ನಾವೇಕೆ ಹೀಗೆ?

ನಾವೇಕೆ ಹೀಗೆ?

ಬರಹ

ಮೊನ್ನೆ ಬಿಜಾಪುರದ ಪ್ರವಾಸ ಕೈಗೊಂಡಿದ್ದಾಗ ಅಲ್ಲಿನ ತಾಜ್ ಬಾವಡಿ ನೋಡಿ ಮನಸ್ಸಿಗೆ ಬಲು ಖೇದ ಎನಿಸಿತು. ಒಂದು ಕಾಲಕ್ಕೆ ಇಡೀ ಬಿಜಾಪುರ ನಗರಕ್ಕೆ  ಕುಡಿಯುವ ನೀರು ನೀಡುತ್ತಿದ್ದ ಈ ಬೃಹತ್ ಕೊಳ ಇಂದು ತಲುಪಿರುವ ಚಿಂತಾಜನಕ  ಸ್ಥಿತಿ ನೋಡಿದ ಯಾರ  ಸಂವೇದನಶೀಲ ಮನಸ್ಸಿಗಾದರೂ ತಾಕದೆ ಇರದು. ನಾವೇಕೆ ನಮ್ಮ ಇತಿಹಾಸದ ಅತ್ಯಮೂಲ್ಯ ವಸ್ತು ವಿಷಯಗಳಲ್ಲಿ ನಿರ್ಲಿಪ್ತರಾಗಿದ್ದೇವೆ.

ಕೇವಲ ಇದೊಂದೇ ಅಲ್ಲ, ನಮ್ಮ   ಅನೇಕ ನಗರ, ಹಳ್ಳಿಗಳಲ್ಲಿರುವ ದೇವಸ್ಥಾನ, ಶಾಸನ, ಶಿಲ್ಪ, ಪ್ರತಿಮೆ, ಮೊದಲಾದ   ಅನೇಕ ಐತಿಹಾಸಿಕ ಸ್ಮಾರಕಗಳು ಹಾಳಾಗಿರುವುದೇ ನಮ್ಮ ಜನರ ಬೇಜವಾಬ್ದಾರಿಯಿಂದ, ಅಜ್ಞಾನದಿಂದ. ನಮ್ಮಲ್ಲಿ ಗವಿಗಳಿವೆ,   ಪವಾಡಸದೃಶ ಶಿಲೆಗಳಿವೆ, ಮೂರ್ತಿಗಳಿವೆ, ಔಷಧಿಯುಕ್ತ ಬೆಟ್ಟಗಳು, ನದಿಗಳು, ಚಿಲುಮೆಗಳಿವೆ, ಜಲಪಾತಗಳಿವೆ, ಅಸಾಧಾರಣ ಕೌಶಲಪೂರಿತ ಕೆತ್ತನೆಗಳಿವೆ. ಆದರೆ ಎಲ್ಲವೂ ನಮ್ಮ ಮೌಢ್ಯದಿಂದ, ಅಜ್ಞಾನದಿಂದ, ನಿರಾದರಣೆಯಿಂದ  ಸಂರಕ್ಷಣೆಯಿಲ್ಲದೆ ಹಾಳಾಗುತ್ತಿದೆ.

ಚಿದಾನಂದ ಮೂರ್ತಿಯವರಂತೂ  ಹಂಪೆಯ ಕಲ್ಲು ಮಂಟಪಗಳು ಮುಸ್ಲಿಂ ದರ್ಗಾಗಳಾಗಿ ಪರಿವರ್ತನೆಯಾಗುತ್ತಿರುವುದನ್ನು ಪತ್ರಿಕೆಗಳಲ್ಲಿ ಬರೆಯುತ್ತಲೇ ಇರುತ್ತಾರೆ. ನಮ್ಮ ದೇಶದ ಭವ್ಯ ಇತಿಹಾಸ ನಮ್ಮ  ಅಮೂಲ್ಯ ಸಂಪತ್ತು. ಅದನ್ನು ಕಳೆದುಕೊಂಡರೆ ಮರಳಿ ದೊರಕದು. ಪಾಶ್ಚಾತ್ಯರನ್ನು ಈ ವಿಷಯದಲ್ಲಿ ನೋಡಿ ನಾವು ಕಲಿಯಬಹುದು. ಇಂಗ್ಲೆಂಡಿನಲ್ಲಿ ಅರಸೊತ್ತಿಗೆ ಹೋದರೂ ಅರಸರನ್ನು ಕಡೆಗಣಿಸಿಲ್ಲ. ಅರಮನೆಯನ್ನು ನಿರ್ಲಕ್ಷಿಸಿಲ್ಲ. ಯೂರೋಪ್, ಅಮೆರಿಕ ಮೊದಲಾದ ಕಡೆಗಳಿಂದ ಆಯಾದೇಶಗಳ ಪ್ರಾಕೃತಿಕ ಸಂಪತ್ತು ಲೂಟಿಯಾದ ವರದಿ ನಾವೆಂದೂ ಓದಿಲ್ಲ. ಅದೇ ನಮ್ಮಲ್ಲಿ ನಾವೇ ನಮ್ಮ ಮಣ್ಣು, ಕಲ್ಲು, ಖನಿಜ, ದಂತ, ಮರ, ಪ್ರಾಣಿಗಳ ಚರ್ಮ ಎಲ್ಲವನ್ನೂ ಬಿಡದಲೆ ದುಡ್ಡಿಗೆ ಮಾರಿಕೊಳ್ಳುತ್ತಿದ್ದೇವೆ. ಬೆಂಗಳೂರು, ಮೈಸೂರು ಹೆದ್ದಾರಿಯಲ್ಲಿ ಹಿಂದೆ ಇದ್ದ  ಅದೆಷ್ಟು ಕಲ್ಲು ಬೆಟ್ಟಗಳು ಇಂದು ನೆಲಸಮವಾಗಿದೆ ಎನ್ನುವುದು ಆ ದಾರಿಯಲ್ಲಿ ಪ್ರಯಾಣಿಸುವ ಎಲ್ಲರ ದೃಷ್ಟಿಗೂ ಸ್ಪಷ್ಟವಾಗಿ ಗೋಚರಿಸುತ್ತದೆ. ಹೀಗೇ ಇದು ಮುಂದುವರಿದರೆ ನಮ್ಮಲ್ಲಿನ ಎಲ್ಲ ಬೆಟ್ಟ ಗುಡ್ದಗಳೂ ಬೋಳಾಗುವ ದಿನ ದೂರವಿಲ್ಲ. ಮಂಗಳೂರಿನ ಪಣಂಬೂರು ಬಂದರಿನಲ್ಲಿ ರವಾನೆಗಾಗಿ ಕಾದಿರುವ ಬೃಹತ್ ಬಂಡೆಗಳೇ ಇದಕ್ಕೆ ಸಾಕ್ಷಿ.

