ತೆರೆದರಷ್ಟೇ ಬಾಗಿಲು

ತೆರೆದರಷ್ಟೇ ಬಾಗಿಲು

ಮನೆಗಿರುವ ಹಾಗೇ, ಮನಸ್ಸಿಗೂ
ಅರೆ ತೆರೆದು ಮುಚ್ಚುವ ಬಾಗಿಲುಗಳು,
ವರ್ತಮಾನವ ಮೀರಿ ಹೊರಹೊಮ್ಮಿಸುವ ದಾರಿಗಳು.

ತಿರುಗುಣಿಗೆ ಸಿಲುಕಿ ತಿರುಗುತ್ತಿರುವ ಭ್ರಮೆಗಳು
ಅಗಣಿ ಹಾಕಿದರಷ್ಟೇ ನಿಲ್ಲುವ ಚಲನೆಗಳು
ತೆರೆದರೂ ಮತ್ತೆ ಮುಚ್ಚಿಕೊಳ್ಳುವ ಒತ್ತಡಗಳು
ನಾಗಂದಿಗೆ ಹೊತ್ತ ಪುರಾತನ ಚಿತ್ರಗಳು.

ಹೊಸಿಲಿಲ್ಲದೇ ಬರಿದೇ ಗೋಡೆಗಂಟಿದ ಮರೆಮಾಚುಗಳು
ಕಾರ್ಡು ತೂರಿಸದಿದ್ದರೆ ತೆರೆಯದೇ ಉಳಿವ ಗೋಡೆಗಳು
ಕೀಲಿ ಮರೆತರೆ ಬರಿದೇ ಪಾರದರ್ಶಕ ಚಿತ್ರಗಳು
ಖುಲ್ ಜಾ ಸಿಂಸಿಂ ಮಂತ್ರಕ್ಕೆ ಮಣಿಯುವ ಸೂತ್ರಗಳು.

ಹಿತ್ತಾಳೆ ಹಿಡಿಕೆಯ ಸಾಗವಾನಿ, ಕೆತ್ತನೆ
ಪೂಜೆ ಪುನಸ್ಕಾರಗಳಿಗೆ ಬದಲಾಗದ ವೇದನೆ
ತರಗಾದ ತೋರಣದೆಲೆಗಳ ನಡುವೆ
ಆಲಿಸಿದರಷ್ಟೇ ಕೇಳಿಸುವ ತರಂಗಾಂತರದ ಬಿತ್ತನೆ.

ಮುಚ್ಚಿದ್ದಷ್ಟೂ ಹೊತ್ತು ಗೋಡೆಯಂತಿರುವ ಬಾಗಿಲುಗಳು
ಅರೆತೆರೆದ ಬಾಗಿಲಿನಾಚೆ ಮತ್ಯಾವುದೋ ಗೋಡೆಗಳು
ಒಳಗೂ ಹೊರಗೂ ಬಯಲಾಗುವವರೆಗೂ
ಬಿಡದೇ ಕಾಡುವ ಸಾರ್ಥಕದ ಪ್ರತಿಮೆಗಳು!                

Rating
No votes yet

Comments