ದೊಡ್ಡೋರ್ಯಾಕೆ ಹಿಂಗೆ?- ಬ್ರಾಹ್ಮಿ ಮುಹೂರ್ತದ ಟಾರ್ಚರ್!
ಚಿಕ್ಕಂದಿನಿಂದ ದೊಡ್ದೋರ ಯೋಜನೆಗೆಳು, ಚಿಂತನೆಗಳು,ನಂಬಿಕೆಗಳು , ತಿಕ್ಕಲುತನಗಳು ಎಳೆಯರ ಬದುಕಿಗೆ ಹೊಸ ಆಯಾಮಗಳನ್ನು ನೀಡುವುದನ್ನು ನೋಡಿದ್ದೇನೆ. ಆಗಿನ ಮುಗ್ಧ ಕಣ್ಣುಗಳಿಂದ ನೋಡಿದ್ದನ್ನು ಈಗಿನ ವಿಷ್ಲೇಷಣೆಯೊಂದಿಗೆ ಮುಂದೊಂದು ದಿನ ನಾನೂ ಆ ದೊಡ್ಡವರಲ್ಲೊಬ್ಬನಾಗಬಹುದೆಂಬ ಎಚ್ಚರಿಕೆಯೊಂದಿಗೆ ನೆನಪಿನಿಂದ ಹೆಕ್ಕಿ ಇಲ್ಲಿಡುತ್ತಿದ್ದೇನೆ
ಯಾವ ಕಾರ್ಯಕ್ರಮದಲ್ಲಾದರೂ ಪಿಸ್ಕಾಲಾಜಿಸ್ಟುಗಳಿಗೆ(psychologists), ಮಕ್ಕಳ ವೈದ್ಯರುಗಳಿಗೆ ಅಪ್ಪ ಅಮ್ಮಂದಿರು ಕೇಳೋದು ಒಂದೇ ಪ್ರಶ್ನೆ. ಮಕ್ಕಳು ಹೆಚ್ಚು ಮಾರ್ಕ್ಸು ತೆಗೆಯುವುದು ಹೇಗೆ?
ಆ ಹಲ್ಕಾ ಮುಂಡೆ ಮಕ್ಕಳು (ಈ ರೀತಿ ಬೈಯ್ಯಬೇಕಾದರೆ ನನಗೆಷ್ಟು ಆಕ್ರೋಶ ಇದ್ದಿರಬಹುದು ಇವರ ಬಗ್ಗೆ!) ಹೇಳುತ್ತಿದ್ದುದು ಒಂದೇ ಉತ್ತರ, ಬೆಳಿಗ್ಗೆ ನಾಲ್ಕಕ್ಕೋ ಐದಕ್ಕೊ ಎದ್ದು ಓದುವುದು. ಆಗ ಮೈಂಡು ಫ್ರೆಶ್ ಆಗಿರುತ್ತದೆ. ವಾತಾವರಣ ಶಾಂತವಾಗಿರುತ್ತದೆ. ಬೆಳಿಗ್ಗೆ ಓದಿದರೆ ಬೇಗ ತಲೆಗ ಹತ್ತುತ್ತದೆ.
ಈ ತಿಯರಿಯನ್ನು ಯಾವ ಲ್ಯಾಬಿನಲ್ಲಿ ಟೆಸ್ಟ್ ಮಾಡಿ ಅಪ್ರೂವ್ ಮಾಡಲಾಗಿದೆಯೋ ಅರಿಯೆ! ಇಂಥ ಮನೆಹಾಳ ಐಡಿಯಾಗಳು ಈ ವೈದ್ಯರಿಗೆ ಎಲ್ಲಿಂದ ಹೊಳೆಯುತ್ತವೆಯೋ ಕಾಣೆ. ಎಲ್ಲರ ಬಗ್ಗೆ ಗೊತ್ತಿಲ್ಲ, ನಾನಂತೂ ಇದರಿಂದ ಅನುಭವಿಸಿದ್ದು ಬಹಳ.
ಬೆಳಗಿನ ಜಾವ ಇವರಿಗೆ ಬೇಗ ತಲೆಗೆ ಹತ್ತಿಬಿಟ್ಟರೆ ಎಲ್ಲರಿಗೂ ಹತ್ತುತ್ತದೆ ಎಂದುಕೊಂಡಿದ್ದಾರೆ! ಆಣೆ ಮಾಡಿ ಹೇಳುತ್ತೇನೆ ಇಲ್ಲಿಯವರೆ ಬೆಳಗಿನ ಜಾವ ಓದಿದ್ದು ನನಗೆ ಎಂದೂ ತಲೆಗೆ ಹತ್ತಿಲ್ಲ. ನೂರಾರು ಸಾರಿ ಪ್ರಯತ್ನಿಸಿ ಆಯಿತು.ನನ್ನ ತಲೆ ಚುರುಕಾಗುವುದೇ ರಾತ್ರಿ ಹತ್ತು ಗಂಟೆಯ ನಂತರ. ಇಡೀ ದಿನ ಒದ್ದಾಡಿ ಅರಗಿಸಿಕೊಳ್ಳುವುದಕ್ಕಿಂತ ಅನೇಕ ಪಟ್ಟು ಹೆಚ್ಚು ರಾತ್ರಿ ಎರಡು ಮೂರು ತಾಸುಗಳಲ್ಲಿ ಅರಗಿಸಿಕೊಂಡಿದ್ದೇನೆ.
