ಒಂದು ಪೂರ್ಣ ಕತೆ; ಒಂದು ಅಪೂರ್ಣ ಕತೆ..!
ಕೊಕ್ಕರೆ ಕಥೆ
ಒಮ್ಮೆ ಕೊಕ್ಕರೆಯೊಂದು ಕೆರೆಯಲ್ಲಿ ಮೀನುಗಳನ್ನು ಹೆಕ್ಕಿ ತಿನ್ನುತ್ತಿರುವಾಗ ಅಲ್ಲಿಗೆ ನರಿಯೊಂದು ಬಂತು. ಕೊಕ್ಕರೆ ಮೀನುಗಳನ್ನು ತಿನ್ನುತ್ತಾ ಸುಗ್ರಾಸ ಭೋಜನದಲ್ಲಿ ತೊಡಗಿರುವುದನ್ನು ಕಂಡು ನರಿಗೆ ಆಶೆಯಾಯಿತು. ಅದು ಕೊಕ್ಕರೆಯೊಂದಿಗೆ ಸ್ನೇಹ ಸಂಪಾದಿಸಲು ನೋಡಿತು. 'ಕೊಕ್ಕರೆಯಣ್ಣಾ ಕೊಕ್ಕರೆಯಣ್ಣಾ, ನೀನು ಅದೆಷ್ಟು ಸುಂದರವಾಗಿದ್ದೀಯೆ! ನಿನ್ನ ಮೈಬಣ್ಣ ಅದೆಷ್ಟು ಬಿಳಿ! ಕೋಮಲವಾದ ನಿನ್ನ ಮೈಮಾಟ, ನೀಳವಾದ ಕತ್ತು, ಊದ್ದ-ಚೂಪು ಕೊಕ್ಕು.. ಆಹಾ! ನೀನು ನಿಜಕ್ಕೂ ಸುಂದರಾಂಗ! ನೀನು ನೆಲದ ಮೇಲೆ ಓಡಬಲ್ಲೆಯಷ್ಟೇ ಅಲ್ಲ, ನೀರಿನಲ್ಲಿ ಈಜಬಲ್ಲೆ, ಆಕಾಶದಲ್ಲಿ ಹಾರಬಲ್ಲೆ.. ನನಗೋ, ಆ ಅದೃಷ್ಟ ಇಲ್ಲ...' ಎಂಬುದಾಗಿ ಕೊಕ್ಕರೆಯನ್ನು ಹೊಗಳಲು ಪ್ರಾರಂಭಿಸಿತು. ಕೊಕ್ಕರೆ ನರಿಯ ಹೊಗಳಿಕೆ ಮರುಳಾಯಿತು. ನರಿ ಮತ್ತು ಕೊಕ್ಕರೆ ಸ್ನೇಹಿತರಾದರು. ನರಿ ಹಸಿದಿರುವುದನ್ನು ತಿಳಿದ ಕೊಕ್ಕರೆ, ಒಂದಷ್ಟು ಮೀನುಗಳನ್ನು ಹೆಕ್ಕಿ ನರಿಗೆ ತಿನ್ನಲು ದಡಕ್ಕೆ ಹಾಕಿತು.
ನರಿ ಪ್ರತಿದಿನವೂ ಬರತೊಡಗಿತು. ಕೊಕ್ಕರೆ ನರಿಗೆ ಮೀನುಗಳನ್ನು ಹೆಕ್ಕಿ ಹೆಕ್ಕಿ ಕೊಡುತ್ತಿತ್ತು. ಒಂದು ದಿನ ನರಿ 'ಕೊಕ್ಕರೆಯಣ್ಣಾ, ನೀನು ನಮ್ಮ ಮನೆಗೆ ಒಮ್ಮೆಯೂ ಬಂದೇ ಇಲ್ಲವಲ್ಲ.. ನಾಳೆ ನೀನು ನಮ್ಮ ಮನೆಗೆ ಬಾ, ನನ್ನ ಹೆಂಡತಿ ನಿನಗಾಗಿ ಪಾಯಸ ಮಾಡುತ್ತಾಳೆ' ಎಂದು ಆಹ್ವಾನಿಸಿತು. ನರಿಯ ಕರೆಗೆ ಓಗೊಟ್ಟು ಕೊಕ್ಕರೆ ಮರುದಿನ ನರಿಯ ಮನೆಗೆ ಹೋಗುತ್ತದೆ. ನರಿ ಮತ್ತು ಕೊಕ್ಕರೆ ಮಾತನಾಡುತ್ತಾ ಕುಳಿತಿರುವಾಗ ನರಿಯ ಹೆಂಡತಿ ಒಂದು ಅಗಲವಾದ ಹರಿವಾಣದಲ್ಲಿ ಪಾಯಸವನ್ನು ಸುರಿದು ತಂದು ಕೊಕ್ಕರೆಯ ಮುಂದಿಡುತ್ತದೆ. ಇಬ್ಬರೂ ತಿನ್ನಲಾರಂಭಿಸುತ್ತಾರೆ. ಹರಿವಾಣದಲ್ಲಿ ತಳ ಮುಚ್ಚುವಷ್ಟೇ ಇದ್ದ ಪಾಯಸವನ್ನು ತಿನ್ನಲು ಕೊಕ್ಕರೆಗೆ ಆಗುವುದಿಲ್ಲ. ಅದು ತನ್ನ ಕೊಕ್ಕನ್ನು ಮುಳುಗಿಸಿದರೆ ಒಂದು ಚಮಚದಷ್ಟು ಮಾತ್ರ ಪಾಯಸ ಬಾಯಿಗೆ ಬರುತ್ತಿತ್ತು. ಹಾಗೇ ಅದು ಐದಾರು ಚಮಚ ತಿನ್ನುವುದರೊಳಗೆ ಆ ಕಡೆಯಿಂದ ನರಿ ಬಾಯಿ ಹಾಕಿ ಬರಬರನೆ ತಿನ್ನುತ್ತಾ ಪಾತ್ರೆಯನ್ನು ಖಾಲಿ ಮಾಡಿಬಿಟ್ಟಿತು! ನರಿ ಕೊಕ್ಕರೆಯನ್ನು 'ಹೇಗಿತ್ತು ಪಾಯಸ?' ಅಂತ ಕೇಳಿದ್ದಕ್ಕೆ, ಕೊಕ್ಕರೆ ಸಂಕೋಚಕ್ಕೆ ಬಲಿಯಾಗಿ 'ಚೆನ್ನಾಗಿತ್ತು' ಎಂದು ಹೇಳುತ್ತೆ. ಹಾಗೆಯೇ ಕೊಕ್ಕರೆ ನರಿಯನ್ನು ಮರುದಿನ ತಮ್ಮ ಮನೆಗೆ ಊಟಕ್ಕೆ ಬರುವಂತೆ ಆಹ್ವಾನಿಸುತ್ತದೆ.
ಮರುದಿನ ನರಿ ಕೊಕ್ಕರೆಯ ಮನೆಗೆ ಹೋಗುತ್ತದೆ. ಕೊಕ್ಕರೆ ಒಂದು ಪ್ಲಾನ್ ಮಾಡಿರುತ್ತದೆ. ಕೊಕ್ಕರೆ ಒಂದು ಚಿಕ್ಕ ಬೋಗುಣಿಯಲ್ಲಿ ಪಾಯಸವನ್ನು ಹಾಕಿ ತಂದಿಡುತ್ತದೆ. ನರಿಯ ಮೂತಿ ಅದರೊಳಗೆ ತೂರುವುದೇ ಇಲ್ಲ! ಕೊಕ್ಕರೆ ಸಲೀಸಾಗಿ ತನ್ನ ಕೊಕ್ಕಿನಿಂದ ಪಾಯಸವನ್ನು ಹೀರುತ್ತದೆ!
ಹೀಗೆ ಕೊಕ್ಕರೆ ನರಿಯ ಮೇಲೆ ಸೇಡು ತೀರಿಸಿಕೊಳ್ಳುತ್ತದೆ!
ಕಥೆ ಹೇಳಿದ್ದು: ವಿದ್ವಾನ್ ಶ್ರೀ ಎನ್. ರಂಘನಾಥ ಶರ್ಮ
ಸಂದರ್ಭ: ದಿನಾಂಕ ೧೭.೦೯.೨೦೦೬ ರಂದು ಗಿರಿನಗರದ ಶಂಕರ ಮಂಟಪದಲ್ಲಿ ನಡೆದ ಆರ್ಕುಟ್-ಹವ್ಯಕ ಚಕ್ಲಿ-ಚುಡ್ವಾ ಕಂಬಳ ದಲ್ಲಿ
ಉದ್ದೇಶ: ರಂಘನಾಥ ಶರ್ಮರನ್ನು ಕಾರ್ಯಕ್ರಮದ ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು. ಆದರೆ ೯೨ ವರ್ಷ ವಯಸ್ಸಿನ, ಹಲ್ಲುಗಳೆಲ್ಲಾ ಬಿದ್ದು ಹೋಗಿರುವ ಅವರು, ಕಂಬಳವನ್ನು ಉದ್ಘಾಟಿಸುವುದೇನೋ ಸರಿ, ಆದರೆ ಚಕ್ಲಿಯನ್ನು ತಿನ್ನುವುದೆಂತು?! ಅವರು ತಮ್ಮ ಪರಿಸ್ಥಿತಿಯನ್ನು ಈ ಕಥೆಯೊಂದಿಗೆ ಹೊಂದಿಸಿ ರಸವತ್ತಾಗಿ ಹೇಳಿ ನೆರೆದಿದ್ದವರನ್ನೆಲ್ಲಾ ರಂಜಿಸಿದರು. ಕೊನೆಗೆ ಅವರಿಗೆ ಚಕ್ಲಿಯನ್ನು ಪುಡಿ ಮಾಡಿ ತಿನ್ನಿಸಲಾಯಿತು ಅನ್ನುವುದು ಬೇರೆ ವಿಷಯ!
