ಸಮಯವಿಲ್ಲವೆನ್ನುವ ಸೋಗಿನ ನಡುವೆ,....

ಸಮಯವಿಲ್ಲವೆನ್ನುವ ಸೋಗಿನ ನಡುವೆ,....

ನಮಗೆ ಟೈಮಿಲ್ಲ ಅನ್ನುವುದೊಂದು ಫ್ಯಾಷನ್ ನ ಹಾಗೆ ನಮ್ಮ ನಡುವೆ  ಬೆಳೆದು ಬಿಟ್ಟಿದೆ. ಆಕಾಶವಾಣಿ ಸಂದರ್ಶನದಲ್ಲಿ ರಾಜರ್ಷಿ ವೀರೇಂದ್ರ ಹೆಗ್ಗಡೆಯವರಿಗೆ 'ನಿಮ್ಮ ಇಷ್ಟೊಂದು ಕೆಲಸಗಳಿಗೆ ನೀವು ಸಮಯ ಹೇಗೆ ಹೊಂದಿಸಿಕೊಳ್ಳುತ್ತೀರಿ' ಅಂತ ಕೇಳಿದ ಪ್ರಶ್ನೆಗೆ ಅವರು ಮಂದಸ್ಮಿತರಾಗಿ ಉತ್ತರಿಸಿದ್ದು: 'ಏನೋ ಗೊತ್ತಿಲ್ಲ, ಅದೆಲ್ಲ ಮಂಜುನಾಥನ ದಯೆ. ನನಗೆ ಇನ್ನು ಸಮಯ ಉಳಿಯುತ್ತಿದೆ,  ಕೆಲಸ ಇದ್ದರೆ ಹೇಳಿ' ಅಂದರು. ದಿನಕ್ಕೆ ನಲ್ವತ್ತೆಂಟು ತಾಸು ಇದ್ದರೂ ಸಾಕಾಗುವುದಿಲ್ಲ, ಅಷ್ಟು ಕಾರ್ಯಭಾರದ ಒತ್ತಡವಿರುವ ಧರ್ಮಸ್ಥಳದ ಧರ್ಮಾಧಿಕಾರಿಗಳು ಹೇಳಿದ ಮಾತು ಕೇಳಿ, ಒಮ್ಮೆ ಎಂಥವರಿಗೂ ತಮಗೆ ಸಮಯವಿಲ್ಲ ಎಂಬ ಸೋಗನ್ನು ಪರೀಕ್ಷಿಸಿಕೊಳ್ಳಬೇಕೆನಿಸುತ್ತದೆ. ಕೆಲಸ ಮಾಡುವವನಿಗೆ ಸಮಯ ಇದ್ದೇ ಇರುತ್ತದೆ, ಮನಸ್ಸು ಬೇಕು ಆಷ್ಟೇ. ಕೆಲಸ ಬೇಕು  ಎಂದು ಹಾತೊರೆದು ಕೆಲಸ ಮಾಡುವ ಕೆಲವು ವ್ಯಕ್ತಿಗಳು ನಮ್ಮಲ್ಲಿ ನಡುವೆ ಇರುತ್ತಾರೆ.  ಅಂಥವರಲ್ಲಿ ಶ್ರೀ ಪ್ರಭಾಕರ ನೀರುಮಾರ್ಗ ಅವರು ಒಬ್ಬರು.

            ಶ್ರೀಯುತರು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಸಚಿವರು. ಸರಣಿಯಂತೆ ಬರುವ ಫೋನ್ ಕರೆಗಳು, ಭೇಟಿ ಮಾಡಬೇಕೆಂದಿರುವ ಅತಿಥಿಗಳ ಸರದಿ, ಕ್ಷಣಕ್ಕೊಮ್ಮೆ ಬೆಟ್ಟದ ಹಾಗೆ ಬೆಳೆಯುವ ಫೈಲ್ ಗಳ ರಾಶಿ- ಇವುಗಳ ನಡುವೆಯೂ ತಮ್ಮ ಎಂದಿನ ನಗುವನ್ನು ಉಳಿಸಿಕೊಂಡವರು ಪ್ರಭಾಕರ ನೀರುಮಾರ್ಗ ಅವರು. ತಮ್ಮ ಒತ್ತಡದ ದೈನಂದಿನ ಕಚೇರಿ ಕೆಲಸಗಳ ನಡುವೆಯೂ ಸಾಹಿತ್ಯದ  ಗುಂಗು ಉಳಿಸಿಕೊಂಡವರು. ಈಗಾಗಲೇ ಹತ್ತು ಕಾದಂಬರಿಗಳು, ಹಲವಾರು ಕತೆ, ಕವನಗಳ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಭಾಕರರದ್ದು ಮುಖ್ಯವಾಗಿ ತುಳು ಜಾನಪದದಿಂದ ರೂಪಿತವಾದ ಸಂವೇದನೆ. ತುಳು ಜಾನಪದಕ್ಕೆ ಲೋಕಕ್ಕೆ ಸಂಬಂಧಿಸಿದುದು.

            ಇವರ ಬರವಣಿಗೆಗಳು ಆದರ್ಶವಾದಿ-ಸುಧಾರಣಾವಾದಿ ಪರಂಪರೆಗೆ ಸೇರಿದವುಗಳು. ಇವು ಪ್ರಧಾನವಾಗಿ ತುಳುನಾಡಿನ ಪ್ರಾದೇಶಿಕ ಸೊಗಡನ್ನು ಹಿಡಿದಿಡುತ್ತವೆ.  ದಕ್ಷಿಣ ಕನ್ನಡ ಜಿಲ್ಲೆಯ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ಧಾರ್ಮಿಕ ಆಯಾಮಗಳು ಈ ಕೃತಿಗಳಲ್ಲಿವೆ. ಸ್ಥಳೀಯ ಸಂಸ್ಕೃತಿಯ ಮೂಲಕ ಲೋಕದೃಷ್ಟಿಯನ್ನು ನಿರೂಪಿಸಬಯಸುತ್ತವೆ.

         ದಕ್ಷಿಣಕನ್ನಡದ ಜನಪದದ ಕುರಿತು ತುಳುವೇತರಿರಿಗೆ ಅಂದರೆ ಕನ್ನಡಿಗರಿಗೆ ಪ್ರಥಮ ಪರಿಚಯವನ್ನು ವಿವರವಾಗಿ ಮಾಡಿಸುವ ಸೃಜನಶೀಲ ಕೃತಿಗಳು ಇವು. ಅವುಗಳಲ್ಲಿ ಧೀಂಗಣ, ದಳವಾಯಿ ದುಗ್ಗಣ್ಣ, ತಂಬಿಲ ಕೃತಿಗಳಿಗೆ ಪ್ರಶಸ್ತಿಗಳಿಗೆ ಪಾತ್ರವಾಗಿವೆ.ಮಂಗಳೂರ ಕ್ರಾಂತಿ ಇವರ ಐತಿಹಾಸಿಕ ಕಾಂದಬರಿ. ಇದರಲ್ಲಿ ದಾಖಲಾಗದೇ ಉಳಿದಿರುವ ತುಳುನಾಡಿನ ಸಾತಂತ್ರ್ಯ ಹೋರಾಟದ ವಿವರಗಳಿವೆ.

            ಹೀಗೆ ತಮ್ಮ ಅಮೂಲ್ಯ ಸೇವೆಯನ್ನು ಒಬ್ಬ ಸಾಹಿತಿಯಾಗಿ, ಆಡಳಿತಗಾರರಾಗಿ ನೀರುಮಾರ್ಗರು ನಮಗೆ ಮುಖ್ಯರಾಗುತ್ತಾರೆ. ಸಮಯಕ್ಕಾಗಿ ಅವರು ಕಾಯುವುದಿಲ್ಲ, ಏಕೆಂದರೆ ಸಮಯವನ್ನು ಅವರು ದುಡಿಸಿಕೊಳ್ಳುತ್ತಾರೆ.

chitra: google

 

Rating
No votes yet

Comments