿಲ್ಲ.

  ಅಷ್ಟಗ್ರಹಕೂಟದಿಂದಾಗಿ ಭೂಮಿ ಪ್ರಳಯವಾಗಿಹೋಗುತ್ತದೆಂದು ನಂಬಿಸುವ ಯತ್ನ ದಶಕಗಳ ಕೆಳಗೆ ನಡೆದಿತ್ತು. ಕೆಲವು ಮುಗ್ಧರು ಆ ಸಂದರ್ಭದಲ್ಲಿ ಮನೆಮಠ ಮಾರಿ ಸಂಪತ್ತನ್ನೆಲ್ಲ ದಾನಮಾಡಿ ದೇವರ ಭಜನೆಮಾಡುತ್ತ ಪ್ರಳಯವನ್ನು ಎದುರುನೋಡುತ್ತ ಕುಳಿತರು! ಪ್ರಳಯ ಸಂಭವಿಸಲಿಲ್ಲ, ಮನೆಮಾರು ಕಳೆದುಕೊಂಡವರು ಮಂಗ ಆದರು ಅಷ್ಟೆ!

  ಅದಾದ ನಂತರ ಮತ್ತೊಮ್ಮೆ, ’ಕೆಲವೇ ವರ್ಷಗಳಲ್ಲೇ ಮಹಾಪ್ರಳಯ ಸಂಭವಿಸುತ್ತದೆ’, ಎಂಬರ್ಥದಲ್ಲಿ ಕನ್ನಡದ ಪ್ರಸಿದ್ಧ ವಾರಪತ್ರಿಕೆಯೊಂದರಲ್ಲಿ ಮುಖಪುಟ ಲೇಖನ ಪ್ರಕಟವಾಯಿತು. ಅದನ್ನು ಸಕಾರಣ ಅಲ್ಲಗಳೆದು ಅದೇ ಪತ್ರಿಕೆಯಲ್ಲೇ ನಾನೂ ಲೇಖನ ಪ್ರಕಟಿಸಿದೆ. ಮಹಾಪ್ರಳಯವಾಗುವುದೆಂದು ಪತ್ರಿಕೆಯು ಸೂಚಿಸಿದ ವರ್ಷಗಳಲ್ಲಿ ನಾನು ಪತ್ರಿಕೆಯು ಹೇಳಿದ ಸ್ಥಳವಾದ ಗುಜರಾತ್ ಸಮುದ್ರತೀರಕ್ಕೇ ಹೋಗಿ ವಾಸವಾಗಿದ್ದೆ! ಅದಾಗಲೇ ಗುಜರಾತ್‌ನ ಆ ಭಾಗಗಳಿಗೂ ಈ ’ಭವಿಷ್ಯ’ದ ಸುದ್ದಿ ತಕ್ಕಮಟ್ಟಿಗೆ ತಲುಪಿಬಿಟ್ಟಿತ್ತು!

  ’ಮಹಾಪ್ರಳಯವೇನೂ ಆಗುವುದಿಲ್ಲ, ಆದರೆ ಚಂಡಮಾರುತ, ಪ್ರವಾಹ, ಬೃಹತ್ ಭೂಕಂಪಗಳು ಸಂಭವಿಸಬಹುದು’, ಎಂದು ಅಲ್ಲಿನ ಜನರಿಗೆ ನಾನು ಕಾರಣಸಹಿತ ವಿವರಿಸಿದೆ. ೨೦೦೧ರ ಜನವರಿ ೨೬ರಂದು ಗುಜರಾತ್‌ನಲ್ಲಿ ಬೃಹತ್ ಭೂಕಂಪ ಘಟಿಸಿದುದು ಸರ್ವವಿದಿತ.

  ನಾನೇನೂ ಜ್ಯೋತಿಷಿಯಲ್ಲ. ವೈಜ್ಞಾನಿಕ ದೃಷ್ಟಿ, ವಿಚಾರಶೀಲ, ಸಾಮಾನ್ಯಜ್ಞಾನ ಮತ್ತು ತಕ್ಕಮಟ್ಟಿನ ವಿಜ್ಞಾನದರಿವು ನಮಗಿದ್ದರೆ ಆಗ ನಮ್ಮನ್ನು ಉತ್ಪ್ರೇಕ್ಷಿತ ಭವಿಷ್ಯನುಡಿಗಳು ಅಧೀರರನ್ನಾಗಿಸವು.

   ದೇವರು, ಸೃಷ್ಟಿಕರ್ತ, ಜಗನ್ನಿಯಾಮಕ, ಜಗದ್ರಕ್ಷಕ ಎಂಬ ಭಾವನೆಗಳ ಆಸರೆಯಲ್ಲಿ, ನಂಬಿಕೆಯ ನೆರಳಿನಲ್ಲಿ, ತನ್ಮೂಲಕ ಒದಗುವ ಧೈರ್ಯದ ಬಲದಿಂದ ಇಂದು ಮಾನವ ಸಂಕುಲ ಜೀವಿಸುತ್ತಿದೆ. ಈ ನಂಬಿಕೆಗೆ ಪೆಟ್ಟು ಬೀಳದಿರುವುದೇ ಕ್ಷೇಮ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet