ಒಂದಾನೊಂದು ಕಾಲದಲ್ಲಿ

ಒಂದಾನೊಂದು ಕಾಲದಲ್ಲಿ

ಒಂದಾನೊಂದು ಕಾಲದಲ್ಲಿ

ಮಗು,
ಒಂದಾನೊಂದು ಕಾಲದಲ್ಲಿ
ಅವರು ಎದೆಯಾಳದಿಂದ ನಗುತ್ತಿದ್ದರು
ಮತ್ತು ನಗು ಕಣ್ಣುಗಳಲಿದ್ದವು;
ಆದರೀಗ, ಅವರು ಬರಿದೆ ಹಲ್ಲು ತೋರಿಸುತ್ತಾರೆ
ಅವರ ಮಂಜಿನಂತ ತಣ್ಣಗಿನ ಕಣ್ಣುಗಳು
ಹುಡುಕುತ್ತವೆ ನನ್ನ ನೆರಳುಗಳ ಹಿಂದೆ.

ನಿಜವಾಗೂ, ಒಂದು ಕಾಲದಲ್ಲಿ
ಅವರು ಎದೆಯಾಳದಿಂದ ಕೈಕುಲುಕುತ್ತಿದ್ದರು,
ಮಗು, ಅದೀಗ ಮುಗಿದ ಕಾಲ;
ಈಗವರು ಕೈಕುಲುಕುತ್ತಾರೆ ಅರೆಮನಸಲ್ಲಿ
ನನ್ನ ಖಾಲಿಕಿಸೆಯನ್ನು ತಡಕುತ್ತಾವೆ ಅವರ ಕೈಗಳು.

ಬನ್ನಿ ಮನೆಗೆ ಮತ್ತೆ, ಆರಾಮಾಗಿರಿ, ಅಂತಾರೆ.
ಮನೆಗೆ ಹೋದರೆ, ಅಲ್ಲಿ ಆರಾಮಿಸಿದರೆ, ಒಮ್ಮೆ,
ಇನ್ನೊಮ್ಮೆ - ಅಷ್ಟೆ ಮತ್ತೊಮ್ಮೆ ಹೋಗುವಂತಿಲ್ಲ
ಬಾಗಿಲು ಮುಚ್ಚಿರುತ್ತದೆ ನಾ ಬಂದರೆ.

ಹಾಗಾಗಿ ಮಗು, ನಾನು ಹಲವು ವಿಷಯ ಕಲಿತಿದ್ದೇನೆ:
ಬಟ್ಟೆಯಂತೆ ಮುಖ ಬದಲಿಸಲು -
ಮನೆ ಮುಖ, ಕಛೇರಿ ಮುಖ, ಬೀದಿ ಮುಖ,
ಗೃಹಸ್ಥನ ಮುಖ, ಸಮಾರಂಭಗಳ ಮುಖ -
ಆ ಎಲ್ಲ ಮುಖಗಳಲ್ಲಿ ಬಗೆಬಗೆಯ ನಗೆಯನ್ನು
ನಿಕ್ಕಿಗೊಳಿಸಿದ್ದೇನೆ,
ನಾನೂ ಕೂಡ ನಗುವಾಗ ಬರಿತೆ ಹಲ್ಲುಕಿರಿಯುವುದ
ಮನಸಿಲ್ಲದೇ ಕೈಕುಲುಕುವುದ ಕಲಿತಿದ್ದೇನೆ;
'ಮತ್ತೆ ಬನ್ನಿ' ಅನ್ನುತ್ತೇನೆ, ಮನಸಲ್ಲಿ
'ತೊಲಗು ಶನಿ' ಅನ್ನುತ್ತ;
'ಕಂಡು ಸಂತೋಷ' ಅನ್ನುತ್ತೇನೆ ಸಂತೋಷವಿಲ್ಲದೇ,
ಹಾಗೂ, ತಲೆಚಿಟ್ಟಾಗಿದ್ದರೂ,
'ನಿಮ್ಮ ಜತೆ ಮಾತಾಡಿ ಖುಷಿಯಾಯಿತು' ಅನ್ನುತ್ತೇನೆ.

ನಂಬು ಮಗುವೇ,
ನಾನು ಮತ್ತೆ ನಾನಾಗಬೇಕು,
ನಿನ್ನ ಹಾಗಿದ್ದಾಗ ನಾನಿದ್ದಂತೆ;
ಈ ಮೂಕಗೊಳಿಸುವ ಕಲಿಕೆಯೆಲ್ಲ ತೊರೆಯಬೇಕು;
ಎಲ್ಲಕ್ಕಿಂತ ಹೆಚ್ಚಾಗಿ, ನಾನು ಮತ್ತೆ ಕಲಿಯಬೇಕು
ನಗುವುದನ್ನು; ಕನ್ನಡಿಯೆದುರು ನನ್ನ ನಗೆಯಲ್ಲಿ
ಈಗ ನಾನು ಹಾವಿನ ಹಲ್ಲುಗಳನ್ನಷ್ಟೇ ಕಾಣುತ್ತಿದ್ದೇನೆ!

ತೋರು ನನ್ನ ಮಗುವೇ,
ನಗುವ ಬಗೆಯನ್ನು: ತೋರಿಸು
ನಾನು ಒಂದು ಕಾಲದಲ್ಲಿ
ನಿನ್ನಂತೆ ಇದ್ದಾಗ ನಗುತ್ತಿದ್ದುದನ್ನು
ಕಲಿಸು ಮಗುವೆ.

------- ಗೆಬ್ರಿಯಲ್ ಒಕಾರಾ
 (Once upon a time)

Rating
No votes yet

Comments