***
ಈ ಕಥೆಯನ್ನು ಕೇಳುತ್ತಿದ್ದಾಗ ನನಗೆ ನೆನಪಾದದ್ದು, ನಾವೆಲ್ಲಾ ಬಾಲ್ಯದಲ್ಲಿ ಕೇಳಿದ 'ಕಾಗಕ್ಕ-ಗುಬ್ಬಕ್ಕನ ಕಥೆ'. ಸರಳವಾಗಿ ಹೇಳುವುದಾದರೆ, ಆ ಕಥೆ ಹೀಗಿದೆ:
ಕಾಗಕ್ಕ-ಗುಬ್ಬಕ್ಕ ಕಥೆ
ಒಂದೂರಲ್ಲಿ ಕಾಗಕ್ಕ ಮತ್ತೆ ಗುಬ್ಬಕ್ಕ ಫ್ರೆಂಡ್ಸ್ ಆಗಿರ್ತಾರೆ. ಕಾಗಕ್ಕನ ಮನೆ ಮಣ್ಣು ಮತ್ತೆ ತರಗೆಲೆಗಳಿಂದ ಮಾಡಿದ್ದು; ಗುಬ್ಬಕ್ಕನ ಮನೆ ಮರದ ತೊಗಟೆಯಿಂದ ಕಟ್ಟಿದ ಗಟ್ಟಿಮುಟ್ಟಾದ ಮನೆ. ಒಮ್ಮೆ ಜೋರು ಗಾಳಿ-ಮಳೆಯಾದಾಗ ಕಾಗಕ್ಕನ ಮನೆ ತೊಳೆದು ಹೋಗುತ್ತದೆ. ಆಗ ಗುಬ್ಬಕ್ಕ ಕಾಗಕ್ಕನನ್ನು ತನ್ನ ಮನೆಗೆ ಉಳಿದುಕೊಳ್ಳುವುದಕ್ಕೆ ಆಹ್ವಾನಿಸುತ್ತದೆ.
ರಾತ್ರಿ ಎಲ್ಲರೂ ಮಲಗಿದ್ದಾಗ ಕಾಗಕ್ಕ ಗುಬ್ಬಕ್ಕನ ಮೊಟ್ಟೆ-ಮರಿಗಳನ್ನು ತಿನ್ನಲಾರಂಭಿಸುತ್ತದೆ. 'ಕಟ್ ಕಟ್' 'ಕರ ಕರ' ಎಂಬ ಶಬ್ದ ಕೇಳಿ ಗುಬ್ಬಕ್ಕ ಕೇಳುತ್ತೆ: 'ಏನದು ಶಬ್ದ ಕಾಗಕ್ಕಾ?' ಅಂತ. ಅದಕ್ಕೆ ಕಾಗಕ್ಕ ಹೇಳುತ್ತೆ: 'ಏನಿಲ್ಲ, ದನ ಕಾಯೋ ಹುಡುಗ ನಾಕು ಕಡ್ಲೇಕಾಯಿ ಕೊಟ್ಟಿದ್ದ, ತಿನ್ತಾ ಇದ್ದೆ' ಅಂತ. ಬೆಳಗ್ಗೆ ಮುಂಚೆ, ಗುಬ್ಬಕ್ಕ ಏಳೋ ಮೊದಲೇ ಕಾಗಕ್ಕ ಗುಬ್ಬಕ್ಕನ ಗೂಡಿಂದ ಹಾರಿಹೋಗಿಬಿಡುತ್ತೆ.
ಗುಬ್ಬಕ್ಕ ಬೆಳಗ್ಗೆ ಎದ್ದು ನೋಡುತ್ತೆ: ಕಾಗಕ್ಕನೂ ಇಲ್ಲ; ತನ್ನ ಮೊಟ್ಟೆ-ಮರಿಗಳೂ ಇಲ್ಲ! ಗುಬ್ಬಕ್ಕನ ಮೇಲೆ ಅದು ಸೇಡು ತೀರಿಸಿಕೊಳ್ಳಬೇಕು ಅಂತ ತೀರ್ಮಾನಿಸುತ್ತೆ...
***
ಆದರೆ friends, ಇದರ ಮುಂದೆ ಮರೆತು ನನಗೆ ಹೋಗಿದೆ! ನನ್ನ ಗೆಳೆಯರನೇಕರ ಬಳಿ ಕೇಳಿದೆ; ಅವರಿಗೂ ನೆನಪಿಲ್ಲ. ಗುಬ್ಬಕ್ಕ ಕಾಗಕ್ಕನ ಮೇಲೆ ಹೇಗೆ ಸೇಡು ತೀರಿಸಿಕೊಳ್ಳೊತ್ತೆ ಅಂತ ನನಗೆ ಬೇಕು. Second part of the storey ಬೇಕು. ದಯವಿಟ್ಟು ಗೊತ್ತಿರೋರು ಈ ಕಥೆಯನ್ನು ಪೂರ್ಣಗೊಳಿಸಿಕೊಡಬೇಕು ಅಂತ ನನ್ನ ವಿನಂತಿ..