ಆದರೆ ಈ ಮೂಢನಂಬಿಕೆಗೆ ಬಲಿಯಾದವರಲ್ಲಿ ನಮ್ಮಪ್ಪ ಅಮ್ಮನೂ ಒಬ್ಬರು. ನಾನು ಬೆಳಿಗ್ಗೆ ಬೇಗ ಎದ್ದು ಓದಬೇಕೆಂಬ ಹಟ ಅವರಿಗೆ ಯಾಕೆ ಇತ್ತೊ ಇನ್ನೂ ನನಗೆ ಗೊತ್ತಾಗುತ್ತಿಲ್ಲ. ನಾನೇನೂ ಕಡಿಮೆ ಮಾರ್ಕ್ಸು ತೆಗೆಯುತ್ತಿದ್ದಿಲ್ಲ. ಮೊದಲನೆಯ ರ್‍ಯಾಂಕೇ ಬರುತ್ತಿದ್ದೆ. ತೊಂಬತ್ತೈದಕ್ಕಿಂತ ಕಡಿಮೆ ತೆಗೆದದ್ದಿಲ್ಲ. ಆದರೂ ನಾನೇಕೆ ಬೆಳಿಗ್ಗೆ ಬೇಗ ಏಳಬೆಕೆಂಬುದು ನನಗೆ ಅರ್ಥವಾಗುತ್ತಿದ್ದಿಲ್ಲ. ಎದ್ದರೂ ಜಪ್ಪಯ್ಯ ಅಂದರೂ ಒಂದಕ್ಷರವೂ ತಲೆಗೆ ಹೋಗುತ್ತಿದ್ದಿಲ್ಲ. ಸಾಲದೆಂಬಂತೆ ಮನೆಗೆ ಬಂದವರೆಲ್ಲ ಲೆಕ್ಚರ್ ಕೊರೆಯುತ್ತಿದ್ದರು. ಟೈಮ್ ಟೇಬಲ್ ಬೇರೆ! ಆರಕ್ಕೆ ಏಳು. ಒಂದು ಚೆಂಬು ನೀರು ಕುಡಿ. ಎರಡು ತಾಸು ಓದು. ನಂತರ ಸ್ನಾನ ಮಾಡು ಇತ್ಯಾದಿ. ಆದರೂ ತಲೆಯಲ್ಲಿ ಕೊರೆಯುತ್ತಿದ್ದುದೆಂದರೆ ತರಗತಿಗೆ ಮೊದಲ ತಾಣದಲ್ಲಿದ್ದರೂ ಯಾಕೆ ನಾನು ಬೆಳಿಗ್ಗೆ ಎದ್ದು ಕಷ್ಟ ಪಡಬೇಕು? ಅಂತ.
ನಾನೂ ಭಂಡ. ಏನೆಂದರೂ ಏಳುತ್ತಿರಲಿಲ್ಲ.(ಈಗಲೂ ಏಳುವುದಿಲ್ಲ. ಲೆಕ್ಚರ್ ಇನ್ನೂ ಮುಗಿದಿಲ್ಲ) ಒಂದೆರಡು ಬಾರಿ ಬೇಗ ಎದ್ದವನು ಏನೊ ಕಿತಾಪತಿ ಮಾಡಲು ಹೋಗಿ ವಿದ್ಯುತ್ ಶಾಕ್ ಹೊಡೆಸಿಕೊಂಡುಬಿಟ್ಟೆ. ಶಾಕ್ ಹೊಡೆಸಿಕೊಂಡರೆ ನನ್ನದು ದೊಡ್ಡ ರಂಪ. ಅಕ್ಕಪಕ್ಕದವರೆಲ್ಲ ಓಡಿ ಬರುತ್ತಿದ್ದರು. ನಾನು ಬೇಗ ಎದ್ದರೆ ಅದು ಶಾಕ್ ಹೊಡೆಸಿಕೊಳ್ಳುವುದಕ್ಕಾಗಿಯೇ ಎಂದು ಪ್ರಚಲಿತವಾಯಿತು. ಆಗಿನಿಂದ ಸಲ್ಪ ಈ ಬೇಗ ಏಳುವ ಹಿಂಸೆ ಕಡಿಮೆಯಾಯಿತು.
