ಪ್ರೀತಿ Vs ಮದುವೆ
ಪ್ರೀತಿ ಎಂದರೆ ರಸ್ತೆಗಳೆಲ್ಲಿ ಒಬ್ಬರಿಗೊಬ್ಬರು ಕೈ ಕೈ ಹಿಡಿದು ಓಡಾಡುವದು
ಮದುವೆ ಎಂದರೆ ಅದೇ ರಸ್ತೆಗಳಲ್ಲಿ ನಿಂತು ಒಬ್ಬರಿಗೊಬ್ಬರು ವಾದಿಸುವದು
ಪ್ರೀತಿ ಎಂದರೆ ಇಬ್ಬರೂ ಕೂಡಿ ತಮಗಿಷ್ಟವಾದ ಹೋಟೆಲ್‍ನಲ್ಲಿ ಊಟ ಮಾಡುವದು
ಮದುವೆ ಎಂದರೆ ಇಬ್ಬರೂ ತಮಗಿಷ್ಟವಾದುದನ್ನು ತಮಗಿಷ್ಟ ಬಂದ ಕಡೆ ತಿನ್ನುವದು
ಪ್ರೀತಿ ಎಂದರೆ ಸೋಫಾದ ಮೇಲೆ ಒಬ್ಬರೊನ್ನೊಬ್ಬರು ಬೆಚ್ಚಗೆ ತಬ್ಬಿಕೊಂಡು ಲಲ್ಲೆಗರೆಯುವದು
ಮದುವೆ ಎಂದರೆ ಅದೇ ಸೋಫಾದ ಮೇಲೆ ವ್ಯಾಜ್ಯಗಳನ್ನು ಇತ್ಯರ್ಥ ಮಾಡುವದು
ಪ್ರೀತಿ ಎಂದರೆ ನಮ್ಮ ಮಕ್ಕಳು ಹೇಗಿರಬೇಕೆಂದು ಕನಸು ಕಾಣುವದು
ಮದುವೆ ಎಂದರೆ ಅವರಿಂದ ದೂರ ಓಡಿಹೋಗುವದು ಹೇಗೆಂದು ಯೋಚಿಸುವದು
ಪ್ರೀತಿ ಎಂದರೆ ಶೀಘ್ರವಾಗಿ ಶೃಂಗಾರ ಶಯ್ಯೆಗೆ ತೆರಳುವದು
ಮದುವೆ ಎಂದರೆ ನಿಧಾನವಾಗಿ ಮಲಗುವ ಕೋಣೆಗೆ ತೆವಳುವದು
ಪ್ರೀತಿ ಎಂದರೆ ಪ್ರಣಯದ ಸುತ್ತಾಟ
ಮದುವೆ ಎಂದರೆ ಜಲ್ಲಿ ಕಲ್ಲುಗಳ ಮೇಲಿನ ನಡೆದಾಟ
ಪ್ರೀತಿ ಎಂದರೆ ಕಿವಿಗಳಿಗೆಲ್ಲವೂ ಇಂಪು ತಂಪು ನಾದ ನಿನಾದ ಮಧುರ
ಮದುವೆ ಎಂದರೆ ಬ್ಯಾಂಕುಗಳಲ್ಲಿನ ಝಣ ಝಣ ಕಾಂಚಾಣವೇ ಸುಮಧುರ
ಪ್ರೀತಿ ಎಂದರೆ ಒಂದೇ ಪೇಯ ಎರಡು ನಳಿಕೆಗಳು
ಮದುವೆ ಎಂದರೆ ಪೇಯ ಹೀರಿದ್ದು ಸಾಕೆನಿಸಲಿಲ್ಲವೇ ಎಂಬ ಭಾವ
ಸರಳವಾಗಿ ಹೇಳುವದಾದರೆ ಪ್ರೀತಿ ಕುರುಡು
ಮದುವೆ ಕಣ್ಣು ತೆರೆಸುವಾಟ
ಮೂಲ ಇಂಗ್ಲೀಷ: ಅನಾಮೇಧಯ
ಕನ್ನಡಕ್ಕೆ ಉದಯ ಇಟಗಿ