```ಮಳೆ ಹೊಯ್ಯುತಿದೆ```

```ಮಳೆ ಹೊಯ್ಯುತಿದೆ```

ನಿನ್ನೆ ಸಂಜೆ, ಕಿಟಕಿಯ ಹೊರಗೆ ಸಣ್ಣಗೆ ಮಳೆ.. ಬೆಂಗಳೂರಿಗೆ ತುಂತುರು ಸ್ನಾನ, ಬಹಳ ದಿನಗಳನಂತರ ಸಂಜೆಯ ಹೊತ್ತು ನೀರ ಸಿಂಚನ. ನನಗೆ ಮಳೆ ಅಂದರೆ ಯಾವತ್ತೂ ಇಷ್ಟ.. ಅದರಲ್ಲೂ ಇಂತಹ ತುಂತುರು ಮಳೆಯಲ್ಲಿ ನೆನೆಯುತ್ತಾ ನಡೆಯುವುದು..ಆಹ್!
ಮಳೆ ಬಂದ ದಿನ ಮನಸ್ಸು ಪ್ರಫುಲ್ಲ! ವರ್ಷಧಾರೆಗೆ ಮನದ ದುಗುಡವನ್ನ, ಬೇನೆ- ಬೇಸರವನ್ನ ಅರ್ಥ ಮಾಡಿಕೊಂಡು ನಮ್ಮನ್ನ ಸರಿಯಾದ ಲಹರಿಗೆ ತಂದು ನಿಲ್ಲಿಸುವ ಶಕ್ತಿ ಇದೆ. ಮಳೆಯನ್ನ ಸಹೃದಯರೆಲ್ಲ ಪ್ರೀತಿಸುತ್ತಾರೆ ಮತ್ತು ಮಳೆ ಪ್ರೀತಿಸುವುದನ್ನ ಕಲಿಸುತ್ತದೆ!
ಪ್ರಾಥಮಿಕ ಶಾಲೆಯ ಕಾಲದಲ್ಲಿ ಹರಿಯೋ ಕೆಂಪು ನೀರಲ್ಲಿ ಮಾಡಿ ಬಿಟ್ಟ ಕಾಗದದ ದೋಣಿ ಮತ್ತು ಆ ಗೆಳೆಯರು, ಕೆಸರು ನೀರಲ್ಲಿ ಆಟವಾಡಿ ಬಂದು ಅಮ್ಮನ ಕೈಲಿ ಬೈಸಿಕೊಂಡಿದ್ದು, ಒದ್ದೆ ಮಾವಿನಮರ ಹತ್ತಿ ಜಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದು, ಒಡೆದ ಹಂಚಿನ ಸಂದಿಯಿಂದ ಬೀಳುತ್ತಿದ್ದ ನೀರ ಅಡಿಯಲ್ಲಿಟ್ಟ ಪಾತ್ರೆ, ಮನೆಯ ಅಂಗಳದ ತುಂಬ ನೀರು ನಿಂತು ನಿರ್ಮಾಣವಾದ ಪುಟ್ಟ ಕೆರೆ, ಧೋ ಅಂತ ಮಳೆ ಹೊಯ್ಯುವಾಗ ಮನೆ ಒಳಗೆ ಬೆಚ್ಚಗೆ ಕೂತು ತಿಂದ ಹಲಸಿನ ಹಪ್ಪಳ...
ಹುಚ್ಹಾಪಟ್ಟೇ ಮಳೆ ಬಂದು ಕರೆಂಟಿಲ್ಲದೆ ಕಳೆದ ಕಗ್ಗತ್ತಲ ರಾತ್ರಿ..ಅಪ್ಪನ ಗಾಡಿಯ ಹಿಂದೆ ಕೂತು ಅರೆ ಬರೆ ಒದ್ದೆಯಾಗಿ ಮನೆಗೆ ಬಂದ ಸಂಜೆ, ಮಳೆಯೊಳಗೇ ಆಡಿದ ಫುಟ್ಬಾಲು ಆಟ.. ಪ್ರೀತಿಸಿದ ಜೀವದ ಜೊತೆ ಮಳೆಯೊಳಗೆ ಮಳೆಯಾಗಿ ನಡೆದ ಘಳಿಗೆ...
ಇವೆಲ್ಲ ನೆನಪಾಗುವುದಿಲ್ಲವೇ ಸ್ನೇಹಿತರೇ ನಿಮಗೂ... ನನ್ನ ಹಾಗೆ!
ನೆನಪಿನ ಬುತ್ತಿಯನ್ನ ಬಿಚ್ಚಿಸುತ್ತಾನೆ ಮಳೆರಾಯ,ನಮಗೇ ತಿಳಿಯದಂತೆ..

ಮಳೆಯೇ ನಿನ್ನಯ ಮಾಯೆಗೆ ನಮನ!

Rating
No votes yet

Comments