ನಯನ್ ಕುಮಾರ್ ಎಂಬ ಟಾರ್ಚರ್:
ನಯನ್ ಕುಮಾರನಿಗೆ ಮೊದಲ ಸ್ಥಾನ ಪಡೆಯಬೇಕೆಂಬ ಚಟ ತಲೆಯೇರಿಬಿಟ್ಟಿತ್ತು. ಇದಕ್ಕಾಗಿ ಹಗಲೂ ರಾತ್ರಿ ಓದತೊಡಗಿದ. ಆದರೂ ನನ್ನಿಂದ ಮೊದಲ ಸ್ಥಾನ ಕಸಿದುಕೊಳ್ಳಲು ಆಗಲಿಲ್ಲ. ಮನೆಯಲ್ಲಿ ಬೆಳಿಗ್ಗೆ ಮೂರಕ್ಕೆದ್ದು ಓದುತ್ತಿದ್ದನಂತೆ. ಅವರ ದೊಡ್ಡಪ್ಪ ಹೇಳುತ್ತಿದ್ದರು. ಸರಿ ಓದಲಿ. ಆದರೆ ಈ ಪುಣ್ಯಾತ್ಮ ನಾಲ್ಕೂವರೆ ಜಾವಕ್ಕೆ ನನ್ನ ಮನೆಗೆ ಕರೆ ಮಾಡಿ ಓದಿನ ಬಗೆಗಿನ ಅನುಮಾನಗಳನ್ನು ಪರಿಹರಿಸಿಕೊಳ್ಳುತ್ತಿದ್ದ. ನಾನು ನಿದ್ದೆಯಲ್ಲೇ ಅವನಿಗೆ ಪರಿಹಾರ ಹೇಳಿ ಮತ್ತೆ ಮಲಗುತ್ತಿದ್ದೆ.
ನಿದ್ದೆಯಲ್ಲಿಯೇ ಎಲ್ಲವನ್ನೂ ಹೇಳುತ್ತಾನಲ್ಲ ನಮ್ಮ ಮಗ ಎಂದು ನಮ್ಮ ಅಪ್ಪ ಅಮ್ಮ ಖುಶಿ ಪಡುತ್ತಿದ್ದಿಲ್ಲ. ಬದಲಾಗಿ ಅಪ್ಪ "ಜನ ಮುಂಜೆಲೆ ಎದ್ದು ಕಷ್ಟ ಪಟ್ಟು ಓದುತ್ತಾರಾ...ತಿಳಿತಾರ...ಈ ಬದ್ಮಾಸ್ ಸೂಳೆಮಗ ಕ್ವಾಣ ಬಿದ್ದಂಗ ಬಿದ್ದಿರ್ತಾನ" ಎಂದು ಬೈದರೆ ಅಮ್ಮ "ಓದಬಕ ಮುಂದ ಬರಬಕು ಅನ್ನ ಛಲನ ಇಲ್ಲ ಅದಕ್ಕ, ಮಕಳಕ ಸಾಯ್ತತಿ" ಎಂದು ಸುಪ್ರಭಾತ ಹಾಡುತ್ತಿದ್ದರು. ನಾನು ಕೇರ್ ಮಾಡುತ್ತಿರಲಿಲ್ಲ. ಹಾಯಾಗಿ ನಿದ್ದೆ ಹೋಗುತ್ತಿದ್ದೆ. ಕೊನೆಗೆ ಇವನ ಕಾಟ ತಾಳಲಾರದೆ ಒಮ್ಮೆ ಶಾಲೆಯಲ್ಲಿ ಗದರಿಸಿ "ಇನ್ನೊಮ್ಮೆ ಫೋನ್ ಮಾಡಿದರೆ ಹುಷಾರ್!" ಎಂದು ಎಚ್ಚರಿಕೆ ಕೊಟ್ಟೆ. ಅವನ ಕಾಟವೇನೊ ನಿಂತಿತು. ಅಪ್ಪ ಅಮ್ಮ ಇದ್ದರಲ್ಲ ಆಗಾಗ ಕೇಳುತ್ತಿದ್ದರು "ಯಾಕೆ ನಯನ್ ಫೋನ್ ಮಾಡ್ತಿಲ್ಲವಲ್ಲ?"
ನಾನೇ ಕ್ಲಾಸಿಗೆ ಮೊದಲನೆಯವನಾದರೂ ನನ್ನ ಅಪ್ಪ ಅಮ್ಮ ಇಷ್ಟು ಅತೃಪ್ತ ಆತ್ಮಗಳಂತೆ ಯಾಕೆ ಆಡುತ್ತಿದ್ದರು ಎಂದು ನನಗೆ ಈಗಲೂ ಅರ್ಥ ಆಗುತ್ತಿಲ್ಲ!