ಕೊಲೆಗಾರನ ಕಳವಳ

ಕೊಲೆಗಾರನ ಕಳವಳ

ಬರಹ

ನಿನ್ನೆ ರಾತ್ರಿ ಏನಾಯಿತೆಂದರೆ....
ಇಲ್ಲ, ಹೆದರಬೇಡಿ, ಅಂಥದ್ದೇನೂ ಆಗಲಿಲ್ಲ-
ಹೇಳಿಕೊಳ್ಳುವಂತದ್ದು;
ಆದರೆ ತಾಳಿಕೊಳ್ಳಲೂ ಆಗಲಿಲ್ಲ-
ಬಾಳೆಕಾಯಿ ಶೆಟ್ಟಿ ಎಂಬ ಹಸಿರು ಹುಳ
ನಾನು ದೀಪವಾರಿಸಿ ಮಲಗಿದ ಮೇಲೆ ಒಳ
ಬಂದು ಪಟಪಟ ಶಬ್ದ ಮಾಡುತ್ತಾ
ನನಗೆ ಕಾಟ ಕೊಡಲು ಶುರುವಿಟ್ಟಾಗ.

ಮೊಬೈಲಿನ ದೀಪ ಹೊತ್ತಿಸಿ
ಕೈಗೆ ಸಿಕ್ಕ ಪೇಪರು ಬಳಸಿ
ಕೈಬೀಸಿ ಜಾಡಿಸಿದಾಗ ಶತ್ರು
ಒಂದೇ ಹೊಡೆತಕ್ಕೆ ನೆಲಕಚ್ಚಿ ಬಿದ್ದು
ವಿಲವಿಲನೆ ಒದ್ದಾಡುವ ಸದ್ದು
ಕೇಳುತ್ತಿರಲು, ನಾನು ಯುದ್ಧ ಗೆದ್ದ
ಖುಷಿಯಲ್ಲಿ, ಹೊದ್ದು ನಿದ್ದೆ ಹೋದೆ.

ಬೆಳಗ್ಗೆ ಎದ್ದು ನೋಡುತ್ತೇನೆ:
ಪಕ್ಕದಲ್ಲೇ ಹೆಣ!
ಅದನ್ನು ಸಾಗಿಸಲು ಹೆಣ-
ಗಾಡುತ್ತಿರುವ ಇರುವೆಗಳ ಬಣ!
ಮಣಭಾರದ ಈ ದೇಹವನ್ನು
ಸಣಕಲು ಇರುವೆಗಳು ಹೇಗಾದರೂ
ಸಾಗಿಸುತ್ತವೋ ಎಂದು ಯೋಚಿಸುತ್ತಾ,
ರೂಮಿನ ಕಸ ಗುಡಿಸದೇ ಹಾಗೇ
ಆಫೀಸಿಗೆ ಬಂದೆ.

ಸಂಜೆ ರೂಮಿಗೆ ಮರಳಿ ನೋಡಿದರೆ
ಹೆಣವೂ ಇಲ್ಲ; ಇರುವೆಗಳೂ ಇಲ್ಲ!
ಏನಾಯಿತು ಹೋಗಿ ವಿಚಾರಿಸೋಣವೆಂದರೆ
ಅವುಗಳ ಗೂಡಿನ ವಿಳಾಸ ನನಗೆ ಗೊತ್ತಿಲ್ಲ

ನಾನು ಕೊಲೆಗಾರನೆಂಬ ಭಾವ ಆವರಿಸಿಕೊಳ್ಳತೊಡಗಿತು...

ಏಕೆ ಬಂದಿತ್ತು ಅದು ನನ್ನ ರೂಮಿಗೆ?
ಅದು ಸತ್ತ ಸುದ್ದಿ ಹೇಗೆ ತಿಳಿಯಿತೋ ಇರುವೆಗಳ ಟೀಮಿಗೆ?

ಬಾಳೆಕಾಯಿ ಶೆಟ್ಟಿ ಸತ್ತದ್ದೇನು ಸುದ್ದಿಯಲ್ಲ ಬಿಡಿ
ಕೊಲೆ ಮಾಡಿದ್ದಕ್ಕೆ ನನಗೆ ಯಾರೂ ತೊಡಿಸುವುದಿಲ್ಲ ಬೇಡಿ
ಗೂಡಿನಲ್ಲಿ ಇರುವೆಗಳೆಲ್ಲಾ ಘರಮ್ ಬಿರಿಯಾನಿ ಮಾಡಿ
ತಿಂದು ತೇಗಿರಬಹುದು;
ಆದರೆ ಅದಲ್ಲ ವಿಷಯ-

...ನಿನ್ನೆ ರಾತ್ರಿ ಬಂದ ನಿದ್ದೆ ಇವತ್ಯಾಕೆ ಬರುತ್ತಿಲ್ಲ ನನಗೆ?

(14.09.2006; ರಾತ್ರಿ 12:30)