ಬೆಳಗಿನ ಕೆಲ ಪಲಕುಗಳು....
೧) ನಿಶೆಯ ಆ ತೆಕ್ಕೆಯಲಿ
ಅದೋ ಆ ಮೊಗ್ಗಿನಲಿ ಅನೇಕ
ಕನಸುಗಳು ಪಲ್ಲವಿಸುತಿವೆ….
ಬೆಳಕೆ ನೀ ತೂರಿ ಬಂದು
ಸ್ವಪ್ನಭಂಗ ಮಾಡಬೇಡ…..
೨) ಹೂ ಬೆಳದಿಂಗಳು ಬಿಟ್ಟು ಹೋದ
ದಾವಣಿ ಧರಿಸಿದೆ…
ರಾತ್ರಿಯಿಡೀ ಉದುರಿದ ನಕ್ಷತ್ರ
ಇಬ್ಬನಿಯಾಗಿ ಹರಡಿದೆ..
ಹಾಸಿಗೆಯಲಿ ನಿನ್ನ ಮಲ್ಲಿಗೆ ಎಸಳು…
ಈ ಬೆಳಗು ಮತ್ತೆ ರಾತ್ರಿಯ ಧೇನಿಸಿದೆ….!
೩) ನಿನ್ನ ತೋಳಬಂದಿ ಸಡಲಿಸಿದೆ..
ಮೈ ಇಡೀ ಆವರಿಸಿದ ಗಂಧ ಕಳಚಿದೆ..
ಬೆಳಕು ಸೂಸಿ ನಿಶೆ ಕಳೆದಿದೆ…
ಆದರೇನು ನಶೆ ಇಳಿಯದಾಗಿದೆ……!
೪) ತಂತಿ ಮೀಟಿ ಮೀಟಿ ನೀ ರಾತ್ರಿಯಿಡಿ ಹಾಡಿದೆ
ಗಜಲ್….
ನಿನ್ನ ನಳಿದೋಳು,,,ಉಗುರಿನ ಮೊನಚು…
ಬೆಳಗು ಹರಿದಿದೆ ನಿಜ…
ನುಡಿದ ಗಜಲಿನ ಘಮ ಆವರಿಸಿದೆ ಇನ್ನೂ….!
೫) ಫಕ್ಕನೇ ಎಚ್ಚರವಾಯಿತು …
ನಿನ್ನ ರೇಶಿಮೆ ಅಪ್ಪುಗೆ ಕಳಚಿತು…
ಕೆದರಿದ ಮುಂದೆಲೆ ಹರಡಿದ ಕುಂಕುಮ…
ಬೆಳಗಿದು ರಾತ್ರಿಯ ಕವಿತೆಗೆ ಬೆನ್ನುಡಿ ಬರೆದಿತ್ತು….
೬) ಇವಳ ತುಟಿಯಿಂದ ಜೇನು ಒಸರಿಸಿದೆ..ಇನ್ನೂ
ಸುಖದ ಅಮಲು ನಿದ್ದೆಯಲೂ ಹೊಳೆಯುತಿದೆ ಇನ್ನೂ
ನಿಶಿಗಂಧ ಕಳಚಿಕೊಳ್ಳದಿರು ಈಗಲೇ….
ಬೆಳಗಾಗಲು ಸಮಯವಿದೆ…..ಇನ್ನೂ….!
Comments
ಉ: ಬೆಳಗಿನ ಕೆಲ ಪಲಕುಗಳು....
ಉ: ಬೆಳಗಿನ ಕೆಲ ಪಲಕುಗಳು....
ಉ: ಬೆಳಗಿನ ಕೆಲ ಪಲಕುಗಳು....