ಟಿಪ್ಪುವಿನ ಖಡ್ಗ, ಗಾಂಧೀಜಿಯವರ ವಸ್ತುಗಳು ಮೊದಲಾದವುಗಳನ್ನು ಹರಾಜಿನಲ್ಲಿ ಕೋಟ್ಯಂತರ ಬೆಲೆ ತೆತ್ತು ಸ್ವಂತಕ್ಕೆ ಇಟ್ಟುಕೊಳ್ಳುವ ಮಂದಿ  ಅದೇ ಹಣವನ್ನು ಇಲ್ಲಿ ವಿನಿಯೋಗಿಸಿ, ಕೇಳುವವರೇ ಇಲ್ಲದೆ ಬಿದ್ದಿರುವ ಅಮೂಲ್ಯ ಸ್ಮಾರಕಗಳನ್ನು ಸಂರಕ್ಷಿಸಿದ್ದೇ ಆದಲ್ಲಿ ಅದೆಷ್ಟು ಕೋಟಿ ಮೌಲ್ಯದ ನಮ್ಮ ಇತಿಹಾಸವನ್ನು ಮುಂದಿನ ಪೀಳಿಗೆಯವರು ನೋಡುವ ಸೌಭಾಗ್ಯ ಹೊಂದುವರು ಎನ್ನುವುದನ್ನು ಅರಿಯಲಾರರೇ? ಇಂಥವರಿಗೆ ತಿಳಿಸಿ ಹೇಳುವವರಾರು?

ಇನ್ನು ಪ್ರವಾಸೋದ್ಯಮ ವಿಷಯಕ್ಕೆ ಬಂದರೆ, ಪಕ್ಕದ ಕೇರಳದಲ್ಲಿ ಕೇವಲ ಹಿನ್ನೀರು, ಸಮುದ್ರ ತೀರ, ಆಯುರ್ವೇದ  ಇಟ್ಟುಕೊಂಡು ಇಡೀ ವಿಶ್ವದಲ್ಲಿ ಆ ರಾಜ್ಯವೊಂದು ಅತ್ಯಂತ ಸುಂದರ ಪ್ರವಾಸೀ ತಾಣ ಎಂಬಂತೆ ಬಿಂಬಿಸಿದ್ದಾರೆ. ಅದನ್ನು ಹೋಲಿಸಿದರೆ ನಮ್ಮ ರಾಜ್ಯ ಯಾವುದರಲ್ಲಿ ಕಡಿಮೆ ಇದೆ. ಕೇರಳಕ್ಕೂ ಮಿಗಿಲಾದ ಸಮುದ್ರ ತೀರವಿದೆ, ಉದ್ದವಾದ ಪರ್ವತಶ್ರೇಣಿಯಿದೆ, ಇತಿಹಾಸ ಪ್ರಸಿದ್ದ ಗುಡಿ ಗೋಪುರಗಳಿವೆ, ದೇವಸ್ಥಾನಗಳಿವೆ, ಜಲಪಾತಗಳಿವೆ, ಅನೇಕ ರಾಜಮನೆತನಗಳು ಆಳಿ ಹೋದ ಪರಂಪರೆಯಿದೆ, ಜೊತೆಗೆ ಆಧುನಿಕ ತಂತ್ರಜ್ಞಾನ, ಸಾಧನೆಗಳೂ ಸೇರಿವೆ. ಇವೆಲ್ಲ ಇದ್ದೂ ನಮ್ಮನ್ನು ನಾವು ಸಮರ್ಥವಾಗಿ ಬಿಂಬಿಸಿಕೊಳ್ಳಲು ಅಸಮರ್ಥರಾಗಿದ್ದೇವೆ, ವಿಫಲರಾಗಿದ್ದೇವೆ ಎಂದರೆ ಕನ್ನಡಿಗರ ಬಗ್ಗೆ ಏನು ಹೇಳಬಹುದು?

ಏಕೆ ಹೀಗೆ, ಇದು ಹೀಗೇ ಮುಂದುವರಿಯಬೇಕೆ, ಈ ಕುರಿತು ನಾವೇಕೆ ಆಲೋಚಿಸುತ್ತಿಲ್ಲ?